ಬಿಜೆಪಿಯೊಳಗಿನ ವಿರೋಧಾಭಾಸಗಳು

Update: 2018-05-07 04:14 GMT

ಕಳೆದ ವಿಧಾನಸಭೆಯಲ್ಲಿ ರಾಜ್ಯ ಬಿಜೆಪಿ ದಯನೀಯವಾಗಿ ನೆಲ ಕಚ್ಚಿತ್ತು ಮತ್ತು ಅದಕ್ಕೆ ಕಾರಣ ಕಾಂಗ್ರೆಸ್ ಆಗಿರದೆ ಸ್ವತಃ ಬಿಜೆಪಿಯೇ ಆಗಿತ್ತು. ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರ ರಚನೆಯಾಗಿದ್ದರೂ, ಅವರು ಆಡಳಿತ ನಡೆಸದಂತೆ ಶತಾಯಗತಾಯ ಬಿಜೆಪಿಯೊಳಗಿನ ನಾಯಕರು ಮತ್ತು ದಿಲ್ಲಿಯ ಬಿಜೆಪಿ ವರಿಷ್ಠರು ಕಾಡಿದ್ದರು. ರೆಡ್ಡಿ ಸಹೋದರರ ಹಣದ ಮೇಲೆ ಬಿಜೆಪಿಯ ಸರಕಾರ ನಿಂತಿತ್ತು. ಪರಿಣಾಮವಾಗಿ, ರೆಡ್ಡಿ ಸಹೋದರರು ಪದೇ ಪದೇ ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದರು. ಭಿನ್ನ ಗುಂಪುಗಳು ತಿಂಗಳಿಗೊಮ್ಮೆ ದಿಲ್ಲಿಗೆ ಪ್ರವಾಸ ಹೊರಡುವುದು, ವರಿಷ್ಠರಲ್ಲಿ ಯಡಿಯೂರಪ್ಪ ವಿರುದ್ಧ ದೂರು ಹೇಳುವುದು ಸಾಮಾನ್ಯವಾಗಿ ಬಿಟ್ಟಿತ್ತು. ಇದು ಅಂತಿಮವಾಗಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಸುವುದರ ಜೊತೆಗೆ ಮುಕ್ತಾಯವಾಯಿತು. ಈ ಗೊಂದಲದಲ್ಲಿ ಎಲ್ಲರೂ ರಾಜ್ಯವನ್ನು ದೋಚುವುದು ಆದ್ಯತೆಯನ್ನಾಗಿಸಿದರು. ಹಲವು ಸಚಿವರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಕೊಂಡರು. ಅಂತಿಮವಾಗಿ ನ್ಯಾ. ಸಂತೋಷ್ ಹೆಗ್ಡೆೆಯ ವರದಿ ಸರಕಾರದ ಚರಮ ಗೀತೆಯನ್ನು ಬರೆಯಿತು. ಯಡಿಯೂರಪ್ಪ ಬಳಿಕ ಒಬ್ಬರ ಆನಂತರ ಒಬ್ಬರಂತೆ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾದರು. ಇಬ್ಬಿಬ್ಬರು ಉಪಮುಖ್ಯಮಂತ್ರಿಗಳಾದರು. ಸದನ ಬ್ಲೂಫಿಲಂಗಳಿಗಾಗಿ ಸುದ್ದಿಯಾಯಿತು. ಸ್ವತಃ ಸ್ಪೀಕರ್ ಕೆ.ಜಿ. ಬೋಪಯ್ಯ ಸದನನೀತಿಗಳನ್ನು ಗಾಳಿಗೆ ತೂರಿದರು. ಯಡಿಯೂರಪ್ಪ ಹೊಸ ಪಕ್ಷ ಸ್ಥಾಪಿಸುವುದರೊಂದಿಗೆ ರಾಜ್ಯದಲ್ಲಿ ಬಿಜೆಪಿ ದುರಂತ ಕಂಡಿತು.

ಇದೀಗ ಬೂದಿಯಿಂದ ಮೇಲೇಳುವ ಪ್ರಯತ್ನದಲ್ಲಿದೆ ಬಿಜೆಪಿ. ಒಂದು ಕಾಲದ ಕಳಂಕಗಳನ್ನೆಲ್ಲ ತೊಳೆದು ಈ ಚುನಾವಣೆಯಲ್ಲಿ ಹೊಸದಾಗಿ ತನ್ನನ್ನು ಬಿಂಬಿಸಿಕೊಳ್ಳುವುದು ಸದ್ಯಕ್ಕೆ ಅದರ ಅಗತ್ಯವಾಗಿದೆ. ಈಗಾಗಲೇ ತಿರಸ್ಕರಿಸಿರುವ ಅದೇ ಹಳೆಯ ಗುಂಪನ್ನು ಮತ್ತೆ ರಾಜ್ಯದ ಜನರು ಯಾಕೆ ಸ್ವೀಕರಿಸಬೇಕು? ಬಹುಶಃ ಈಗ ಇರುವ ಕಾಂಗ್ರೆಸ್ ಸರಕಾರ ಅದಕ್ಕಿಂತಲೂ ಕಳಪೆ ಆಡಳಿತವನ್ನು ನೀಡಿದ್ದಿದ್ದರೆ ಖಂಡಿತವಾಗಿಯೂ ಇವರಿಗಿಂತ ಅವರೇ ವಾಸಿ ಎಂದು ಜನ ಸ್ವೀಕರಿಸುತ್ತಿದ್ದರೇನೋ? ಆದರೆ ಸಿದ್ದರಾಮಯ್ಯ ಕೆಲವು ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜನರನ್ನು ತಲುಪುವ ಗರಿಷ್ಠ ಪ್ರಯತ್ನವನ್ನು ಮಾಡಿದ್ದಾರೆ. ಕಾಂಗ್ರೆಸ್ ಇಂದು ಸಿದ್ದರಾಮಯ್ಯರ ಬಲದಿಂದಲೇ ಚುನಾವಣೆಯನ್ನು ಆತ್ಮವಿಶ್ವಾಸದಿಂದ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೊಸ ತಂಡದ ಜೊತೆಗೆ, ಹೊಸ ಅಜೆಂಡಾಗಳ ಜೊತೆಗೆ ಮತ್ತೆ ಹೊಸದಾಗಿ ಜನರನ್ನು ಎದುರಿಸುವ ಅನಿವಾರ್ಯವಿದೆ. ಆದರೆ ಬಿಜೆಪಿಯ ಈಗಿನ ತಂಡ ಸ್ವತಃ ಬಿಜೆಪಿ ಕಾರ್ಯಕರ್ತರಿಗೇ ನಿರಾಶೆ ತಂದಿದೆ. ಯಾವ ಬಿಜೆಪಿ ನಾಯಕನನ್ನು ಭ್ರಷ್ಟಾಚಾರ ಆರೋಪದಲ್ಲಿ ಸ್ವತಃ ಬಿಜೆಪಿ ನಾಯಕರೇ ಕೆಳಗಿಳಿಸಿದ್ದರೋ ಅದೇ ನಾಯಕನನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತೆ ಮತ ಯಾಚಿಸಲು ಹೊರಟಿದೆ.

ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಇದೇ ಬಿಜೆಪಿ ನಾಯಕರು ಯಡಿಯೂರಪ್ಪ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದರು. ಇಂದು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಟೀಕಿಸಲು ಕಾಂಗ್ರೆಸ್ ಬೇಕಾಗಿಲ್ಲ. ಈ ಹಿಂದೆ ಬಿಜೆಪಿ ನಾಯಕರು ಯಡಿಯೂರಪ್ಪ ಕುರಿತಂತೆ ಏನೇನು ಆಡಿದ್ದರೋ ಅದನ್ನೇ ಜನರ ಮುಂದೆ ಇಟ್ಟರೆ ಸಾಕು. ಅವುಗಳಿಗೆಲ್ಲ ಈಗ ಬಿಜೆಪಿ ನಾಯಕರು ಏನು ಉತ್ತರ ಹೇಳುತ್ತಾರೆ? ಬಿಜೆಪಿ ಸರಕಾರ ನಾಶವಾಗಲು ಕಾರಣರಾದ ಕುಖ್ಯಾತರು ರೆಡ್ಡಿ ಸಹೋದರರು. ಕನಿಷ್ಠ ಅವರನ್ನಾದರೂ ಚುನಾವಣೆಯಿಂದ ದೂರ ಇಡುವುದು ಬಿಜೆಪಿಯ ಕರ್ತವ್ಯವಾಗಿತ್ತು. ದುರದೃಷ್ಟವಶಾತ್ ಸ್ವತಃ ಪ್ರಧಾನಿ ಮೋದಿಯವರೇ ರೆಡ್ಡಿ ಸಹೋದರರೊಬ್ಬರ ಜೊತೆಗೆ ವೇದಿಕೆಯನ್ನು ಹಂಚಿಕೊಂಡು ಚುನಾವಣಾ ಪ್ರಚಾರ ಮಾಡಿದರು. ಜನಾರ್ದನ ರೆಡ್ಡಿಯವರಂತೂ ಬಿಜೆಪಿ ಪರವಾಗಿ ಪ್ರಚಾರ ಮಾಡಲು ಸುಪ್ರೀಂಕೋರ್ಟ್ ಮೆಟ್ಟಿಲನ್ನು ಹತ್ತಿದ್ದರು. ಆದರೆ ನ್ಯಾಯಾಲಯ ಅನುಮತಿ ನೀಡದ ಕಾರಣ ಪ್ರಚಾರದಿಂದ ದೂರ ಉಳಿಯಬೇಕಾಗಿದೆ. ಒಂದು ಕಾಲದಲ್ಲಿ ಬಿಜೆಪಿಯನ್ನು ಯಾವ ಯಾವ ಕಾರಣಕ್ಕಾಗಿ ಜನರು ತಿರಸ್ಕರಿಸಿದ್ದರೋ, ಆ ಕಳಂಕಗಳ ಜೊತೆಗೇ ಮತ್ತೆ ಬಿಜೆಪಿ ಮತ ಯಾಚಿಸುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಭಿನ್ನಮತ ಬೂದಿ ಮುಚ್ಚಿದ ಕೆಂಡದಂತೆ ಬಿಜೆಪಿಯೊಳಗೆ ಇನ್ನೂ ಉಳಿದುಕೊಂಡಿದೆ. ಚುನಾವಣೆ ಮುಗಿದ ಬೆನ್ನಿಗೇ ಅದು ಮತ್ತೊಮ್ಮೆ ಸ್ಫೋಟಗೊಳ್ಳುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಮೋದಿಯ ವ್ಯಂಗ್ಯ, ನಿಂದನಾತ್ಮಕ ಭಾಷಣಗಳನ್ನು ಆಲಿಸಿ ಜನರು ತಮಗೆ ಮತ ಹಾಕುತ್ತಾರೆ ಎನ್ನುವ ನಿರೀಕ್ಷೆ ಬಿಜೆಪಿಗೆ ದುಬಾರಿಯಾಗಲಿದೆ.

 ಕನಿಷ್ಠ ಪ್ರಣಾಳಿಕೆಯಲ್ಲಾದರೂ ಹೊಸತನವನ್ನು ನೀಡುವ ಸಾಧ್ಯತೆ ಬಿಜೆಪಿಗಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಅವರ ಜನಪ್ರಿಯ ಪ್ರಣಾಳಿಕೆಯೂ ಕಾರಣವಾಗಿತ್ತು. ಈ ಬಾರಿ ಅದಕ್ಕೆ ಪ್ರತಿ ಸವಾಲಾಗಿ ಜನಮುಖಿಯಾಗಿರುವ ಭಿನ್ನ ಪ್ರಣಾಳಿಕೆಯನ್ನು ರೂಪಿಸುವುದು ಬಿಜೆಪಿ ನಾಯಕರ ಹೊಣೆಗಾರಿಕೆಯಾಗಿತ್ತು. ಆದರೆ ಪ್ರಣಾಳಿಕೆ ಹಲವು ವಿರೋಧಾಭಾಸಗಳಿಂದ ಕೂಡಿದೆ. ಕಾಂಗ್ರೆಸ್ ಸರಕಾರ ಇಂದಿರಾ ಕ್ಯಾಂಟೀನ್‌ನ್ನು ಆರಂಭಿಸಿದಾಗ ಬಿಜೆಪಿ ಅದನ್ನು ವ್ಯಂಗ್ಯವಾಡಿತ್ತು. ಇದೀಗ ಪ್ರಣಾಳಿಕೆಯಲ್ಲಿ ಅನ್ನಪೂರ್ಣ ಕ್ಯಾಂಟೀನ್ ನಿರ್ಮಾಣದ ಬಗ್ಗೆ ಬಿಜೆಪಿ ಹೇಳಿಕೊಂಡಿದೆ. ಇಂದಿರಾ ಕ್ಯಾಂಟೀನ್‌ನ ಹೆಸರನ್ನಷ್ಟೇ ಬದಲಿಸುವುದಕ್ಕಾಗಿ ಜನರು ಬಿಜೆಪಿಯನ್ನು ಚುನಾಯಿಸಬೇಕು ಎಂದಾಯಿತು. ಗೆದ್ದರೆ ತಕ್ಷಣ ರೈತರ ಸಾಲ ಮನ್ನಾ ಮಾಡುತ್ತೇವೆ ಎನ್ನುತ್ತಿದೆ ಬಿಜೆಪಿ. ಆದರೆ, ರೈತರ ಸಾಲ ಮನ್ನಾ ವಿಷಯದಲ್ಲಿ ಕೇಂದ್ರ ಸರಕಾರ ನಿಷ್ಠುರ ನಿಲುವನ್ನು ಈಗಾಗಲೇ ಪ್ರದರ್ಶಿಸಿದೆ. ರಾಜ್ಯ ಸರಕಾರ ಈಗಾಗಲೇ ತನ್ನ ಪಾಲಿನ ಸಾಲವನ್ನು ಮನ್ನಾ ಮಾಡಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರ ಇದಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದಾಗ ಆ ಮನವಿಯನ್ನು ಕೇಂದ್ರ ಸಾರಾಸಗಟಾಗಿ ತಿರಸ್ಕರಿಸಿತ್ತು. ಆದರೆ ಇದೀಗ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಭರವಸೆ ನೀಡಿದೆ.

ಒಂದು ಕಡೆ ಹೈನುಗಾರಿಕೆಗೆ ಪ್ರೋತ್ಸಾಹ ಎನ್ನುತ್ತಲೇ ಮತ್ತೊಂದು ಕಡೆ ಗೋಹತ್ಯೆಯನ್ನು ಸಂಪೂರ್ಣ ನಿಷೇಧ ಮಾಡುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಗೋಮಾರಾಟ ನಿಯಂತ್ರಣ ಕಾನೂನನ್ನು ಜಾರಿಗೊಳಿಸಿ ದೇಶಾದ್ಯಂತ ರೈತರನ್ನು, ಹೈನೋದ್ಯಮವನ್ನು ಕೇಂದ್ರ ಸರಕಾರ ಸಂಕಷ್ಟಕ್ಕೆ ನೂಕಿತು. ಇದೀಗ ಕೇಂದ್ರವೇ ಈ ನಿಷೇಧದ ಕುರಿತಂತೆ ಗೊಂದಲದಲ್ಲಿದೆ. ಈಶಾನ್ಯ ಭಾರತ, ಕೇರಳ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಸ್ವತಃ ಗೋಮಾಂಸವನ್ನು ಪ್ರೋತ್ಸಾಹಿಸುತ್ತಿದೆ. ಗೋಮಾಂಸಾಹಾರಿಗಳು ಹೈನೋದ್ಯಮಕ್ಕೆ ಪೂರಕವಾಗಿದ್ದಾರೆ. ನಾಳೆ ಗೋಹತ್ಯೆ ನಿಷೇಧವಾದರೆ ರೈತರು ಮತ್ತೆ ಸಂಕಷ್ಟದಲ್ಲಿ ಬೀಳುತ್ತಾರೆ. ರೈತರ ಗೋವುಗಳು ನಕಲಿ ಗೋರಕ್ಷಕರ ಪಾಲಾಗುತ್ತವೆ. ಇದು ಹೈನೋದ್ಯಮಕ್ಕೆ ಭಾರೀ ಧಕ್ಕೆ ಉಂಟು ಮಾಡಲಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಾದಾಯಿ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದಿದ್ದಾರೆ ನರೇಂದ್ರ ಮೋದಿ. ಈ ಹಿಂದೆ ವಿವಾದದ ಬಗ್ಗೆ ಚರ್ಚಿಸಲು ರಾಜ್ಯದ ಮುಖ್ಯಮಂತ್ರಿಯವರು ಪ್ರಧಾನಿ ಮೋದಿಯ ಭೇಟಿಗೆ ಯತ್ನಿಸಿದಾಗ ಅವರು ಯಾವ ರೀತಿಯಲ್ಲೂ ಸ್ಪಂದಿಸಿರಲಿಲ್ಲ. ಆ ಸಂದರ್ಭದಲ್ಲಿ ಸಂಪೂರ್ಣ ಗೋವಾದ ಬೆನ್ನಿಗೆ ನಿಂತಿದ್ದ ಮೋದಿ ಇದೀಗ ಮಹಾದಾಯಿ ಪರಿಹಾರದ ಬಗ್ಗೆ ಮಾತನಾಡುವುದೇ ತಮಾಷೆಯಾಗಿದೆ. ಒಟ್ಟಿನಲ್ಲಿ ಬಿಜೆಪಿ ಸಂಪೂರ್ಣ ಗೊಂದಲದಲ್ಲಿದೆ. ಈ ಚುನಾವಣೆ ಮುಗಿಯುವ ಹೊತ್ತಿಗೆ ಬಿಜೆಪಿಯೊಳಗೆ ಯಡಿಯೂರಪ್ಪ ಯುಗ ಮುಗಿಯುವ ಎಲ್ಲ ಸೂಚನೆ ಕಾಣುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News