ಈ ಬಾರಿಯೂ ನನಗೇ ಗೆಲುವಿನ ಭಾಗ್ಯ: ಯು.ಟಿ.ಖಾದರ್

Update: 2018-05-01 07:30 GMT

ಮಂಗಳೂರು (ಉಳ್ಳಾಲ) ಕ್ಷೇತ್ರದಿಂದ ಸತತ ಮೂರು ಬಾರಿ (2007, 2008, 2013) ಗೆಲುವು ಸಾಧಿಸಿರುವ ಯು.ಟಿ.ಖಾದರ್ ನಾಲ್ಕನೇ ಬಾರಿ ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸಚಿವ ಸ್ಥಾನದ ಹಿರಿಮೆಯೊಂದಿಗೆ ಕ್ಷೇತ್ರಾದ್ಯಂತ ಭರ್ಜರಿ ಪ್ರಚಾರ ನಡೆಸುತ್ತಿರುವ ಯು.ಟಿ.ಖಾದರ್ ಅವರೊಂದಿಗೆ ‘ವಾರ್ತಾ ಭಾರತಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

► ಶಾಸಕರಾಗಿ, ಸಚಿವರಾಗಿ 10 ವರ್ಷದ ಅನುಭವ ಹೊಂದಿದ್ದೀರಿ. ಕ್ಷೇತ್ರದಲ್ಲಿ ನೀವು ಮಾಡಿದ ಅಭಿವೃದ್ಧಿ ಕೆಲಸ ಕಾರ್ಯಗಳೇನು?

ತಂದೆ ಯು.ಟಿ.ಫರೀದ್ ಶಾಸಕರಾಗಿದ್ದಾಗಲೇ ನಾನು ಕ್ಷೇತ್ರದ ನಾಡಿಮಿಡಿತ ಅರಿತವ. ಎಲ್ಲೆಲ್ಲಿ ಏನೇನು ಅಭಿವೃದ್ಧಿ ಕೆಲಸಗಳು ಆಗಬೇಕಿದೆ ಎಂದು ಮಾಹಿತಿ ಕಲೆ ಹಾಕಿದವ. ಅಲ್ಲದೆ ಗ್ರಾಮ ಮಟ್ಟದಲ್ಲಿ ಪಕ್ಷದ ಸಕ್ರಿಯ ಕಾರ್ಯಕರ್ತರು ಯಾರ್ಯಾರಿದ್ದಾರೆ ಎಂದು ತಿಳಿದುಕೊಂಡವ. ಅದರಂತೆ ನಾನು ಎಲ್ಲರ ಸಹಾಯ- ಸಹಕಾರ ಪಡೆದು ಯೋಜನೆಗಳನ್ನು ಕ್ಷೇತ್ರಕ್ಕೆ ತರತೊಡಗಿದೆ. ಶಾಸಕನಾಗಿ ಮೊದಲ 6 ವರ್ಷದಲ್ಲೇ ಸಾಕಷ್ಟು ಯೋಜನೆಗಳನ್ನು ಕ್ಷೇತ್ರಕ್ಕೆ ತಂದೆ. ಇನ್ನು ಸಚಿವನಾದ ಬಳಿಕ ಅನೇಕ ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯಕ್ರಮ ನಡೆಸಲಾಗಿದೆ. ಉಳ್ಳಾಲ ಕಡಲ್ಕೊರೆತ ಸಮಸ್ಯೆಗೆ ಪ್ರಥಮ ಹಂತದ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುತ್ತಿದೆ. ಉಳ್ಳಾಲದ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೊಸ ಕಟ್ಟಡಗಳ ಭಾಗ್ಯ ಕಲ್ಪಿಸಲಾಗಿದೆ. ಉಳ್ಳಾಲದ ಕೋಟೆಪುರದಲ್ಲಿ ಜೆಟ್ಟಿ ನಿರ್ಮಿಸಲಾಗಿದೆ. ಪ್ರಮುಖ ಮತ್ತು ಒಳ ರಸ್ತೆಗಳ ಕಾಂಕ್ರಿಟೀಕರಣ ಮಾಡಲಾಗಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶದ ರಸ್ತೆಗಳನ್ನು ಗುಂಡಿರಹಿತ ರಾಜರಸ್ತೆಯನ್ನಾಗಿ ಮಾರ್ಪಾಡು ಮಾಡಲಾಗಿದೆ. ಸಂಪರ್ಕ ರಸ್ತೆಯನ್ನು ಜೋಡಿಸಲಾಗಿದೆ. ಮುಡಿಪು ಜಂಕ್ಷನ್‌ನಲ್ಲಿ ಪದವಿ ಕಾಲೇಜು ತೆರೆಯಲಾಗಿದೆ. 2 ಹೊಸ ಪ್ರೌಢಶಾಲೆ ತೆರೆಯಲಾಗಿದೆ. 8 ಕೋಟಿ ರೂ. ವೆಚ್ಚದಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇಂದಿರಾ ಕ್ಯಾಂಟೀನ್ ತೆರೆಯುವ ಮೂಲಕ ತಾಲೂಕು ಮಟ್ಟದ ಸೌಲಭ್ಯವನ್ನು ಹೋಬಳಿ ಮಟ್ಟಕ್ಕೆ ತಲುಪಿಸಲಾಗಿದೆ. ಶಾಶ್ವತ ಕುಡಿಯುವ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಉಳ್ಳಾಲದಲ್ಲಿ ಸಿಸಿಕ್ಯಾಮರಾ ಅಳವಡಿಸಲಾಗಿದೆ. ಹೀಗೆ ಉಳ್ಳಾಲದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಪಡಲಾಗಿದೆ.

► ಉಳ್ಳಾಲ ದರ್ಗಾಕ್ಕೆ ಸಂಬಂಧಿಸಿದ ಗುಂಪುಗಾರಿಕೆ, ಮತೀಯ ಶಕ್ತಿಗಳ ನಿಗ್ರಹಕ್ಕೆ ತಡೆಯೊಡ್ಡಲು ನಿಮಗೆ ಸಾಧ್ಯವಾಗಿಲ್ಲ ಎನ್ನುವ ದೂರುಗಳಿವೆ?

ಇದೆಲ್ಲಾ ವಿಪಕ್ಷಗಳ ಕುಯುಕ್ತಿ ಎನ್ನದೆ ವಿಧಿಯಿಲ್ಲ. ಉಳ್ಳಾಲ ದರ್ಗಾಕ್ಕೆ ಸಂಬಂಧಿಸಿದ ಗುಂಪುಗಾರಿಕೆ ದೂರ ಮಾಡಲು ನಾನು ಪ್ರಯತ್ನಪಟ್ಟೆ. ಆದರೆ ಆ ಸಮಸ್ಯೆ ಬಗೆಹರಿಯುವುದು ಕೆಲವರಿಗೆ ಇಷ್ಟವಿರಲಿಲ್ಲ. ಚುನಾವಣೆಯವರೆಗೂ ಅದನ್ನು ಜೀವಂತವಾಗಿಡುವ ಪ್ರಯತ್ನವನ್ನೂ ಕೆಲವರು ಮಾಡಿದರು. ಮತ್ತೆ ಕೆಲವರು ನ್ಯಾಯಾಲಯದಲ್ಲಿ ಇತ್ಯರ್ಥ ಮಾಡುವುದಾಗಿ ಹೇಳಿದರು. ಹಾಗಂತ ನಾನು ಸುಮ್ಮನೆ ಕೂರಲಿಲ್ಲ. ಪ್ರಮುಖ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆ ತೃಪ್ತಿ ನನಗೆ ಈಗಲೂ ಇದೆ.

► ನಿಮಗೆ ನೀಡಿದ ಎರಡೂ ಖಾತೆಗಳ ನಿರ್ವಹಣೆಯಲ್ಲಿ ವಿಫಲರಾಗಿದ್ದೀರಿ ಎಂಬ ಆರೋಪ ವಿಪಕ್ಷಗಳಿಂದ ಕೇಳಿ ಬರುತ್ತಿವೆ. ಏನು ಹೇಳುವಿರಿ?

ವಿಪಕ್ಷಗಳಿರುವುದೇ ಟೀಕೆ ಮಾಡಲು. ವಿಪಕ್ಷದವರಿಗೆ ಟೀಕಿಸದೆ ಹೊಗಳಲು ಸಾಧ್ಯವಾ? ಆದರೆ ಟೀಕೆಗೂ ಒಂದು ಮಿತಿ ಬೇಕಲ್ಲವೇ? ನಾನು ನಿಭಾಯಿಸಿದ ಎರಡೂ ಖಾತೆಯ ಸಾಧನೆಯನ್ನು ಗಮನಿಸಿ ನನಗೆ ಎರಡು ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಕೇಂದ್ರದಲ್ಲಿರುವುದು ಬಿಜೆಪಿ ನೇತೃತ್ವದ ಸರಕಾರ ಎಂಬುದನ್ನು ಈ ಟೀಕಾಕಾರರು ಅರಿತುಕೊಂಡರೆ ಚೆನ್ನ. ನಾನು ಆರೋಗ್ಯ ಸಚಿವನಾಗಿದ್ದಾಗ ಮಾಡಿದ ಕೆಲಸ ಕಾರ್ಯಗಳನ್ನು ದೇಶಕ್ಕೆ ದೇಶವೇ ಗಮನಿಸಿದೆ. ಎಂಡೋಸಲ್ಫಾನ್ ಪೀಡಿತರ ಸಮಸ್ಯೆಗೆ ಸ್ಪಂದಿಸಿದ ತೃಪ್ತಿ ನನಗಿದೆ. ಇನ್ನು ದಂತಭಾಗ್ಯ, ಆರೋಗ್ಯ ಭಾಗ್ಯ, ಜನರಿಕ್ ಔಷಧ ಮಳಿಗೆ, ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಗೆ ಹೊಸ ಕಟ್ಟಡ ಕಾಮಗಾರಿಗೆ ಚಾಲನೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಕಲ ಸೌಕರ್ಯ, ಬೆಂಗರೆ, ಬಂದರು, ಎಕ್ಕೂರು, ಕೂಳೂರಿನಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ, ಬೈಕ್ ಆ್ಯಂಬುಲೆನ್ಸ್ ಸೇವೆ, ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆ. ಶಾಲಾ ಹೆಲ್ತ್ ಟೀಮ್ ರಚನೆ, ವಿದ್ಯಾರ್ಥಿಗಳಿಗೆ ಕಬ್ಬಿಣದ ಅಂಶವಿರುವ ಟ್ಯಾಬ್ಲೆಟ್ ವಿತರಣೆ ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಇನ್ನು ಆಹಾರ ಸಚಿವನಾದ ಬಳಿಕ ಕೂಡ ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪಡಿತರ ಸಾಮಗ್ರಿಗಳನ್ನು ದೋಚುವವರನ್ನು ಪತ್ತೆ ಹಚ್ಚಿ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಉಳಿಸಲಾಗಿದೆ. ಹಿಂದೆ ಪಡಿತರ ಚೀಟಿ ಪಡೆಯಲು 14 ನಿಯಮಗಳನ್ನು ಪಾಲಿಸಬೇಕಿತ್ತು. ಇದರಿಂದಾಗಿ ಅಲೆಮಾರಿಗಳು, ಬಾಡಿಗೆ ಮನೆ ಹೊಂದಿದವರು ಪಡಿತರ ಚೀಟಿ ಪಡೆಯಲು ಪರದಾಡಬೇಕಿತ್ತು. ಈಗ ಆ ಸಮಸ್ಯೆ ಇಲ್ಲ. ಸುಲಭದಲ್ಲೇ ಪಡಿತರ ಚೀಟಿ ಸಿಗುತ್ತಿದೆ.

► ಚುನಾವಣಾ ತಯಾರಿ ಹೇಗೆ ನಡೆಯುತ್ತಿದೆ?

 ಬೂತ್‌ಮಟ್ಟದಲ್ಲಿ ಸ್ಥಳೀಯ ಮುಖಂಡರು, ಪಕ್ಷದ ಹಿರಿಯ ಮತ್ತು ಕಿರಿಯ ಕಾರ್ಯಕರ್ತರು ಶಕ್ತಿಮೀರಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ದುಡಿಯುತ್ತಿದ್ದಾರೆ. ಮುಂಜಾನೆ ಮನೆಯಿಂದ ಹೊರಟರೆ ತಡ ರಾತ್ರಿಯವರೆಗೂ ಪ್ರಚಾರ ಕಾರ್ಯ ಬಿರುಸಿನಿಂದಲೇ ನಡೆಯುತ್ತಿದೆ. ಮನೆ-ಮನೆ ಭೇಟಿ, ಅಲ್ಲಲ್ಲಿ ಸಭೆ, ಪ್ರಮುಖರೊಂದಿಗೆ ಚರ್ಚೆ ಇತ್ಯಾದಿ ಆಯೋಜಿಸುವ ಮೂಲಕ ಭರ್ಜರಿ ತಯಾರಿ ನಡೆಯುತ್ತಿದೆ.

► ಮತದಾರರ ಪ್ರತಿಕ್ರಿಯೆ ಹೇಗಿದೆ?

ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೋದಲ್ಲೆಲ್ಲಾ ಜನರು ಆಶೀರ್ವಾದ ನೀಡುತ್ತಿದ್ದಾರೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬ ಅಭಿಲಾಶೆ ಜನರಲ್ಲಿದೆ. ಹಾಗಾಗಿ ಎಲ್ಲೂ ನಮಗೆ ಅಪಸ್ವರವಿಲ್ಲ. ನಾನು ಅನೇಕ ಚುನಾವಣೆಯನ್ನು ಕಂಡವ. ಆದರೆ ಈ ಬಾರಿಯ ಸ್ಪಂದನೆ ಹಿಂದೆಂದೂ ನಾನು ಕಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಅನೇಕ ಯೋಜನೆಗಳು ನನಗೂ ವದಾನವಾಗಿ ಗೆಲುವಿನ ಭಾಗ್ಯ ತರಲಿದೆ.

► ಬಿಜೆಪಿ ಅಭ್ಯರ್ಥಿ ತುಂಬಾ ಹುರುಪಿನಿಂದ ಪ್ರಚಾರ ಮಾಡುತ್ತಿದ್ದಾರೆ. ಅವರ ಸವಾಲನ್ನು ಹೇಗೆ ಎದುರಿಸುವಿರಿ?

ಈ ಕ್ಷೇತ್ರದಲ್ಲಿನ್ನು ಬಿಜೆಪಿ ಮತ್ತಿತರ ಯಾವ ಪಕ್ಷವೂ ಗೆಲ್ಲಲು ಸಾಧ್ಯವಿಲ್ಲ. ಅಂತಹ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನಾನು ಮಾಡಿದ್ದೇನೆ. ಅಭಿವೃದ್ಧಿಯ ಮುಂದೆ ಅಪಪ್ರಚಾರ- ಹುರುಪಿನ ಪ್ರಚಾರ ಯಾವುದೂ ಗಣನೆಗೆ ಬರುವುದಿಲ್ಲ.

► ಜೆಡಿಎಸ್ ಅಭ್ಯರ್ಥಿ ಕೂಡ ನಿಮ್ಮ ವೈಫಲ್ಯವನ್ನು ಜನತೆಯ ಮುಂದಿಟ್ಟು ಮತ ಯಾಚಿಸುತ್ತಿದ್ದೇನೆ ಎನ್ನುತ್ತಾರೆ...

 ಕೆಲವು ಬಾರಿ ಮನುಷ್ಯ ಸಹಜ ತಪ್ಪುಗಳಾಗಿರಬಹುದು. ಅದನ್ನು ವೈಫಲ್ಯ ಎನ್ನಲಾಗದು. ಇನ್ನು ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಂಡು ಜೆಡಿಎಸ್ ಅಭ್ಯರ್ಥಿಯೊಂದಿಗೆ ಮತ ಯಾಚಿಸಲು ಹೊರಟವರೇ ನನಗೆ ಮತ ಚಲಾಯಿಸಿದರೆ ಅಚ್ಚರಿ ಇಲ್ಲ. ಅಂದಹಾಗೆ, ಯಾವೊಬ್ಬ ನಿಷ್ಠಾವಂತ ಕಾಂಗ್ರೆಸಿಗ ಕೂಡ ಜೆಡಿಎಸ್‌ಗೆ ಸೇರ್ಪಡೆಗೊಂಡಿಲ್ಲ. ಈ ಹಿಂದೆ ಅವರು ಕಾಂಗ್ರೆಸ್‌ನಲ್ಲಿದ್ದುದು ನಿಜ. ಆದರೆ ಕಳೆದ ಬಾರಿ ಅವರು ನನ್ನ ವಿರುದ್ಧವೇ ಸ್ಪರ್ಧಿಸಿ 300, 400 ಮತ ಪಡೆದಿದ್ದರು. ಅಂತಹವರು ಯಾವ ಪಕ್ಷ ಸೇರ್ಪಡೆಗೊಂಡರೂ ನನಗೆ ನಷ್ಟವಿಲ್ಲ.

► ವಿಪಕ್ಷಗಳನ್ನು ಮಣಿಸಲು ಯಾವ ತಂತ್ರಗಾರಿಕೆ ಮಾಡುತ್ತೀರಿ?

ಯಾವ ತಂತ್ರಗಾರಿಕೆಯ ಅಗತ್ಯವೂ ಇಲ್ಲ. ಮತದಾರರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಬಿಜೆಪಿಗೆ ಅಧಿಕಾರ ಕೊಟ್ಟರೆ ಏನಾಗುತ್ತದೆ ಎಂದು ಎಲ್ಲರಿಗೂ ಚೆನ್ನಾಗಿ ಗೊತ್ತಾಗಿದೆ. ಕೇಂದ್ರ ಸರಕಾರ ದಿನಕ್ಕೊಂದು ಹೊಸ ಕಾನೂನು ಜಾರಿಗೊಳಿಸುತ್ತಿದೆ. ಅಲ್ಪಸಂಖ್ಯಾತರಲ್ಲಿ ಇನ್ನೂ ಭಯದ ವಾತಾವರಣ ದೂರವಾಗಿಲ್ಲ. ಈ ಚುನಾವಣೆಯು ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ. 2019ರ ಲೋಕಸಭಾ ಚುನಾವಣೆಗೂ ಇದು ದಿಕ್ಸೂಚಿಯಾಗಲಿದೆ.

► ಇತ್ತೀಚಿನ ದಿನಗಳಲ್ಲಿ ನೀವು ಮೃದು ಹಿಂದುತ್ವ ತಾಳುತ್ತಿದ್ದೀರಿ ಎಂಬ ಆರೋಪವಿದೆಯಲ್ಲವೇ?

 ಉಳ್ಳಾಲದ ಜನತೆ ಶಾಂತಿ- ಸೌಹಾರ್ದದಿಂದ ಇರಬೇಕು ಎಂದು ಆಶಿಸುತ್ತಿರುವವರಲ್ಲಿ ನಾನೂ ಒಬ್ಬ. ದೇವಸ್ಥಾನ, ಜಾತ್ರೆ, ಚರ್ಚ್ ಕಾರ್ಯಕ್ರಮಗಳಲ್ಲಿ ಸೌಹಾರ್ದ ಭೇಟಿ ನೀಡಿದಾಗ ಅದನ್ನು ಸಹಿಸಲು ಸಾಧ್ಯವಿಲ್ಲದವರಿಂದ ಇಂತಹ ಆರೋಪ ಕೇಳಿ ಬರುತ್ತಿದೆ.

► ನಿಮ್ಮ ಕ್ಷೇತ್ರದಲ್ಲೇ ಡ್ರಗ್ಸ್, ಗಾಂಜಾ ಹಾವಳಿ ಹೆಚ್ಚಾಗಿದೆ. ಅದನ್ನು ಮಟ್ಟ ಹಾಕಲು ವಿಫಲರಾಗಿದ್ದೀರಿ ಎಂಬ ಆರೋಪವಿದೆ.

ನನ್ನ ಕ್ಷೇತ್ರದಲ್ಲಿ ಪ್ರಮುಖ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳಿವೆ. ಇಲ್ಲೆಲ್ಲಾ ಸ್ಥಳೀಯರಲ್ಲದೆ ಹೊರಗಿನ ಜನರ ಓಡಾಟವೂ ಅಧಿಕವಿದೆ. ಗಾಂಜಾ- ಡ್ರಗ್ಸ್ ಮಾಫಿಯಾದವರು ಇಂತಹವರನ್ನೇ ಟಾರ್ಗೆಟ್ ಮಾಡುತ್ತಾರೆ. ಇತರ ಕ್ಷೇತ್ರದಲ್ಲೂ ಇದರ ಹಾವಳಿ ಹೆಚ್ಚಿದ್ದರೂ ಕೂಡಾ ರಾಜಕೀಯ ಕಾರಣಕ್ಕಾಗಿ ಮಂಗಳೂರು (ಉಳ್ಳಾಲ) ಕ್ಷೇತ್ರಕ್ಕಷ್ಟೇ ಕೈ ತೋರಿಸುತ್ತಿದ್ದಾರೆ.

► ನಿಮ್ಮ ರಾಜಕೀಯ ಹಿತಾಸಕ್ತಿಗಾಗಿ ಕೆಲವು ಕಾನೂನು ಬಾಹಿರ ಶಕ್ತಿಗಳಿಗೆ ನೀವು ಪಕ್ಷದಲ್ಲಿ ಸ್ಥಾನಮಾನ, ಆಶ್ರಯ ನೀಡಿದ್ದೀರಿ ಎಂದು ಹೇಳಲಾಗುತ್ತಿದೆ. ಇದು ನಿಜವೇ?

 ನಾನು ಯಾರಿಗೂ, ಯಾವತ್ತೂ ಅಂತಹ ಸ್ಥಾನಮಾನ ಅಥವಾ ಆಶ್ರಯ ನೀಡಿಲ್ಲ. ಪಕ್ಷದ ಸಕ್ರಿಯ ಕಾರ್ಯಕರ್ತರಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂತಹ ಜವಾಬ್ದಾರಿ ನೀಡಿದ್ದನ್ನು ಬಿಟ್ಟರೆ ಕಾನೂನು ಬಾಹಿರ ಶಕ್ತಿಗಳಿಗೆ ಯಾವ ಸ್ಥಾನಮಾನವನ್ನೂ ನೀಡಿಲ್ಲ.

► ಪೊಲೀಸ್ ದೌರ್ಜನ್ಯ ಪ್ರಕರಣಗಳಲ್ಲಿ ಅಲ್ಪಸಂಖ್ಯಾತರ ದೂರುಗಳಿಗೆ ಸ್ಪಂದಿಸಿಲ್ಲ ಎಂಬ ಆರೋಪಕ್ಕೆ ಏನು ಹೇಳುವಿರಿ?

 ಈ ಆರೋಪದಲ್ಲೂ ಹುರುಳಿಲ್ಲ. ಆದರೆ ಕಳೆದ 5 ವರ್ಷದಲ್ಲಿ ಪೊಲೀಸ್ ಇಲಾಖೆಯು ದಾಖಲಿಸಿದ ಪ್ರಕರಣದ ಪಟ್ಟಿ ತರಿಸಿಕೊಂಡು ಸುಳ್ಳು ಪ್ರಕರಣ ಕೈ ಬಿಡುವ ಬಗ್ಗೆ ಚರ್ಚೆ ನಡೆದಿತ್ತು. ಚುನಾವಣೆ ಘೋಷಣೆಯಾದ ಕಾರಣ ಆ ಕೆಲಸ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ.

► ಮುಂಜಿ- ಮದುವೆ- ಜಾತ್ರೆ- ಉರೂಸ್‌ಗೆ ತಕ್ಷಣ ತಲುಪುವ ನೀವು ಕ್ಷೇತ್ರದ ಜನರು ಸಂಕಷ್ಟದಲ್ಲಿರುವಾಗ ಕೈಗೆ ಸಿಗುವುದಿಲ್ಲ ಎನ್ನುತ್ತಾರೆ.

ಹೌದಾ? ನಾನು ಯಾವತ್ತೂ ಜನರ ಸಮಸ್ಯೆಗೆ ಸ್ಪಂದಿಸದೆ ಸುಮ್ಮನೆ ಕೂತವನಲ್ಲ. ಸಮಸ್ಯೆಗೆ ಸದಾ ಕಾಲ ಸ್ಪಂದಿಸಿದವ. ಹಾಗಾಗಿ ಕ್ಷೇತ್ರವ್ಯಾಪ್ತಿ ಮೀರಿ ಜನರು ನನ್ನನ್ನು ಪ್ರೀತಿಸುತ್ತಿದ್ದಾರೆ. ದೇವಸ್ಥಾನ- ಜಾತ್ರೆಯ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸುವ ಸಂಘಟಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮತೀಯ ಶಕ್ತಿಯ ನಾಯಕರನ್ನೇ ಸಂಘಟಕರು 'ನಮಗೆ ಬೇಕಾದವರನ್ನು ನಾವು ಕರೆಯುತ್ತೇವೆ. ಅದನ್ನು ಕೇಳಲು ನೀವ್ಯಾರು?' ಎಂದು ತರಾಟೆಗೆ ತೆಗೆದುಕೊಂಡ ಉದಾಹರಣೆಯೂ ಇದೆ. ಇಂತಹ ಪ್ರೀತಿ- ಔದಾರ್ಯ ನನ್ನ ಕ್ಷೇತ್ರದಲ್ಲಲ್ಲದೆ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ.

► ಕ್ಷೇತ್ರಕ್ಕೆ ಯಾವ ಹೊಸ ಯೋಜನೆಗಳನ್ನು ತರುತ್ತೀರಿ?

ನಾನು ಕೇವಲ ಕನಸು ಕಾಣುತ್ತಿಲ್ಲ. ಕಂಡ ಕನಸನ್ನು ನನಸುಗೊಳಿಸುವೆ. ಕ್ಷೇತ್ರದಲ್ಲಿ ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಇದೆ. ಅದಕ್ಕಾಗಿ ಅಡ್ಯಾರ್- ಹರೇಕಳದಲ್ಲಿ ನೇತ್ರಾವತಿ ನದಿಗೆ ಅಣೆಕಟ್ಟು ಕಟ್ಟಿ ನೀರು ಪೂರೈಕೆ ಮಾಡುವ ಯೋಜನೆ ಇದೆ. ಜೊತೆಗೆ ಈ ಎರಡೂ ಗ್ರಾಮವನ್ನು ಸಂಪರ್ಕಿಸಲು ಸೇತುವೆ ನಿರ್ಮಿಸಬೇಕೆಂದಿರುವೆ. ಅದಕ್ಕಾಗಿ 174 ಕೋಟಿ ರೂ.ವನ್ನು ಮುಖ್ಯಮಂತ್ರಿ ಮೀಸಲಿಟ್ಟಿದ್ದಾರೆ. ಬಹುಶಃ ರಾಜ್ಯದ ಯಾವೊಂದು ಕ್ಷೇತ್ರಕ್ಕೂ ಇಷ್ಟು ಮೊತ್ತವನ್ನು ಮೀಸಲಿಟ್ಟ ಉದಾಹರಣೆ ಇಲ್ಲ.

► ಕ್ಷೇತ್ರವನ್ನು ನಿಮ್ಮ ಹಿಂಬಾಲಕರಿಗೆ ಬಿಟ್ಟುಕೊಟ್ಟು ರಾಜ್ಯ ಸುತ್ತಿದ್ದೇ ಸಾಧನೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ...

ಸಚಿವನಾದ ಬಳಿಕ ನಾನು ರಾಜ್ಯ ಮಾತ್ರವಲ್ಲ ದೇಶವನ್ನೂ ಸುತ್ತಬೇಕಾಗಿದೆ. ಹಾಗಂತ ನಾನು ಕ್ಷೇತ್ರವನ್ನು ಕಡೆಗಣಿಸಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರು, ಸ್ಥಳೀಯ ಜನಪ್ರತಿನಿಧಿಗಳು, ನನ್ನ ಬೆಂಬಲಿಗರು, ಅಭಿಮಾನಿಗಳು ನನ್ನೊಂದಿಗೆ ಕೈಜೋಡಿಸುತ್ತಿದ್ದಾರೆ. ಅದರರ್ಥ ನಾನು ಕ್ಷೇತ್ರವನ್ನು ಬೆಂಬಲಿಗರಿಗೆ ಬಿಟ್ಟುಕೊಂಡಿದ್ದೇನೆ ಎಂದಾ? ಎಲ್ಲಕ್ಕಿಂತ ಮಿಗಿಲಾಗಿ ನನ್ನ ಕ್ಷೇತ್ರದ ಜನರು ಖುಶಿ- ನೆಮ್ಮದಿಯಿಂದಿದ್ದಾರೆ. ನನಗೆ ಅಷ್ಟು ಸಾಕು.

► ಈ ಬಾರಿಯೂ ಕ್ಷೇತ್ರದಲ್ಲಿ ಮುಸ್ಲಿಮ್ ಮತಗಳು ವಿಭಜನೆ ಆಗಬಹುದೆ?

ಯಾವುದೇ ಜಾತಿ, ಧರ್ಮ, ಸಮುದಾಯದ ಮತಗಳು ವಿಭಜನೆಯಾಗಲು ಮತದಾರ ಖಂಡಿತಾ ಬಿಡಲಾರ. ಯಾಕೆಂದರೆ ನನಗೆ ಎಲ್ಲಾ ಜಾತಿ, ಧರ್ಮದಲ್ಲೂ ಪ್ರೀತಿಯ ಮತದಾರರಿದ್ದಾರೆ. ಅವರೆಂದೂ ಮತ ವಿಭಜನೆಗೆ ಕೈ ಹಾಕಲಾರರು. ಏನಿದ್ದರೂ ನಾಯಕರು ಎಂದು ಹೇಳಿಕೊಂಡ ಕೆಲವರು ಮತ ವಿಭಜನೆಗೆ ಕೈ ಹಾಕಬಹುದು. ಆದರೆ, ಅದರಿಂದ ನನಗೆ ನಷ್ಟವಿಲ್ಲ. ಅದರಲ್ಲಿ ಅವರು ಯಶಸ್ವಿಯೂ ಆಗಲಾರರು. ಬಿಜೆಪಿ ಬೆಂಬಲಿತ ಎಂಇಪಿ ಅಂತ ಹೊಸ ಪಕ್ಷ ಹುಟ್ಟಿಕೊಂಡಿವೆ. ಅದನ್ನು ಮಹಿಳಾ ಎಂಪವರ್‌ಮೆಂಟ್ ಪಾರ್ಟಿ ಎನ್ನುವ ಬದಲು ಮೋದಿ ಎಂಪವರ್‌ಮೆಂಟ್ ಪಾರ್ಟಿ ಎನ್ನುವುದು ಹೆಚ್ಚು ಸೂಕ್ತ.

► ವಿವಾದಗಳು ನಿಮ್ಮ ಬೆನ್ನು ಬಿಡುವುದಿಲ್ಲವೇ?

ಕಾಂಗ್ರೆಸ್‌ನ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದವ ಹೀಗೆ ರಾಜ್ಯ- ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಾಗ ವಿವಾದಗಳು ಸಹಜ. ಅದರಿಂದ ನಾನು ವಿಚಲಿತನಾಗಿಲ್ಲ.ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರುವಾಗ ಇಂತಹ ವಿವಾದ, ಸಮಸ್ಯೆಯನ್ನು ಮೆಟ್ಟಿ ಹಾಕುವುದು ಅನಿವಾರ್ಯ. ಹಾಗಾಗಿಯೇ ನಾನು ಎಲ್ಲಾ ರೀತಿಯ ಸವಾಲುಗಳನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಿ ಮುನ್ನುಗುತ್ತಿದ್ದೇನೆ.

Writer - ಸಂದರ್ಶನ: ಹಂಝ ಮಲಾರ್

contributor

Editor - ಸಂದರ್ಶನ: ಹಂಝ ಮಲಾರ್

contributor

Similar News