ಖಾಲಿಸ್ತಾನಿ ಭಯೋತ್ಪಾದಕನನ್ನು 24 ಗಂಟೆಯಲ್ಲಿ ಬಿಟ್ಟ ಕೆನಡ ಪೊಲೀಸರು
ಟೊರಾಂಟೊ (ಕೆನಡ), ಎ. 27: ಖಾಲಿಸ್ತಾನಿ ಭಯೋತ್ಪಾದಕ ಎಂಬುದಾಗಿ ಭಾರತ ಸರಕಾರ ಆರೋಪಿಸಿರುವ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಕೆನಡ ಪೊಲೀಸರು ಎಪ್ರಿಲ್ ಮಧ್ಯ ಭಾಗದಲ್ಲಿ ವಶಕ್ಕೆ ತೆಗೆದುಕೊಂಡಿದ್ದರು, ಆದರೆ, ಅವನ ವಿರುದ್ಧ ಯಾವುದೇ ಮೊಕದ್ದಮೆ ದಾಖಲಿಸದೆ 24 ಗಂಟೆಗಳಲ್ಲಿ ಬಿಟ್ಟಿದ್ದಾರೆ.
ನಿಜ್ಜರ್ ಭಾರತದಲ್ಲಿ ನಡೆದ ಹಲವು ಕೊಲೆಗಳಿಗೆ ಕಾರಣನಾಗಿದ್ದಾನೆ ಎಂದು ಭಾರತ ಆರೋಪಿಸಿದೆ.
ಪೊಲೀಸ್ ಕಸ್ಟಡಿಯಿಂದ ಹೊರಬಂದ ಕೆಲವೇ ದಿನಗಳಲ್ಲಿ ಅವನು ಕೆನಡದ ಬ್ರಿಟಿಶ್ ಕೊಲಂಬಿಯ ರಾಜ್ಯದ ವ್ಯಾಂಕೂವರ್ ನಗರದ ಸರ್ರೆ ಎಂಬಲ್ಲಿ ನಡೆದ ಬೈಸಾಖಿ ಆಚರಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾನೆ.
ಆತನನ್ನು ರಾಯಲ್ ಕೆನಡಿಯನ್ ವೌಂಟರ್ ಪೊಲೀಸ್ (ಆರ್‌ಸಿಎಂಪಿ)ನ ಸರ್ರೆ ಘಟಕ ಎಪ್ರಿಲ್ 13ರಂದು ವಶಕ್ಕೆ ತೆಗೆದುಕೊಂಡಿತ್ತು ಎಂದು ಮೂಲಗಳು ಹೇಳಿವೆ. ಅವನನ್ನು ಮಾರನೆ ದಿನ ಬಿಡುಗಡೆ ಮಾಡಲಾಯಿತು ಹಾಗೂ ಈವರೆಗೆ ಅವನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ ಪಂಜಾಬ್ ಭೇಟಿಯ ವೇಳೆ ಅಲ್ಲಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್‌ರನ್ನು ಭೇಟಿಯಾಗಿದ್ದಾಗ, ರಾಜ್ಯಕ್ಕೆ ಬೇಕಾಗಿರುವ ಪಾತಕಿಗಳ ಪಟ್ಟಿಯೊಂದನ್ನು ಅಮರಿಂದರ್ ಸಿಂಗ್ ಕೆನಡ ಪ್ರಧಾನಿಗೆ ಸಲ್ಲಿಸಿದ್ದರು. ಆ ಪಟ್ಟಿಯಲ್ಲಿ ನಿಜ್ಜರ್‌ನ ಹೆಸರಿದೆ.
ಶಸ್ತ್ರಾಸ್ತ್ರ ತರಬೇತಿ?
ಉಗ್ರವಾದಿ ಸಂಘಟನೆ ‘ಖಾಲಿಸ್ತಾನ್ ಟೈಗರ್ ಫೋರ್ಸ್’ ಜೊತೆಗೆ ನಿಜ್ಜರ್ ನಂಟು ಹೊಂದಿದ್ದಾನೆ ಎಂದು ಭಾರತೀಯ ಅಧಿಕಾರಿಗಳು ಭಾವಿಸಿದ್ದಾರೆ.
ಅದೂ ಅಲ್ಲದೆ, ಅವನು ಮಿಶನ್ ಸಿಟಿಯಲ್ಲಿರುವ ಒಂದು ಸ್ಥಳದಲ್ಲಿ ಶಸ್ತ್ರ ತರಬೇತಿ ಕಾರ್ಯಕ್ರಮವನ್ನು ರಹಸ್ಯವಾಗಿ ನಡೆಸುತ್ತಿದ್ದಾನೆ ಎಂಬ ಆತಂಕವನ್ನು ಅಧಿಕಾರಿಗಳು ಕೆನಡದ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ.