ಬಿಹಾರ ರೈಲಿನಲ್ಲಿ ಜನಸಂದಣಿಯಿಂದ ಶೌಚಾಲಯದಲ್ಲಿ ಸಿಲುಕಿದ ಮಹಿಳೆ; RPF ನಿಂದ ರಕ್ಷಣೆ
Photo: x/@Avoid_potato
ಕತಿಹಾರ್ (ಬಿಹಾರ), ಡಿ.14: ಬಿಹಾರದ ಕತಿಹಾರ್ ಜಂಕ್ಷನ್‌ನಲ್ಲಿ ನಿಂತಿದ್ದ ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು, ಬೋಗಿಯೊಳಗೆ ಏಕಾಏಕಿ ಉಂಟಾದ ಜನಸಂದಣಿಯಿಂದ ಶೌಚಾಲಯದಲ್ಲೇ ಸಿಲುಕಿಕೊಂಡ ಘಟನೆ ನಡೆದಿದೆ. ರೈಲ್ವೆ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಮಾಡಿದ ಬಳಿಕ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಿದೆ.
ನಿಲ್ದಾಣದಲ್ಲಿ ರೈಲು ನಿಂತಿದ್ದ ಸಂದರ್ಭದಲ್ಲಿ ಮಹಿಳೆ ಶೌಚಾಲಯ ಬಳಸುತ್ತಿದ್ದಾಗ, 30ರಿಂದ 40 ಮಂದಿ ಯುವಕರು ಕೂಗುತ್ತಾ ಹಾಗೂ ಪರಸ್ಪರ ತಳ್ಳಿಕೊಂಡು ಬೋಗಿಯೊಳಗೆ ನುಗ್ಗಿದ್ದಾರೆ ಎನ್ನಲಾಗಿದೆ. ಬಾಗಿಲಿನ ಬಳಿ ಜನಸಂದಣಿ ತುಂಬಿಕೊಂಡ ಕಾರಣ ಮಹಿಳೆಗೆ ಹೊರಬರಲು ಸಾಧ್ಯವಾಗದೆ ಶೌಚಾಲಯದೊಳಗೇ ಉಳಿಯಬೇಕಾಯಿತು. ಪರಿಸ್ಥಿತಿ ಅಸುರಕ್ಷಿತವಾಗಿದ್ದರಿಂದ ಅವರು ಶೌಚಾಲಯದ ಬಾಗಿಲು ಮುಚ್ಚಿಕೊಂಡು ನೆರವಿಗಾಗಿ ಕಾಯುತ್ತಿದ್ದರು.
ಅದಾಗಲೇ ಮಹಿಳೆ ತಮ್ಮ ಮೊಬೈಲ್ ಮೂಲಕ ರೈಲ್ವೆ ಸಹಾಯವಾಣಿ 139ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಆರ್‌ಪಿಎಫ್ ಸಿಬ್ಬಂದಿ, ಬೋಗಿಯೊಳಗಿನ ಜನಸಮೂಹವನ್ನು ಚದುರಿಸಿ, ಮಹಿಳೆಯನ್ನು ಶೌಚಾಲಯದಿಂದ ಹೊರಬರಲು ಅನುವುಮಾಡಿಕೊಟ್ಟು ಸುರಕ್ಷಿತವಾಗಿ ತನ್ನ ಆಸನಕ್ಕೆ ಮರಳಲು ನೆರವಾದರು ಎಂದು ತಿಳಿದು ಬಂದಿದೆ.
ಘಟನೆಯ ಕುರಿತು ಮಹಿಳೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆ ಕುರಿತು ಚರ್ಚೆಗೆ ಕಾರಣವಾಗಿದೆ. ಅನೇಕರು ಅವರ ಸಮಯೋಚಿತ ನಿರ್ಧಾರವನ್ನು ಶ್ಲಾಘಿಸಿದ್ದು, ಆರ್‌ಪಿಎಫ್‌ನ ತ್ವರಿತ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.