ಪಂಜಾಬ್‌ಗೆ ರಾಜಸ್ಥಾನ ಎದುರಾಳಿ

Update: 2018-05-05 18:46 GMT

ಇಂದೋರ್, ಮೇ 5: ಸತತ ಸೋಲು ಕಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರವಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದು, ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ.

ಪಂಜಾಬ್ ತಂಡ 8 ಪಂದ್ಯಗಳಲ್ಲಿ 5ರಲ್ಲಿ ಜಯ ಹಾಗೂ ಮೂರರಲ್ಲಿ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ 5ರಲ್ಲಿ ಸೋಲು ಹಾಗೂ ಮೂರರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಪಂಜಾಬ್ ತಂಡದಂತೆಯೇ ರಾಜಸ್ಥಾನ ಕೂಡ ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಆದರೆ,ಪಂಜಾಬ್ ತಂಡ ಸುಸ್ಥಿತಿಯಲ್ಲಿದ್ದು ಪ್ಲೇ-ಆಫ್‌ಗೆ ಅರ್ಹತೆ ಪಡೆಯುವ ಎಲ್ಲ ಅವಕಾಶ ಹೊಂದಿದೆ.

ಕಳೆದ ರಾತ್ರಿ ಹೋಳ್ಕರ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರು ವಿಕೆಟ್‌ಗಳಿಂದ ಸೋತಿರುವ ಪಂಜಾಬ್ ತನ್ನ ತಪ್ಪನ್ನು ತಿದ್ದಿಕೊಳ್ಳುವ ವಿಶ್ವಾಸದಲ್ಲಿದೆ.

ಪಂಜಾಬ್‌ನ ಅಗ್ರ ಕ್ರಮಾಂಕದಲ್ಲಿ ಆರಂಭಿಕ ಆಟಗಾರ ಕ್ರಿಸ್ ಗೇಲ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ತನ್ನ ಅಪೂರ್ವ ಬ್ಯಾಟಿಂಗ್ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿರುವ ಜಮೈಕಾ ಬ್ಯಾಟ್ಸ್‌ಮನ್ ಮುಂಬೈ ವಿರುದ್ಧವೂ ಮಿಂಚಿನ ಅರ್ಧಶತಕ ದಾಖಲಿಸಿದ್ದರು.

 ಪಂಜಾಬ್ ಬೌಲರ್‌ಗಳು ಮುಂಬೈನ ರೋಹಿತ್ ಶರ್ಮ ಹಾಗೂ ಕೃನಾಲ್ ಪಾಂಡ್ಯರಿಂದ ಕೊನೆಯ 5 ಓವರ್‌ಗಳಲ್ಲಿ ಚೆನ್ನಾಗಿ ದಂಡಿಸಲ್ಪಟ್ಟಿದ್ದರು. ಬ್ಯಾಟ್ಸ್ ಮನ್‌ಗಳು ಸಾಕಷ್ಟು ರನ್ ಗಳಿಸದೇ ಇರುವುದು ನಮ್ಮ ಸೋಲಿಗೆ ಕಾರಣ ಎಂದು ಪಂಜಾಬ್ ನಾಯಕ ಆರ್.ಅಶ್ವಿನ್ ದೂರಿದ್ದಾರೆ.

ರಾಜಸ್ಥಾನ ತಂಡದಲ್ಲಿ ಇಂಗ್ಲೆಂಡ್ ದಾಂಡಿಗ ಜೋಸ್ ಬಟ್ಲರ್ ಮಾತ್ರ ಏಕಾಂಗಿ ಹೋರಾಟ ನೀಡುತ್ತಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿರುವ ಬಟ್ಲರ್ ರವಿವಾರ ಪಂದ್ಯದಲ್ಲಿ ಅದೇ ಪ್ರದರ್ಶನ ಪುನರಾವರ್ತಿಸುವ ವಿಶ್ವಾಸದಲ್ಲಿದ್ದಾರೆ. ನಾಯಕ ಅಜಿಂಕ್ಯ ರಹಾನೆ ವೇಗವಾಗಿ ರನ್ ಕಲೆ ಹಾಕಿ ಸಹ ಆಟಗಾರರಿಗೆ ಸ್ಫೂರ್ತಿಯಾಗುವ ವಿಶ್ವಾಸದಲ್ಲಿದ್ದಾರೆ. ರಾಜಸ್ಥಾನ ಎ.22 ರಂದು ಮುಂಬೈ ವಿರುದ್ಧ ಕೊನೆಯ ಬಾರಿ ಜಯ ಸಾಧಿಸಿದ್ದು, ಗೆಲುವಿನ ಹಾದಿಗೆ ಮರಳುವತ್ತ ಗಮನ ಹರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News