ರಶ್ಯಾ ಕ್ರಾಂತಿ : ಅದೊಂದು ಕಥೆಯಲ್ಲ, ಅಮೋಘವಾದ ಪಾಠಗಳ ಗಣಿ

Update: 2018-04-30 18:50 GMT
Editor : ಲಲಿತಾ

ರಶ್ಯನ್ ಕ್ರಾಂತಿಯು ನಮಗೆ ಕ್ರಾಂತಿಯನ್ನು ನೆರವೇರಿಸುವ ಬಗೆಗೆ ಪ್ರಾಕ್ಟಿಕಲ್ ಆದಂತಹ ಅಸಂಖ್ಯ ಒಳನೋಟಗಳನ್ನು ಒದಗಿಸುತ್ತದೆ ಮತ್ತು ಅವು ಇಂದಿಗೂ ಪ್ರಸ್ತುತವಾಗಿವೆ. ಅದರ ಗೆಲುವಿನ ಯಶೋಗಾಥೆಗಳನ್ನು ಹಾಡಿ ಹೊಗಳುವ ಹೊತ್ತಿನಲ್ಲೇ, ಕಳೆದ ಹಲವು ದಶಕಗಳಿಂದ ಯಾವುದೇ ದೇಶದಲ್ಲಿ ಕ್ರಾಂತಿಯ ಸಾಧ್ಯತೆಗಳು ಹತ್ತಿರದಲ್ಲೆಲ್ಲೂ ಕಾಣುತ್ತಿಲ್ಲದ, ಅದೊಂದು ದೂರದ ಕನಸಷ್ಟೇ ಆಗಿ ಉಳಿದಿರುವ ಇಂದಿನ ಸಂದರ್ಭದಲ್ಲಿ ರಶ್ಯನ್ ಕ್ರಾಂತಿ ಮತ್ತು ಅದರ ನಂತರದ ಕಾಲದಲ್ಲಿನ ಲೋಪದೋಷಗಳಿಂದ ಕೂಡ ಪಾಠ ಕಲಿಯುವುದು ಅದನ್ನು ಕೊಂಡಾಡುವಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಮಹತ್ವದ್ದಾಗಿದೆ.

ಆಯಾ ಕಾಲದೇಶಕ್ಕೆ ಅನುಗುಣವಾಗಿ ಸಮಕಾಲೀನಗೊಳಿಸಿ ಅಭಿವೃದ್ಧಿಪಡಿಸಿದ ಸಿದ್ಧಾಂತದ ಮೂಲಕ ಆಚರಣೆಯನ್ನು ಸಮಕಾಲೀನ ಗೊಳಿಸಬೇಕಿರುವಂತೆಯೇ ಮಾರ್ಕ್ಸ್‌ವಾದವೆಂಬ ರಾಜಕೀಯ ಸಿದ್ಧಾಂತವನ್ನು ಸಹ ಆಚರಣೆಯ ಮೂಲಕ ನಿರಂತರವಾಗಿ ಸಮಕಾಲೀನಗೊಳಿಸಿ ಅಭಿವೃದ್ಧಿಪಡಿಸಬೇಕಿದೆ. ಮಾರ್ಕ್-ಎಂಗೆಲ್ಸರು ಬಿಟ್ಟಲ್ಲಿಂದ ಎತ್ತಿಕೊಂಡ ಲೆನಿನ್ನರು ರಶ್ಯದ ಹಾಗೂ ಅಂದಿನ ಜಾಗತಿಕ ಪರಿಸ್ಥಿತಿಗಳಿಗೆ ಅನ್ವಯಿಸುವ ಮೂಲಕ ಕ್ರಾಂತಿಕಾರಿ ಸಿದ್ಧಾಂತ ಮತ್ತು ಆಚರಣೆಗಳನ್ನು ಇನ್ನೊಂದು ಹಂತಕ್ಕೆ ಬೆಳೆಸಿದರು. ಲೆನಿನ್ನರು ಬಿಟ್ಟಲ್ಲಿಂದ ಎತ್ತಿಕೊಂಡ ಮಾವೋ ಅವರು ಸೋವಿಯತ್‌ಒಕ್ಕೂಟವು ಮೊದಲ ನಲವತ್ತು ವರ್ಷಗಳಲ್ಲಿ ಅರ್ಥವ್ಯವಸ್ಥೆಯನ್ನು ಮತ್ತು ಸಮಾಜವನ್ನು ಸಮಾಜವಾದಿ ಪುನರ್‌ರಚನೆಗೆ ಒಳಪಡಿಸುವ ನಿಟ್ಟಿನ ಪ್ರಯತ್ನಗಳ ಮೂಲಕ ಒದಗಿಸಿದ್ದ ಅನುಭವಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾ, ತಮ್ಮ ಕಾಲಾವಧಿಯ ಚೀನಾದ ಮತ್ತು ಜಾಗತಿಕ ವಿದ್ಯಾಮಾನಗಳ ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಕ್ರಾಂತಿಕಾರಿ ಸಿದ್ಧಾಂತ ಮತ್ತು ಆಚರಣೆಗಳನ್ನು ಮತ್ತೊಂದು ಹಂತಕ್ಕೆ ಅಭಿವೃದ್ಧಿಪಡಿಸಿದರು. ಕ್ರಾಂತಿಗಳು ಈವರೆಗೆ ಒದಗಿಸಿರುವ ಅಮೂಲ್ಯ ಅನುಭವಗಳೆಲ್ಲವನ್ನೂ ಅರಗಿಸಿಕೊಂಡು, ಸಿದ್ಧಾಂತ ಮತ್ತು ಆಚರಣೆಗಳನ್ನು ಮತ್ತಷ್ಟು ಮುಂದಕ್ಕೊಯ್ಯುವುದು ಇಂದು ಸಮಾಜದಲ್ಲಿ ಮೂಲಭೂತ ಬದಲಾವಣೆಗಳನ್ನು ಉಂಟು ಮಾಡುವುದರಲ್ಲಿ, ಅದರ ಮೂಲಭೂತ ಕಾಯಿಲೆಯನ್ನು ಗುಣಪಡಿಸುವುದರಲ್ಲಿ- ಇದನ್ನೇ ಕ್ರಾಂತಿ ಎಂದು ಕರೆಯುವುದು- ಆಸಕ್ತರಾಗಿರುವ ಎಲ್ಲರದೂ ಜವಾಬ್ದಾರಿಯಾಗಿದೆ.

ರಶ್ಯದಲ್ಲಿ ಕ್ರಾಂತಿಯನ್ನು ನನಸಾಗಿಸಿದ ಬಳಿಕ ಏನಾಯಿತು, ಅಮೋಘವಾದ ಯಶಸ್ಸುಗಳ ಮತ್ತು ಗುರುತರವಾದ ವೈಫಲ್ಯಗಳ ಕತೆಗಳೇನು, ಅವುಗಳ ಹಿಂದಿನ ಕಾರಣಗಳೇನು, ಅವುಗಳ ಪ್ರಮುಖವಾದ ಪರಿಣಾಮಗಳೇನು ಮುಂತಾದುವೆಲ್ಲ ಇನ್ನೊಂದು ಆಳವಾದ ಅಧ್ಯಯನ ಮತ್ತು ಸಮಗ್ರ ವಿಶ್ಲೇಷಣೆಗೆ ಅತೀ ಮುಖ್ಯ ವಸ್ತುವಾಗಬಲ್ಲ ಅಂಶಗಳು. ಒಂದು ಬಹು ಸಂಕೀರ್ಣವಾದ ಸಮಾಜವಾದಿ ಪ್ರಯೋಗ ಎಂದು ಕರೆಯಬಹುದಾದ ರಶ್ಯನ್ ಕ್ರಾಂತಿಯ ‘ಏನು ಏಕೆ’ಗಳನ್ನೆಲ್ಲ ಅರ್ಥಮಾಡಿಕೊಳ್ಳಲು ಈ ಮೊದಲೇ ಅನೇಕ ಹೆಸರಾಂತ ವ್ಯಕ್ತಿಗಳು ದೀರ್ಘಕಾಲವನ್ನು ಮುಡಿಪಾಗಿಟ್ಟು ಗಂಭೀರವಾಗಿ ಪ್ರಯತ್ನಿಸುತ್ತಾ ಬಂದಿದ್ದಾರೆ. ಅದನ್ನೆಲ್ಲ ಅಧ್ಯಯನ ಮಾಡಿ ಅದರ ಆಧಾರದ ಮೇಲೆ ಹೊಸದಾಗಿ ಪರಿಶೀಲನೆ ನಡೆಸುವ ಹಾಗೂ ಇಂದಿನ ಕಾಲದಲ್ಲಿ ನಿಂತು ಹಿಂದಕ್ಕೆ ತಿರುಗಿ ನೋಡಿ ವಿವೇಚಿಸುವ ಮಹತ್ತರವಾದ ಅವಕಾಶ ನಮಗಿಂದು ದೊರಕಿದೆ. ಅದರ ಫಲವಾಗಿ ಹಿಂದಿಗಿಂತಲೂ ಹೆಚ್ಚು ಸಮಗ್ರವಾದ ಮತ್ತು ಗತಿತಾರ್ಕಿಕವಾದ ಗ್ರಹಿಕೆಯನ್ನು ಹೊಂದಲು ನಮಗೆ ಸಾಧ್ಯವಿದೆ. ಆದರೆ ನಮಗಿಂತ ಹಿಂದಿನ ಕಾಲದಲ್ಲಿ ನಡೆಸಲಾದ ಆ ಎಲ್ಲಾ ಕಠಿಣವಾದ ಪ್ರಯತ್ನಗಳ ಬಗ್ಗೆ ನಮ್ರತೆ ಮತ್ತು ಪ್ರಾಮಾಣಿಕತೆ ಹಾಗೂ ಅತಿಮುಖ್ಯ ಧ್ಯೇಯದ ಬಗ್ಗೆ ಉನ್ನತವಾದ ನಿಷ್ಠೆ ಇದ್ದಾಗ ಮಾತ್ರ ಇದು ಸಾಧ್ಯವಾಗುತ್ತದೆ.

ಆದ್ದರಿಂದ, ಕ್ರಾಂತಿಕಾರಿ ಧ್ಯೇಯಾದರ್ಶಗಳನ್ನು ವಾಸ್ತವಕ್ಕಿಳಿಸುವ ಹಾದಿಯಲ್ಲಿ ಗಳಿಸಲಾದ ವಿಸ್ತೃತವಾದ, ವೈವಿಧ್ಯಮಯವಾದ ಅನುಭವಗಳನ್ನು, ಸಮತೋಲಿತ ವಾದ ವಸ್ತುನಿಷ್ಠ ಧೋರಣೆಯೊಂದಿಗೆ, ಹೆಚ್ಚುಗಹನವಾದ ಕ್ರಾಂತಿಕಾರಿ ಅನುಭವದ, ಭದ್ರವಾದ, ತಳಪಾಯದೊಂದಿಗೆ ಆಳವಾಗಿ ಅಧ್ಯಯನ ಮಾಡಿ, ಆ ಮೂಲಕ ಕಂಡುಕೊಂಡಿದ್ದನ್ನು ಮುಂದಿಡುವಂತಹ ಇನ್ನೊಂದು ಪ್ರಯತ್ನ ಖಂಡಿತ ಅಗತ್ಯವಿದೆ.

ಆದರೂ ಅದರ ಬಗ್ಗೆ ಏನೂ ಮಾತನಾಡದೆ ಈ ಮೊದಲ ಪ್ರಯೋಗದ ಮಹಾನ್ ಕಥೆಯನ್ನು ಇಲ್ಲಿಗೇ ಮುಗಿಸಲು ಮನಸ್ಸಿಲ್ಲದೆ ನಂತರದ ಬೆಳವಣಿಗೆಗಳ ಕುರಿತು ಒಂದೆರಡು ಅನಿಸಿಕೆಗಳನ್ನು ಹಂಚಿಕೊಳ್ಳಲೇಬೇಕು ಅನಿಸುತ್ತಿದೆ. ಕ್ರಾಂತಿಯ ನಂತರದ ರಶ್ಯ ಸಮಾನತೆ ಇರುವ ನಾಡನ್ನು ಕಟ್ಟುವ ನಿಟ್ಟಿನಲ್ಲಿ ದಾಪುಗಾಲಿಟ್ಟಿತು. ಕೈಗಾರಿಕೆಗಳೆಲ್ಲಾ ರಾಷ್ಟ್ರೀಕರಣಗೊಂಡವು, ಭೂಮಿ ಸಾಮೂಹಿಕ ಒಡೆತನಕ್ಕೆ ಒಳಪಟ್ಟಿತು, ವೇತನಗಳ ಅಂತರ ಗಮನಾರ್ಹವಾಗಿ ಕಡಿಮೆಯಾಯಿತು, ಶಿಕ್ಷಣ-ಆರೋಗ್ಯ ಸರಕಾರದ ಹೊಣೆಗಾರಿಕೆಯಾಯಿತು, ಕೆಲವು ಮೂಲಭೂತ ಸಮಸ್ಯೆಗಳಿದ್ದಾಗ್ಯೂ ಕೃಷಿ-ಕೈಗಾರಿಕೆ-ತಂತ್ರಜ್ಞಾನದಲ್ಲಿ ತೀವ್ರಗತಿಯ ಬೆಳವಣಿಗೆಯನ್ನು ಸಾಧಿಸಲಾಯಿತು ಹಿಂದುಳಿದ-ಪರವಾಲಂಬಿಯಾಗಿದ್ದ ದೇಶ ಬಹುಬೇಗನೇ ಮುಂದುವರಿದ -ಸ್ವಾವಲಂಬಿ ದೇಶವಾಗಿ ಪರಿವರ್ತನೆಯಾಯಿತು ಇತ್ಯಾದಿ ಇತ್ಯಾದಿ. ಈ ಮಧ್ಯೆ ಅದನ್ನು ನಾಶಪಡಿಸಲು ನಡೆದ ಅನೇಕ ಸಾಮ್ರಾಜ್ಯಶಾಹಿ ಸಂಚುಗಳನ್ನು ಜನತೆಯ ಮನೋಬಲದ ಆಧಾರದ ಮೇಲೆ ಅದು ಹಿಮ್ಮೆಟ್ಟಿಸಿತು. ಎರಡನೇ ಪ್ರಪಂಚ ಯುದ್ಧ ದಲ್ಲಿ ನಿರ್ಣಾಯಕ ಪಾತ್ರವಹಿಸಿ ಫ್ಯಾಶಿಸಂ ಜಗತ್ತನ್ನು ನುಂಗದಂತೆ ಕಾಪಾಡಿತು. ಈ ಒಂದೊಂದು ಬದಲಾವಣೆಗಳು, ಸಾಧನೆಗಳು, ಕೊಡುಗೆಗಳು ಅಧ್ಯಯನ ಯೋಗ್ಯವಾದಂಥವು. ಮನುಕುಲಕ್ಕೆ ಅನುಭವದ ಮಾದರಿಗಳನ್ನು ನೀಡುವಂಥವು. ಮುಂದಿನ 30 ವರ್ಷಗಳ ಕಾಲ, ಅನೇಕ ಲೋಪಗಳನ್ನು ಹೊಟ್ಟೆಯಲ್ಲಿಟ್ಟುಕೊಂಡೇ ಅಸಮಾನತೆಯನ್ನು ಅಳಿಸುವ ನಿಟ್ಟಿನಲ್ಲಿ ಸಾಗಿದ ರಶ್ಯ 20ನೇ ಶತಮಾನದ ಮಧ್ಯೆ ಭಾಗದ ನಂತರ ಸಾಮ್ರಾಜ್ಯಶಾಹಿ ಜೊತೆಗಿನ ಸಂಘರ್ಷವನ್ನು ಸೈದ್ಧಾಂತಿಕವಾಗಿಯೇ ಕೈಬಿಟ್ಟಿತು. ಜಾಗತೀಕರಣದ ಪರ್ವವನ್ನು ತಲುಪುವ ವೇಳೆಗೆ ತಾನೇ ಪೂರ್ಣ ಪ್ರಮಾಣದ ಸಾಮ್ರಾ ಜ್ಯಶಾಹಿ-ಬಂಡವಾಳಶಾಹಿ ದೇಶವಾಗಿ ಪರಿವರ್ತನೆಯಾಗಿಬಿಟ್ಟಿತು. ದ್ವಿತೀಯಾರ್ಧ ದಲ್ಲಿ ನಡೆದ ಈ ಹಿಮ್ಮುಖ ತಿರುವಿನ ಕಾರಣಗಳು ಅಲ್ಲಿ ಮಾತ್ರವಿರದೆ ಮೊದಲಾರ್ಧ ದಲ್ಲೇ ಅಡಗಿದ್ದವು. ಉದಾಹರಣೆಯಾಗಿ ಕೆಲವೊಂದನ್ನು ಗುರುತಿಸುವುದಾದರೆ...

 ಸಮಾಜವಾದಿ ರಶ್ಯದ ಕಾರ್ಯಕ್ರಮ ಏನಿರಬೇಕು ಎಂಬ ಬಗ್ಗೆ ಸ್ಥೂಲವಾಗಿ ಎಲ್ಲರಿಗೂ ಒಮ್ಮತವಿತ್ತು. ಆದರೆ ಕ್ರಾಂತಿಯನ್ನು ವಾಸ್ತವದಲ್ಲಿ ಆಗುಮಾಡುವುದು ಹೇಗೆ, ಕೈಗಾರಿಕೆಗಳು ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ, ವಿಶಾಲವಾದ ಆಶೋತ್ತರಗಳಿಗೆ ಸರಿ ಹೊಂದುವ ರೀತಿಯಲ್ಲಿ ಅರ್ಥ ವ್ಯವಸ್ಥೆಯನ್ನು ಮುನ್ನಡೆಸುವುದು ಹೇಗೆ ಎಂಬಂತಹ ವಿಚಾರಗಳಲ್ಲಿ ಆ ಮುಂಚಿನ ಅನುಭವವಾಗಲಿ, ಪೂರ್ವ ಕಲ್ಪನೆಯಾಗಲಿ ಇರಲಿಲ್ಲ, ಇರಲೂ ಸಾಧ್ಯವಿರಲಿಲ್ಲ. ಉತ್ಪಾದಕ ಶಕ್ತಿಗಳ ಒಡೆತನ ಹಾಗೂ ಉತ್ಪಾದನೆಯ ವಿತರಣೆಯಲ್ಲಿ ದೊಡ್ಡಮಟ್ಟದ ಬದಲಾವಣೆ ಸಾಧಿಸಿದರೂ ಉತ್ಪಾದನಾ ಮಾದರಿ ಮಾತ್ರ ಬಂಡವಾಳಶಾಹಿಯಿಂದ ಎರವಲು ಪಡೆದದ್ದೇ ಆಗಿತ್ತು. ಗುರಿ ಮತ್ತು ಅದಕ್ಕೆ ಬಳಸುವ ದಾರಿ ಪರಸ್ಪರ ತಳುಕು ಹಾಕಿಕೊಂಡಿರುವ ಕಾರಣ ಈ ಬಂಡವಾಳಶಾಹಿ ಮಾದರಿಯು ಸಹಜವಾಗಿಯೇ ಪ್ರಭುತ್ವ ಬಂಡವಾಳಶಾಹಿ ವ್ಯವಸ್ಥೆಗೆ ದಾರಿ ತೋರಿತ್ತು.

 ಶೋಷಕ ರಚನೆಗಳನ್ನು ಕಿತ್ತೊಗೆಯಲು ಗಮನ ನೀಡಲಾಗಿತ್ತಾದರೂ ಶೋಷಕ ವೌಲ್ಯಗಳನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಗಮನವಿರಲಿಲ್ಲ. ಸಂಸ್ಕೃತಿ, ಧರ್ಮ, ಕುಟುಂಬ, ಶಿಕ್ಷಣ, ಕಲೆ ಮುಂತಾದ ಇನ್ನಿತರ ಸಂರಚನೆಗಳ ಬಗೆಗೆ ಹಾಗೂ ಇವೆಲ್ಲವುಗಳ ಮೂಲಕ ಶೋಷಕ ಸಿದ್ಧಾಂತ ಮತ್ತು ಅದರ ಫಲವಾಗಿ ಶೋಷಕ ವ್ಯವಸ್ಥೆಗಳು ಪ್ರತೀ ನಿಮಿಷ, ಪ್ರತೀ ಗಂಟೆಯ ಲೆಕ್ಕದಲ್ಲಿ ಪ್ರತಿಯೊಬ್ಬರಲ್ಲಿ ಹೇಗೆ ಪುನರುತ್ಪಾದನೆಗೊಳ್ಳುತ್ತವೆ ಎಂಬ ಬಗೆಗೆ ಬಹು ಕಡಿಮೆ ಗಮನ ನೀಡಲಾಗಿತ್ತು. ಅವುಗಳ ಪಾತ್ರ, ಮಹತ್ವ ಮತ್ತು ಪ್ರಭಾವಗಳ ಬಗ್ಗೆ ಆ ಸಮಯದಲ್ಲಿನ್ನೂ ಸಾಕಷ್ಟು ಮಟ್ಟಿಗೆ ಅವಗಾಹನೆ ಇರಲಿಲ್ಲ ಅಥವಾ ಗ್ರಹಿಸಿರಲಿಲ್ಲ. ಬಾಹ್ಯದಲ್ಲಿ ಅಸಮಾನತೆಯನ್ನು ಅಳಿಸಲಾಗಿತ್ತು, ಆದರೆ ಅಂತರಂಗದಲ್ಲಿ ಅಸಮಾನತೆಯ ಬೀಜಗಳು ಜೀವಂತವಾಗಿ ಉಳಿದುಕೊಂಡಿದ್ದವು.

 ಪಕ್ಷವೊಂದನ್ನು ಏಕಶಿಲಾ ರಚನೆಯಂತೆ ಗ್ರಹಿಸುವ ಧೋರಣೆ ಆ ನಂತರದಲ್ಲಿ ಪ್ರಾಧಾನ್ಯ ಪಡೆದುದು ಅಪಾರವಾದ ಹಾನಿಗೆ ದಾರಿ ಮಾಡಿತ್ತು. ಶತ್ರು ವೈರುಧ್ಯ ಮತ್ತು ಮಿತ್ರ ವೈರುಧ್ಯಗಳ ಕುರಿತು ಮಾವೋ ಅವರು ಮುಂದೆ ಬಹುಕಾಲದ ಬಳಿಕ ಸಾಕಷ್ಟು ಬೆಳಕು ಚೆಲ್ಲಿದ್ದರಾದರೂ ರಶ್ಯ ಕ್ರಾಂತಿಯ ವೇಳೆಯಲ್ಲಿ ಇವುಗಳ ನಡುವಿನ ವ್ಯತ್ಯಾಸವನ್ನು ಸರಿಯಾಗಿ ನೋಡಲಿಲ್ಲ; ಭಿನ್ನಾಭಿಪ್ರಾಯಗಳ ಬಗ್ಗೆ ಅಸಹನೆ ಹಾಗೂ ಹತ್ತಿಕ್ಕುವ ಧೋರಣೆ ಬೆಳೆಯತೊಡಗಿತು; ಅನೇಕ ಅಮೂಲ್ಯ ಜೀವಗಳ, ಜೀವನಗಳ ಬಲಿ ನಡೆಯಿತು; ಹೊಸ ಭವಿಷ್ಯತ್ತಿನ ಬಗ್ಗೆ ನಂಬಿಕೆ, ಭರವಸೆಗಳ ಜಾಗದಲ್ಲಿ ಭಯ ಭ್ರಮನಿರಸನಗಳು ಬೆಳೆದು ಕನಸುಗಳು ಕಮರಿ ಹೋದವು.

ಆರ್ಥಿಕ ಬುನಾದಿಯಲ್ಲಿ ಅಗತ್ಯ ಮಾರ್ಪಾಡು ಮಾಡುವುದಕ್ಕಾಗಿ ಪ್ರಭುತ್ವವನ್ನು ಕೈವಶ ಮಾಡಿಕೊಳ್ಳುವ ವಿಚಾರಕ್ಕೆ ಸರಿಯಾಗಿಯೇ ಹೆಚ್ಚಿನ ಒತ್ತು ಕೊಡಲಾಗಿತ್ತು. ಆದರೆ, ಕ್ರಾಂತಿಯ ಮಹೋನ್ನತ ಧ್ಯೇಯಗಳನ್ನು ವಾಸ್ತವದಲ್ಲಿ ಖಾತ್ರಿಯಾಗಿ ಈಡೇರಿಸುವುದಕ್ಕೆ ತಕ್ಕನಾಗಿ ಈ ಹೊಸ ಸಮಾಜವಾದಿ ಪ್ರಭುತ್ವದ ಸ್ವಭಾವ ಮತ್ತು ಪಾತ್ರ ಏನಿರಬೇಕು, ಹೆಚ್ಚು ಪ್ರಜಾತಾಂತ್ರಿಕವೂ ಕಡಿಮೆ ಶ್ರೇಣೀಕೃತವೂ ಆದ ಅದರ ಪರ್ಯಾಯ ಸಂರಚನೆ ಹೇಗಿರಬೇಕು ಎಂಬ ಅತೀ ಮಹತ್ವದ ಪ್ರಶ್ನೆಯ ಬಗ್ಗೆ ಅಗತ್ಯವಿದ್ದಷ್ಟು ಜಿಜ್ಞಾಸೆ ನಡೆಯ ಲಿಲ್ಲ. ಶ್ರಮಜೀವಿಗಳು ಕ್ರಾಂತಿಯನ್ನು ಈಡೇರಿಸಿದರಾದರೂ ಕ್ರಮೇಣ ಅಧಿಕಾರ ಪಕ್ಷದ ಕೈಯಲ್ಲೂ, ಪಕ್ಷದ ಅಧಿಕಾರ ಕೆಲವುನಾಯಕರ ಕೈಯಲ್ಲೂ ಕೇಂದ್ರೀಕರಣಗೊಂಡಿತು.

ಇವು ಕೆಲವು ಉದಾಹರಣೆಗಳು ಮಾತ್ರ. ಈ ರೀತಿಯ ಅನೇಕ ಮೂಲ ತಳಹದಿಯ ತಪ್ಪುಗಳು ಸಮಾಜವಾದಿ ನಿರ್ಮಾಣದ ಪ್ರಕ್ರಿಯೆಯಲ್ಲಿ ನಡೆದವು. ಆದರೆ ಸರಿ-ತಪ್ಪುಗಳಿಂದ ಕೂಡಿದ ಈ ಮಹಾನ್ ಪ್ರಯೋಗ ನಡೆಯದೇ ಹೋಗಿದ್ದಲ್ಲಿ ಹೊಸ ಸಮಾಜ ಕಟ್ಟುವ ಈ ಶ್ರೀಮಂತ ಅನುಭವ ಮತ್ತು ಎಚ್ಚರಿಕೆ ನಮಗೆ ಸಿಗುತ್ತಿರಲಿಲ್ಲ.

ಈವರೆಗಿನ ಕ್ರಾಂತಿಗಳು ನಡೆಸಿದ ಹಿಂದೆಂದೂ ಕಾಣದಿದ್ದಂತಹ ಪ್ರಯೋಗಗಳು, ಅವು ಒದಗಿಸಿರುವ ಶ್ರೀಮಂತ ಅನುಭವಗಳು ಹಾಗೂ ಅವುಗಳ ಬಗ್ಗೆ ಲಭ್ಯವಿರುವ ಗಂಭೀರ ವಿಶ್ಲೇಷಣೆಗಳನ್ನು ಆಧರಿಸಿ, ಸಮಾಜವಾದಿ ಕ್ರಾಂತಿಯ ಕುರಿತಂತೆ, ಸಮಾಜ ವಾದಿ ಅರ್ಥವ್ಯವಸ್ಥೆ, ಸಮಾಜ ಮತ್ತು ಸಂಸ್ಕೃತಿಗಳ ನಿರ್ಮಾಣಕ್ಕೆ ಅಗತ್ಯವಿರುವ ಸಿದ್ಧತೆಗಳು ಮತ್ತು ಎಚ್ಚರಗಳನ್ನು ಕುರಿತಂತೆ, ಪಕ್ಷದ ಸಂರಚನೆ ಮತ್ತು ಜನತೆಯ ಪರ್ಯಾಯ ರಾಜಕೀಯ ಅಧಿಕಾರವನ್ನು ಕುರಿತಂತೆ ಅನೇಕ ಸೈದ್ಧಾಂತಿಕ ಮತ್ತು ಆಚರಣಾತ್ಮಕ ಪ್ರಶ್ನೆಗಳನ್ನು ಇನ್ನಷ್ಟು ಪರಿಶೀಲಿಸುವ ಅಗತ್ಯವಿದೆ. ಬದುಕಿನ ಎಲ್ಲಾ ವಲಯಗಳಲ್ಲೂ ತರಬೇಕಿರುವ ಇಂತಹ ಮೂಲಭೂತ ಸ್ವರೂಪದ ಪರಿವರ್ತನೆಗೆ ಸಾಕಷ್ಟು ಕಾಲಾವಕಾಶ ಹಾಗೂ ವೈವಿಧ್ಯಮಯವಾದ ಅನೇಕಾನೇಕ ಪ್ರಯೋಗಗಳು ಬೇಕಾಗುತ್ತವೆ ಹಾಗೂ ಹೆಚ್ಚೆಚ್ಚು ಜನಸಮೂಹ ಮತ್ತು ಜನವಿಭಾಗಗಳ ಉತ್ಸಾಹಪೂರ್ಣ ಸೃಜನಶೀಲ ಪಾಲ್ಗೊಳ್ಳುವಿಕೆಯ ಮೂಲಕ ಈ ಮುಂಚಿನ ಕೊರತೆಗಳನ್ನು ಮೀರಲು ಆ ಒಂದೊಂದು ಪ್ರಯೋಗಗಳು ಪ್ರಯತ್ನಿಸುತ್ತವೆ ಎನ್ನುವುದನ್ನು ಇದು ನಿಶ್ಚಯವಾಗಿ ಸೂಚಿಸುತ್ತದೆ.

ಇದು ಇಲ್ಲಿ ಹೇಳಲೇ ಬೇಕಾದ ಇನ್ನೂ ಕೆಲವು ಮೂಲಭೂತ ವಿಚಾರಗಳನ್ನು ನಮ್ಮ ಗಮನಕ್ಕೆ ತರುತ್ತದೆ. ಮೊದಲನೆಯದಾಗಿ ಬಂಡವಾಳಶಾಹಿ ವ್ಯವಸ್ಥೆಯು ಬೆಳವಣಿಗೆ ಹೊಂದಿ ಅದಕ್ಕೆ ತನ್ನ ಅಧಿಕಾರವನ್ನು ಸದೃಢೀಕರಿಸಿಕೊಳ್ಳಲು ಒಂದು ನೂರು ವರ್ಷಗಳು ಬೇಕಾದವು ಹಾಗೂ ವಿಜ್ಞಾನ-ತಂತ್ರಜ್ಞಾನಗಳನ್ನು ಉನ್ನತ ಹಂತಕ್ಕೆ ಬೆಳೆಸಿ ಮಾನವತೆಯನ್ನು ಯುದ್ಧ ಮತ್ತು ಬಿಕ್ಕಟ್ಟುಗಳ ಪ್ರಪಾತದಲ್ಲಿ ಕೆಡವಲು ಮತ್ತೊಂದು ನೂರು ವರ್ಷಗಳು ಬೇಕಾದವು. ಅಂದರೆ ಬಂಡವಾಳಶಾಹಿ ವ್ಯವಸ್ಥೆಯ ಬೆಳವಣಿಗೆ ಎನ್ನುವುದು ಅಂತಿಮ ಅರ್ಥದಲ್ಲಿ ಒಂದು ಶೋಷಕ, ದಮನಕೋರ ವರ್ಗವ್ಯವಸ್ಥೆಯ ಜಾಗದಲ್ಲಿ ಅಂಥದ್ದೇ ಆದ, ಆದರೆ ಅದಕ್ಕಿಂತಲೂ ಹೆಚ್ಚು ಚಾಣಾಕ್ಷ, ನೀಚ ಮತ್ತು ಸರ್ವ ವ್ಯಾಪಿಯಾದ ಇನ್ನೊಂದು ವರ್ಗ ವ್ಯವಸ್ಥೆಯನ್ನು ಸ್ಥಾಪಿಸುವ ಪ್ರಶ್ನೆಯಷ್ಟೇ ಆಗಿದ್ದು, ಅದಕ್ಕೇನೇ ಇಷ್ಟು ಸಮಯ ಬೇಕಾಯಿತು. ಇದಕ್ಕೆ ವಿರುದ್ಧವಾಗಿ, ಸಮಾಜವಾದ ಎನ್ನುವುದು ಹಳೆಯ ಸಾಮಾಜಿಕ ವ್ಯವಸ್ಥೆಯನ್ನು ಗುಣಾತ್ಮಕವಾಗಿ ಬೇರೆಯದಾದ ಮತ್ತು ಸಂಪೂರ್ಣವಾಗಿ ಹೊಸದೇ ಆದ ಸಾಮಾಜಿಕ ವ್ಯವಸ್ಥೆಯನ್ನಾಗಿ ಪರಿವರ್ತಿಸುವ ವಿಸ್ತಾರವಾದ ಪ್ರಕ್ರಿಯೆ. ಅದು ಖಾಸಗಿ ಹಿತಾಸಕ್ತಿಗಳ ಜಾಗದಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು, ಖಾಸಗಿ ಆಸ್ತಿಯ ಜಾಗದಲ್ಲಿ ಜನತೆಯ ಸಾಮೂಹಿಕ ಒಡೆತನವನ್ನು ತರುವ ಧ್ಯೇಯ ಹೊಂದಿರುವ ವ್ಯವಸ್ಥೆ. ಹಾಗಾಗಿ ಈ ಸಾಧನೆ ಸುಲಭ ಸಾಧ್ಯವಾಗುವಂತಹುದಲ್ಲ.

ಎರಡನೆಯದಾಗಿ ನಿಯಂತ್ರಿತ ವಾತಾವರಣದಲ್ಲಿ ನಡೆಯುವ ವೈಜ್ಞಾನಿಕ ಪ್ರಯೋಗಗಳಂತೆ ಉನ್ನತ ಪ್ರಜಾತಂತ್ರ ಅಥವಾ ಸಮಾಜವಾದಿ ಪ್ರಯೋಗಗಳು ನಡೆಯುವುದಿಲ್ಲ. ಬದಲಿಗೆ ನಿರಂತರ ಅನಿಶ್ಚಿತತೆ, ಸಂಕೀರ್ಣತೆಗಳಿಂದ ಕೂಡಿದ ವಿಶಾಲ ಮಾನವ ಸಾಮಾಜಿಕ ಪ್ರಯೋಗಾಲಯದಲ್ಲಿ ಇದು ಜರುಗುತ್ತದೆ. ವಿವಿಧ ವರ್ಗ, ಸ್ತರ, ಧರ್ಮ (ನಮ್ಮ ದೇಶದಲ್ಲಿ ಜಾತಿ), ಲಿಂಗ, ರಾಷ್ಟ್ರೀಯತೆ, ಜನಾಂಗ ಇತ್ಯಾದಿ ಬಹುರೂಪಿ ಅನನ್ಯತೆಗಳಿಂದ ಕೂಡಿದ ಸಮಾಜವನ್ನು ‘ಜನರು’ ಎಂಬ ಒಂದೇ ಧ್ರುವದಲ್ಲಿ ತರುವುದು ಸುಲಭವಲ್ಲ. ಕ್ರಾಂತಿಯು ಒಟ್ಟಿಗೆ ತರಲು ಬಯಸುವ ಶೋಷಿತ ಹಾಗೂ ದಮನಿತರ ನಡುವೆಯೂ ಅಂತರ್ ವೈರುಧ್ಯಗಳು ಮತ್ತು ಹಿತಾಸಕ್ತಿಗಳ ಸಂಘರ್ಷಗಳು ಅಸ್ತಿತ್ವದಲ್ಲಿರುತ್ತವೆ. ಅಸ್ತಿತ್ವದಲ್ಲಿರುವ ಸಾಮಾಜಿಕ ವಾಸ್ತವಗಳ ಕುರಿತು ಅಂದೂ ಇದ್ದ, ಇಂದೂ ಇರುವ ಸರಳ ಅಥವಾ ಸಂಕುಚಿತ ಗ್ರಹಿಕೆಗಳ ಜಾಗದಲ್ಲಿ ಹೆಚ್ಚು ಗತಿತಾರ್ಕಿಕವಾದ ಮತ್ತು ಚಲನಶೀಲವಾದ ಗ್ರಹಿಕೆಯನ್ನು ಮೈಗೂಡಿಸಿಕೊಳ್ಳಲೇಬೇಕಿರುವ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ.

ಮೂರನೆಯದಾಗಿ ಮತ್ತು ಮುಖ್ಯವಾಗಿ ಮನುಷ್ಯರ ಚಾರಿತ್ರಿಕ ಬೆಳವಣಿಗೆ, ಅಭಿವೃದ್ಧಿ ಮತ್ತು ಬದಲಾವಣೆಯ ದೀರ್ಘ ಪಯಣದ ವಿವಿಧ ಉನ್ನತ ಘಟ್ಟಗಳನ್ನು ಅದರ ಪ್ರಜ್ಞೆಯಲ್ಲಿ ಬಂದ ಬದಲಾವಣೆಗಳ ಜೊತೆಗೆ ಜೋಡಿಸಿ ನೋಡಬೇಕಿದೆ.

ಯಾವುದೇ ಗುಣಾತ್ಮಕ ಬದಲಾವಣೆಯನ್ನು ತಂದು ಅದನ್ನು ಉಳಿಸಿಕೊಳ್ಳಬೇಕಿದ್ದಲ್ಲಿ ವಿಶಾಲ ಜನತೆಯ ಸಮಾಜೋ-ರಾಜಕೀಯ ಪ್ರಜ್ಞೆಯಲ್ಲಿ ಬರಬೇಕಿರುವ ನೆಗೆತದ ಅಗತ್ಯವನ್ನದು ಎತ್ತಿ ತೋರಿಸುತ್ತದೆ. ಬದಲಾವಣೆಗಾಗಿ ಶ್ರಮಿಸುವ ಸಂಘಟನೆಯನ್ನೂ ಒಳಗೊಂಡಂತೆ, ಎಲ್ಲಾ ಜನ ವಿಭಾಗಗಳ ನಡುವೆ ನಿರಂತರ ಹಾಗೂ ಸೃಜನಶೀಲ ರಾಜಕೀಯ ಸೈದ್ಧಾಂತಿಕಕೆಲಸದ ಮಹತ್ವವನ್ನುಇದು ಸೂಚಿಸುತ್ತದೆ. ಇದಿಲ್ಲದೆ ಹೊಸ ವೌಲ್ಯ ಮತ್ತು ಹೊಸ ಮನುಷ್ಯರ ಆಧಾರದ ಮೇಲೆ ಕಟ್ಟಬೇಕಿರುವ ಹೊಸ ಸಮಾಜ ಖಾಲಿ ಕನಸಾಗಿಯೇ ಉಳಿಯುತ್ತದೆ.

ಅಂತಿಮವಾಗಿ ಇಲ್ಲಿ ಮತ್ತೊಮ್ಮೆ ಒತ್ತಿ ಹೇಳಬೇಕಿರುವುದೆಂದರೆ; ಕ್ರಾಂತಿಯು ಹುಟ್ಟು ಹಾಕಿದ ಪ್ರಭಾವ ಮತ್ತು ಸ್ಫೂರ್ತಿ, ಅದರ ನಂತರ ಪರ್ಯಾಯವಾದ ಹಾಗೂ ಹಳೆಯದಕ್ಕಿಂತಲೂ ಅಪಾರವಾಗಿ ಶ್ರೇಷ್ಠವಾದ ಸಮಾಜಿಕ ವ್ಯವಸ್ಥೆಯನ್ನು ಕಟ್ಟಲು ನಡೆಸಿದ ಪ್ರಯತ್ನಗಳು ಚರಿತ್ರೆಯ ಮತ್ತು ಮಾನವಕುಲದ ಭವಿಷ್ಯದ ಬೆಳವಣಿಗೆಯ ಮೆಲೆ ಅಳಿಸಲಾಗದ ಗುರುತನ್ನು ಉಳಿಸಿವೆ. ಅದು 20ನೇ ಶತಮಾನದ ಎಲ್ಲ ಪ್ರಮುಖ ಹೋರಾಟಗಳ ಮೇಲೆ ಮತ್ತು ವಿಮಾ ವಿದ್ಯಮಾನದ ಮೇಲೆ ಬೀರಿರುವ ಪ್ರಭಾವ ಸಾಟಿಯಿಲ್ಲದ್ದು. ಸಮಾಜವನ್ನು ಪರಿವರ್ತಿಸುವ ಪಣತೊಟ್ಟಿರುವ ಜನರ ಪಾಲಿಗೆ ಇಂದಿಗೂ ಬಹು ಪ್ರಸ್ತುತವಾದುದು. ಎಷ್ಟೇ ವರ್ಷಗಳ ನಂತರ ಓದಿದರೂ ನಮ್ಮ ಬಾವನೆ ಮತ್ತು ಚಿಂತನೆಗಳ ಜೊತೆ ಸಂವಾದಿಸುವ, ಜೀವಂತ ಪಾತ್ರಗಳ ಜೊತೆ ನಿಲ್ಲಬಲ್ಲ, ಸಮಯದ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಸಾಹಿತ್ಯವೇ ಮಹಾನ್ ಸಾಹಿತ್ಯ ಎಂಬುವುದು ನನ್ನ ಅನಿಸಿಕೆ. ಅದೇ ರೀರಿಯಲ್ಲಿ, ವರ್ತಮಾನಕ್ಕೆ ಪ್ರಸ್ತುತವೆನಿಸುವ ಚರಿತ್ರೆಯೇ ಮಹಾನ್ ಚರಿತ್ರೆ. ರಶ್ಯನ್ ಕ್ರಾಂತಿಯ ಇಡೀ ಚರಿತ್ರೆಯು ಇಂದಿಗೂ ಜೀವಂತಿಕೆಯನ್ನು ಸ್ಫುರಿಸುತ್ತಿದೆ. ಆದ್ದರಿಂದಲೇ ಅದು ಕೇವಲ ಗತವೈಭವದ ಮಹತ್ತರ ಕಥನವಷ್ಟೇ ಆಗಿರದೆ ನಮ್ಮ ಭವಿಷ್ಯಕ್ಕೆ ಬೇಕಾದ ಅಮೋಘ ಪಾಠಗಳ ಗಣಿಯೂ ಆಗಿದೆ.

Writer - ಲಲಿತಾ

contributor

Editor - ಲಲಿತಾ

contributor

Similar News