ಅಗ್ರ 150ರಲ್ಲಿ ಸ್ಥಾನ ಪಡೆಯುವ ಗುರಿ

Update: 2018-04-29 19:00 GMT

ಹೊಸದಿಲ್ಲಿ, ಎ.29: ಟೆನಿಸ್‌ನಲ್ಲಿ ಕೆಲವು ಸಮಯಗಳಿಂದ ಭಾರತದ ಅಗ್ರ ಶ್ರೇಯಾಂಕದ ಸಿಂಗಲ್ಸ್ ಆಟಗಾರ್ತಿಯಾಗಿರುವ ಅಂಕಿತಾ ರೈನಾ ವಿಶ್ವದ ಅಗ್ರ 150 ಆಟಗಾರ್ತಿಯರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.

    ಕಳೆದ ನವೆಂಬರ್‌ನಲ್ಲಿ ನಡೆದಿದ್ದ ಮುಂಬೈ ಓಪನ್ ಟೆನಿಸ್ ಟೂರ್ನಿಯ ಬಳಿಕ ತಾನು ತೋರುತ್ತಿರುವ ಸ್ಥಿರ ಪ್ರದರ್ಶನದಿಂದ ತೃಪ್ತಿಯಾಗಿದೆ. ಅಲ್ಲದೆ ಫೆಡರೇಷನ್ ಕಪ್ ಟೂರ್ನಿಯಲ್ಲಿ ವಿಶ್ವದ ಅಗ್ರ 100 ಶ್ರೇಯಾಂಕದೊಳಗಿನ ಇಬ್ಬರು ಆಟಗಾರ್ತಿಯರನ್ನು ಸೋಲಿಸಿರುವುದು ಆತ್ಮವಿಶ್ವಾಸವನ್ನು ವೃದ್ಧಿಸಿದೆ. ಇದರ ಬಳಿಕ ಗ್ವಾಲಿಯರ್ ಐಟಿಎಫ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವುದಾಗಿ ಅಂಕಿತಾ ತಿಳಿಸಿದ್ದಾರೆ. ಕೇಂದ್ರ ಸರಕಾರ ಕ್ರೀಡಾ ಇಲಾಖೆ ರೂಪಿಸಿರುವ ಟಿಒಪಿಎಸ್ ಯೋಜನೆಯಡಿ, ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಸಾಮರ್ಥ್ಯವಿರುವ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ನೆರವು ನೀಡಲಾಗುತ್ತದೆ. ಆದರೆ ಅಂಕಿತಾರ ಹೆಸರು ‘ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಂ’ (ಟಿಒಪಿಎಸ್)ನಲ್ಲಿ ಕಾಣಿಸಿಕೊಂಡಿರಲಿಲ್ಲ.ಇದರಿಂದ ವಿಚಲಿತರಾಗದ ಅಂಕಿತಾದಿಲ್ಲಿಯಲ್ಲಿ ನಡೆದ ಫೆಡ್ ಕಪ್ ಏಶ್ಯಾ-ಓಶಿಯಾನಾ ಗ್ರೂಪ್-1 ಪಂದ್ಯಾವಳಿ ಯಲ್ಲಿ ತಾನಾಡಿದ ಎಲ್ಲಾ ಪಂದ್ಯಗಳಲ್ಲೂ ಜಯ ಸಾಧಿಸಿದ್ದರು. ಅಲ್ಲದೆ ವಿಶ್ವದ ಅಗ್ರ 100 ಆಟಗಾರ್ತಿಯರಾದ ಚೀನಾದ ಲಿನ್ ಝು ಮತ್ತು ಕಝಕ್‌ಸ್ತಾನದ ಯೂಲಿಯಾರನ್ನು ಸೋಲಿಸಿದ್ದರು. ಇದಕ್ಕೂ ಮೊದಲು, ಕಳೆದ ನವೆಂಬರ್‌ನಲ್ಲಿ ನಡೆದ ಮುಂಬೈ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಸಾಧನೆ ತೋರಿದ್ದರು. ಈ ಸಾಧನೆಯಿಂದ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ಅಗ್ರ 200 ಆಟಗಾರ್ತಿಯರ ಪಟ್ಟಿಯಲ್ಲಿ ಸ್ಥಾನ ಪಡೆದ ಐದನೇ ಭಾರತೀಯ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು. ಇದರಿಂದ ಎಚ್ಚೆತ್ತುಕೊಂಡ ಭಾರತೀಯ ಕ್ರೀಡಾ ಪ್ರಾಧಿಕಾರವು ಅಂಕಿತಾರನ್ನು ಟಿಒಪಿಎಸ್ ಯೋಜನೆಗೆ ಸೇರಿಸಿಕೊಂಡಿದೆ. ತನ್ನ ಮೇಲೆ ವಿಶ್ವಾಸವಿಟ್ಟ ಗುಜರಾತ್ ಕ್ರೀಡಾ ಪ್ರಾಧಿಕಾರ ಹಾಗೂ ಅಖಿಲ ಭಾರತ ಟೆನಿಸ್ ಅಸೋಸಿಯೇಷನ್‌ಗೆ ಧನ್ಯವಾದ ತಿಳಿಸಿರುವ ಅಂಕಿತಾ, ಇದೀಗ ತನಗೆ ಹೆಚ್ಚುವರಿಯಾಗಿ ತಿಂಗಳಿಗೆ 50,000 ರೂ. ದೊರೆಯಲಿದ್ದು ಇದರಿಂದ ಅಭ್ಯಾಸ ನಡೆಸಲು ಹಾಗೂ ವಿದೇಶದಲ್ಲಿ ಪಂದ್ಯ ನಡೆಯುವಾಗ ಫಿಸಿಯೋ ಹಾಗೂ ಕೋಚ್‌ರನ್ನು ಜೊತೆಗೆ ಕರೆದೊಯ್ಯಲು ಅನುಕೂಲವಾಗುತ್ತದೆ ಎಂದು ಅಂಕಿತಾ ರೈನಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News