ಪಾಕ್ ಹಾಕಿ ದಂತಕಥೆ ಮನ್ಸೂರ್ ಅಹ್ಮದ್‌ಗೆ ಭಾರತದಲ್ಲಿ ಉಚಿತ ಹೃದಯ ಕಸಿ ಚಿಕಿತ್ಸೆಯ ಕೊಡುಗೆ

Update: 2018-04-28 08:36 GMT

ಮುಂಬೈ, ಎ.27: ಪಾಕಿಸ್ತಾನದ ವಿಶ್ವಕಪ್ ವಿಜೇತ ಹಾಕಿ ತಂಡದ ಆಟಗಾರ, ಮಾಜಿ ಗೋಲ್‌ಕೀಪರ್ ಮನ್ಸೂರ್ ಅಹ್ಮದ್ ಭಾರತದೆದುರಿನ ಪಂದ್ಯದಲ್ಲಿ ಹಲವು ಬಾರಿ ನಿರ್ಣಾಯಕ ಪಾತ್ರ ವಹಿಸಿ ಪಾಕ್ ಜಯಭೇರಿ ಬಾರಿಸಲು ಕಾರಣರಾಗಿದ್ದರು. ಇದೀಗ ತೀವ್ರ ಹೃದಯರೋಗಕ್ಕೆ ತುತ್ತಾಗಿ ಕರಾಚಿಯ ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಹ್ಮದ್ ಅವರ ಮನವಿ ಮೇರೆಗೆ ಭಾರತದಲ್ಲಿ ಉಚಿತ ಹೃದಯ ಕಸಿ ಶಸ್ತ್ರಚಿಕಿತ್ಸೆಯ ಕೊಡುಗೆಯನ್ನು ಫೋರ್ಟಿಸ್ ಆಸ್ಪತ್ರೆ ನೀಡಿದೆ.

ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯ ಇರುವುದರಿಂದ ತನಗೆ ವೈದ್ಯಕೀಯ ಕಾರಣಕ್ಕೆ ವೀಸಾ ನೀಡಬೇಕೆಂದು 49ರ ಹರೆಯದ ಅಹ್ಮದ್ ಭಾರತ ಸರಕಾರಕ್ಕೆ ಕಳೆದ ವಾರ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿರುವ ಪೋರ್ಟಿಸ್ ಸಮೂಹ ಆಸ್ಪತ್ರೆಗಳ ಆಡಳಿತವು ಅಹ್ಮದ್ ಭಾರತಕ್ಕೆ ಬಂದರೆ ಅವರಿಗೆ ಚೆನ್ನೈ ಅಥವಾ ಮುಂಬೈಯಲ್ಲಿರುವ ತಮ್ಮ ಆಸ್ಪತ್ರೆಗಳಲ್ಲಿ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಡೆಸಲಾಗುವುದು ಎಂದು ತಿಳಿಸಿದೆ. ತನಗೆ ಆರ್ಥಿಕ ಸಹಾಯದ ಅಗತ್ಯವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿರುವ ಅಹ್ಮದ್, ವೈದ್ಯಕೀಯ ಕಾರಣಕ್ಕೆ ಭಾರತ ಸರಕಾರ ವೀಸಾ ನೀಡಬೇಕೆಂದು ಮಾತ್ರ ತನ್ನ ಕೋರಿಕೆಯಾಗಿದೆ ಎಂದು ತಿಳಿಸಿದ್ದಾರೆ.

 ಅಹ್ಮದ್‌ರಿಗೆ ಭಾರತ ಸರಕಾರ ವೀಸಾ ನೀಡಿದ ಬಳಿಕ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದ ಒಂದು ಪ್ರಮಾಣಪತ್ರ(ಅಹ್ಮದ್ ಪ್ರಯಾಣ ಮಾಡಲು ದೈಹಿಕ ಕ್ಷಮತೆ ಹೊಂದಿರುವ ಬಗ್ಗೆ) ಪಡೆದು ಅಹ್ಮದ್‌ರನ್ನು ಹೃದಯ ಶಸ್ತ್ರಚಿಕಿತ್ಸೆಗಾಗಿ ನೋಂದಾಯಿಸಿಕೊಳ್ಳಲಾಗುತ್ತದೆ ಎಂದು ಫೋರ್ಟಿಸ್ ಆಸ್ಪತ್ರೆ(ಮುಂಬೈ)ಯ ಪ್ರಾದೇಶಿಕ ನಿರ್ದೇಶಕ ಡಾ. ಎಸ್. ನಾರಾಯಣಿ ತಿಳಿಸಿದ್ದಾರೆ. ಒಬ್ಬ ವ್ಯಕ್ತಿಯ ಪ್ರಾಣ ಉಳಿಸುವ ವಿಷಯ ಬಂದಾಗ ಗಡಿಭಾಗದಲ್ಲಿರುವ ಉದ್ವಿಗ್ನತೆ ಪರಿಗಣನೆಗೆ ಬರುವುದಿಲ್ಲ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ಡಾ. ದೀಪಕ್ ಸಾವಂತ್ ತಿಳಿಸಿದ್ದಾರೆ. ಹಲವಾರು ವಿದೇಶಿ ಪ್ರಜೆಗಳಿಗೆ ನಮ್ಮ ರಾಜ್ಯದಲ್ಲಿ ಚಿಕಿತ್ಸೆ ನೀಡಲಾಗಿದೆ.

ಈ ಪ್ರಕರಣದಲ್ಲೂ, ರೋಗಿ ಭಾರತದಲ್ಲಿ ಚಿಕಿತ್ಸೆ ಪಡೆಯಲು ಬಯಸಿದರೆ ಚಿಕಿತ್ಸೆ ನೀಡಲು ನಮಗೇನೂ ಸಮಸ್ಯೆಯಿಲ್ಲ ಎಂದು ಸಾವಂತ್ ತಿಳಿಸಿದ್ದಾರೆ. ಈ ಮಧ್ಯೆ, ಭಾರತೀಯ ಹಾಕಿ ತಂಡದ ಮಾಜಿ ನಾಯಕ ವಿ.ಭಾಸ್ಕರನ್ ಸೇರಿದಂತೆ ಭಾರತದ ಹಲವಾರು ಹಾಕಿ ಆಟಗಾರರು ಅಹ್ಮದ್ ಅವರಿಗೆ ತ್ವರಿತವಾಗಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಭಾರತದಲ್ಲಿ ತನಗೆ ದೊರೆತಿರುವ ಪ್ರೀತಿಯ ಸಂದೇಶದ ಬಗ್ಗೆ ಕೃತಜ್ಞತೆ ಸಲ್ಲಿಸಿರುವ ಅಹ್ಮದ್, ತಾನೀಗ ಭಾರತ ಸರಕಾರದಿಂದ ವೀಸಾವನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ವೀಸಾ ದೊರೆತರೂ ಹೃದಯ ಕಸಿ ಶಸ್ತ್ರಚಿಕಿತ್ಸೆ ಶೀಘ್ರದಲ್ಲೇ ನಡೆಯುವುದು ಬಹುತೇಕ ಅಸಾಧ್ಯ ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿನ ನಿಯಮದಂತೆ, ಸರದಿಪಟ್ಟಿಯಲ್ಲಿ ಭಾರತೀಯರು ಇಲ್ಲದಿದ್ದರೆ ಮಾತ್ರ ವಿದೇಶಿ ಪ್ರಜೆಗಳಿಗೆ ಹೃದಯವನ್ನು ದಾನ ಮಾಡಬಹುದು. ಈ ಹಿನ್ನೆಲೆಯಲ್ಲಿ ವಿದೇಶಿ ಪ್ರಜೆ ಭಾರತದಲ್ಲಿ ಹೃದಯ ದಾನ ಪಡೆಯಬೇಕಿದ್ದರೆ ಕನಿಷ್ಠ ನಾಲ್ಕು ತಿಂಗಳು ಕಾಯಬೇಕಾಗುತ್ತದೆ. ಭಾರತೀಯ ಪ್ರಜೆಯನ್ನು ಕಡೆಗಣಿಸಿ ವಿದೇಶಿ ಪ್ರಜೆಗೆ ಹೃದಯ ಕಸಿ ಮಾಡಲಾಗುತ್ತಿಲ್ಲ ಎಂದು ಆಸ್ಪತ್ರೆಗಳು ಸರಕಾರಕ್ಕೆ ಮುಚ್ಚಳಿಕೆ ಬರೆದು ಕೊಡಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News