×
Ad

ಅಂತರರಾಷ್ಟ್ರೀಯ ಸೈಬರ್ ವಂಚನೆ | ನಾಲ್ವರು ಚೀನಿ ಪ್ರಜೆಗಳು ಸೇರಿದಂತೆ 17 ಆರೋಪಿಗಳು, 58 ಸಂಸ್ಥೆಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐ

Update: 2025-12-14 19:05 IST

 Photo Credit : PTI

ಹೊಸದಿಲ್ಲಿ,ಡಿ.14: ಭಾರತದ ಹಲವಾರು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಬೃಹತ್ ಸುಸಂಘಟಿತ ಅಂತರರಾಷ್ಟ್ರೀಯ ಸೈಬರ್ ಜಾಲವನ್ನು ಭೇದಿಸಿರುವ ಸಿಬಿಐ ನಾಲ್ವರು ಚೀನಿ ಪ್ರಜೆಗಳು ಸೇರಿದಂತೆ 17ಆರೋಪಿಗಳು ಮತ್ತು 58 ಸಂಸ್ಥೆಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.

ಸಿಬಿಐ ಝೌ ಯಿ,ಹುವಾನ್ ಲಿಯು, ವೀಜಿಯಾನ್ ಲಿಯು ಮತ್ತು ಗುವಾನುವಾ ವಾಂಗ್ ಅವರನ್ನು ವಿದೇಶಿ ನಿರ್ವಾಹಕರೆಂದು ಗುರುತಿಸಿದ್ದು, ಅವರ ಸೂಚನೆಯ ಮೇರೆಗೆ 2020ರಿಂದ ಭಾರತದಲ್ಲಿ ಶೆಲ್ ಅಥವಾ ನಾಮಮಾತ್ರ ಕಂಪೆನಿಗಳನ್ನು ಸ್ಥಾಪಿಸಲಾಗಿತ್ತು.

ಅಕ್ಟೋಬರ್‌ 2025ರಲ್ಲಿ ಮೂವರು ಪ್ರಮುಖ ಭಾರತೀಯ ಆರೋಪಿಗಳ ಬಂಧನದೊಂದಿಗೆ ಈ ವಂಚಕ ಜಾಲದ ಬಗ್ಗೆ ಮಹತ್ವದ ಸುಳಿವು ಲಭಿಸಿತ್ತು. ದಾರಿ ತಪ್ಪಿಸುವ ಲೋನ್‌ ಆ್ಯಪ್‌ಗಳು,ನಕಲಿ ಹೂಡಿಕೆ ಯೋಜನೆಗಳು,ಪೊಂಝಿ ಮತ್ತು ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಸ್ಕೀಮ್‌ ಗಳು,ನಕಲಿ ಅರೆಕಾಲಿಕ ಉದ್ಯೋಗಗಳ ಕೊಡುಗೆಗಳು ಮತ್ತು ವಂಚಕ ಆನ್‌ಲೈನ್ ಗೇಮಿಂಗ್ ಪ್ಲ್ಯಾಟ್‌ ಫಾರ್ಮ್‌ ಗಳ ಮೂಲಕ ಸಾವಿರಾರು ಅಮಾಯಕ ನಾಗರಿಕರನ್ನು ವಂಚಿಸಲು ಸಂಘಟಿತ ಮಾಫಿಯಾವೊಂದು ವ್ಯಾಪಕ ಡಿಜಿಟಲ್ ಮತ್ತು ಹಣಕಾಸು ಮೂಲಸೌಕರ್ಯವನ್ನು ಸೃಷ್ಟಿಸಿದ್ದನ್ನು ಸಿಬಿಐ ಪತ್ತೆ ಹಚ್ಚಿದೆ.

ಗೃಹ ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದಿಂದ ಸ್ವೀಕರಿಸಲಾಗಿದ್ದ ಮಾಹಿತಿಗಳ ಆಧಾರದಲ್ಲಿ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಆನ್‌ಲೈನ್ ಹೂಡಿಕೆ ಮತ್ತು ಉದ್ಯೋಗ ಯೋಜನೆಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರನ್ನು ವಂಚಿಸಲಾಗುತ್ತಿದೆ ಎಂದು ಈ ಮಾಹಿತಿಗಳು ಸೂಚಿಸಿದ್ದವು.

ಆರಂಭದಲ್ಲಿ ಪ್ರತ್ಯೇಕ ದೂರುಗಳಾಗಿ ಕಂಡು ಬಂದಿದ್ದರೂ ವಿವರವಾದ ವಿಶ್ಲೇಷಣೆಯು ಬಳಕೆಯಾಗಿದ್ದ ಅಪ್ಲಿಕೇಷನ್‌ ಗಳು, ನಿಧಿ ಹರಿವಿನ ಮಾದರಿಗಳು,ಪೇಮೆಂಟ್ ಗೇಟ್‌ ವೇ ಗಳು ಮತ್ತು ಡಿಜಿಟಲ್ ಹೆಜ್ಜೆಗುರುತುಗಳಲ್ಲಿ ಗಮನಾರ್ಹ ಹೋಲಿಕೆಗಳನ್ನು ಬಹಿರಂಗಗೊಳಿಸಿತ್ತು. ಇದು ಸಾಮಾನ್ಯ ಸಂಘಟಿತ ಪಿತೂರಿಯತ್ತ ಬೆಟ್ಟು ಮಾಡಿತ್ತು ಎಂದು ಸಿಬಿಐ ಹೇಳಿದೆ.

ಸಿಬಿಐ ತನಿಖೆಯ ಸಂದರ್ಭದಲ್ಲಿ ನಕಲಿ ನಿರ್ದೇಶಕರು, ಫೋರ್ಜರಿ ದಾಖಲೆಗಳು, ನಕಲಿ ವಿಳಾಸಗಳು ಮತ್ತು ವ್ಯವಹಾರ ಉದ್ದೇಶಗಳ ಸುಳ್ಳು ಹೇಳಿಕೆಗಳನ್ನು ಬಳಸಿಕೊಂಡು ಸ್ಥಾಪಿಸಲಾಗಿದ್ದ 111 ಶೆಲ್ ಕಂಪೆನಿಗಳ ಜಾಲವನ್ನು ಬಯಲಿಗೆಳೆದಿತ್ತು.

ಈ ಶೆಲ್ ಕಂಪೆನಿಗಳನ್ನು ವಿವಿಧ ಪಾವತಿ ಗೇಟ್‌ ವೇ ಗಳೊಂದಿಗೆ ಬ್ಯಾಂಕ್ ಖಾತೆಗಳು ಮತ್ತು ವ್ಯಾಪಾರ ಖಾತೆಗಳನ್ನು ತೆರೆಯಲು ಬಳಸಲಾಗುತ್ತಿತ್ತು. ಇದು ಅಪರಾಧದ ಆದಾಯವನ್ನು ತ್ವರಿತವಾಗಿ ಹಲವಾರು ಹಂತಗಳಲ್ಲಿ ಬೇರೆ ಕಡೆಗಳಿಗೆ ವರ್ಗಾವಣೆ ಮಾಡಲು ಅನುಕೂಲವನ್ನು ಕಲ್ಪಿಸಿತ್ತು. ನೂರಾರು ಬ್ಯಾಂಕ್ ಖಾತೆಗಳ ವಿಶ್ಲೇಷಣೆಯು ಅವುಗಳ ಮೂಲಕ 1,000 ಕೋ.ರೂ.ಗೂ ಅಧಿಕ ಹಣವನ್ನು ರವಾನಿಸಿದ್ದನ್ನು ಬಹಿರಂಗಗೊಳಿಸಿದೆ. ಒಂದು ಖಾತೆಯು ಅಲ್ಪಾವಧಿಯಲ್ಲಿ 152 ಕೋ.ರೂ.ಗಿಂತ ಹೆಚ್ಚಿನ ಹಣವನ್ನು ಸ್ವೀಕರಿಸಿತ್ತು ಎಂದು ಸಿಬಿಐ ತಿಳಿಸಿದೆ.

ಇದಕ್ಕೂ ಮುನ್ನ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ, ತಮಿಳುನಾಡು,ಕೇರಳ,ಆಂಧ್ರಪ್ರದೇಶ,ಜಾರ್ಖಂಡ್ ಮತ್ತು ಹರ್ಯಾಣಾದಾದ್ಯಂತ 27ಸ್ಥಳಗಳಲ್ಲಿ ಶೋಧಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ಡಿಜಿಟಲ್ ಸಾಧನಗಳು,ದಾಖಲೆಗಳು ಮತ್ತು ಹಣಕಾಸು ದಾಖಲೆಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ತಜ್ಞರ ಪರಿಶೀಲನೆಗೆ ಒಪ್ಪಿಸಲಾಗಿತ್ತು. ವಿದೇಶಿ ಪ್ರಜೆಗಳು ವ್ಯಾಪಕ ಸಂವಹನ ಸಂಪರ್ಕಗಳನ್ನು ಬಳಸಿಕೊಂಡು ಈ ವಂಚಕ ಜಾಲವನ್ನು ನಿರ್ದೇಶಿಸುತ್ತಿದ್ದಾರೆ ಎನ್ನುವುದನ್ನು ಸಿಬಿಐ ಪತ್ತೆ ಹಚ್ಚಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News