ದಟ್ಟ ಮಂಜು: ಹರಿಯಾಣದಲ್ಲಿ ಸರಣಿ ಅಪಘಾತ; ಬಸ್, ಕಾರು, ಟ್ರಕ್ ಗಳಿಗೆ ಭಾರೀ ಹಾನಿ
Photo: NDTV
ಹೊಸದಿಲ್ಲಿ: ಹರಿಯಾಣದಲ್ಲಿ ರವಿವಾರ ಮುಂಜಾನೆ ದಟ್ಟ ಮಂಜಿನಿಂದಾಗಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಸರಣಿ ಅಪಘಾತಗಳು ಸಂಭವಿಸಿ ಬಸ್‌ಗಳು, ಟ್ರಕ್ ಗಳು ಹಾಗೂ ಕಾರುಗಳಿಗೆ ಭಾರೀ ಹಾನಿಯಾಗಿದೆ. ರಸ್ತೆಗಳಲ್ಲಿ ಕಡಿಮೆ ಗೋಚರತೆಯಿಂದಾಗಿ ಅಪಘಾತಗಳು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಸ್ಸಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ–52ರ ಧಿಕ್ತಾನಾ ಮೋಡಾದಲ್ಲಿ ಬೆಳಿಗ್ಗೆ ಸುಮಾರು 8 ಗಂಟೆ ವೇಳೆಗೆ ಕೈತಾಲ್ ಮಾರ್ಗದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಒಂದು ಡಂಪರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಬಸ್, ಕಾರು ಮತ್ತು ಮೋಟಾರ್‌ಸೈಕಲ್ ಸೇರಿ ವಾಹನಗಳ ಒಂದಕ್ಕೊಂದು ಸರಣಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರರೊಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೊಂದು ಅಪಘಾತ ರೇವಾರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ–352ರಲ್ಲಿ ಸಂಭವಿಸಿದೆ. ಕಡಿಮೆ ಗೋಚರತೆಯಿಂದಾಗಿ ಮೂರರಿಂದ ನಾಲ್ಕು ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಶೀತಗಾಳಿ ಬೀಸುತ್ತಿದ್ದು, ಹೆಚ್ಚಿನ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 4ರಿಂದ 6 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಶೀತಗಾಳಿ ಎಚ್ಚರಿಕೆ ನೀಡಿದ್ದು, ಮಂಜಿನ ವೇಳೆ ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಫಾಗ್ ಹೆಡ್‌ಲೈಟ್ ಬಳಕೆ, ವೇಗ ನಿಯಂತ್ರಣ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ.
ಇದಕ್ಕೂ ಮುನ್ನ ದಿಲ್ಲಿ–ಎನ್‌ಸಿಆರ್ ಪ್ರದೇಶದಲ್ಲೂ ದಟ್ಟ ಮಂಜಿನಿಂದಾಗಿ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಡಝನ್‌ಗೂ ಹೆಚ್ಚು ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಸಂಚಾರ ಅಸ್ತವ್ಯಸ್ತಗೊಂಡಿತ್ತು.