ಕನ್ನಡಿಗೆ ಹೆದರುವವರು

Update: 2018-04-27 04:20 GMT

ಮಾಧ್ಯಮಗಳು ಒಂದು ದೇಶದ ವಾಸ್ತವಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು ಮಾಡುತ್ತವೆ. ಒಂದು ಸರಕಾರ ಆ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಲು ಸಿದ್ಧವಿಲ್ಲ ಎಂದರೆ ಅದರ ಅರ್ಥ, ಆ ಸರಕಾರ ತಪ್ಪುದಾರಿಯಲ್ಲಿ ಹೆಜ್ಜೆ ಇಡುತ್ತಿದೆ ಎಂದಾಗಿದೆ. ಪ್ರಜಾಸತ್ತೆಯ ಮೇಲೆ ಗೌರವವಿರುವ ಯಾವುದೇ ಸರಕಾರ, ಪತ್ರಿಕೆಗಳೆಂಬ ಕನ್ನಡಿಯಲ್ಲಿ ತನ್ನ ಮುಖ ನೋಡುವುದಕ್ಕೆ ಹಿಂಜರಿಯುವುದಿಲ್ಲ. ತನ್ನ ಮುಖದ ವಿಕಾರಗಳನ್ನು ತಿದ್ದುವುದಕ್ಕೆ ಪೂರಕವಾಗಿ ಆ ಕನ್ನಡಿಯನ್ನು ಬಳಸಿಕೊಳ್ಳುತ್ತದೆ. ಕನ್ನಡಿ ತನ್ನ ಮುಖದ ಕಲೆಗಳನ್ನು ಎತ್ತಿ ತೋರಿಸಿತು ಎನ್ನುವ ಕಾರಣಕ್ಕಾಗಿ ಕನ್ನಡಿಯನ್ನು ಒಡೆದರೆ, ಮುಖದ ಕಲೆ ಇಲ್ಲವಾಗದು. ನೋಡುವವನಿಗೆ ಇಷ್ಟವಾಗುವಂತೆ ಮುಖವನ್ನು ತೋರಿಸುವುದು ಕನ್ನಡಿಯ ಕೆಲಸವಲ್ಲ. ಒಂದು ಪ್ರಜಾಸತ್ತಾತ್ಮಕ ದೇಶದ ಪತ್ರಿಕೆಗಳು ಸರಕಾರದ ಹೊಗಳುಭಟನ ಕೆಲಸ ಮಾಡಲು ತೊಡಗುತ್ತವೆ ಎಂದರೆ ಅದರ ಅರ್ಥ, ಆ ಸರಕಾರ ನಿಧಾನಕ್ಕೆ ಸರ್ವಾಧಿಕಾರದತ್ತ ವಾಲುತ್ತಿದೆ ಎನ್ನುವುದಾಗಿದೆ.

ಪತ್ರಿಕಾ ಮಾಧ್ಯಮಗಳನ್ನು ನಿಯಂತ್ರಿಸಲು ಸರ್ವಾಧಿಕಾರಿ ಸರಕಾರಗಳು ಎರಡು ತಂತ್ರಗಳನ್ನು ಮುಖ್ಯವಾಗಿ ಬಳಸುತ್ತವೆ. ಒಂದು ಪತ್ರಿಕೆಗಳನ್ನೇ ಕೊಂಡುಕೊಳ್ಳುವುದು. ಆ ಮೂಲಕ ಅವುಗಳನ್ನು ತನ್ನ ಮುಖವಾಣಿಯಾಗಿರುವಂತೆ ನೋಡಿಕೊಳ್ಳುವುದು. ಸರಕಾರವೇ ಪರೋಕ್ಷವಾಗಿ ಪತ್ರಿಕೆಯ ಮಾಲಕನಾದ ಮೇಲೆ ಅದರ ತಪ್ಪುಗಳನ್ನು ಟೀಕಿಸುವ ಪ್ರಶ್ನೆಯೆಲ್ಲಿ ಬಂತು? ಒಂದು ಪತ್ರಿಕೆಯನ್ನು ಕೊಂಡುಕೊಳ್ಳುವುದಕ್ಕೆ ಸಾಧ್ಯವಾಗದೆ ಇದ್ದರೆ ಅದರ ಮೇಲೆ ಅಧಿಕಾರಬಲವನ್ನು ಹೇರಲು ಪ್ರಯತ್ನಿಸುತ್ತದೆ. ಭಾರತದಲ್ಲಿ ಈ ಎರಡೂ ತಂತ್ರಗಳು ಜಾರಿಯಲ್ಲಿವೆ ಎನ್ನುವುದು ಸದ್ಯಕ್ಕೆ ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕದಲ್ಲಿ ಕುಸಿತ ಕಂಡಿದೆ. ಪತ್ರಿಕಾ ಸ್ವಾತಂತ್ರ ಹತ್ತಿಕ್ಕುವ ರಾಷ್ಟ್ರಗಳ ಜೊತೆಗೆ ಗುರುತಿಸಿಕೊಳ್ಳಲು ಭಾರತ ಸ್ಪರ್ಧೆಗಿಳಿದಿರುವುದನ್ನು ಈ ವರದಿ ಬಹಿರಂಗ ಪಡಿಸಿದೆ. 180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 138ನೇ ಶ್ರೇಯಾಂಕದಲ್ಲಿದೆ. ಕಳೆದ ವರ್ಷ ಭಾರತ 136ನೇ ಶ್ರೇಯಾಂಕ ಪಡೆದುಕೊಂಡಿತ್ತು.

ವಿಪರ್ಯಾಸವೆಂದರೆ ತನ್ನ ನೆರೆ ರಾಷ್ಟ್ರವಾಗಿರುವ ಪಾಕಿಸ್ತಾನದ ಬಳಿಕದ ಸ್ಥಾನವನ್ನು ಭಾರತ ಹೊಂದಿದೆ. ಪಾಕಿಸ್ತಾನವಾದರೂ ಮಿಲಿಟರಿ ಹಿಡಿತದಲ್ಲಿರುವ ದೇಶ. ಅಲ್ಲಿ ಪ್ರಜಾಪ್ರಭುತ್ವ ದುರ್ಬಲವಾಗಿದೆ. ಭಾರತದ ಸ್ಥಿತಿ ಈ ಹಿಂದೆ ಹೀಗಿರಲಿಲ್ಲ. ಪ್ರಜಾಸತ್ತೆ ಮತ್ತು ಪತ್ರಿಕಾ ಸ್ವಾತಂತ್ರ ಭಾರತದ ಹಿರಿಮೆಯಾಗಿತ್ತು. ಜವಾಹರಲಾಲ್ ನೆಹರೂರಂತಹ ಹಿರಿಯ ನಾಯಕರೂ ತಮ್ಮ ವಿರುದ್ಧದ ವ್ಯಂಗ್ಯ ಟೀಕೆಗಳನ್ನು ಋಣಾತ್ಮಕ ದೃಷ್ಟಿಯಿಂದ ನೋಡುತ್ತಿರಲಿಲ್ಲ. ತಮ್ಮನ್ನು ತಾವು ತಿದ್ದಿಕೊಳ್ಳಲು ಆ ಟೀಕೆಗಳನ್ನು ಪೂರಕವಾಗಿ ಬಳಸಿಕೊಳ್ಳುತ್ತಿದ್ದರು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಪತ್ರಿಕಾ ಸ್ವಾತಂತ್ರ ಇಷ್ಟು ಹದಗೆಟ್ಟಿರಲಿಲ್ಲ. ಹಿಂದೆ ಶ್ರೀಮತಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ದೇಶದ ಪತ್ರಕರ್ತರು ತೀವ್ರ ಆತಂಕವನ್ನು ಹೊಂದಿದ್ದರು. ವಿಪರ್ಯಾಸವೆಂದರೆ, ಇಂದು ದೇಶದಲ್ಲಿ ಯಾವ ತುರ್ತು ಪರಿಸ್ಥಿತಿ ಹೇರಿರದಿದ್ದರೂ, ಪತ್ರಕರ್ತರನ್ನು ಬೇರೆ ಬೇರೆ ರೀತಿಯಲ್ಲಿ ದಮನಿಸಲು ಸರಕಾರ ಯತ್ನಿಸುತ್ತಿದೆ. ಅವೆಲ್ಲದರ ಫಲವಾಗಿಯೇ ಜಾಗತಿಕವಾಗಿ ದೇಶದ ಪತ್ರಿಕಾ ಸ್ವಾತಂತ್ರದ ಕುರಿತಂತೆ ಕೆಟ್ಟ ಸಂದೇಶ ರವಾನೆಯಾಗಿದೆ. ಪತ್ರಿಕಾ ಸ್ವಾತಂತ್ರದ ದಮನವೆನ್ನುವುದು ಪರೋಕ್ಷವಾಗಿ ಪ್ರಜಾಸತ್ತೆಯ ದಮನವೂ ಆಗಿರುವುದರಿಂದ, ದೇಶದ ಪ್ರಜಾಸತ್ತೆಯೂ ಜೊತೆ ಜೊತೆಗೆ ಅಪಾಯದಲ್ಲಿದೆ ಎನ್ನುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ.

ಸರಕಾರ ಅಥವಾ ಸರಕಾರದ ಬೆನ್ನ ಹಿಂದಿರುವ ಕಾರ್ಪೊರೇಟ್ ಶಕ್ತಿಗಳು ಒಂದೊಂದೇ ಟಿವಿ ಚಾನೆಲ್‌ಗಳನ್ನು, ಪತ್ರಿಕೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಓದುಗರ ಅಥವಾ ವೀಕ್ಷಕರ ಹಣದ ಮೂಲಕ ಪತ್ರಿಕೆಗಳನ್ನು ಅಥವಾ ಚಾನೆಲ್‌ಗಳನ್ನು ನಡೆಸುವುದು ಅಸಾಧ್ಯವಾಗಿರುವುದರಿಂದ, ಕಾರ್ಪೊರೇಟ್ ಕುಳಗಳನ್ನು, ರಾಜಕಾರಣಿಗಳ ಹಣವನ್ನು ನೆಚ್ಚಿಕೊಳ್ಳುವುದು ಇವುಗಳಿಗೆ ಅನಿವಾರ್ಯವಾಗಿದೆ. ಇದನ್ನು ಸರಕಾರ ಮತ್ತು ಅದರ ಹಿಂದಿರುವ ಶಕ್ತಿಗಳು ಯಶಸ್ವಿಯಾಗಿ ಬಳಸಿಕೊಳ್ಳುತ್ತಿವೆ. ಈ ಮಟ್ಟಿಗೆ ಪತ್ರಿಕೆಗಳು ವ್ಯವಸ್ಥೆಯ ಅಡಿಯಾಳಾಗಿರುವುದು ಇತಿಹಾಸದಲ್ಲೇ ಇದೇ ಮೊದಲು. ಪತ್ರಿಕೆಗಳ ಇಂದಿನ ದೈನೇಸಿ ಸ್ಥಿತಿ, ತುರ್ತು ಪರಿಸ್ಥಿತಿಗಿಂತಲೂ ಭೀಕರವಾಗಿದೆ. ಇದೇ ಸಂದರ್ಭದಲ್ಲಿ ತನ್ನ ಬಲೆಗೆ ಬೀಳದ ಪತ್ರಿಕೆಗಳನ್ನು ಬೆದರಿಸುವ ಪ್ರಯತ್ನವೂ ಯಶಸ್ವಿಯಾಗಿ ನಡೆಯುತ್ತಿದೆ. ಎನ್‌ಡಿಟಿವಿಯ ಮೇಲೆ ಸರಕಾರ ನಡೆಸಿದ ದಾಳಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ನ್ಯಾಯಾಲಯದ ಮೂಲಕವೇ ಚಾನೆಲ್‌ನ್ನು ದಮನಿಸುವ ಪ್ರಯತ್ನವನ್ನು ನಡೆಸಿತು. ಜೊತೆಗೆ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಚಿತ್ರಹಿಂಸೆ ನೀಡಿತು. ಒಂದೆಡೆ ಚಾನೆಲ್‌ಗಳು, ಪತ್ರಿಕೆಗಳು ಸರಕಾರದ ಕೈಗೊಂಬೆಯಾಗುತ್ತಿರುವಾಗ, ಅವುಗಳಿಂದ ಹೊರಬಿದ್ದ ಪ್ರತಿಭಾವಂತ ಪತ್ರಕರ್ತರು ವೆಬ್‌ಸೈಟ್‌ಗಳು, ಸಾಮಾಜಿಕ ತಾಣಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳತೊಡಗಿದರು. ಈ ಸಂದರ್ಭದಲ್ಲಿ ಸಾಮಾಜಿಕ ತಾಣಗಳನ್ನು ಬಳಸಿಕೊಳ್ಳುವ ಹೋರಾಟಗಾರರನ್ನು ದಮನಿಸುವುದಕ್ಕೂ ಬೇರೆ ಬೇರೆ ತಂತ್ರಗಳನ್ನು ಸರಕಾರ ಬಳಸಿಕೊಂಡು ಬಂದಿದೆ.

‘ದಿವೈರ್’ನಂತಹ ವೆಬ್‌ಸೈಟ್‌ಗಳು ಅಮಿತ್ ಶಾ ಪುತ್ರನ ಅವ್ಯವಹಾರವನ್ನು ಬಯಲಿಗೆಳೆದಾಗ ನ್ಯಾಯಾಂಗವನ್ನು ಬಳಸಿಕೊಂಡು ಅದರ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡಿತು. ಸಾಮಾಜಿಕ ತಾಣಗಳಲ್ಲಿ ಬರೆಯುತ್ತಾ ಸಮಾಜವನ್ನು ಎಚ್ಚರಿಸುವ ಹೋರಾಟಗಾರರನ್ನು ಹಿಂಸಾತ್ಮಕವಾಗಿ ದಮನಿಸಲು ಹವಣಿಸಿತು. ಗೌರಿ ಲಂಕೇಶ್ ಅವರ ಹತ್ಯೆ ಇದಕ್ಕೆ ಉದಾಹರಣೆಯಾಗಿದೆ. ಪತ್ರಿಕಾಸ್ವಾತಂತ್ರದ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕ ಇಳಿಕೆಯಾಗುವುದರಲ್ಲಿ ಗೌರಿ ಲಂಕೇಶ್ ಹತ್ಯೆಯನ್ನೂ ಪ್ರಮುಖ ಅಂಶವಾಗಿ ತೆಗೆದುಕೊಳ್ಳಲಾಗಿದೆ. ಕಾಶ್ಮೀರದಲ್ಲಿ ಸೇನೆಯ ದಮನ ನೀತಿಯನ್ನು ಬರೆದ ಪತ್ರಕರ್ತರನ್ನು ಬಂಧಿಸಿ ಚಿತ್ರಹಿಂಸೆ ನೀಡುತ್ತಿರುವ ಘಟನೆಗಳ ಉಲ್ಲೇಖನಗಳನ್ನೂ ಮಾಡಲಾಗಿದೆ. ಅಷ್ಟೇ ಅಲ್ಲ, ಸಾಮಾಜಿಕ ತಾಣಗಳಲ್ಲಿ ಬರೆಯುವ ಲೇಖಕರು, ಪತ್ರಕರ್ತರನ್ನು ನಿಯಂತ್ರಿಸಲು ಫೇಕ್ ಅಕೌಂಟ್‌ಗಳು ಕೆಲಸ ಮಾಡುತ್ತಿವೆ.

ಟ್ರೋಲ್‌ಗಳ ಮೂಲಕ ವೈಯಕ್ತಿಕ ನಿಂದನೆಗೆ ಇಳಿದು ಹೋರಾಟಗಾರರ ಬಾಯಿ ಮುಚ್ಚಿಸುವ ಕೆಲಸಗಳು ನಡೆಯುತ್ತಿವೆ. ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಲು ಜನರು ಪರ್ಯಾಯ ಮಾಧ್ಯಮಗಳನ್ನು ಬಳಸುವುದನ್ನು ತಡೆಯುವ ಹುನ್ನಾರ ಇದಾಗಿದೆ. ಪತ್ರಿಕಾ ಸ್ವಾತಂತ್ರ ಅಪಾಯದಲ್ಲಿದೆ ಎಂದರೆ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದರ್ಥ. ದೇಶ ನಿಧಾನಕ್ಕೆ ಸರ್ವಾಧಿಕಾರದತ್ತ ಹೊರಳುತ್ತಿದೆ. ಅದಕ್ಕಾಗಿ ಪ್ರಜಾಸತ್ತೆಯ ದೌರ್ಬಲ್ಯಗಳನ್ನು ಬಳಸಿಕೊಳ್ಳಲಾಗುತ್ತಿದೆ. ನ್ಯಾಯಾಂಗ ಮತ್ತು ಮಾಧ್ಯಮಗಳನ್ನು ದುರುಪಯೋಗಗೊಳಿಸಿ ಪ್ರಜಾಸತ್ತೆಯ ಮುಖವಾಡದಲ್ಲೇ ಸರ್ವಾಧಿಕಾರ ದೇಶವನ್ನು ಆಳತೊಡಗಿದೆ. ಇದು ನಿಧಾನಕ್ಕೆ ಭಾರತವನ್ನು ಇನ್ನೊಂದು ಪಾಕಿಸ್ತಾನವಾಗಿ ಮಾರ್ಪಡಿಸಲಿದೆ. ಅದಕ್ಕೆ ಮೊದಲು ದೇಶ ಎಚ್ಚೆತ್ತುಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News