ಅಸ್ಪಶ್ಯತೆ ನಿವಾರಣೆಯ ಮಕ್ಕಳಾಟ

Update: 2018-04-26 18:37 GMT

ಭಾಗ-3

ಹಿಂದೂ ಮಹಾಸಭೆಗಿರುವಷ್ಟು ಸದ್ಯದ ಪರಿಸ್ಥಿತಿಯ ತೊಂದರೆ ಬೇರೆ ಯಾರಿಗೂ ಇರಲಿಲ್ಲ. ಹಿಂದೂ ಮಹಾಸಭೆಗೂ ಮುನ್ನ ಇದ್ದ ಸುಧಾರಕರಿಗೆ ಅಸ್ಪಶ್ಯತಾ ನಿವಾರಣೆಯ ಮಹತ್ವ ಇದ್ದಿರಲಿಕ್ಕಿಲ್ಲ. ಆದರೆ ಧುತ್ ಎಂದು ಎದುರಾದ ಸಂಕಟದ ಸುಳಿಯಲ್ಲಿ ಸಿಲುಕಿರುವ ಜನ ಹಿಂದೂ ಸಮಾಜವನ್ನು ರಕ್ಷಿಸಲು ಈ ಸಭೆಯನ್ನು ನಿರ್ಮಿಸಿದರು. ಈ ಸಭೆಯ ಚಾಲಕನಿಗೆ ಹಿಂದೂ ಸಮಾಜದ ಸಂಘಟನೆ ಮಾಡದೆ ಅನ್ಯ ಮಾರ್ಗವಿಲ್ಲ ಅನ್ನುವ ಅರಿವಿದೆ.

 ಇತರ ರಾಷ್ಟ್ರಗಳು ಪಾಳು ಬಿದ್ದವು. ಆದರೆ ನಮ್ಮ ವರ್ಣಾಶ್ರಮ ಧರ್ಮದಿಂದಾಗಿ ನಾವು ಬದುಕಿದ್ದೇವೆ ಎಂದು ಕೊಚ್ಚಿಕೊಳ್ಳುವ ಜನ ನಾವು ಬದುಕಿದ್ದಾದರೂ ಹೇಗೆ? ಅನ್ನುವುದರ ಬಗ್ಗೆ ಎಂದಾದರೂ ಯೋಚಿಸಿದ್ದಿದೆಯೇ? ಬದುಕುವ ಅನೇಕ ಮಾರ್ಗಗಳಿವೆ. ಆದರೆ ಪ್ರತಿಯೊಂದು ದಾರಿ ಸಮಾನ ಮಾನ್ಯತೆಯುಳ್ಳದಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಶತ್ರುಗಳು ಬಂದರೆ ಅವರ ವಿರುದ್ಧ ಯುದ್ಧ ಮಾಡಿ ಅವರನ್ನು ಸೋಲಿಸಿ ಬದುಕುವ ಒಂದು ಮಾರ್ಗವಿದೆ. ಎರಡರಲ್ಲಿ ಯಾವುದೇ ಮಾರ್ಗವನ್ನವಲಂಬಿಸಿದರೂ ಬದುಕಬಹುದು, ಆದರೆ ಒಂದು ಬದುಕು ಮತ್ತೊಂದು ಬದುಕಿಗಿಂತ ಭಿನ್ನವಾಗಿದೆ. ಒಂದು ಮನುಷ್ಯನ ಬದುಕು, ಮತ್ತೊಂದು ಹುಳುವಿನ ಬದುಕು. ಆದರೆ ಧರ್ಮದ ಅತಿರೇಕದಿಂದ ಹುಚ್ಚರಾಗಿರುವ ಈ ಜನರಿಗೆ ಶೂರರ ಈ ಧರ್ಮ ಹೇಳಿ ಉಪಯೋಗವಾದರೂ ಏನು? ನರಕದ ಹುಳುವಿನಂತೆ ಸಾವಿರಾರು ವರ್ಷ ಬದುಕಿರುವ ಇವರಿಗೆ ಮನಷ್ಯನ ಬದುಕಿನ ವೌಲ್ಯವೆಲ್ಲಿದೆ? ಧರ್ಮದ ಹೆಸರಿನಲ್ಲಿ ಅಸ್ಪಶ್ಯತೆಯಂತಹ ಸಾಮಾಜಿಕ ಅನ್ಯಾಯದ ರೋಗ ಜನರಿಗೆ ಹತ್ತಿರುವುದರಿಂದ ಹಿಂದೂ ಸಂಸ್ಕೃತಿಯ ಹಾಗೂ ಹಿಂದೂಗಳ ಚಾರಿತ್ಯದ ಸ್ವರೂಪ ಅಪರಿಚಿತ ವ್ಯಕ್ತಿಗೆ ಹೊಲಸು ಹಾಗೂ ಭಯಾನಕವಾಗಿ ಕಾಣುತ್ತದೆ. ಅಷ್ಟೇ ಅಲ್ಲದೆ ಅಸ್ಪಶ್ಯತೆಯಂತಹ ಸಾಮಾಜಿಕ ಅನ್ಯಾಯದ ಕುರು ಸಾಕಷ್ಟು ಬೆಳೆದಿರುವುದರಿಂದ ಹಿಂದೂ ಸಮಾಜ ಇಂದಿನವರೆಗೆ ಹೇಗೋ ಎದ್ದು ಬಿದ್ದು ಮಾರ್ಗಕ್ರಮಣ ಮಾಡುತ್ತಿದೆ. ಆದರೆ ಈ ಕುರು ಇತ್ತೀಚೆಗೆ ಎಷ್ಟು ಬಲವಾಗಿ ಬೆಳೆದಿದೆಯೆಂದರೆ ಅದರ ನೋವು ಹಿಂದೂ ಸಮಾಜದ ಹೃದಯ ಕ್ರಿಯೆಗೂ ಹರಡಿ ಹಿಂದೂ ಸಮಾಜ ಉರುಳಿ ಬೀಳುವ ಕಾಲ ಬಂದಿದೆ. ಇಂತಹ ಸಮಯದಲ್ಲಿ ಈ ಕುರುವನ್ನು ವಾಸಿ ಮಾಡುವ ವೈದ್ಯನಿಗೇ ಕುರು ಆಗಿರುವಾಗ ತಾನು ಕೈಯಲ್ಲಿ ಚಾಕು ಹಿಡಿದರೆ ತನ್ನ ಧಾರ್ಮಿಕ ಧಮನಿಯೇ ನೋಯಬಹುದು ಎಂದು ಹೆದರುವ ವೈದ್ಯನು ಸಮಾಜದ ಮೇಲೆ ಚೂರಿ ಚಲಾಯಿಸಲು ಹೇಗೆ ಒಪ್ಪಿಕೊಂಡಾನು!

ಹಿಂದೂ ಸಭೆಯು ಪಂ.ಮದನ್‌ಮೋಹನ್ ಮಾಲವೀಯರಂತಹ ಮಹತ್ವಾಕಾಂಕ್ಷಿ ಬ್ರಾಹ್ಮಣ ನಿಲುವಿರುವ ಬ್ರಾಹ್ಮಣರ ಸಂಸ್ಥೆ. ಈ ಸಂಸ್ಥೆ ಇಂತಹ ಕೈಯಲ್ಲಿರುವವರೆಗೆ ಅಸ್ಪಶ್ಯತೆ ನಿವಾರಣೆಗಾಗಿ ಅದು ಏನನ್ನಾದರೂ ಮಾಡಬಹುದು ಅನ್ನುವ ಆಸೆಯನ್ನಿಟ್ಟುಕೊಳ್ಳುವುದು ವ್ಯರ್ಥ. ಹಿಂದೂ ಮಹಾಸಭೆಯ ನಿಷ್ಕ್ರಿಯತೆಯ ಬಗ್ಗೆ ನಮಗೆ ಬೇಸರವಿಲ್ಲ. ಅವರ ಬಗ್ಗೆ ನಮಗ್ಯಾವ ಆಸೆಗಳೂ ಇರಲಿಲ್ಲ, ಹಿಂದೂ ಮಹಾಸಭೆಯು ಅಸ್ಪಶ್ಯತೆ ನಿವಾರಣೆಗಾಗಿ ಏನೂ ಮಾಡಲಾರದು ಎಂದು ನಮಗೆ ಗೊತ್ತಿದ್ದರೂ ಅಸ್ಪಶ್ಯತೆಯನ್ನು ದೃಢೀಕರಿಸುವುದಕ್ಕೆ ಮಾತ್ರ ಕಾರಣವಾಗುತ್ತದೆ ಎಂದು ಅನಿಸಿರಲಿಲ್ಲ. ಆದರೆ ಅಂತಹುದೇ ಖೇದದ ಕೃತ್ಯ ಮುಂಬೈ ಪ್ರಾಂತದ ಹಿಂದೂ ಮಹಾಸಭೆಯ ಮಾಟುಂಗಾ ಶಾಖೆಯ ಕೈಯಿಂದ ಘಟಿಸುವ ಕುಯೋಗ ಹತ್ತಿರ ಬಂದಿದೆ. ಹಿಂದೂ ಮಹಾಸಭೆಯ ಮಾಟುಂಗಾ ಶಾಖೆಯು ಇತ್ತೀಚೆಗೆ ವಿನಂತಿ ಪತ್ರವೊಂದನ್ನು ಜಾರಿಗೊಳಿಸಿದೆ. ಅದರಲ್ಲಿ, ‘‘ಮಾಟುಂಗಾದಲ್ಲಿ ಹಿಂದೂ ಮಹಾಸಭೆಯ ವತಿಯಿಂದ ದೇವಸ್ಥಾನವೊಂದನ್ನು ಕಟ್ಟಲಾಗುತ್ತಿದೆ, ಹಾಗೂ ಅದಕ್ಕಾಗಿ ಜನತೆಯು ಹಣದ ಮುಖಾಂತರ ಸಹಾಯ ಮಾಡಬೇಕು’’ ಅನ್ನುವಂತಹ ಬೇಡಿಕೆಯೊಂದನ್ನು ಮುಂದಿಟ್ಟಿದೆ. ಮುಂಬೈಯಲ್ಲಿ ಸಾವಿರಾರು ದೇವಸ್ಥಾನಗಳಿರುವಾಗ ಹಿಂದೂ ಮಹಾಸಭೆಯು ಇನ್ನೊಂದು ದೇವಸ್ಥಾನವನ್ನು ಕಟ್ಟುತ್ತಿದೆ ಅನ್ನುವುದಕ್ಕೆ ತಿಳುವಳಿಕೆಯುಳ್ಳ ಯಾವುದೇ ಮನುಷ್ಯನಿಗೆ ಖೇದವಾಗದಿರದು. ಆದರೆ ಇವರು ದೇವಸ್ಥಾನವನ್ನು ಕಟ್ಟಲು ಕೊಟ್ಟಿರುವ ಕಾರಣಗಳನ್ನು ಕೇಳಿ ಹಿಂದೂ ಸಮಾಜದ ಒಗ್ಗಟ್ಟನ್ನು ಬಯಸುವ ಮನುಷ್ಯ ಬೆದರದೆ ಇರಲಾರ. ಈ ಹೊಸ ದೇವಸ್ಥಾನವನ್ನು ಕಟ್ಟುವ ಇವರ ಉದ್ದೇಶ ಕೇಳಿ, ಹಳೆಯ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಆತುರರಾಗಿರುವ ದಲಿತರಂತಹ ಜನರನ್ನು ಒಳಗೆ ಬಿಡದೆ, ದೇವರನ್ನು ಕಣ್ಣೆತ್ತಿಯೂ ನೋಡದಂತಹ ಬ್ರಾಹ್ಮಣರನ್ನು ಮಾತ್ರ ಒಳಗೆ ಸೇರಿಸುವುದರಿಂದ ಈ ಹಳೆಯ ದೇವಸ್ಥಾನಗಳ ಪರಂಪರೆಗಳನ್ನು ನಾಶಮಾಡುವಂತಹ ಈ ದೇವಸ್ಥಾನ ದಲಿತರು ಹಾಗೂ ಮೇಲು ಜಾತಿಯವರಿಗಾಗಿಯೂ ಸಮಾನವಾಗಿ ತೆರೆದಿರುತ್ತದೆ ಅನ್ನುವುದು ಇವರ ಅಂಬೋಣ.

ಹೊಸ ಧರ್ಮದ ಹೊಸ ದೇವಸ್ಥಾನ
ಅನ್ನುವ ಈ ಕಲ್ಪನೆ ಚೆನ್ನಾಗಿದೆ. ಆದರೆ ಅಸ್ಪಶ್ಯತೆ ನಿವಾರಣೆಯ ಹೊಸ ಉಪಾಯವಾಗಿ ಈ ದೇವಸ್ಥಾನ ಅಸ್ತಿತ್ವಕ್ಕೆ ಬರುತ್ತಿರುವುದಾದರೆ ಇದರಿಂದ ಅಸ್ಪಶ್ಯತೆ ನಿವಾರಣೆಯಾಗದೆ ಕೇವಲ ಅಸ್ಪಶ್ಯತೆ ನಿವಾರಣೆಯ ಮಕ್ಕಳಾಟ ಮಾತ್ರ ಆಗಬಹುದು ಅನ್ನುವುದನ್ನು ನಾವು ಸ್ಪಷ್ಟವಾಗಿ ಹೇಳಬಯಸುತ್ತೇವೆ. ಈ ಕಲ್ಪನೆ ಹೊಳೆದವನಿಗೆ ದಲಿತರು ದೇವಸ್ಥಾನದ ಒಳಗೆ ಹೊಗಲು ಯಾಕೆ ಪ್ರಯತ್ನಿಸುತ್ತಾರೆ ಅನ್ನುವುದು ಸರಿಯಾಗಿ ತಿಳಿದಿರಲಿಕ್ಕಿಲ್ಲ, ಇಲ್ಲವೇ ಹೊಸ ಧರ್ಮದ ಹೊಸ ದೇವಸ್ಥಾನಗಳನ್ನು ಕಟ್ಟಿದರೆ ಅಸ್ಪಶ್ಯತೆಯ ಪ್ರಶ್ನೆಯನ್ನು ಪರಿಹರಿಸಬಹುದು ಎಂದೇನಾದರೂ ಆತನಿಗೆ ಅನಿಸಿರಬೇಕು. ದೇವರ ದರ್ಶನಕ್ಕೆ ಆತುರರಾಗಿ ದಲಿತರು ದೇವಸ್ಥಾನದೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿಲ್ಲ. ಸತ್ಯವನ್ನು ಕಂಡುಹಿಡಿಯಲು ಕುತೂಹಲದ ಖಡ್ಗವನ್ನು ಹಿಡಿದು ಬ್ರಾಹ್ಮಣರು ರಚಿಸಿರುವ ಪೌರಾಣಿಕ ಕಥೆಗಳ ಬೆಟ್ಟಗಳನ್ನು ಚೂರುಚೂರು ಮಾಡಬಲ್ಲ ಬುದ್ಧಿವಂತ ಜನ ದಲಿತರಲ್ಲಿದ್ದಾರೆ. ಕಲ್ಲಿನ ದೇವರನ್ನು ಆಲಂಗಿಸಲು ತಮ್ಮ ಸರ್ವಸ್ವವನ್ನೂ ಖರ್ಚು ಮಾಡುವ ಸಲಹೆಯನ್ನವರು ದಲಿತರಿಗೆ ಕೊಡುತ್ತಾರೆ ಎಂದು ಅಂದುಕೊಳ್ಳುವುದು ಕೂಡಾ ಅಜ್ಞಾನದ ಲಕ್ಷಣ. ಮೇಲ್ಜಾತಿಯವರೊಂದಿಗೆ ಅವರಿಗೆ ಸಮಾನ ಹಕ್ಕುಗಳು ಬೇಕಿರುವುದರಿಂದಲೇ ಅವರು ದೇವಸ್ಥಾನದೊಳಗೆ ಹೋಗುವ ಹಠ ತೊಟ್ಟಿದ್ದಾರೆ. ಯಾರಿಗಾದರೂ ಈ ದೆಸೆಯಿಂದ ಪ್ರಯತ್ನಿಸುವುದಾದರೆ ಮಾತ್ರ ಪ್ರಯತ್ನಿಸಲಿ.

ಬೇರೆ ದೇವಸ್ಥಾನಗಳನ್ನು ಕಟ್ಟುವ ಪ್ರಯತ್ನ ಬೇಡ. ಇದೆಲ್ಲದರಿಂದ ಅಸ್ಪಶ್ಯರಂತೂ ತೃಪ್ತರಾಗರು ಹಾಗೂ ಅಸ್ಪಶ್ಯತೆಯೂ ದೂರವಾಗದು. ಬೇರೆ ವ್ಯವಸ್ಥೆ ಮಾಡುವುದರಿಂದ ದಲಿತರು ಮೇಲ್ಜಾತಿ ಯವರಾಗುತ್ತಿದ್ದರೆ ಹೊಲೆಯರ ವಸತಿ, ಮಾದಿಗರ ವಸತಿ, ಚಮ್ಮಾರರ ವಸತಿ ಹಾಗೂ ದೊಂಬರ ವಸತಿಗಳು ಇಂದೂ ಅನಾದಿಕಾಲದಲ್ಲಿದಂತೆಯೇ ಬೇರೆಯೆ ಆಗಿ ಏಕೆ ಇವೆ. ಇದರ ಪರಿಣಾಮವೇನು ಅನ್ನುವುದು ಕಣ್ಣೆದುರಿಗೆ ಇರುವಾಗ ಬೇರೆ ದೇವಸ್ಥಾನ ಕಟ್ಟುವುದರಿಂದ ಅಸ್ಪಶ್ಯತೆ ತೊಲಗುತ್ತದೆ ಅನ್ನುವುದು ಶುದ್ಧ ಮಕ್ಕಳಾಟವಲ್ಲದೆ ಇನ್ನೇನು? ಇಂತಹ ಬುದ್ಧಿಯಿಲ್ಲದ ಜನ ಆರಂಭಿಸಿರುವ ಅಸ್ಪಶ್ಯತೆ ನಿವಾರಣೆಯ ಈ ಮಕ್ಕಳಾಟದಲ್ಲಿ ಬೇರೆ ದೇವಸ್ಥಾನಗಳು, ಬೇರೆ ಬಾವಿಗಳು ಅಸ್ಪಶ್ಯತೆಯನ್ನು ನಿವಾರಿಸುವ ಉಪಾಯಗಳೆಂದು ಹೇಳಲಾಗುತ್ತಿದೆ. ಪಾಪ ಈ ದಲಿತರು ಎಷ್ಟು ಭಾಗ್ಯವಂತರೆಂದರೆ ಇವರಿಗೆ ಬೇರೆ ರಸ್ತೆ, ಬೇರೆ ಟ್ರಾಮ್‌ಗಳು, ಬೇರೆ ರೈಲುಗಾಡಿಗಳು, ಬೋಟುಗಳು, ಗಾಡಿಗಳು, ಬೇರೆ ಕೋರ್ಟು ಕಚೇರಿಗಳನ್ನು ಕಟ್ಟುವ ಸೂಚನೆಗಳು ಬರುತ್ತಿಲ್ಲ ಸದ್ಯಕ್ಕೆ!

ಈ ಬೇರೆ ದೇವಸ್ಥಾನಗಳನ್ನು ಕಟ್ಟುವವರ ತಲೆ ಹೇಗೆ ಓಡುತ್ತದೆ ನೋಡಿ. ಈ ಹೊಸ ದೇವಸ್ಥಾನ ದಲಿತ ಹಾಗೂ ಮೇಲ್ಜಾತಿಯವರಿಬ್ಬರಿಗೂ ತೆರೆಯಲ್ಪಡುವುದರಿಂದ ಅವುಗಳು ಸಂಯುಕ್ತ ದೇವಸ್ಥಾನಗಳಾಗಿ ಅಲ್ಲಿ ಇಬ್ಬರೂ ಒಟ್ಟಿಗೆ ಸೇರಿದರೆ ಅಸ್ಪಶ್ಯತೆ ಇಲ್ಲವಾಗಬಹುದು ಅನ್ನುವುದು ಅವರ ವಿಚಾರ. ಆದರೆ ದಲಿತರಿಗಾಗಿ ತೆರೆದಿರುವಂತಹ ದೇವಸ್ಥಾನದಲ್ಲಿ ಮೇಲ್ಜಾತಿಯವರು ಬಂದೇ ಬರುತ್ತಾರೆ ಅನ್ನುವ ಭರವಸೆಯನ್ನು ಕೊಡುವವರು ಯಾರು? ಅನ್ನುವ ಪ್ರಶ್ನೆಯನ್ನು ಈ ತಲೆ ಓಡಿಸುವ ಜನರಿಗೆ ನಾವು ಕೇಳಬಯಸುತ್ತೇವೆ. ಇಡೀ ಮುಂಬೈಯಲ್ಲಿ ಹಿಂದೂ ಮಹಾಸಭೆ ಕಟ್ಟುತ್ತಿರುವ ದೇವಸ್ಥ್ಥಾನವನ್ನು ಬಿಟ್ಟರೆ ಬೇರೆ ದೇವಸ್ಥಾನಗಳೇ ಇರದಿದ್ದ ಪರಿಸ್ಥಿತಿಯಲ್ಲಿ ಮುಲಾಜಿಲ್ಲದೆ ಮೇಲ್ಜಾತಿಯವರು ಈ ಹೊಸ ದೇವಸ್ಥಾನಕ್ಕೆ ಬರುತ್ತಿದ್ದರು ಅನ್ನಬಹುದು, ಆದರೆ ಪರಿಸ್ಥಿತಿ ಹಾಗಿಲ್ಲ. ಮನೆಗಳಿಗಿಂತ ದೆವಸ್ಥಾನಗಳೇ ಹೆಚ್ಚಿರುವಂತಹ ಜಾಗದಲ್ಲಿ ಶುದ್ಧವಾಗಿರುವಂತಹ ದೇವಸ್ಥಾನಗಳನ್ನು ಬಿಟ್ಟು ಮೈಲಿಯಾಗಿರುವಂತಹ ದೇವಸ್ಥಾನಕ್ಕೆ ಮೇಲ್ಜಾತಿಯವರು ಬಂದಾರು ಅಂದುಕೊಳ್ಳುವವರಿಗೆ ನಮ್ಮದೊಂದು ಸೂಚನೆ- ಹೊಸ ದೇವಸ್ಥಾನಗಳನ್ನು ಕಟ್ಟಿ ಇಂತಹ ಅನುಭವಗಳನ್ನು ಕ್ರಯಕ್ಕೆ ಪಡೆಯುವ ಅಗತ್ಯವಿಲ್ಲ, ಮುಂಬೈಯಲ್ಲಿ ದಲಿತ ಚಮ್ಮಾರ ಜನರ ವಿಠಲ ರುಕ್ಮಿಣಿಯ ದೇವಸ್ಥಾನವಿದೆ. ಅಲ್ಲಿ ಮೇಲ್ಜಾತಿಯವರು ಪೂಜೆ ಮಾಡಲು ಅಡ್ಡಿಯಿಲ್ಲ. ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಅವರೆಂದೂ ಈ ದೇವಸ್ಥಾನವನ್ನು ಉಪಯೋಗಿಸಿದ್ದು ನಾವು ಕೇಳಿಲ್ಲ. ಬೇರೆ ದೇವಸ್ಥಾನ ಕಟ್ಟಿದ್ದರಿಂದ ಚಮ್ಮಾರರು ಮೇಲ್ಜಾತಿಯವರಾಗಲಿಲ್ಲ. ಆದರೆ ಪಾಪ ಆ ವಿಠಲ ಮಾತ್ರ ರುಕ್ಮಿಣಿಯೊಂದಿಗೆ ದಲಿತನಾದ. ಇಂತಹುದೇ ಪರಿಸ್ಥಿತಿ ಹಿಂದೂ ಮಹಾಸಭೆ ಕಟ್ಟಲು ಹೊರಟಿರುವ ದೇವಸ್ಥಾನದ ಬಗ್ಗೆಯೂ ಆಗಲಿದೆ ಅನ್ನುವುದರ ಬಗ್ಗೆ ನಮಗ್ಯಾವ ಅನುಮಾನವೂ ಇಲ್ಲ.

ಬೇರೆ ದೇವಸ್ಥಾನ ಕಟ್ಟುವುದರಿಂದ ಅಸ್ಪಶ್ಯತೆ ತೊಲಗುವುದು ಎಂದು ಮೊದಲಿಗೆ ಅನಿಸಿದರೂ ಕಡೆಗೆ ಇಬ್ಬರ ನಡುವೆ ಅಂತರ ಹೆಚ್ಚೆಚ್ಚು ಬೆಳೆಯುತ್ತಲೇ ಹೋಗಲಿದೆ ಅನ್ನುವುದರಲ್ಲಿ ಅನುಮಾನವಿಲ್ಲ. ಬೇರೆ ದೇವಸ್ಥಾನಗಳನ್ನು ಕಟ್ಟುವುದೆಂದರೆ ಆವಶ್ಯಕತೆಯನ್ನು ಬೆಳೆಸುವುದೇ ಹೊರತು ಅಸ್ಪಶ್ಯತೆ ನಿವಾರಣೆಯ ಮಾರ್ಗವಲ್ಲ. ಸದ್ಯದಲ್ಲಿ ಇರುವಂತಹ ಸಾರ್ವಜನಿಕ ಸೌಲಭ್ಯಗಳನ್ನೇ ಎಲ್ಲರಿಗಾಗಿ ತೆರೆಯಿಸುವುದೇ ಅಸ್ಪಶ್ಯತೆ ನಿವಾರಣೆಯ ಮಾರ್ಗ.
ಬೇರೆಲ್ಲ ಮಾರ್ಗಗಳು ಸುಳ್ಳು

ಆದರೆ ಈ ಮಾರ್ಗ ಹಿಂದೂ ಮಹಾಸಭೆಯ ಚಾಲಕರಿಗೆ ಯಾವತ್ತೂ ಸರಿಬರಲಾರದು. ಹಿಂದೂ ಮಹಾಸಭೆ ಕೂಡ ಭಿಕ್ಷುಕಶಾಹಿಯ (ಬ್ರಾಹ್ಮಣ ಜಾತಿ) ಸುಧಾರಿತ ಆವೃತ್ತಿ. ಹಿಂದೂಗಳಲ್ಲಿ ವರ್ಣಭೇದ, ಸಂಸ್ಕಾರ ಭೇದ, ಮಂತ್ರ ಭೇದ, ತಂತ್ರ ಭೇದ ಅನ್ನುವಂತಹ ಭೇದಗಳನ್ನಿವರು ಮೆರೆದಿದ್ದಾರೆ. ಅಷ್ಟೇಯಲ್ಲ, ಈ ಭೇದಗಳನ್ನು ಹೋಗಲಾಡಿಸಿ ಹಿಂದೂ ಜನರನ್ನು ಒಗ್ಗಟ್ಟಾಗಿಸಲು ಪ್ರಯತ್ನಿಸಿದ ಜನರ ಜೊತೆ ಅನೇಕ ಸಲ ಹಳ್ಳಿ ಗಮಾರನ ತರಹ ವರ್ತಿಸಿದ ಆ ಭಿಕ್ಷುಕಶಾಹಿಗೆ ಬೇರೆ ದೇವಸ್ಥಾನ ಕಟ್ಟುವ ಕಲ್ಪನೆ ಹೊಳೆದಿರುವುದು ಅದರ ಸ್ವಭಾವಕ್ಕೆ ತಕ್ಕಂತಿದೆ. ಬೇರೆ ದೇವಸ್ಥಾನದ ಕಲ್ಪನೆಯಲ್ಲಿ ತಮ್ಮ ಮಡಿವಂತಿಕೆಯನ್ನು ಕಾಪಾಡಿಕೊಂಡು ದಲಿತರಿಗಾಗಿ ಏನೋ ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳುವುದು ಇವರ ಸ್ವಾರ್ಥಭರಿತ ಕುಟಿಲ ನೀತಿ ಅನ್ನುವುದನ್ನು ದಲಿತರು ಚೆನ್ನಾಗಿ ಬಲ್ಲರು. ನಾವು ದೇವಸ್ಥಾನದಲ್ಲಿ ಪ್ರವೇಶಿಸುವುದು ತಡವಾದರೂ ಚಿಂತೆಯಿಲ್ಲ ಆದರೆ ಕೇವಲ ತಡವಾಗುತ್ತಿದೆ ಅನ್ನುವ ಕಾರಣಕ್ಕಾಗಿ ಬೇರೆ ದೇವಸ್ಥಾನಗಳು ನಮಗೆ ಬೇಕಿಲ್ಲ. ನಮಗಾಗಿ ಮುಚ್ಚಿದ ದೇವಸ್ಥಾನಗಳನ್ನು ನಾವು ಮುಂದೆಂದಾದರೂ ತೆರೆದೇವು. ಆದರೆ ನಿಮ್ಮ ಒಂದು ಪ್ರತ್ಯೇಕ ದೇವಸ್ಥಾನ ನಮಗೆ ಸಿಕ್ಕರೆ ಈ ಒಂದರಿಂದ ನಮಗಾಗಿ ಮುಚ್ಚಲ್ಪಟ್ಟ ದೇವಸ್ಥಾನಗಳು ಎಂದೂ ತೆರೆಯಲಾರವು ಹಾಗೂ ನಮ್ಮ ಅಸ್ಪಶ್ಯತೆ ಕೂಡ ಇದ್ದಲ್ಲೇ ಇದ್ದೀತು.

ಈ ಬುದ್ಧಿವಾದವನ್ನು ಹಿಂದೂ ಮಹಾಸಭೆ ಒಪ್ಪಲಿ ಒಪ್ಪದಿರಲಿ, ಆದರೆ ಮುಂಬೈಯ ಡಿಪ್ರೆಸ್ಡ್ ಇಂಡಿಯಾ ಅಸೋಸಿಯೇಶನ್ ಆದರೂ ಒಪ್ಪಬೇಕಿತ್ತು. ಆದರೆ ಹಾಗೆ ಕಾಣುತ್ತಿಲ್ಲ. ಇದೊಂದು ದಲಿತರ ಸಂಸ್ಥೆ. ಈ ಸಂಸ್ಥೆ ಉಗಮ ವರ್ಹಾಡ್ ಪ್ರಾಂತದಲ್ಲಾಗಿ ಅದರ ಮುಖ್ಯ ಶಾಖೆ ಅಲ್ಲಿದೆ. ಈ ಸಂಸ್ಥೆ ಒಂದು ಗಟ್ಟಿ ಪ್ರತಿಷ್ಠಾನದಂತೆ ಸಂಚಾರ ಮಾಡುತ್ತ ಮುಂಬೈಯಲ್ಲಿ ಪ್ರವೇಶಿಸಿ ಇಲ್ಲಿ ತನ್ನ ಇನ್ನೊಂದು ಶಾಖೆಯನ್ನು ತೆರೆಯಿತು. ಈ ಸಂಸ್ಥೆಯನ್ನು ನಡೆಸುವ ಭೋಸಲೆಯವರಲ್ಲಿ ಸಂಸ್ಥೆ ನಡೆಸಲು ಸಾಕಷ್ಟು ಹಣವಿದೆ. ಈ ಸಂಸ್ಥೆಯ ಕಾರ್ಯಕಾರಿ ಮಂಡಲದಲ್ಲಿ ಜವಾಬ್ದಾರಿಯಿರುವ ಜನರ ಕೊರತೆಯಿದೆ. ಕೆಲವು ಬ್ರಾಹ್ಮಣರು, ಬುದ್ಧಿ ಕಡಿಮೆಯಿರುವ ಕೆಲವರು, ಕಡಿಮೆ ಕಲಿತವರು!, ಕೆಲವು ಲಂಚಕೋರರು, ಮಾನಸನ್ಮಾನಕ್ಕೆ ಹಾತೊರೆಯುವ ಆದರೆ ಯಾವುದೇ ಆಧಾರವಿರದ ದಲಿತ ಜನರು ಹಾಗೂ ಮೇಲ್ವರ್ಗದ ಸನಾತನಧರ್ಮಿಗಳು ಹಾಗೂ ಸಮಾಜದಲ್ಲಿ ಪ್ರತಿಷ್ಠೆಯಿರುವವರು ಕೆಲವರು, ಅಲ್ಲದೆ ಇಂತಹ ಕಾರಭಾರವನ್ನು ಒಪ್ಪುವಂತಹ ಕೆಲವು ಜನರಿಂದ ಇವರ ಕೆಲಸ ನಡೆದಿದೆ. ಸುಳ್ಳು ವಾರ್ತೆಗಳನ್ನು ಹಬ್ಬಿಸುವುದಕ್ಕಂತೂ ಇವರು ಯಾವತ್ತೂ ಹೆದರುವುದಿಲ್ಲ ಹಾಗೂ ಈ ಸಂಸ್ಥೆಯ ಅಧ್ಯಕ್ಷರ ಕಣ್ಣಲ್ಲಿ ಮಣ್ಣೆರಚಿ ಕಣ್ಣಮುಚ್ಚಾಲೆ ಕೆಲಸಗಳನ್ನು ಮಾಡಲು ಇವರಿಗೆ ಏನೂ ಅನಿಸುವುದಿಲ್ಲ. ಹಾಗಾಗಿ ಈ ಸಂಸ್ಥೆಯ ಕೆಲಸವನ್ನು ಎಷ್ಟು ನಂಬಬೇಕು ಅನ್ನುವುದನ್ನು ಹೇಳುವವರಾರು? ಈ ಸಂಸ್ಥೆಯಿಂದ ದಲಿತರ ಕಲ್ಯಾಣವಾಗುತ್ತದೆ ಎಂದು ಅನಿಸಿದವರಿಗೆ ಅನಿಸಲಿ. ನಮಗಂತೂ ಕಿಂಚಿತ್ತೂ ಹಾಗೆ ಅನಿಸುತ್ತಿಲ್ಲ.

ಈ ಸಂಸ್ಥೆಯು ಕೆಲವು ದಿನಗಳಿಂದ ಮುಂಬೈಯಲ್ಲಿ ದಲಿತರಿಗಾಗಿ ದೇವಸ್ಥಾನವನ್ನು ಕಟ್ಟುವ ಕೆಲಸ ಕೈಗೊಂಡಿದೆ ಹಾಗೂ ಅದಕ್ಕಾಗಿ ನಾಲ್ಕಾಣೆಯ ಪಟ್ಟಿಯೊಂದನ್ನು ಸ್ವಯಂಸೇವಕರ ತಂಡವೊಂದರಿಂದ ವಸೂಲು ಮಾಡುತ್ತಿದೆ. ದಲಿತರು ಮೇಲ್ಜಾತಿಯವರ ದೇವಸ್ಥಾನದಲ್ಲಿ ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ ಬೇರೆ ದೇವಸ್ಥಾನಗಳನ್ನು ಕಟ್ಟುವ ಕೆಲಸ ಮಾಡುತ್ತಿರುವ ಸಂಸ್ಥೆಯೆಂದರೆ ಮೂರ್ಖರ ಒಂದು ಗುಂಪೆಂದರೂ ತಪ್ಪಿಲ್ಲ. ಇಂತಹವರಿಗೆ ಗಲ್ಲು ಶಿಕ್ಷೆ ಕೊಟ್ಟರೂ ಪುಣ್ಯದ ಕೆಲಸ ಅನ್ನುವಷ್ಟು ಇವರ ಕೃತ್ಯ ನಿಂದನೀಯವಾಗಿದೆ. ದಲಿತರ ಸರ್ವಾಂಗೀಣ ಉನ್ನತಿ ಮಾಡುವ ಕೆಲಸ ಎಷ್ಟು ದೊಡ್ಡದೆಂದರೆ ಅದಕ್ಕಾಗಿ ಸಾವಿರಾರು ಸಂಸ್ಥೆಗಳು ಬೇಡ. ಇಂತಹವರಿಂದ ಸಮಾಜಕ್ಕೆ ಯಾವ ಲಾಭವೂ ಇಲ್ಲ, ನಷ್ಟವೇ ಹೆಚ್ಚು. ಹಾಗಾಗಿ ಇಂತಹ ವಿಘಾತಕ ಸಂಸ್ಥೆಗಳಿಂದ ದೂರ ಉಳಿಯುವುದರಲ್ಲೇ ದಲಿತರ ಕಲ್ಯಾಣವಿದೆ. ಇಲ್ಲದಿದ್ದರೆ ಅಪರಿಚಿತ ಜನ ಅಸ್ಪಶ್ಯತೆ ನಿವಾರಣೆಯ ಮಕ್ಕಳಾಟ ಅಡುತ್ತಿರುವಂತೆ ದಲಿತರು ತಮ್ಮ ಕೈಯಾರೆ ತಮ್ಮ ಕೆಲಸದ ಮಕ್ಕಳಾಟ ಮಾಡಿಕೊಂಡಾರು ಹಾಗೂ ಅದರಿಂದಾಗಬಹುದಾದ ಆತ್ಮಘಾತದ ಪಾಪದ ಮಾಲಕರು ದಲಿತರೇ ಆಗಬೇಕಾಗುತ್ತದೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News