ಮುಂದಿನ ಪ್ರವಾಸಿ ಭಾರತೀಯ ದಿವಸ್ ಜನವರಿಯಲ್ಲಿ ವಾರಣಾಸಿಯಲ್ಲಿ ನಿಗದಿ
ವಾಷಿಂಗ್ಟನ್,ಎ.30: ಮುಂದಿನ ಪ್ರವಾಸಿ ಭಾರತೀಯ ದಿವಸ್ 2019,ಜ.21ರಿಂದ 23ರವರೆಗೆ ವಾರಣಾಸಿಯಲ್ಲಿ ನಡೆಯಲಿದೆ ಮತ್ತು ವಿದೇಶಿ ಭಾರತೀಯ ಸಮುದಾಯಕ್ಕೆ ಅಲಹಾಬಾದ್‌ನಲ್ಲಿ ಕುಂಭ ಸ್ನಾನಕ್ಕೆ ಮತ್ತು ಜ.26ರಂದು ದಿಲ್ಲಿಯಲ್ಲಿ ಗಣತಂತ್ರ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯ ಸಮುದಾಯ ವ್ಯವಹಾರಗಳ ಸಚಿವ ಅನುರಾಗ ಕುಮಾರ ಅವರು ತಿಳಿಸಿದರು.
ರವಿವಾರ ಇಲ್ಲಿ ನ್ಯಾಷನಲ್ ಕಮ್ಯುನಿಟಿ ಆಫ್ ಏಷ್ಯನ್ ಇಂಡಿಯನ್ ಅಸೋಸಿಯೇಷನ್ಸ್ ಹಾಗೂ ಇತರ ಸಮುದಾಯ ಸಂಘಟನೆಗಳು ತನಗಾಗಿ ಏರ್ಪಡಿಸಿದ್ದ ಸತ್ಕಾರ ಕೂಟದಲ್ಲಿ ವಾಷಿಂಗ್ಟನ್ ಡಿಸಿ,ಮೇರಿಲ್ಯಾಂಡ್,ವರ್ಜೀನಿಯಾಗಳ ಮತ್ತು ಸುತ್ತುಮುತ್ತಲಿನ ಪ್ರತಿಷ್ಠಿತ ಭಾರತೀಯ-ಅಮೆರಿಕನ್ ಸಮುದಾಯದ ನಾಯಕರ ನ್ನುದ್ದೇಶಿಸಿ ಮಾತನಾಡಿದ ಅವರು,ವಿಶ್ವಾದ್ಯಂತದಿಂದ ಭಾರತೀಯ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಲು ಕಾರ್ಯಕ್ರಮದ ವಿವರಗಳನ್ನು ರೂಪಿಸಲಾಗುತ್ತಿದೆ ಎಂದರು.
ಪ್ರವಾಸಿ ಭಾರತೀಯ ದಿವಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರಿಷಿಯಸ್ ಪ್ರಧಾನಿ ಪ್ರವಿಂದ್ ಜಗನ್ನಾಥ ಅವರು ಉದ್ಘಾಟಿಸ ಲಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಉತ್ತರ ಪ್ರದೇಶ ಸರಕಾರದ ಸಹಭಾಗಿತ್ವದೊಡನೆ 15ನೇ ಪ್ರವಾಸಿ ಭಾರತೀಯ ದಿವಸ್ ಅನ್ನು ಆಯೋಜಿಸುತ್ತಿದೆ.