ಕೆಂಪುಕೋಟೆ ದತ್ತು ಪ್ರಕ್ರಿಯೆ ಬಗ್ಗೆ ಕೇಂದ್ರ ಪ್ರವಾಸೋದ್ಯಮ ಸಚಿವರು ಹೇಳಿದ್ದೇನು ?

Update: 2018-04-30 16:36 GMT

ಹೊಸದಿಲ್ಲಿ, ಎ.30: ದಿಲ್ಲಿಯಲ್ಲಿರುವ ಐತಿಹಾಸಿಕ ಕೆಂಪುಕೋಟೆಯನ್ನು ಖಾಸಗಿ ಸಂಸ್ಥೆಗೆ ದತ್ತು ನೀಡಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಹಾಯಕ ಪ್ರವಾಸೋದ್ಯಮ ಸಚಿವ ಕೆ.ಜೆ.ಅಲ್ಪೋನ್ಸ್, ಇದರಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಕೆಂಪುಕೋಟೆಯನ್ನು ದಾಲ್ಮಿಯಾ ಭಾರತ್ ಸಂಸ್ಥೆಗೆ ದತ್ತು ನೀಡುವ ನಿರ್ಧಾರವನ್ನು ಕೇಂದ್ರದ ಪ್ರವಾಸೋದ್ಯಮ ಇಲಾಖೆ ಕಳೆದ ವಾರ ಕೈಗೊಂಡಿತ್ತು. ಈ ನಿರ್ಧಾರದ ಬಗ್ಗೆ ವ್ಯಾಪಕ ಟೀಕೆ ಕೇಳಿಬಂದಿದ್ದು , ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂಕೇತಗಳನ್ನು ವಿನಿಮಯ ಮಾಡಿಕೊಳ್ಳುವ ವ್ಯವಹಾರಕ್ಕೆ ಕೇಂದ್ರ ಸರಕಾರ ಮುಂದಾಗಿದೆ ಎಂದು ಕಾಂಗ್ರೆಸ್ ಟೀಕಿಸಿತ್ತು. ಮಾಧ್ಯಮ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಕಾಂಗ್ರೆಸ್ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಫೋನ್ಸ್, ಸರಕಾರದ ಈ ನಿರ್ಧಾರ ಮುಂದಿನ ಕೆಲ ವರ್ಷಗಳಲ್ಲಿ 100 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸುವ ಕನಸನ್ನು ನನಸಾಗಿಸಲು ಪೂರಕವಾಗಿದೆ ಎಂದಿದ್ದಾರೆ.

ಕೇಂದ್ರ ಸರಕಾರ ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಂಕೇತಗಳ ವಿನಿಮಯ ವ್ಯವಹಾರದಲ್ಲಿ ತೊಡಗಿದೆ ಎಂಬ ಕಾಂಗ್ರೆಸ್ ಟೀಕೆಗೆ ಉತ್ತರಿಸಿದ ಅವರು, ಈ ಪ್ರಶ್ನೆಗೆ ಕಾಂಗ್ರೆಸ್ ಪಕ್ಷವೇ ಉತ್ತರಿಸಬೇಕು. ಹುಮಾಯೂನರ ಸಮಾಧಿಯ ಜೀರ್ಣೋದ್ಧಾರ ಕಾರ್ಯವನ್ನು ಮನಮೋಹನ್ ಸಿಂಗ್ ವಿದೇಶಿ ಸಂಸ್ಥೆ ‘ಆಗಾಖಾನ್ ಪ್ರತಿಷ್ಠಾನ’ಕ್ಕೆ ವಹಿಸಿಕೊಟ್ಟಿದ್ದರು. ನಮ್ಮ ಪಾರಂಪರಿಕ ಹೆಗ್ಗುರುತುಗಳ ಜೀರ್ಣೋದ್ಧಾರ ನಡೆಯಬೇಕಿದ್ದರೆ ಇಂತಹ ಸರಕಾರ- ಖಾಸಗಿ ಸಹಭಾಗಿತ್ವದ ಅಗತ್ಯವಿದೆ ಎಂದು ಆಗ ಇದನ್ನು ಸಿಂಗ್ ಸಮರ್ಥಿಸಿಕೊಂಡಿದ್ದರು ಎಂದು ಅಲ್ಫೋನ್ಸ್ ಹೇಳಿದರು. ಆಗಾ ಖಾನ್ ಪ್ರತಿಷ್ಠಾನ ಅದ್ಭುತವಾಗಿ ಕಾರ್ಯ ನಿರ್ವಹಿಸಿದೆ ಎಂದು ಶ್ಲಾಘಿಸಿದ ಸಚಿವರು, ದೇಶವು 5000 ವರ್ಷ ಪುರಾತನವಾದ ನಾಗರಿಕತೆಯನ್ನು ಹೊಂದಿದೆ. ಆದರೂ ಪ್ರವಾಸೀ ತಾಣಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಉಪಾಹಾರ ಗೃಹಗಳ ಕೊರತೆಯಿದೆ ಎಂದರು. ಕಳೆದ 70 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ಪಾರಂಪರಿಕ ತಾಣಗಳು ಕುಸಿದುಬಿದ್ದಿವೆ ಎಂದು ಆರೋಪಿಸಿದರು. ಜೀರ್ಣೋದ್ಧಾರ ಕಾರ್ಯಕ್ಕಾಗಿ ಹುಮಾಯೂನರ ಸಮಾಧಿಯನ್ನು ಕಾಂಗ್ರೆಸ್ ಸರಕಾರ ಹಸ್ತಾಂತರಿಸಿತ್ತು. ಆದರೆ ಹಾಲಿ ಸರಕಾರ ಕೆಂಪುಕೋಟೆಯನ್ನು ಹಸ್ತಾಂತರಿಸಿಲ್ಲ. ದಾಲ್ಮಿಯಾ ಸಮೂಹ ಸಂಸ್ಥೆ ಇಲ್ಲಿ ಸ್ವಚ್ಛತಾ ಕಾರ್ಯ, ಕುಡಿಯುವ ನೀರಿನ ಪೂರೈಕೆ, ಪಾರ್ಕ್ ನಿರ್ಮಾಣ ಮುಂತಾದ ಕಾರ್ಯಗಳನ್ನು ಸ್ವಂತ ಹಣದಿಂದ ಮಾಡುತ್ತಾರೆ. ಸರಕಾರದಿಂದ ಯಾವುದೇ ಆರ್ಥಿಕ ನೆರವು ಪಡೆಯುವುದಿಲ್ಲ. ಜೀರ್ಣೋದ್ಧಾರ ಕಾರ್ಯ ನಡೆಸುವುದಿಲ್ಲ. ಈ ಐತಿಹಾಸಿಕ ಸ್ಥಳವನ್ನು ಪ್ರವಾಸೀ ಸ್ನೇಹಿ ತಾಣವನ್ನಾಗಿ ಅಭಿವೃದ್ಧಿಗೊಳಿಸುವ ಕಾರ್ಯವನ್ನು ಮಾತ್ರ ಅವರು ನಡೆಸುತ್ತಾರೆ ಎಂದು ಸಚಿವರು ಹೇಳಿದ್ದಾರೆ.

ಭಾರತವು ಫ್ರಾನ್ಸ್, ಅಮೆರಿಕ, ಸ್ಪೇನ್ ಮುಂತಾದ ದೇಶಗಳಿಗಿಂತ 100 ಪಾಲು ಹೆಚ್ಚು ಪಾರಂಪರಿಕ ಸ್ಥಳಗಳನ್ನು ಹೊಂದಿದೆ. ಸ್ಪೇನ್‌ಗೆ ವಾರ್ಷಿಕ 85 ಮಿಲಿಯನ್ ಪ್ರವಾಸಿಗರು, ಫ್ರಾನ್ಸ್ ಮತ್ತು ಅಮೆರಿಕಾಕ್ಕೆ 75 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ನಮ್ಮ ದೇಶ ಯಾಕೆ ಈ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿಲ್ಲ ಎಂದು ನಾವೇ ಪ್ರಶ್ನಿಸಿಕೊಳ್ಳಬೇಕು. ಇದಕ್ಕೆ ಉತ್ತರವೂ ನಮ್ಮಲ್ಲೇ ಇದೆ. ನಮ್ಮಲ್ಲಿರುವ ಪ್ರವಾಸೀ ಕೇಂದ್ರಗಳನ್ನು ಸೂಕ್ತವಾಗಿ ನಿರ್ವಹಿಸಲಾಗುತ್ತಿಲ್ಲ ಮತ್ತು ಇಲ್ಲಿ ಸಮರ್ಪಕ ವ್ಯವಸ್ಥೆಯಿಲ್ಲ. ಈ ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಅವಶ್ಯಕ ಸೌಕರ್ಯ ನಿರ್ಮಿಸಲು ಖಾಸಗಿ ಸಂಸ್ಥೆಗೆ ವಹಿಸಿಕೊಡಲಾಗಿದೆ ಎಂದು ಸಚಿವ ಅಲ್ಫೋನ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News