ಬಣ್ಣ ಬದಲಾಗುತ್ತಿರುವ ತಾಜ್: ಸುಪ್ರೀಂ ಕಳವಳ

Update: 2018-05-02 03:08 GMT

ಹೊಸದಿಲ್ಲಿ, ಮೇ 2: ವಿಶ್ವವಿಖ್ಯಾತ ತಾಜ್‌ಮಹಲ್‌ನ ಬಣ್ಣ ಬದಲಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಮೊಘಲ್ ಶಖೆಯ ಈ ಐತಿಹಾಸಿಕ ಸ್ಮಾರಕದ ಮೂಲ ರೂಪ ವೈಭವವನ್ನು ಉಳಿಸಲು ಹೊರಗಿನ ತಜ್ಞರ ಸೇವೆ ಪಡೆಯುವುದನ್ನು ಪರಿಶೀಲಿಸುವಂತೆ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.

ನ್ಯಾಯಮೂರ್ತಿ ಎಂ.ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ಅವರನ್ನು ಒಳಗೊಂಡ ನ್ಯಾಯಪೀಠ, ಹಿರಿಯ ವಕೀಲ ಎಂ.ಸಿ.ಮೆಹ್ತಾ ಅವರು ಪ್ರದರ್ಶಿಸಿದ ಛಾಯಾಚಿತ್ರಗಳನ್ನು ಪರಿಶೀಲಿಸಿ, "ತಾಜ್‌ಮಹಲ್‌ನ ಅಮೃತಶಿಲೆಯ ಬಣ್ಣ ಮೊದಲಿಗೆ ಹಳದಿ ಬಣ್ಣಕ್ಕೆ ತಿರುಗಿತ್ತು. ಇದೀಗ ಹಸಿರು ಮತ್ತು ಕಪ್ಪು ಬಣ್ಣದತ್ತ ತಿರುಗುತ್ತಿದೆ" ಎಂದು ಅಭಿಪ್ರಾಯಪಟ್ಟಿತು.

ತಾಜ್‌ಮಹಲ್ ಶಿಥಿಲವಾಗುತ್ತಿರುವ ಬಗ್ಗೆ ದೇಶದ ಅತ್ಯುನ್ನತ ಕೋರ್ಟ್‌ನ ಗಮನ ಸೆಳೆಯುವ ಸಲುವಾಗಿ ಮೆಹ್ತಾ 1984ರಲ್ಲೇ ಅರ್ಜಿ ಸಲ್ಲಿಸಿದ್ದರು. ಆ ಬಳಿಕ ನ್ಯಾಯಾಲಯ, ಶಹಜಹಾನ್ ಕಟ್ಟಿಸಿದ್ದ ಈ ಭವ್ಯ ಸ್ಮಾರಕ ಪ್ರದೇಶದ ಬೆಳವಣಿಗೆಗಳ ಮೇಲೆ ತೀವ್ರ ನಿಗಾ ಇರಿಸಿದೆ. ಶಹಜಹಾನ್ ತನ್ನ ಪತ್ನಿ ಮುಮ್ತಾಝ್  ಸ್ಮರಣಾರ್ಥ 1631ರಲ್ಲಿ ಈ ಸ್ಮಾರಕ ನಿರ್ಮಿಸಿದ್ದರು. ಇದು ಯುನೆಸ್ಕೊದ ವಿಶ್ವ ಪರಂಪರೆ ತಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ.

"ಬಹುಶಃ ತಾಜ್ ವೈಭವ ಉಳಿಸಲು ಅಗತ್ಯ ಪರಿಣತಿ ನಿಮ್ಮಲ್ಲಿ ಇದ್ದಂತಿಲ್ಲ ಅಥವಾ ಇದ್ದರೂ ಅದನ್ನು ಬಳಸಿಕೊಳ್ಳುತ್ತಿಲ್ಲ; ಇಲ್ಲವೇ ಅದರ ಬಗ್ಗೆ ನಿಮಗೆ ಕಾಳಜಿ ಇಲ್ಲ. ಭಾರತಕ್ಕೆ ಭೇಟಿ ನೀಡುವ ಎಲ್ಲ ದೇಶದ ಗಣ್ಯರೂ ತಾಜ್ ವೀಕ್ಷಿಸುವಂತೆ ಮಾಡಬೇಕು" ಎಂದು ಸ್ಪಷ್ಟ ನಿರ್ದೇಶ ನೀಡಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಉತ್ತರ ಪ್ರದೇಶ ಪರವಾಗಿ ಮತ್ತು ನಾಡಕರ್ಣಿ, ಕೇಂದ್ರದ ಪರವಾಗಿ ಹಾಜರಿದ್ದರು.

ತಾಜ್‌ಮಹಲ್‌ಗೆ ಕೊನೆಯ ಬಾರಿ ಯಾವಾಗ ಭೇಟಿ ನೀಡಿದ್ದೀರಿ ಎಂದು ಉಭಯ ವಕೀಲರನ್ನು ನ್ಯಾಯಪೀಠ ಕೇಳಿತು. ದಶಕದ ಹಿಂದೆ ಎಂಬ ಉತ್ತರ ಇಬ್ಬರಿಂದಲೂ ಬಂದಾಗ, ತಕ್ಷಣ ಆಗ್ರಾಗೆ ಭೇಟಿ ನೀಡಿ ಎಂದು ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News