ನೆಹರೂ ಕುಟುಂಬದ ಕೊಡುಗೆಯೇನು?

Update: 2018-04-30 05:21 GMT

‘‘ದೇಶಕ್ಕೆ ನೆಹರೂ ಕುಟುಂಬದ ಕೊಡುಗೆ ಏನು ಹೇಳಿ?’’ ಎನ್ನುವ ಮೂರ್ಖ ಪ್ರಶ್ನೆಯೊಂದನ್ನು ಬಿಜೆಪಿಯ ಮುಖಂಡ ಅಮಿತ್ ಶಾ ರಾಹುಲ್ ಗಾಂಧಿಯ ಮುಂದಿಟ್ಟಿದ್ದಾರೆ. ಈ ಪ್ರಶ್ನೆಗೆ ಉತ್ತರವನ್ನು ಕೇಂದ್ರ ಸಚಿವೆ, ಹಿರಿಯ ಬಿಜೆಪಿ ನಾಯಕಿ ಸುಶ್ಮಾ ಸ್ವರಾಜ್ ವಿಶ್ವಸಂಸ್ಥೆಯಲ್ಲಿ ಈ ಹಿಂದೆಯೇ ನೀಡಿದ್ದಾರೆ. ಪಾಕಿಸ್ತಾನ ಪೋಷಿಸುತ್ತಿರುವ ಉಗ್ರವಾದವನ್ನು ಖಂಡಿಸುತ್ತಾ ‘‘ಕಳೆದ ಎಪ್ಪತ್ತು ವರ್ಷಗಳಲ್ಲಿ ಭಾರತ ಸಾಧಿಸಿದ ಸಾಧನೆಗಳನ್ನು’’ ಅವರು ಪಟ್ಟಿ ಮಾಡಿ ವಿಶ್ವದ ಮುಂದಿಟ್ಟಿದ್ದರು. ಭಾರತ 70 ವರ್ಷಗಳಲ್ಲಿ ಯಾವೆಲ್ಲ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿತು ಎನ್ನುವುದನ್ನು ಹೇಳುತ್ತಾ ‘‘ಪಾಕಿಸ್ತಾನ ಈ 70 ವರ್ಷಗಳಲ್ಲಿ ಸಾಧಿಸಿದ್ದೇನು? ವಿವಿಧ ಉಗ್ರವಾದಿ ಸಂಘಟನೆಗಳಿಗೆ ಪ್ರೋತ್ಸಾಹ ಕೊಟ್ಟಿರುವುದನ್ನು ಬಿಟ್ಟರೆ ಅದು ಏನನ್ನ್ನೂ ಸಾಧಿಸಲಿಲ್ಲ’’ ಎಂದು ಜಗತ್ತಿನ ಮುಂದೆ ಘೋಷಿಸಿದ್ದರು.

ಸ್ವಾತಂತ್ರಾನಂತರದ ಬಹುತೇಕ ಸಾಧನೆಗಳ ಹಿಂದೆ ನೆಹರು, ಇಂದಿರಾ, ರಾಜೀವ್‌ಗಾಂಧಿಯವರಿದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಸ್ವತಃ ತಮ್ಮದೇ ಸರಕಾರದ ಭಾಗವಾಗಿರುವ, ಬಿಜೆಪಿಯ ಹಿರಿಯ ನಾಯಕಿಯಾಗಿರುವ ಸುಶ್ಮಾ ಸ್ವರಾಜ್ ಅವರೇ ಭಾರತ 70 ವರ್ಷಗಳಲ್ಲಿ ಅಪಾರ ಸಾಧನೆಗಳನ್ನು ಮಾಡಿದೆ ಎಂದು ಸ್ಪಷ್ಟಪಡಿಸಿರುವಾಗ, ನಕಲಿ ಎನ್‌ಕೌಂಟರ್‌ನ ಕಳಂಕಗಳನ್ನು ಮೈತುಂಬಾ ಅಂಟಿಸಿಕೊಂಡಿರುವ ಅಮಿತ್ ಶಾ ಎಂಬ ಗುಜರಾತಿನ ನಾಯಕನೊಬ್ಬ ‘‘ನಿಮ್ಮ ಕುಟುಂಬದ ಕೊಡುಗೆಯೇನು ಹೇಳಿ’’ ಎಂದು ಸವಾಲು ಹಾಕುವುದು ದೇಶಕ್ಕೆ ಮಾಡಿದ ಪರೋಕ್ಷ ಅವಮಾನವಾಗಿದೆ ಮಾತ್ರವಲ್ಲ, ಆ ಮೂಲಕ ತನ್ನ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ. ಚೀನಾ ಯುದ್ಧ ಮತ್ತು ತುರ್ತುಪರಿಸ್ಥಿತಿಯ ಕಡೆಗೆ ಬೆಟ್ಟು ಮಾಡಿ ನೆಹರೂ ಕುಟುಂಬ ಈ ದೇಶಕ್ಕೆ ಏನೇನೂ ಮಾಡಿಲ್ಲ ಎಂದು ಹೇಳುತ್ತಾ ಬಿಜೆಪಿ ಅಧಿಕಾರ ಹಿಡಿಯಿತು. ಇದೀಗ ತನ್ನ ವಿಫಲ ಆಡಳಿತವನ್ನು ಸಮರ್ಥಿಸಿಕೊಳ್ಳಲು ಅದು ಮತ್ತೆ ನೆಹರೂ ಕುಟುಂಬದ ಹೆಸರನ್ನು ಬಳಸಲು ಹೊರಟಿದೆ.

ನೆಹರೂ, ಇಂದಿರಾ ಮತ್ತು ರಾಜೀವ್ ಈ ದೇಶಕ್ಕೆ ಏನೇನೆಲ್ಲ ಕೊಡುಗೆಗಳನ್ನು ಕೊಟ್ಟರು ಎನ್ನುವುದನ್ನು ಪಟ್ಟಿ ಮಾಡಿ ಹೇಳಬಹುದು. ಆದರೆ ಬಿಜೆಪಿ ಈ ದೇಶಕ್ಕೆ ಕೊಟ್ಟ ಕೊಡುಗೆ ಏನು ಎನ್ನುವುದನ್ನು ಪಟ್ಟಿ ಮಾಡಲು ಸಾಧ್ಯವೇ? ಇಂದು ಹೋದಲ್ಲಿ ಬಂದಲ್ಲಿ ನರೇಂದ್ರ ಮೋದಿಯವರು ಇಸ್ರೋ ಸಾಧನೆಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈ ಸಾಧನೆಯ ಹಿಂದಿರುವುದು ನೆಹರೂ ಅವರ ದೂರದೃಷ್ಟಿಯೇ ಹೊರತು, ಬಿಜೆಪಿ ನಾಯಕರದ್ದಲ್ಲ. ಛಿದ್ರಛಿದ್ರವಾಗಿದ್ದ ಭಾರತವನ್ನು ಒಂದುಗೂಡಿಸಿದ್ದು, ಎಲ್ಲ ಪ್ರಾಂತಗಳನ್ನು ಬೆಸೆದು ಪ್ರಜಾಸತ್ತೆಯನ್ನು ಸದೃಢಗೊಳಿಸಿದ್ದು ನೆಹರೂ ಅವಧಿಯಲ್ಲೇ ಆಗಿದೆ. ಬಿಜೆಪಿ ದೇವಸ್ಥಾನದ ಹೆಸರಲ್ಲಿ ಕೋಮುದ್ವೇಷಗಳನ್ನು ಬಿತ್ತಿ ಅಧಿಕಾರ ಹಿಡಿದಿದ್ದರೆ, ನೆಹರೂ ‘ಬೃಹತ್ ಅಣೆಕಟ್ಟೆಗಳೇ ಆಧುನಿಕ ಭಾರತದ ದೇವಾಲಯಗಳು’ ಎಂದು ಘೋಷಿಸಿದ್ದರು. ಸುಶ್ಮ್ಮಾ ಸ್ವರಾಜ್ ವಿಶ್ವಸಂಸ್ಥೆಯ ಮುಂದೆ, ಯಾವ ಐಐಟಿ ಮತ್ತು ಏಮ್ಸ್‌ನ್ನು ತಮ್ಮ ಸಾಧನೆ ಎಂದು ಹೇಳಿಕೊಂಡರೋ ಅವೆಲ್ಲವೂ ನೆಹರೂ ಅವರ ದೂರದೃಷ್ಟಿಯ ಫಲ. ಬೃಹತ್ ಜಲಾಶಯಗಳು, ಬೃಹತ್ ಉದ್ಯಮಗಳಿಗೆ ಅಡಿಗಲ್ಲು ಹಾಕಿದವರು ನೆಹರೂ. ಅತ್ತ ಸಂಪೂರ್ಣ ಕಮ್ಯುನಿಸಂನ ಬಲೆಗೆ ಬೀಳದೆ, ಇತ್ತ ಸಾಮ್ರಾಜ್ಯಶಾಹಿ ಖೆಡ್ಡಕ್ಕೂ ದೇಶವನ್ನು ತಳ್ಳದೆ, ಕೃಷಿ ಮತ್ತು ಕೈಗಾರಿಕೆಗಳನ್ನು ಸಮನ್ವಯಗೊಳಿಸಲು ಯತ್ನಿಸಿದರು.

1947ರ ಭಾರತಕ್ಕೆ ಸದ್ಯದ ಭಾರತವನ್ನು ಯಾವ ರೀತಿಯಲ್ಲೂ ಹೋಲಿಸಲು ಸಾಧ್ಯವಿಲ್ಲ ಎಂದಾದರೆ ಅದರ ಹಿಂದೆ ನೆಹರೂ ಕುಟುಂಬದ ಕೊಡುಗೆಯನ್ನು ನಾವು ಅಲ್ಲಗಳೆಯಲಾಗುವುದಿಲ್ಲ. ಪಾಕಿಸ್ತಾನ ಅಮೆರಿಕದ ಪಾಲಾದಂತೆ, ಭಾರತವನ್ನು ವಿಶ್ವದ ಯಾವುದೋ ಶಕ್ತಿಗೆ ನೆಹರೂ ಒಪ್ಪಿಸಲಿಲ್ಲ. ಬದಲಿಗೆ ಅವರ ವಿದೇಶಾಂಗ ನೀತಿಯಿಂದಾಗಿ ಅಲಿಪ್ತ ದೇಶಗಳ ನಾಯಕನೆಂದು ಭಾರತ ಗುರುತಿಸಲ್ಪಟ್ಟಿತು. ಈ ನಾಯಕತ್ವ ಇಂದಿರಾಗಾಂಧಿ ಕಾಲದಲ್ಲೂ ಮುಂದುವರಿಯಿತು. ನೆಹರೂ ಮತ್ತು ಇಂದಿರಾಗಾಂಧಿಯ ಆಡಳಿತದ ಸಂದರ್ಭದಲ್ಲಿ ಭಾರತಕ್ಕೆ ಒಂದು ಸ್ಪಷ್ಟ ವಿದೇಶಾಂಗ ನೀತಿಯಿತ್ತು. ಈ ಕಾರಣದಿಂದಲೇ ಉಳಿದ ದೇಶಗಳು ಭಾರತದ ಕುರಿತಂತೆ ಗೌರವವನ್ನು ಇಟ್ಟುಕೊಂಡಿದ್ದರು. ಇಂದಿರಾಗಾಂಧಿಯೆಂದರೆ ತುರ್ತುಪರಿಸ್ಥಿತಿ ಅಷ್ಟೇ ಅಲ್ಲ, ಈ ದೇಶದ ತಳಸ್ತರದ ಜನರೂ ಇಂದಿರಾ ಗಾಂಧಿಯನ್ನು ತಾಯಿಯಂತೆ ಪ್ರೀತಿಸಿದ್ದರು. ಹಳ್ಳಿ ಹಳ್ಳಿಗಳಲ್ಲಿ ಇಂದಿರಾಗಾಂಧಿ ಹೆಸರು ರಾರಾಜಿಸಿತ್ತು. ಅವರೆಂದೂ ಭಾವನಾತ್ಮಕ ರಾಜಕೀಯ ನಡೆಸಿ ಜನರನ್ನು ಮರುಳುಗೊಳಿಸಿದವರಲ್ಲ. ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿ ಅದನ್ನು ಸಾರ್ವಜನಿಕರಿಗೆ ತೆರೆದುಕೊಟ್ಟದ್ದು ಇಂದಿರಾಗಾಂಧಿ. ಭೂಸುಧಾರಣೆ ಇಂದಿರಾಗಾಂಧಿಯವರ ಇನ್ನೊಂದು ಬಹುದೊಡ್ಡ ಕ್ರಾಂತಿ. ಜಮೀನ್ದಾರರ ಕೈಯಲ್ಲಿದ್ದ ಭೂಮಿಯನ್ನು ಬಡವರಿಗೆ ಹಂಚುವ ಗರಿಷ್ಠ ಪ್ರಯತ್ನವನ್ನು ಅವರು ಮಾಡಿದರು. ಆ ಮೂಲಕ ಜಮೀನ್ದಾರರ ವೈರವನ್ನೂ ಕಟ್ಟಿಕೊಂಡವರು.

ಕರಾವಳಿಯಲ್ಲಿ ಬಂಟರ ಗೇಣಿದಾರರಾಗಿ ಬದುಕು ಕಳೆಯುತ್ತಿದ್ದ ಬಿಲ್ಲವರು ಸ್ವಂತ ಭೂಮಿಯನ್ನು ಹೊಂದುವಂತಾಗಿದ್ದು ಈ ಭೂ ಸುಧಾರಣೆ ಕಾಯ್ದೆಯಿಂದ. ಸ್ವಾತಂತ್ರಾನಂತರದಲ್ಲಿ ದೇಶವನ್ನು ತೀವ್ರವಾಗಿ ಕಾಡುತ್ತಿದ್ದ ಆಹಾರದ ಕೊರತೆ ನೀಗಿದ್ದು ಇಂದಿರಾಗಾಂಧಿಯ ಕಾಲದ ‘ಹಸಿರು ಕ್ರಾಂತಿ’ ಮತ್ತು ‘ಕ್ಷೀರ ಕ್ರಾಂತಿ’ಯ ಮೂಲಕ. ‘ಗರೀಬಿ ಹಟಾವೋ’ ಘೋಷಣೆಯ ಮೂಲಕ ದೇಶದ ಬಡತನ ತೊಲಗಿತೋ ಇಲ್ಲವೋ ಆದರೆ ಅವರು ಅಭಿವೃದ್ಧಿಯ ಹೆಸರಿನಲ್ಲೇ ತನ್ನ ಬದುಕಿನುದ್ದಕ್ಕೂ ರಾಜಕೀಯ ಮಾಡಿದರು. ದೇವರು, ದೇವಸ್ಥಾನ, ಮಸೀದಿಗಳ ಹೆಸರಿನಲ್ಲಿ ಜನರನ್ನು ಮೂರ್ಖರಾಗಿಸಲಿಲ್ಲ. ಪಾಕಿಸ್ತಾನವನ್ನು ಬಗ್ಗು ಬಡಿದು ಬಾಂಗ್ಲಾಕ್ಕೆ ಸ್ವಾತಂತ್ರ ತಂದುಕೊಟ್ಟದ್ದು ಇಂದಿರಾಗಾಂಧಿಯ ರಾಜಕೀಯ ತಂತ್ರಗಾರಿಕೆ. ಸ್ವತಃ ಅಟಲ್‌ಬಿಹಾರಿ ವಾಜಪೇಯಿಯವರೇ ಇಂದಿರಾಗಾಂಧಿಯನ್ನು ಧೈರ್ಯ ಸಾಹಸವನ್ನು ‘ದುರ್ಗೆ’ಗೆ ಹೋಲಿಸಿದ್ದರು. ಭಾರತದ ‘ಕಂಪ್ಯೂಟರ್ ಯುಗ’ವನ್ನು ಘೋಷಿಸಿದ್ದೇ ರಾಜೀವ್‌ಗಾಂಧಿ. 21ನೇ ಶತಮಾನದ ಭಾರತ ಹೇಗಿರಬೇಕು ಎನ್ನುವ ದೂರದೃಷ್ಟಿಯೊಂದಿಗೆ ಅವರು ಕೆಲಸ ಮಾಡಿದರು. ಟೆಲಿಕಾಂ ಕ್ರಾಂತಿ ನಡೆದಿರುವುದು ಇದೇ ಅವಧಿಯಲ್ಲಿ.

ಇಂದು ಎಲ್ಲರ ಕೈಯಲ್ಲೂ ಮೊಬೈಲ್‌ಗಳು ರಾರಾಜಿಸುತ್ತಿದ್ದರೆ, ಮನೆಮನೆಗಳಲ್ಲಿ ಕಂಪ್ಯೂಟರ್‌ಗಳು ಕೆಲಸ ಮಾಡುತ್ತಿದ್ದರೆ, ಐಟಿಯ ಮೂಲಕ ದೇಶ ವಿಶ್ವಗಳಲ್ಲಿ ಗುರುತಿಸುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ರಾಜೀವ್‌ಗಾಂಧಿ ಮತ್ತು ಅವರ ಅಂದಿನ ಆಪ್ತರಾಗಿದ್ದ ಸ್ಯಾಮ್ ಪಿತ್ರೋಡಾ ಅವರ ದೂರದೃಷ್ಟಿ. ನರೇಂದ್ರ ಮೋದಿ ಮತ್ತು ಸುಶ್ಮ್ಮಾ ಸ್ವರಾಜ್ ಅವರು ವಿದೇಶಗಳಲ್ಲಿ ದೇಶದ ಸಾಧನೆಗಳನ್ನು ಹಾಡಿ ಹೊಗಳುತ್ತಿದ್ದರೆ ಅದಕ್ಕೆ ಕಾರಣರಾದ ಮಹತ್ವದ ಪ್ರಧಾನಮಂತ್ರಿಗಳನ್ನು ಅವರು ನೆನಪಿಸಿಕೊಳ್ಳಬೇಕು. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಇಂದಿರಾಗಾಂಧಿ ಮತ್ತು ರಾಜೀವ್‌ಗಾಂಧಿ ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಹೀಗಿರುವಾಗ ಅಮಿತ್ ಶಾ ಕರ್ನಾಟಕಕ್ಕೆ ಬಂದು ರಾಹುಲ್‌ಗಾಂಧಿಯವರಲ್ಲಿ ‘‘ದೇಶಕ್ಕೆ ನಿಮ್ಮ ಕೊಡುಗೆ ಏನು’’ ಎಂದು ಕೇಳುವುದೇ ತಮಾಷೆಯ ವಿಷಯವಾಗಿದೆ. ಈ ದೇಶಕ್ಕಾಗಿ ನೆಹರೂ ಸ್ವಾತಂತ್ರ ಪೂರ್ವದಲ್ಲೂ ಹೋರಾಡಿದ್ದಾರೆ. ಪ್ರಧಾನಿಯಾಗಿಯೂ ದೇಶವನ್ನು ಕಟ್ಟಿ ನಿಲ್ಲಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಮಾತನಾಡುವಾಗ ಭಾರತದ ಸಾಧನೆಗಳನ್ನು ಪಟ್ಟಿ ಮಾಡುತ್ತಾ, ‘‘ನಾವು ಬೃಹತ್ ವಿಶ್ವವಿದ್ಯಾನಿಲಯಗಳನ್ನು, ಇಸ್ರೋಗಳನ್ನು, ಅಣೆಕಟ್ಟುಗಳನ್ನು ಕಟ್ಟಿದೆವು. ನೀವು ಉಗ್ರಗಾಮಿ ಸಂಘಟನೆಗಳನ್ನು ಕಟ್ಟಿದಿರಿ’’ ಎಂದು ಸುಶ್ಮಾ ಸ್ವರಾಜ್ ಹೇಳಿದರು. ಸುಶ್ಮ್ಮಾ ಸ್ವರಾಜ್ ಅವರು ಒಂದನ್ನು ನೆನಪಿಟ್ಟುಕೊಳ್ಳಬೇಕು. ಪಾಕಿಸ್ತಾನ ಏನನ್ನು ಕಟ್ಟಿದೆಯೋ ಅದನ್ನೇ ಇದೀಗ ಮೋದಿ ಸರಕಾರ ಕಟ್ಟಲು ಹೊರಟಿದೆ. ನೆಹರೂ ಕುಟುಂಬ ಕಟ್ಟಿನಿಲ್ಲಿಸಿದ ಆಧುನಿಕ ದೇಶವನ್ನು ನಾಶ ಮಾಡಿ ಅಲ್ಲಿ ಕೇಸರಿ ಉಗ್ರ ಸಂಘಟನೆಗಳನ್ನು, ಕಪಟ ಸ್ವಾಮೀಜಿಗಳನ್ನು, ಅನಗತ್ಯ ಬೃಹತ್ ಪ್ರತಿಮೆಗಳನ್ನು ನಿರ್ಮಾಣ ಮಾಡಲು ಹೊರಟಿದೆ. ವಿಜ್ಞಾನ, ತಂತ್ರಜ್ಞಾನಗಳ ಬದಲಿಗೆ ಪುರಾಣಗಳನ್ನು ಜನರ ತಲೆಗೆ ತುರುಕಲು ಹೊರಟಿದೆ. ಜನರ ಅಭಿವೃದ್ಧಿಯ ಬದಲಿಗೆ ದೇವಸ್ಥಾನಗಳ ಹೆಸರಲ್ಲಿ ಅವರನ್ನು ಮರುಳು ಮಾಡುತ್ತಿದೆ. ನೆಹರೂ ಕುಟುಂಬ ದೇಶವನ್ನು 21ನೇ ಶತಮಾನಕ್ಕೆ ಸಿದ್ಧಮಾಡಿದ್ದರೆ, ಅಮಿತ್ ಶಾ ಬಳಗ ದೇಶವನ್ನು ಮತ್ತೆ ಶಿಲಾಯುಗದ ಕಡೆಗೆ ಕೊಂಡೊಯ್ಯಲು ಹೊರಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News