ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಡಿಮೆಯಾಗುತ್ತಿದೆ : ಅಮೆರಿಕ ಸರಕಾರದ ವರದಿ

Update: 2018-04-27 18:07 GMT

ವಾಷಿಂಗ್ಟನ್,ಎ.27: ಹಿಂದು ರಾಷ್ಟ್ರವಾದಿ ಗುಂಪುಗಳು ಹಿಂಸೆ,ಬೆದರಿಕೆ ಮತ್ತು ಹಿಂದುಗಳೇತರರು ಹಾಗೂ ಹಿಂದು ದಲಿತರಿಗೆ ಕಿರುಕುಳಗಳ ಮೂಲಕ ಧಾರ್ಮಿಕ ಸ್ವಾತಂತ್ರ್ಯದ ಕೇಸರೀಕರಣಕ್ಕೆ ಮುಂದಾಗಿದ್ದರಿಂದ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕ್ಷೀಣಿಸುವಿಕೆ ಕಳೆದ ವರ್ಷವೂ ಮುಂದುವರಿದಿತ್ತು ಎಂದು ಅಮೆರಿಕ ಸರಕಾರದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಆಯೋಗ (ಯುಎಸ್‌ಸಿಐಆರ್‌ಎಫ್)ವು ತನ್ನ ವರದಿಯಲ್ಲಿ ಆರೋಪಿಸಿದೆ.

ಆಯೋಗವು ಭಾರತವನ್ನು ಅಫಘಾನಿಸ್ತಾನ್, ಅಜರ್‌ಬೈಜಾನ್, ಬೆಹರೀನ್, ಕ್ಯೂಬಾ , ಈಜಿಪ್ತ್, ಇಂಡೋನೇಷಿಯ, ಇರಾಕ್, ಕಝಕಸ್ತಾನ್, ಲಾವೋಸ್, ಮಲೇಷಿಯಾ ಮತ್ತು ಟರ್ಕಿಗಳೊಂದಿಗೆ ನಿರ್ದಿಷ್ಟ ಕಳವಳದ ಟೈರ್ 2 ರಾಷ್ಟ್ರಗಳ ಗುಂಪಿಗೆ ಸೇರಿಸಿದೆ.

ಹಿಂದುಗಳೇತರರು ಮತ್ತು ಕೆಳಜಾತಿಯ ಹಿಂದುಗಳನ್ನು ದೂರವಿಡಲು ಆರೆಸ್ಸೆಸ್,ಸಂಘ ಪರಿವಾರ ಮತ್ತು ವಿಹಿಂಪಗಳು ನಡೆಸಿದ ಬಹುಮುಖಿ ಅಭಿಯಾನದಿಂದಾಗಿ ಕಳೆದ ದಶಕದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಿತಿ ಹದಗೆಟ್ಟಿದೆ ಎಂದು ವರದಿಯು ಹೇಳಿದೆ.

ಮುಸ್ಲಿಮರು,ಕ್ರೈಸ್ತರು,ಸಿಕ್ಖರು,ಬೌದ್ಧರು,ಜೈನರು ಮತ್ತು ದಲಿತ ಹಿಂದುಗಳು ಈ ಅಭಿಯಾನದ ಬಲಿಪಶುಗಳಾಗಿದ್ದಾರೆ ಎಂದು ಯುಎಸ್‌ಸಿಐಆರ್‌ಎಫ್ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಕುರಿತ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಹೇಳಿದೆ.

ಸುಮಾರು ಮೂರನೇ ಒಂದರಷ್ಟು ರಾಜ್ಯ ಸರಕಾರಗಳು ಹಿಂದುಯೇತರರ ವಿರುದ್ಧ ಮತಾಂತರ ನಿಷೇಧ ಮತ್ತು/ಅಥವಾ ಗೋಹತ್ಯೆ ನಿಷೇಧ ಕಾನೂನುಗಳನ್ನು ಜಾರಿಗೊಳಿಸಿವೆ ಮತ್ತು ಗುಂಪುಗಳು ಹೈನುಗಾರಿಕೆ,ಚರ್ಮೋದ್ಯೋಗ ಅಥವಾ ಗೋಮಾಂಸ ಮಾರಾಟಗಳಲ್ಲಿ ತಲೆಮಾರುಗಳಿಂದಲೂ ತೊಡಗಿಕೊಂಡಿರುವ ಮುಸ್ಲಿಮರು ಅಥವಾ ದಲಿತರು ಮತ್ತು ಮತಾಂತರಗಳಲ್ಲಿ ತೊಡಗಿಕೊಂಡಿರುವ ಕ್ರೈಸ್ತರ ವಿರುದ್ಧ ಹಿಂಸಾಚಾರದಲ್ಲಿ ತೊಡಗಿವೆ ಎಂದು ವರದಿಯು ಬೆಟ್ಟುಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News