ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಒಟ್ಟು 44.72 ಕೋಟಿ ರೂ.ನಗದು ವಶ

Update: 2018-05-02 15:39 GMT

ಬೆಂಗಳೂರು, ಮೇ 2: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ಗಳ ತಂಡ, ಎಸ್‌ಎಸ್‌ಟಿ ಮತ್ತು ಇತರೆ ಪೊಲೀಸ್ ಪ್ರಾಧಿಕಾರಗಳು ಒಟ್ಟಾರೆ ರೂ.44.72 ಕೋಟಿ ರೂ.ನಗದನ್ನು ವಶಪಡಿಸಿಕೊಂಡಿವೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಫ್ಲೈಯಿಂಗ್ ಸ್ಕ್ವಾಡ್‌ಗಳ ತಂಡ ಮತ್ತು ಇತರೆ ಪೊಲೀಸ್ ಪ್ರಾಧಿಕಾರಗಳು ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಕಳೆದ 24 ಗಂಟೆಗಳಲ್ಲಿ 35 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿದೆ. ಒಟ್ಟಾರೆಯಾಗಿ ಫ್ಲೈಯಿಂಗ್ ಸ್ಕ್ವಾಡ್‌ಗಳು 709 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿದೆ. ಎಸ್‌ಎಸ್‌ಟಿಗಳು ನಗದು ಮತ್ತಿತರ ವಸ್ತುಗಳಿಗೆ ಸಂಬಂಧಿಸಿದಂತೆ 10 ಪ್ರಕರಣ ಸೇರಿದಂತೆ ಒಟ್ಟು 129 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿದೆ.

ಕಳೆದ 24 ಗಂಟೆಗಳಲ್ಲಿ, ಅಬಕಾರಿ ಇಲಾಖೆಯು 1812.14 ಲೀ. ಗಳಷ್ಟು ಐಎಂಎಲ್ ಮದ್ಯವನ್ನು ವಶಪಡಿಸಿಕೊಂಡು 67 ಪ್ರಕರಣಗಳನ್ನು ದಾಖಲಿಸಿದೆ. ಮದ್ಯದ ಪರವಾನಿಗೆಯನ್ನು ಉಲ್ಲಂಘಿಸಿದ 61 ಪ್ರಕರಣಗಳನ್ನು ದಾಖಲಿಸಲಾಗಿದೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15(ಎ) ಅನ್ವಯ 302 ಪ್ರಕರಣಗಳನ್ನು ದಾಖಲಿಸಿದೆ.

ಒಟ್ಟಾರೆ ರೂ.22.41ಕೋಟಿ ರೂ.ಮೌಲ್ಯದ ಐಎಂಎಲ್ ಹಾಗೂ ಇತರೆ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯದ ಪರವಾನಿಗೆಯನ್ನು ಉಲ್ಲಂಘಿಸಿದ 2049 ಪ್ರಕರಣಗಳು, ಎನ್‌ಡಿಪಿಎಸ್ ಕಾಯ್ದೆಯಡಿ 3 ಪ್ರಕರಣಗಳನ್ನು ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15(ಎ) ಅನ್ವಯ 5,922 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 805 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಳೆದ 24 ಗಂಟೆಗಳಲ್ಲಿ ಸಿಆರ್‌ಪಿಸಿ ಕಾಯ್ದೆಯಡಿ 67 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. 89 ಜಾಮೀನು ರಹಿತ ವಾರೆಂಟ್ ಗಳನ್ನು ಹೊರಡಿಸಲಾಗಿದೆ. 80 ಪ್ರಕರಣಗಳನ್ನು ಸಿಆರ್‌ಪಿಸಿ ಕಾಯ್ದೆಯಡಿ ದಾಖಲು ಮಾಡಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News