ಪರಮಾಣು ಒಪ್ಪಂದದಿಂದ ಹಿಂದೆ ಸರಿದರೆ ಅಮೆರಿಕಕ್ಕೆ ಪಶ್ಚಾತ್ತಾಪ

Update: 2018-05-06 17:11 GMT

ಟೆಹರಾನ್ (ಇರಾನ್), ಮೇ 6: ಇರಾನ್ ಮತ್ತು ಜಾಗತಿಕ ಶಕ್ತ ದೇಶಗಳ ನಡುವೆ ನಡೆದಿರುವ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದರೆ, ಅದು ಹಿಂದೆಂದೂ ಇಲ್ಲದಷ್ಟು ಪಶ್ಚಾತ್ತಾಪ ಪಡುತ್ತದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ರವಿವಾರ ಹೇಳಿದ್ದಾರೆ.

ಮೇ 12ರಂದು ಒಪ್ಪಂದದ ನವೀಕರಣ ಸಂದರ್ಭದಲ್ಲಿ ಅದರಿಂದ ಹಿಂದೆ ಸರಿಯುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಒಪ್ಪಂದದಲ್ಲಿರುವ ‘ಭಯಾನಕ ದೋಷ’ಗಳನ್ನು ಸರಿಪಡಿಸಿ, ಇಲ್ಲದಿದ್ದರೆ ತಾನು ಇರಾನ್ ವಿರುದ್ಧ ಮತ್ತೆ ದಿಗ್ಬಂಧನಗಳನ್ನು ಹೇರುವುದಾಗಿ ಅಮೆರಿಕ ತನ್ನ ಐರೋಪ್ಯ ಮಿತ್ರರಿಗೆ ಸೂಚನೆ ನೀಡಿದ್ದಾರೆ.

‘‘ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದರೆ, ಅವರು ಹಿಂದೆಂದಿಗಿಂತಲೂ ಹೆಚ್ಚು ಪರಿತಪಿಸುವುದನ್ನು ನೀವು ನೋಡುವಿರಿ’’ ಎಂದು ಈಶಾನ್ಯ ಇರಾನ್‌ನಲ್ಲಿ ಮಾಡಿದ ಭಾಷಣದಲ್ಲಿ ರೂಹಾನಿ ಹೇಳಿದರು.

‘‘ನಮ್ಮ ಜನರು ಒಗ್ಗಟ್ಟಿನಿಂದಿದ್ದಾರೆ ಎನ್ನುವುದನ್ನು ಟ್ರಂಪ್ ತಿಳಿಯಬೇಕು, ನಮ್ಮ ಜನರು ಒಗ್ಗಟ್ಟಿನಿಂದಿದ್ದಾರೆ ಎನ್ನುವುದನ್ನು ಇಸ್ರೇಲ್ ತಿಳಿದುಕೊಳ್ಳಬೇಕು’’ ಎಂದು ಇರಾನ್ ಅಧ್ಯಕ್ಷರು ನುಡಿದರು.

2015ರ ಒಪ್ಪಂದ

ಇರಾನ್ ಹಾಗೂ ಬ್ರಿಟನ್, ಚೀನಾ, ಫ್ರಾನ್ಸ್, ಜರ್ಮನಿ, ರಶ್ಯ ಮತ್ತು ಅಮೆರಿಕಗಳ ನಡುವಿನ ಪರಮಾಣು ಒಪ್ಪಂದಕ್ಕೆ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರ ನೇತೃತ್ವದಲ್ಲಿ 2015ರಲ್ಲಿ ಸಹಿ ಹಾಕಲಾಗಿತ್ತು.

ಪರಮಾಣು ಬಾಂಬ್ ತಯಾರಿಸುವ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂಬ ಬದ್ಧತೆಗೆ ಪ್ರತಿಯಾಗಿ ಇರಾನ್ ವಿರುದ್ಧದ ದಿಗ್ಬಂಧನಗಳನ್ನು ತೆರವುಗೊಳಿಸಲು ಒಪ್ಪಂದವು ಅವಕಾಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News