×
Ad

ವಾರಕ್ಕೆ ಒಂದಕ್ಕಿಂತ ಹೆಚ್ಚು ಮೊಟ್ಟೆ ತಿನ್ನುವವರಿಗೆ Alzheimer ರೋಗದ ಅಪಾಯ ಶೇ. 47ರಷ್ಟು ಕಡಿಮೆ

Update: 2025-12-14 18:59 IST

ಸಾಂದರ್ಭಿಕ ಚಿತ್ರ | Photo Credit : freepik

ಅರಿವು ಅಥವಾ ಜ್ಞಾನಗ್ರಹಣದ ಕೊರತೆ ಇರುವ ಜನರಲ್ಲಿ ನೆನಪುಶಕ್ತಿ ಮತ್ತು ಕಲಿಕೆಗೆ ಮುಖ್ಯವಾಗಿರುವ ನರಪ್ರೇಕ್ಷಕವಾದ ಎಸಿಟೈಲ್ಕೊಲೀನ್ ಕೊರತೆ ಇರುತ್ತದೆ. ಈ ಎಸಿಟೈಲ್ಕೊಲೀನ್ ಬಿಡುಗಡೆಯಲ್ಲಿ ಮೊಟ್ಟೆಯಲ್ಲಿ ಸಿಗುವ ಕೊಲೀನ್ ಪ್ರಮುಖ ಪಾತ್ರವಹಿಸುತ್ತದೆ.

ಸಮೃದ್ಧ ಪ್ರೊಟೀನ್ ಮತ್ತು ಪೌಷ್ಠಿಕಾಂಶವಿರುವ ಅಗ್ಗದ ಆಹಾರವೆಂದೇ ಪರಿಗಣಿಸಲಾಗಿರುವ ಮೊಟ್ಟೆಯಿಂದ ಮಾನವನ ಆರೋಗ್ಯಕ್ಕೆ ನಕಾರಾತ್ಮಕ ಪರಿಣಾಮ ಬೀರುವ ಬಗ್ಗೆ ಬಹಳಷ್ಟು ಚರ್ಚೆಗಳಿವೆ. ಮೊಟ್ಟೆಯನ್ನು ಹೆಚ್ಚು ಸೇವಿಸಿದಲ್ಲಿ ಕೊಬ್ಬಿನಂಶ ಹೆಚ್ಚಾಗಲಿದೆ ಎನ್ನುವುದು ಅಂತಹ ಒಂದು ನಂಬಿಕೆಯಾಗಿದೆ. ಆದರೆ ಜರ್ನಲ್ ಆಫ್ ನ್ಯೂಟ್ರಿಷನ್ ಹೆಲ್ತ್ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಅಧ್ಯಯನವೊಂದರ ಪ್ರಕಾರ ವಾರಕ್ಕೆ ಒಂದಕ್ಕಿಂತ ಹೆಚ್ಚು ಮೊಟ್ಟೆ ಸೇವನೆ ಉತ್ತಮ ಎಂದು ಕಂಡುಬಂದಿದೆ.

►ಮರೆಗುಳಿತನದ ಅಪಾಯ ಶೇ 47ರಷ್ಟು ಕಡಿಮೆ

ಅಧ್ಯಯನದ ಪ್ರಕಾರ, ಮೊಟ್ಟೆಯನ್ನೇ ತಿನ್ನದಿರುವವರಿಗೆ/ ಅಪರೂಪಕ್ಕೆ ಮೊಟ್ಟೆ ತಿನ್ನುವವರಿಗೆ ಹೋಲಿಸಿದರೆ ವಾರಕ್ಕೆ ಒಂದಕ್ಕಿಂತ ಹೆಚ್ಚು ಮೊಟ್ಟೆ ಸೇವನೆ ಮಾಡುವ ವಯಸ್ಕರಲ್ಲಿ alzheimerಗೆ ಸಂಬಂಧಿಸಿದ ಬುದ್ಧಿಮಾಂದ್ಯ/ ಮರೆಗುಳಿತನದ ರೋಗ ಬರುವ ಸಾಧ್ಯತೆ ಶೇ 47ರಷ್ಟು ಕಡಿಮೆಯಿದೆ.

ಸಂಶೋಧನೆಯಲ್ಲಿ 1,024 ವಯಸ್ಕರನ್ನು (ಸರಾಸರಿ ವಯಸ್ಸು ಶೇ 81.4 ವರ್ಷಗಳು) ಅಮೆರಿಕದ ಇಲಿನೊಯಿಸ್ ನ ವಸತಿ ಸೌಲಭ್ಯಗಳಲ್ಲಿ ಸರಾಸರಿ 6.7 ವರ್ಷಗಳ ಕಾಲ ಅಧ್ಯಯನ ಮಾಡಿ ಈ ಸಂಶೋಧನೆಯನ್ನು ನಡೆಸಲಾಗಿದೆ. ಅಧ್ಯಯನ ಹೇಳುವ ಪ್ರಕಾರ, ಮುಖ್ಯವಾಗಿ ಮೊಟ್ಟೆಯ ಹಳದಿ ಭಾಗದಲ್ಲಿರುವ ಕೋಲೀನ್ ನ ಪರಿಣಾಮವಾಗಿ ಇಂತಹ ರಕ್ಷಣಾತ್ಮಕ ಪರಿಣಾಮವಾಗುತ್ತದೆ.

ಕೋಲೀನ್‍ ಎನ್ನುವುದು ಜೀವಿಗಳ ಮೂಲಪದಾರ್ಥಗಳಲ್ಲಿ ದೊರೆಯುವ, ಮೇದಸ್ಸಿನ ಚಯಾಪಚಯಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುವ ‘ಬಿ’ ಸಮೂಹಕ್ಕೆ ಸೇರಿದ ಒಂದು ವಿಟಮಿನ್‍. ಎಸಿಟೈಲ್ಕೊಲೀನ್ ಎನ್ನುವುದು ಸ್ವತಂತ್ರ ನರಗಳ ತುದಿಗಳಲ್ಲಿ ಬಿಡುಗಡೆಯಾಗುವ, ನರಗಳ ತಂತುಗಳಿಂದ ಪ್ರೇರಣೆಗಳನ್ನು ವರ್ಗಾಯಿಸುವ ಕೋಲೀನಿನ ಅಸೀಟಿಕ್‍ ಆಮ್ಲದ ಒಂದು ಎಸ್ಟರ್ ಆಗಿರುತ್ತದೆ. ಎಸ್ಟರು ಎಂದರೆ ಯಾವುದೇ ಆಮ್ಲದಲ್ಲಿನ ಹೈಡ್ರೊಜನ್‍ ಪರಮಾಣುಗಳ ಸ್ಥಾನವನ್ನು ಆಲ್ಕೈಲ್‍, ಆರೈಲ್‍, ಮೊದಲಾದ ಕಾರ್ಬನಿಕ ರ್‍ಯಾಡಿಕಲ್‍ ಗಳು ಆಕ್ರಮಿಸಿಕೊಳ್ಳುವುದರಿಂದ ರೂಪುಗೊಳ್ಳುವ ಸಂಯುಕ್ತ.

►ಎಸಿಟೈಲ್ ಕೊಲೀನ್ ನ ಕೊರತೆ

ಈ ಎಸಿಟೈಲ್ ಕೊಲೀನ್ ಬಿಡುಗಡೆಯಲ್ಲಿ ಕೊಲೀನ್ ಪ್ರಮುಖ ಪಾತ್ರವಹಿಸುತ್ತದೆ. ನೆನಪುಶಕ್ತಿ ಮತ್ತು ಕಲಿಕೆಗೆ ಈ ನರಪ್ರೇಕ್ಷಕವಾದ ಎಸಿಟೈಲ್ ಕೊಲೀನ್ ಅತಿಮುಖ್ಯವಾಗಿರುತ್ತದೆ. ನರಪ್ರೇಕ್ಷಕವೆಂದರೆ ಒಂದು ನರದಿಂದ ಇನ್ನೊಂದು ನರಕ್ಕೆ ಅಥವಾ ಸ್ನಾಯುವಿಗೆ ಚೋದನೆಯನ್ನು ರವಾನಿಸಲು ನೆರವಿಗೆ ಬರುವ, ನರತಂತುವಿನಿಂದ ಒಸರುವ ರಾಸಾಯನಿಕ ವಸ್ತು. ಅರಿವು ಅಥವಾ ಜ್ಞಾನಗ್ರಹಣದ ಕೊರತೆ ಇರುವ ಜನರಲ್ಲಿ ನೆನಪುಶಕ್ತಿ ಮತ್ತು ಕಲಿಕೆಗೆ ಮುಖ್ಯವಾಗಿರುವ ನರಪ್ರೇಕ್ಷಕವಾದ ಎಸಿಟೈಲ್ಕೊಲೀನ್ ಕೊರತೆ ಇರುತ್ತದೆ. ಸಂಶೋಧಕರು ಕಂಡುಕೊಂಡಿರುವ ಪ್ರಕಾರ ಆಹಾರದಲ್ಲಿ ಕೊಲೀನ್ ಸೇವನೆ ಹೆಚ್ಚಾಗಿರುವುದು ಮೊಟ್ಟೆ ಸೇವನೆಗೆ ಸಂಬಂಧಿತ ರಕ್ಷಣಾತ್ಮಕ ಅಂಶದ ಶೇ 39ರಷ್ಟು ಪರಿಣಾಮ ಬೀರಿದೆ.

►ವಿಷಕಾರಿ ಪ್ರೊಟೀನ್ಗಳ ಸಂಗ್ರಹ ಕಡಿಮೆ

ಮೃತಪಟ್ಟ ವ್ಯಕ್ತಿಗಳ ಮೇಲೆ ಸಂಶೋಧಕರು ನಡೆಸಿರುವ ಮೆದುಳಿನ ಮಹಜರುಗಳಲ್ಲಿ ಕಂಡುಬಂದಿರುವ ಪ್ರಕಾರ ಮೊಟ್ಟೆಯನ್ನು ನಿಯಮಿತವಾಗಿ ಸೇವನೆ ಮಾಡಿರುವವರಲ್ಲಿ Alzheimer ರೋಗಕ್ಕೆ ಸಂಬಂಧಿಸಿದ ವಿಷಕಾರಿ ಪ್ರೊಟೀನ್ ಗಳಾದ ಅಮಿಲಾಯ್ಡ್ ಪದರಗಳು ಮತ್ತು ಟಾವು ಟ್ಯಾಂಗಲ್ ಗಳ (ಮೆದುಳಿನ ಜೀವಕೋಶಗಳ /ನ್ಯೂರಾನ್ ಗಳ ಒಳಗೆ ರೂಪುಗೊಳ್ಳುವ ಟೌ ಪ್ರೋಟೀನ್‌ನ ಅಸಹಜ ಗುಂಪುಗಳು ಅವುಗಳ ಕಾರ್ಯವನ್ನು ಅಡ್ಡಿಪಡಿಸುತ್ತವೆ ಮತ್ತು ಜೀವಕೋಶದ ಸಾವಿಗೆ ಕಾರಣವಾಗುತ್ತವೆ) ಸಂಗ್ರಹ ಕಡಿಮೆ ಇತ್ತು.

ಮೊಟ್ಟೆಗಳು ಮೆದುಳಿನ ಆರೋಗ್ಯಕ್ಕೆ ಬೆಂಬಲಿಸುವ ಇತರ ಪೌಷ್ಠಿಕಾಂಶಗಳಾಗಿರುವ ಒಮೆಗಾ 3 ಕೊಬ್ಬಿನ ಆಮ್ಲಗಳು, ಲ್ಯುಟೀನ್, ವಿಟಮಿನ್ B12 ಮತ್ತು ಫೊಲೇಟ್ ಗಳನ್ನು ಹೊಂದಿರುತ್ತವೆ. ಇವುಗಳು ಜೊತೆಗೂಡಿ ಮೆದುಳಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News