ಭದ್ರತಾ ಮಂಡಳಿ ಸದಸ್ಯತ್ವ ಪ್ರಯತ್ನದಿಂದ ಹಿಂದೆ ಸರಿದ ಇಸ್ರೇಲ್
ವಿಶ್ವಸಂಸ್ಥೆ, ಮೇ 5: 2019 ಮತ್ತು 2020ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವ ಪಡೆಯಲು ಇಸ್ರೇಲ್ ನಡೆಸುತ್ತಿರುವ ಪ್ರಯತ್ನಗಳಿಗೆ ತಡೆಯೊಡ್ಡಲು ಅರಬ್ ದೇಶಗಳು ಅಭಿಯಾನ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಶುಕ್ರವಾರ ಸ್ಪರ್ಧೆಯಿಂದ ಹಿಂದೆ ಸರಿದಿದೆ.
ಇಸ್ರೇಲ್‌ನ ಈ ನಿರ್ಧಾರದಿಂದಾಗಿ, ಲಭ್ಯವಿರುವ ಎರಡು ಸ್ಥಾನಗಳನ್ನು ಬೆಲ್ಜಿಯಂ ಮತ್ತು ಜರ್ಮನಿ ತುಂಬುವುದು ಖಚಿತವಾಗಿದೆ. ಪ್ರಾದೇಶಿಕತೆ ಆಧಾರದಲ್ಲಿ ಈ ಎರಡು ಸ್ಥಾನಗಳನ್ನು ತುಂಬಲಾಗುವುದು. ಚುನಾವಣೆಯು ಮುಂದಿನ ತಿಂಗಳು ನಡೆಯಲಿರುವುದು.
‘‘ನಮ್ಮ ಒಳ್ಳೆಯ ಸ್ನೇಹಿತರು ಸೇರಿದಂತೆ ನಮ್ಮ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಭದ್ರತಾ ಮಂಡಳಿಯಲ್ಲಿ ಲಭ್ಯವಿರುವ ಸ್ಥಾನಕ್ಕೆ ಸ್ಪರ್ಧಿಸುವುದನ್ನು ಮುಂದೂಡಲು ಇಸ್ರೇಲ್ ದೇಶ ನಿರ್ಧರಿಸಿದೆ’’ ಎಂದು ಇಸ್ರೇಲ್ ರಾಯಭಾರ ಕಚೇರಿಯ ಹೇಳಿಕೆಯೊಂದು ತಿಳಿಸಿದೆ.
ಹಿಂದೆ ಸರಿದಿರುವುದಕ್ಕಾಗಿ ಅದು ಯಾವುದೇ ಕಾರಣವನ್ನು ನೀಡಿಲ್ಲ.
ಆದರೆ, ಜೂನ್ 8ರಂದು ಜನರಲ್ ಅಸೆಂಬ್ಲಿಯಲ್ಲಿ ನಡೆಯುವ ಮತದಾನದಲ್ಲಿ ಜರ್ಮನಿ ಮತ್ತು ಬೆಲ್ಜಿಯಂ ವಿರುದ್ಧ ಸೋಲುವುದು ಖಚಿತವಾದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.