ಕಿವಿಯಲ್ಲಿ ಇಯರ್ ಫೋನ್ ಇಟ್ಟು ಮಲಗಿದ ಮಹಿಳೆ ವಿದ್ಯುತ್ ಆಘಾತದಿಂದ ಸಾವು
ಚೆನ್ನೈ, ಮೇ.7: ಸಂಗೀತ ಕೇಳಿಕೊಂಡು ಮಲಗುವುದು ಹಲವು ಶತಮಾನಗಳಿಂದಲೂ ಬಹಳಷ್ಟು ಜನರು ಅನುಸರಿಸಿಕೊಂಡು ಬಂದಿರುವ ಒಂದು ಹವ್ಯಾಸ. ಈಗಂತೂ ಅನೇಕ ಮಂದಿ ಕಿವಿಯಲ್ಲಿ ಇಯರ್‌ಫೋನ್‌ಗಳನ್ನು ಸಿಕ್ಕಿಸಿಕೊಂಡೇ ನಿದ್ದೆಗೆ ಜಾರುತ್ತಾರೆ. ಆದರೆ ಚೆನ್ನೈಯಲ್ಲಿ ನಡೆದಿರುವ ಘಟನೆ ಇಂಥ ಅಭ್ಯಾಸ ಬೆಳೆಸಿಕೊಂಡಿರುವವರಿಗೆ ಸ್ವಲ್ಪ ಭಯವುಂಟು ಮಾಡಿದರೆ ಅಚ್ಚರಿಯಿಲ್ಲ.
ಕಿವಿಗೆ ಇಯರ್‌ಫೋನ್ ಹಾಕಿಕೊಂಡು ಸಂಗೀತ ಕೇಳುತ್ತಾ ಮಲಗುವ ಅಭ್ಯಾಸ ಹೊಂದಿದ್ದ ಚೆನ್ನೈಯ 46 ಹರೆಯದ ಫಾತಿಮಾ ಅದೇ ಕಾರಣದಿಂದ ಸಾವನ್ನಪ್ಪಿದ್ದಾರೆ. ರವಿವಾರ ಆಕೆ ಇದೇ ರೀತಿ ಇಯರ್‌ಫೋನ್‌ಗಳನ್ನು ಕಿವಿಗೆ ಸಿಕ್ಕಿಸಿ ಮಲಗಿದ್ದ ಸಂದರ್ಭ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ. ಮಲಗಿದ್ದ ಪತ್ನಿಯನ್ನು ಪತಿ ಅಬ್ದುಲ್ ಕಲಾಂ ಎಬ್ಬಿಸಲು ಪ್ರಯತ್ನಿಸಿದಾಗ ಆಕೆ ಸ್ಪಂದಿಸದೇ ಇರುವುದನ್ನು ಗಮನಿಸಿದ ಕಲಾಂ ಕೂಡಲೇ ಫಾತಿಮಾರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿನ ವೈದ್ಯರು ಆಕೆ ವಿದ್ಯುತ್ ಆಘಾತದಿಂದ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಫಾತಿಮಾ ಇಯರ್‌ಫೋನ್ ಹಾಕಿ ಮಲಗಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಆಕೆಗೆ ವಿದ್ಯುತ್ ತಗುಲಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.