ಕಥುವಾ ಅತ್ಯಾಚಾರ ಪ್ರಕರಣ: ಬಾಲಾರೋಪಿಯನ್ನೊಳಗೊಂಡ ಪ್ರಕರಣದ ವಿಚಾರಣೆ ಮೇ 22ಕ್ಕೆ

Update: 2018-05-07 13:20 GMT

ಕಥುವಾ,ಮೇ 7: ಕಥುವಾದಲ್ಲಿ ಎಂಟರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಕೃತ್ಯದಲ್ಲಿ ಬಾಲಾರೋಪಿಯನ್ನೊಳಗೊಂಡ ಪ್ರಕರಣದ ವಿಚಾರಣೆಯನ್ನು ಸೋಮವಾರ ಸ್ಥಳೀಯ ನ್ಯಾಯಾಲಯವು ಮೇ 22ಕ್ಕೆ ನಿಗದಿಗೊಳಿಸಿತು.

ಎ.25ರಂದು ಬಾಲಾರೋಪಿಯನ್ನು ಭಾರೀ ಭದ್ರತೆಯ ನಡುವೆ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು. ಪ್ರಕರಣದ ದೋಷಾರೋಪಣೆ ಪಟ್ಟಿಯ ಪ್ರತಿ ತನಗೆ ಲಭಿಸಿದೆ ಎಂದು ಆತ ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದ್ದ. ಆತ ತನ್ನ ವಯಸ್ಸಿನ ಆಧಾರದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತ್ತು.

ಅಪರಾಧದಲ್ಲಿ ಬಾಲಾರೋಪಿಯು ಮುಖ್ಯಪಾತ್ರವನ್ನು ವಹಿಸಿದ್ದ ಎಂದು ಕ್ರೈಂ ಬ್ರಾಂಚ್ ಪೊಲೀಸರು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಜ.10ರಂದು ತನ್ನ ಮನೆಯ ಸಮೀಪದ ಅರಣ್ಯ ಪ್ರದೇಶದಲ್ಲಿ ಕುದುರೆಗಳನ್ನು ಮೇಯಿಸುತ್ತಿದ್ದಾಗ ನಾಪತ್ತೆಯಾಗಿದ್ದ ಬಾಲಕಿಯ ಶವ ಒಂದು ವಾರದ ಬಳಿಕ ಪತ್ತೆಯಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪೊಲೀಸರು ಸೇರಿದಂತೆ ಎಂಟು ಜನರನ್ನು ಬಂಧಿಸಿರುವ ಪೊಲೀಸರು ಎ.9ರಂದು ಏಳು ಆರೋಪಿಗಳ ವಿರುದ್ಧ ಮತ್ತು ಎ.10ರಂದು ಬಾಲಾರೋಪಿಯ ವಿರುದ್ಧ ಪ್ರತ್ಯೇಕ ದೋಷಾರೋಪಣೆ ಪಟ್ಟಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News