ಜಮ್ಮು ಕಾಶ್ಮೀರದಲ್ಲಿ ಕಲ್ಲೇಟಿಗೆ ಚೆನ್ನೈ ಯುವಕ ಬಲಿ
Update: 2018-05-07 23:21 IST
ಶ್ರೀನಗರ, ಮೇ.7: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಗುಲ್ಮಾರ್ಗ ರಸ್ತೆಯಲ್ಲಿ ಸಂಭವಿಸಿದ ಕಲ್ಲೆಸೆತ ಘಟನೆಯಲ್ಲಿ ಚೆನ್ನೈ ಮೂಲದ ಯುವಕನೊಬ್ಬ ಮೃತಪಟ್ಟಿದ್ದಾನೆ.
ಚೆನ್ನೈಯ 22ರ ಹರೆಯದ ತಿರುಮನಿ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮೃತನ ಕುಟುಂಬಸ್ಥರನ್ನು ಸೋಮವಾರ ರಾತ್ರಿ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ. ಘಟನೆಯಲ್ಲಿ ಹಂಡ್ವಾರದ 19ರ ಹರೆಯದ ಸಬ್ರೀನಾ ಎಂಬ ಬಾಲಕಿಯೂ ಗಾಯಗೊಂಡಿದ್ದು ಆಕೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಿರುಮನಿ ಪ್ರಯಾಣಿಸುತ್ತಿದ್ದ ವಾಹನವು ಭದ್ರತಾ ಪಡೆ ಮತ್ತು ಕಲ್ಲೆಸೆತಗಾರರ ಮಧ್ಯೆ ಸಿಲುಕಿದಾಗ ತಿರುಮನಿ ತಲೆಗೆ ಕಲ್ಲೇಟು ತಗುಲಿದೆ. ಕೂಡಲೇ ಅವರನ್ನು ಶ್ರೀನಗರದ ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಗಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.