ಸೇಬುಹಣ್ಣಿನ ಬೀಜಗಳು ವಿಷಕಾರಿಯೇ? ನೀವು ತಿಳಿದಿರಲೇಬೇಕಾದ ಮಾಹಿತಿಯಿಲ್ಲಿದೆ

Update: 2018-05-04 09:47 GMT

ದಿನಕ್ಕೊಂದು ಸೇಬು ವೈದ್ಯರನ್ನು ದೂರವಿರಿಸುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಹಳೆಯ ನಾಣ್ಣುಡಿ. ಆದರೆ ಅದರ ಬೀಜಗಳನ್ನು ಹೆಚ್ಚು ತಿಂದರೆ ವೈದ್ಯರ ಬಳಿ ಹೋಗಬೇಕಾಗುತ್ತದೆ ಎನ್ನುವುದು ನಿಮಗೆ ಗೊತ್ತೇ? ಹೌದು, ಸೇಬುಹಣ್ಣಿನ ಬೀಜಗಳು ಮಾನವನ ಆರೋಗ್ಯಕ್ಕೆ ಹಾನಿಕಾರಕವಾದ ವಿಷದ ಅಂಶವನ್ನು ಹೊಂದಿವೆ.

ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಸೇಬು ನಮ್ಮ ಶರೀರವನ್ನು ಮಾರಣಾಂತಿಕ ವೈರಸ್‌ಗಳಿಂದ ಮತ್ತು ವಿವಿಧ ಆರೋಗ್ಯ ಸಮಸ್ಯೆ ಗಳನ್ನುಂಟು ಮಾಡುವ ಕ್ಯಾನ್ಸರ್‌ಕಾರಕ ಆಕ್ಸಿಡೇಟಿವ್‌ಗಳು ಸೇರಿದಂತೆ ಹಲವು ಹಾನಿಗಳಿಂದ ರಕ್ಷಣೆಯನ್ನು ನೀಡುವ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ.

ಸೇಬುಹಣ್ಣು ಸಿಹಿಯೇನೋ ನಿಜ,ಆದರೆ ಮಧ್ಯಭಾಗದಲ್ಲಿರುವ ಕಪ್ಪುಬೀಜಗಳು ಕಹಿರುಚಿಯನ್ನು ಹೊಂದಿವೆ. ಹೆಚ್ಚಿನವರು ಹಣ್ಣಿನ ತಿರುಳಿನ ಜೊತೆಗೆ ಗೊತ್ತಾಗದೆ ಒಂದೆರಡು ಬೀಜಗಳನ್ನೂ ತಿನ್ನುತ್ತಾರೆ. ಈ ಪುಟ್ಟಬೀಜಗಳು ಬೇರೆಯದೇ ಕಥೆಯನ್ನು ಹೇಳುತ್ತವೆ. ಇವು ಅಮಿಗ್ಡಾಲಿನ್ ಎಂಬ ರಾಸಾಯನಿಕವನ್ನು ಒಳಗೊಂಡಿದ್ದು,ಇದು ಮಾನವ ಶರೀರದಲ್ಲಿಯ ಜೀರ್ಣ ಕಿಣ್ವಗಳ ಸಂಪರ್ಕಕ್ಕೆ ಬಂದೊಡನೆ ಸೈನೈಡ್‌ನ್ನು ಬಿಡುಗಡೆಗೊಳಿಸುತ್ತವೆ.

ಹಾಗಾದರೆ ಅಂತಹ ಸೈನೈಡ್ ತಮ್ಮ ಶರಿರಲ್ಲೇಕೆ ಕೆಲಸ ಮಾಡಿಲ್ಲ ಮತ್ತು ತಾವಿನ್ನೂ ಬದುಕಿದ್ದೇವಲ್ಲ ಎಂದು ಒಂದಲ್ಲ ಒಂದು ಬಾರಿ ಕೆಲವು ಸೇಬು ಬೀಜಗಳನ್ನು ತಿಂದಿರುವ ಹೆಚ್ಚಿನವರಿಗೆ ಅಚ್ಚರಿಯಾಗಬ ಹುದು. ಕೆಲವೇ ಬೀಜಗಳು ಕಹಿರುಚಿಯ ಹೊರತು ಶರೀರಕ್ಕೆ ಹಾನಿಯನ್ನುಂಟು ಮಾಡುವುದಿಲ್ಲ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಈ ಬೀಜಗಳನ್ನು ತಿಂದರೆ ಅದು ಮಾರಣಾಂತಿಕವಾಗಬಹುದು. ಸೈನೈಡ್ ಸಾಮೂಹಿಕ ಆತ್ಮಹತ್ಯೆ ಮತ್ತು ರಾಸಾಯನಿಕ ಯುದ್ಧಗಳ ಇತಿಹಾಸದಲ್ಲಿ ಅತ್ಯಂತ ಘೋರ ವಿಷಗಳಲ್ಲೊಂದಾಗಿದೆ. ಅದು ಪ್ರಕೃತಿಯಲ್ಲಿಯೂ,ವಿಶೇಷವಾಗಿ ಕೆಲವು ಹಣ್ಣುಗಳ ಬೀಜಗಳಲ್ಲಿ ಸೈನೊಗ್ಲೈಕೊಸೈಡ್ ಎಂಬ ಸಂಯುಕ್ತದ ರೂಪದಲ್ಲಿ ಇರುತ್ತದೆ.

ಸೈನೈಡ್ ಶರೀರದಲ್ಲಿಯ ಆಮ್ಲಜನಕವನ್ನು ಪೂರೈಕೆ ಮಾಡುವ ಜೀವಕೋಶಗಳ ಮೇಲೆ ಪರಿಣಾಮವನ್ನು ಬೀರಿ ಸಾವನ್ನುಂಟು ಮಾಡುತ್ತದೆ.

ಸೇಬುಹಣ್ಣಿನ ಪುಟಾಣಿ ಬೀಜಗಳಲ್ಲಿರುವ ಅಮಿಗ್ಡಾಲಿನ್ ಸೈನೈಡ್‌ನ ಒಂದು ರೂಪವಾಗಿದೆ. ಆದರೆ ಬೀಜಗಳಿಗೆ ಯಾವುದೇ ಹಾನಿಯಾಗ ದಿದ್ದರೆ ಅಮಿಗ್ಡಾಲಿನ್‌ನಿಂದಲೂ ಯಾವುದೇ ಹಾನಿಯಿಲ್ಲ. ಆದರೆ ಆಕಸ್ಮಿಕವಾಗಿ ಅದನ್ನು ಅಗಿದರೆ ನಮ್ಮ ಜೀರ್ಣಾಂಗವನ್ನು ಸೇರಿದಾಗ ಅದು ವಿಭಜನೆಗೊಂಡು ಹೈಡ್ರೋಜನ್ ಸೈನೈಡ್‌ನ್ನು ಸೃಷ್ಟಿಸುತ್ತದೆ. ಹೀಗಾಗಿ ಅಧಿಕ ಪ್ರಮಾಣದಲ್ಲಿ ಸೇಬು ಬೀಜಗಳನ್ನು ತಿಂದರೆ ಅದು ಅತ್ಯಂತ ವಿಷಕಾರಿಯಾಗುತ್ತದೆ ಮತ್ತು ಮಾರಣಾಂತಿಕವಾಗುತ್ತದೆ.

ಆದರೆ ಸೇಬು ಮತ್ತು ಅಂತಹ ಇತರ ಹಣ್ಣುಗಳ ಬೀಜಗಳು ದಪ್ಪ ಹೊರಪದರವನ್ನು ಹೊಂದಿರುತ್ತವೆ ಮತ್ತು ಇದು ಜೀರ್ಣ ರಸಗಳಿಗೆ ಪ್ರತಿರೋಧವನ್ನು ಹೊಂದಿದೆ. ಆದರೆ ಬೀಜವನ್ನು ಅಗಿದಾಗ ಈ ಹೊರಪದರಕ್ಕೆ ಹಾನಿಯಾಗುತ್ತದೆ ಮತ್ತು ಶರೀರದಲ್ಲಿ ಕನಿಷ್ಠ ಪ್ರಮಾಣದಲ್ಲಿ ಸೈನೈಡ್‌ನ್ನು ಬಿಡುಗಡೆಗೊಳಿಸುತ್ತದೆ. ಶರೀರದಲ್ಲಿಯ ಕಿಣ್ವಗಳು ಈ ವಿಷವನ್ನು ನಿವಾರಿಸುವ ಮೂಲಕ ರಕ್ಷಣೆಯನ್ನು ನೀಡುತ್ತವೆ. ಆದರೆ ಅತಿಯಾದ ಪ್ರಮಾಣದಲ್ಲಿ ಬೀಜಗಳನ್ನು ಸೇವಿಸಿದರೆ ಮಾರಣಾಂತಿಕ ಪರಿಣಾಮಗಳಾಗುತ್ತವೆ.

70 ಕೆ.ಜಿ.ತೂಕವನ್ನು ಹೊಂದಿರುವ ವ್ಯಕ್ತಿಗೆ 1-2 ಮಿಲಿಗ್ರಾಂ/ಕೆ.ಜಿ ಯಷ್ಟು ಸೈನೈಡ್ ಮಾರಣಾಂತಿಕ ಪ್ರಮಾಣವಾಗುತ್ತದೆ. ಅಂದರೆ ಈ ಪ್ರಮಾಣವನ್ನು ತಲುಪಲು ವ್ಯಕ್ತಿಯು 20 ಸೇಬುಹಣ್ಣುಗಳಿಂದ ಸುಮಾರು 200 ಬೀಜಗಳನ್ನು ಅಗಿದು ತಿಂದಿರಬೇಕಾಗುತ್ತದೆ.

ಆದರೆ ಸೈನೈಡ್‌ನ ಅಲ್ಪಪ್ರಮಾಣವೂ ಮಾನವ ಶರೀರಕ್ಕೆ ಮಾರಣಾಂತಿಕವಾಗಬಹುದು ಎನ್ನುತ್ತದೆ ಏಜೆನ್ಸಿ ಫಾರ್ ಟಾಕ್ಸಿಕ್ ಸಬ್‌ಸ್ಟನ್ಸಸ್ ಆ್ಯಂಡ್ ಡಿಸೀಸ್ ರಿಜಿಸ್ಟ್ರಿ. ನಮ್ಮ ಶರೀರದಲ್ಲಿ ಸೈನೈಡ್ ಸೇರಿಕೊಂಡಾಗ ಅದು ಮಿದುಳು ಮತ್ತು ಹೃದಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಶರೀರವು ಕೋಮಾ ಸ್ಥಿತಿಗೆ ಜಾರುತ್ತದೆ,ಬಳಿಕ ಸಾವು ಸಂಭವಿಸುತ್ತದೆ. ಸೈನೈಡ್ ಸೇವನೆಯ ಬಳಿಕ ಅದು ತಕ್ಷಣವೇ ಶರೀರದಲ್ಲಿ ಪ್ರತಿವರ್ತನೆಯನ್ನು ಆರಂಭಿಸುತ್ತದೆ. ಸೆಳೆತ,ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಂಡು ವ್ಯಕ್ತಿ ಪ್ರಜ್ಞಾಹೀನನಾಗುತ್ತಾನೆ.

ಸೇಬುವಿನ ಬೀಜಗಳಲ್ಲಿರುವ ಅಮಿಗ್ಡಾಲಿನ್ ಮಾನವ ಶರೀರಕ್ಕೆ ಮಾರಣಾಂತಿಕವಾಗಿದ್ದರೆ ಆ್ಯಪಲ್ ಸೀಡ್ ಎಣ್ಣೆಯನ್ನು ಸೇವಿಸುವುದು ಸುರಕ್ಷಿತವೇ ಎಂಬ ಪ್ರಶ್ನೆ ಹೆಚ್ಚಿನವರನ್ನು ಕಾಡಬಹುದು. ಆದರೆ ಆ್ಯಪಲ್ ಸೀಡ್ ಆಯಿಲ್ ಸೇಬುಹಣ್ಣಿನ ರಸದಿಂದ ಸಂಸ್ಕರಿತ ಉಪ ಉತ್ಪನ್ನವಾಗಿದೆ. ಈ ಎಣ್ಣೆಯ ಪರಿಮಳದಿಂದಾಗಿ ಇದನ್ನು ಮುಖ್ಯವಾಗಿ ಬಳಸಲಾಗುತ್ತದೆ. ಚರ್ಮದ ಉರಿಯೂತವನ್ನು ಶಮನಗೊಳಿಸಲು ಮತ್ತು ತಲೆಗೂದಲಿನ ಆರೈಕೆಗಾಗಿಯೂ ಇದನ್ನು ಬಳಸಲಾಗುತ್ತದೆ.

ಇಷ್ಟೆಲ್ಲ ಓದಿದ ಮೇಲೆ ಸೇಬುಹಣ್ಣನ್ನು ತಿನ್ನುವ ಮೊದಲು ಅದರ ಬೀಜಗಳನ್ನು ತೆಗೆದರೆ ಒಳ್ಳೆಯದು ಎನಿಸುವುದಿಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News