ವಿಶ್ವದ ಅತ್ಯಂತ ಮಲಿನ ನಗರಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ನಗರಗಳೇಕೆ ಇಲ್ಲ?

Update: 2018-05-04 13:52 GMT

ಹೊಸದಿಲ್ಲಿ,ಮೇ 4: ವಿಶ್ವದ 15 ಅತ್ಯಂತ ಮಲಿನ ನಗರಗಳ ಪೈಕಿ ದಿಲ್ಲಿ,ಕಾನ್ಪುರ ಮತ್ತು ವಾರಣಾಸಿ ಸೇರಿದಂತೆ 14 ನಗರಗಳು ಭಾರತದಲ್ಲಿಯೇ ಇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯು ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಇವುಗಳಲ್ಲಿ ದಕ್ಷಿಣ ಭಾರತದ ಒಂದೂ ನಗರವಿಲ್ಲ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.

ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ ಅವರು,ಸುಧಾರಿತ ಮೂಲಸೌಕರ್ಯ,ಜನರಲ್ಲಿ ಮಾಲಿನ್ಯ ಕುರಿತು ಹೆಚ್ಚಿನ ಅರಿವು ಮತ್ತು ಸಮೂಹ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಒತ್ತು ಇವು ರಾಜ್ಯದಲ್ಲಿ,ವಿಶೇಷವಾಗಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಗಣನೀಯ ಕೊಡುಗೆಯನ್ನು ಸಲ್ಲಿಸಿವೆ ಎಂದು ತಿಳಿಸಿದರು.

ದಕ್ಷಿಣ ಭಾರತದ ವಾತಾವರಣವು ಹೆಚ್ಚು ತೇವಾಂಶದಿಂದ ಕೂಡಿರುವುದೂ ದಕ್ಷಿಣದ ನಗರಗಳು ಡಬ್ಲುಎಚ್‌ಒ ಪಟ್ಟಿಯಲ್ಲಿ ಸೇರದಿರುವುದಕ್ಕೆ ಕಾರಣಗಳಲ್ಲೊಂದಾಗಿದೆ ಎಂದರು.

ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಹೆಚ್ಚಿನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಪಾದಿಸಿದ ಪರಿಸರವಾದಿ ಲಿಯೊ ಸಲ್ದಾನಾ ಅವರು, ಕಳೆದ 2-3 ವರ್ಷಗಳಲ್ಲಿ ಪರಿಸರ ನಿಯಂತ್ರಣ ವ್ಯವಸ್ಥೆಯು ತೀರ ಹದಗೆಟ್ಟಿದೆ. ನೀರು,ಗಾಳಿ ಅಥವಾ ಇತರ ರೂಪಗಳ ಮಾಲಿನ್ಯವನ್ನು ಪರೀಕ್ಷಿಸಲು ಯಾರೂ ತಲೆ ಕೆಡಿಸಿಕೊಳ್ಳುತ್ತಲೇ ಇಲ್ಲ ಎಂದು ಆರೋಪಿಸಿದರು.

ಮಾಲಿನ್ಯ ನಿಯಂತ್ರಣ ಕ್ರಮಗಳಿಗೆ ಸದಾ ಹೆಚ್ಚಿನ ಆದ್ಯತೆಯನ್ನು ನೀಡಿದ್ದು,ಇಂತಹ ಕ್ರಮಗಳು ಫಲಪ್ರದವಾಗಿವೆ ಎಂದು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ವಾಯು ಮಾಲಿನ್ಯ ನಿಯಂತ್ರಣವನ್ನು ಇನ್ನಷ್ಟು ಉತ್ತಮವಾಗಿಸಲು ಕ್ರಿಯಾಯೋಜನೆಯೊಂದನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ತಿಳಿಸಿದ ಅವರು,ಇಂತಹ ಕ್ರಮಗಳಲ್ಲಿ ನೈಜ ಸಮಯ ನಿಗಾವನ್ನು ಸಾಧ್ಯವಾಗಿಸಲು ಕೈಗಾರಿಕಾ ಪ್ರದೇಶಗಳಲ್ಲಿ ಅತ್ಯಾಧುನಿಕ ಗೆಜೆಟ್‌ಗಳ ಸ್ಥಾಪನೆ ಸೇರಿದೆ. ಇಂತಹ ನಿಗಾ ವಾಯು ಮಾಲಿನ್ಯಕ್ಕೆ ಕಾರಣವಾಗುವ ಮಾಲಿನ್ಯಕಾರಕಗಳ ಹೊರಸೂಸುವಿಕೆಯನ್ನು ತಡೆಯಲು ಹೆಚ್ಚಿನ ನೆರವು ನೀಡುತ್ತದೆ ಎಂದರು.

ಚೆನ್ನೈನಂತಹ ರಾಜ್ಯದ ಕೆಲವು ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯವು ಪಿಎಂ 2.5 ಅಥವಾ ಪಿಎಂ 10 ಸೇರಿದಂತೆ ನಿಗದಿತ ಮಾನದಂಡಗಳಿಗೆ ಸಂಬಂಧಿಸಿದಂತೆ ಅನುಮತಿಸಲ್ಪಟ್ಟಿರುವ ಮಿತಿಗಳೊಳಗೇ ಇದೆ ಮತ್ತು ದಿಲ್ಲಿಯಂತಹ ಇತರ ನಗರಗಳಿಗೆ ಹೋಲಿಸಿದರೆ ತುಂಬ ಉತ್ತಮವಾಗಿದೆ ಎಂದು ಅವರು ಹೇಳಿದರು.

ಆಂಧ್ರಪ್ರದೇಶಕ್ಕೆ ಸಂಬಂಧಿಸಿದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಬಿಎಸ್‌ಎಸ್ ಪ್ರಸಾದ ಅವರು,ಇಂಗಾಲದ ಹೊರಸೂಸುವಿಕೆ ,ಪಾರ್ಟಿಕ್ಯುಲೇಟ್ ಮ್ಯಾಟರ್(ಪಿಎಂ) ಮತ್ತು ಸಸ್ಪೆಂಡೆಡ್‌ಪಿಎಂ ಇವುಗಳ ಮೇಲೆ ನಿರಂತರ ನಿಗಾ,ಹಸಿರು ಪ್ರದೇಶದ ವಿಸ್ತೀರ್ಣ ಹೆಚ್ಚಳ ಹಾಗೂ ಶುದ್ಧ ಇಂಧನ ಮೂಲಗಳಿಗೆ ಬದಲಾಗುವಿಕೆಯಂತಹ ಕ್ರಮಗಳು ವಾಯುಮಾಲಿನ್ಯ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ನೆರವಾಗಿವೆ ಎಂದು ತಿಳಿಸಿದರು.

ಎಂಟು ವರ್ಷಗಳ ಹಿಂದೆ ಅತ್ಯಂತ ಮಲಿನ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದ ಬಂದರು ನಗರಿ ವಿಶಾಖಪಟ್ಟಣಂ ಈಗ ಆ ಕಳಂಕದಿಂದ ಮುಕ್ತವಾಗಿದೆ ಎಂದರು.

 ಹಲವಾರು ವರ್ಷಗಳಿಂದ ತಜ್ಞರ ಸಮಿತಿಯ ವರದಿಯ ಆಧಾರದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಹಲವಾರು ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಹೈದರಾಬಾದ್‌ನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೋರ್ವರು ತಿಳಿಸಿದರು.

ಕೊಚ್ಚಿ ಮತ್ತು ಕೋಝಿಕ್ಕೋಡೆ ಮಾಲಿನ್ಯ ಸಮಸ್ಯೆಗಳನ್ನು ಎದುರಿಸುತ್ತಿವೆಯಾದರೂ ಅವು ನಿಯಂತ್ರಣದಲ್ಲಿವೆ ಎಂದು ಕೇರಳ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಕೆ.ಸಂಜೀವನ್ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News