ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧ ಇರಾನ್ ತೀವ್ರ ವಿರೋಧ: ಅಧ್ಯಕ್ಷ ರೂಹಾನಿ

Update: 2018-05-07 16:19 GMT

 ಅಂಕಾರ (ಟರ್ಕಿ), ಮೇ 7: ಇರಾನ್ ಜಾಗತಿಕ ಶಕ್ತ ರಾಷ್ಟ್ರಗಳೊಂದಿಗೆ ಮಾಡಿಕೊಂಡಿರುವ ಪರಮಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದರೆ, ಅದು ಪಶ್ಚಾತ್ತಾಪ ಪಡಬೇಕಾಗುತ್ತದೆ ಹಾಗೂ ಮಧ್ಯಪ್ರಾಚ್ಯದಲ್ಲಿ ಇರಾನ್‌ನ ಪ್ರಭಾವವನ್ನು ನಿಯಂತ್ರಿಸಲು ಅಮೆರಿಕ ತೆಗೆದುಕೊಳ್ಳುವ ಕ್ರಮಗಳನ್ನು ಅದು ತೀವ್ರವಾಗಿ ವಿರೋಧಿಸಲಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಸೋಮವಾರ ಹೇಳಿದ್ದಾರೆ.

2015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನೇತೃತ್ವದಲ್ಲಿ ಏರ್ಪಟ್ಟಿದ್ದ ಒಪ್ಪಂದದ ವಿರುದ್ಧ ಟ್ರಂಪ್ ಕಳೆದ ವರ್ಷ ಅಧಿಕಾರಕ್ಕೆ ಬಂದಂದಿನಿಂದಲೆ ಕಿಡಿಗಾರುತ್ತಾ ಬಂದಿದ್ದಾರೆ. ಒಪ್ಪಂದಕ್ಕೆ ಒಂದು ಕಡೆ ಇರಾನ್ ಸಹಿ ಹಾಕಿದರೆ, ಇನ್ನೊಂದು ಬದಿಯಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ, ಜರ್ಮನಿ ಮತ್ತು ರಶ್ಯಗಳು ಸಹಿ ಹಾಕಿವೆ.

ಒಪ್ಪಂದವು ಮೇ 12ರಂದು ನವೀಕರಣಕ್ಕೆ ಬರಲಿದೆ. ಅದರ ಒಳಗೆ ಒಪ್ಪಂದದಲ್ಲಿರುವ ‘ಲೋಪ’ಗಳನ್ನು ಪರಿಹರಿಸಿ, ಇಲ್ಲದಿದ್ದರೆ ಒಪ್ಪಂದದಿಂದ ಅಮೆರಿಕ ಹಿಂದಕ್ಕೆ ಸರಿಯುವುದು ಎಂಬ ಬೆದರಿಕೆಯನ್ನು ಒಪ್ಪಂದಕ್ಕೆ ಸಹಿ ಹಾಕಿರುವ ಯುರೋಪ್ ದೇಶಗಳಿಗೆ ಟ್ರಂಪ್ ಹಾಕಿದ್ದಾರೆ.

‘‘ನಾವು ಪರಮಾಣು ಬಾಂಬ್ ತಯಾರಿಸುತ್ತಿಲ್ಲ ಎಂಬುದನ್ನು ಅವರು ಖಚಿತಪಡಿಸುವುದಾದರೆ, ನಾವು ಬಾಂಬ್ ತಯಾರಿಸುತ್ತಿಲ್ಲ ಮತ್ತು ಮುಂದೆಯೂ ತಯಾರಿಸುವುದಿಲ್ಲ ಎಂಬುದನ್ನು ಹಲವು ಸಲ ಸ್ಪಷ್ಟಪಡಿಸಿದ್ದೇವೆ. ಆದರೆ, ವಲಯದಲ್ಲಿಯಾಗಲಿ, ಜಾಗತಿಕ ಮಟ್ಟದಲ್ಲಾಗಲಿ ಇರಾನನ್ನು ದುರ್ಬಲಗೊಳಿಸಲು ಹಾಗೂ ಅದರ ಪ್ರಭಾವವನ್ನು ಕುಗ್ಗಿಸಲು ಅವರು ಬಯಸುತ್ತಾರಾದರೆ, ಇರಾನ್ ಅದನ್ನು ತೀವ್ರವಾಗಿ ವಿರೋಧಿಸುತ್ತದೆ’’ ಎಂದು ಸರಕಾರಿ ಟಿವಿಯಲ್ಲಿ ನೇರಪ್ರಸಾರಗೊಂಡ ಭಾಷಣದಲ್ಲಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News