ಅಮೆರಿಕದ ‘ಅಪಪ್ರಚಾರ’ಕ್ಕೆ ಕೊರಿಯ ಆಕ್ಷೇಪ

Update: 2018-05-06 16:54 GMT

ಪ್ಯಾಂಗ್‌ಯಾಂಗ್ (ಉತ್ತರ ಕೊರಿಯ), ಮೇ 6: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಗರಿಷ್ಠ ರಾಜಕೀಯ ಒತ್ತಡ ಮತ್ತು ದಿಗ್ಬಂಧನಗಳ ನೀತಿಯು ಉತ್ತರ ಕೊರಿಯವನ್ನು ಸಂಧಾನದ ಮೇಜಿಗೆ ನೂಕಿದೆ ಎಂಬ ‘ಅಪಪ್ರಚಾರ’ವನ್ನು ಉತ್ತರ ಕೊರಿಯ ರವಿವಾರ ಖಂಡಿಸಿದೆ.

ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ ನಡೆಯಲಿದೆ ಎನ್ನಲಾದ ಮಾತುಕತೆಗೆ ವಾರಗಳು ಇರುವಂತೆಯೇ ಈ ಬೆಳವಣಿಗೆ ನಡೆದಿದೆ.

ಈ ‘ಅಪಪ್ರಚಾರವು’ ಕೊರಿಯ ಪರ್ಯಾಯ ದ್ವೀಪದಲ್ಲಿ ಮೂಡುತ್ತಿರುವ ಸೌಹಾರ್ದತೆಯನ್ನು ನಾಶಪಡಿಸುವ ‘ಅಪಾಯಕಾರಿ ಪ್ರಯತ್ನ’ವಾಗಿದೆ ಎಂಬುದಾಗಿ ವಿದೇಶ ಸಚಿವಾಲಯದ ವಕ್ತಾರರು ಹೇಳಿದ್ದಾರೆ ಎಂದು ಉತ್ತರ ಕೊರಿಯದ ಅಧಿಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ ತಿಂಗಳ ಕೊನೆಯಲ್ಲಿ ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್ ಮತ್ತು ಕಿಮ್ ನಡುವೆ ಉಭಯ ದೇಶಗಳ ಗಡಿಯಲ್ಲಿ ಐತಿಹಾಸಿಕ ಮಾತುಕತೆ ನಡೆದಿರುವುದನ್ನು ಸ್ಮರಿಸಬಹುದಾಗಿದೆ.

ಈ ಮಾತುಕತೆಯ ಬೆನ್ನಿಗೇ, ಉತ್ತರ ಕೊರಿಯದ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ಪರಸ್ಪರರನ್ನು ಬದ್ಧ ವೈರಿಗಳಂತೆ ನಿಂದಿಸಿದ್ದ ಟ್ರಂಪ್ ಮತ್ತು ಕಿಮ್ ನಡುವೆ ಶೃಂಗ ಸಮ್ಮೇಳನ ನಡೆಯಲಿದೆ ಎಂದು ಹೇಳಲಾಗಿದೆ.

 ಉತ್ತರ-ದಕ್ಷಿಣ ಕೊರಿಯಗಳ ಶೃಂಗಸಭೆಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸುವ ಹಲವಾರು ಉಪಕ್ರಮಗಳಿಗೆ ಕಿಮ್ ಒಪ್ಪಿಗೆ ಸೂಚಿಸಿದ್ದರು ಹಾಗೂ ಕೊರಿಯ ಪರ್ಯಾಯ ದ್ವೀಪವನ್ನು ಪರಮಾಣುಮುಕ್ತಗೊಳಿಸುವ ಕುರಿತು ಚರ್ಚಿಸಲು ಸಿದ್ಧ ಎಂದಿದ್ದರು.

 ಉತ್ತರ ಕೊರಿಯ ವಿರುದ್ಧದ ಅಮೆರಿಕದ ಕಠಿಣ ನೀತಿಗಳು ಹಾಗೂ ಈ ವಿಷಯದಲ್ಲಿ ಪ್ರಮುಖ ವ್ಯಾಪಾರಿ ಭಾಗೀದಾರ ಚೀನಾದ ಮೇಲೆ ಅದು ಹೇರಿದ ಒತ್ತಡದಿಂದಾಗಿ ಒಂದು ಕಾಲದಲ್ಲಿ ಅಸಾಧ್ಯವೆಂಬಂತೆ ಕಂಡುಬಂದಿದ್ದ ಬೆಳವಣಿಗೆ ನಡೆದಿದೆ ಎಂಬುದಾಗಿ ಟ್ರಂಪ್ ಮತ್ತು ಅಮೆರಿಕದ ಹಿರಿಯ ಅಧಿಕಾರಿಗಳು ಪದೇ ಪದೇ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಆದರೆ, ಉತ್ತರ ಕೊರಿಯ ರವಿವಾರ ಹೊರಡಿಸಿರುವ ಹೇಳಿಕೆಯು, ಟ್ರಂಪ್ ಜೊತೆಗೆ ಮಾತುಕತೆ ನಡೆಸಲು ಹೊರಟಿರುವ ಕಿಮ್‌ರ ನಿಲುವನ್ನು ಬಲಪಡಿಸುವುದಾಗಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News