ಆಧಾರ್‌ಗೆ ಭದ್ರತೆಯ ಆಧಾರವಿಲ್ಲ

Update: 2018-05-08 04:44 GMT

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ‘‘ನಮ್ಮ ಸರಕಾರ ಇವಿಎಂ, ಆಧಾರ್ ಮೂಲಕ ಭಾರತವನ್ನು ತಂತ್ರಜ್ಞಾನದ ದೇಶವನ್ನಾಗಿಸಲು ಹೊರಟರೆ, ವಿರೋಧ ಪಕ್ಷಗಳು ಅದರ ವಿರುದ್ಧ ಆಕ್ಷೇಪ ಎತ್ತುತ್ತಿವೆ’’ ಎಂದು ಹೇಳಿದ್ದಾರೆ. ಎಂದಿನಂತೆ ಮೋದಿ ಅರ್ಧ ಸತ್ಯವನ್ನಷ್ಟೇ ದೇಶದ ಮುಂದಿಟ್ಟಿದ್ದಾರೆ. ವಿರೋಧ ಪಕ್ಷಗಳು ಮಾತ್ರವಲ್ಲ, ಈ ದೇಶದ ಪ್ರಜ್ಞಾವಂತರೆಲ್ಲರೂ ಒಂದಾಗಿ ಇವಿಎಂ ಮತ್ತು ಆಧಾರ್ ಕುರಿತಂತೆ ತಮ್ಮ ಆತಂಕಗಳನ್ನು ಮುಂದಿಡುತ್ತಿದ್ದಾರೆ. ಅವರು ವಿರೋಧಿಸುತ್ತಿರುವುದು ತಂತ್ರಜ್ಞಾನವನ್ನಲ್ಲ, ತಂತ್ರಜ್ಞಾನದ ದುರುಪಯೋಗವನ್ನು. ಇವಿಎಂನ್ನು ದುರುಪಯೋಗಗೊಳಿಸಿ ಪ್ರಜಾಸತ್ತೆಯನ್ನು ಬುಡಮೇಲುಗೊಳಿಸುವ ಶಕ್ತಿಗಳ ಕುರಿತಂತೆ ದೇಶ ಆತಂಕವನ್ನು ಹೊಂದಿದೆ.

ಆಧಾರ್ ಸಂಖ್ಯೆಯ ಸೋರಿಕೆ ಮತ್ತು ಅದರಿಂದ ದೇಶದ ಭದ್ರತೆಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜನರು ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಧಾರ್ ಸೋರಿಕೆಯ ಕಾರಣಕ್ಕಾಗಿ ಮತ್ತೆ ಮತ್ತೆ ಸುದ್ದಿಯಲ್ಲಿದೆ. ಸುಪ್ರೀಂಕೋರ್ಟ್ ಕೂಡ ಈ ಬಗ್ಗೆ ಇನ್ನೂ ಒಂದು ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿಲ್ಲ. ಅದು ಕೂಡ ತನ್ನದೇ ಆದ ಆತಂಕಗಳನ್ನು ಸರಕಾರದ ಮುಂದಿಟ್ಟಿದೆ. ಆ ಆತಂಕಗಳಿಗೆ ತೃಪ್ತಿಕರವಾದ ಸಮಾಧಾನವನ್ನು ಹೇಳಲು ಕೇಂದ್ರ ಸರಕಾರ ವಿಫಲವಾಗಿದೆ. ಹೀಗಿರುವಾಗ, ಪ್ರಧಾನಿ ಮೋದಿಯವರು ಆಧಾರ್‌ನ್ನು ತನ್ನ ಸಾಧನೆ ಎಂದು ಹೇಳಿಕೊಳ್ಳುವುದನ್ನು ಜನರು ಸಹಿಸುವುದಾದರೂ ಹೇಗೆ?

 12 ಅಂಕಿಗಳ ಬಯೋಮೆಟ್ರಿಕ್ ಗುರುತು ಸಂಖ್ಯೆ ಯೋಜನೆ ಆಧಾರ್ ಅನ್ನು 2009ರಲ್ಲಿ ಕೇಂದ್ರ ಸರಕಾರವು ಜಾರಿಗೊಳಿಸಿದಾಗಿನಿಂದ ಅದು ಒಂದಲ್ಲ ಒಂದು ರೀತಿಯಲ್ಲಿ ವಿವಾದದ ಸುಳಿಗೆ ಸಿಲುಕುತ್ತಲೇ ಇದೆ. ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕಾರಣಿಗಳು ಆಧಾರ್ ಪ್ರಕ್ರಿಯೆಯ ಭದ್ರತೆ ಹಾಗೂ ಖಾಸಗಿತನದ ಬಗ್ಗೆ ಸತತವಾಗಿ ಆತಂಕಗಳನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದೀಗ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಯೋಜನೆಗಳ ಪ್ರಯೋಜನ ಪಡೆಯಲು ಹಾಗೂ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಂತಹ ಸೇವೆಗಳಿಗೆ ಕೇಂದ್ರ ಸರಕಾರದ ಸಂಸ್ಥೆಗಳು ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಿದೆ.

ಸಮರ್ಪಕವಾದ ಭದ್ರತಾ ವ್ಯವಸ್ಥೆಯಿಲ್ಲದೆ ಆಧಾರ್ ದತ್ತಾಂಶ(ಡೇಟಾ)ಗಳನ್ನು ಸಂಗ್ರಹಿಸಲಾಗುತ್ತಿದೆಯೆಂಬ ಆತಂಕಗಳು ಕೂಡಾ ದಿನಗಳೆದಂತೆ ಹೆಚ್ಚೆಚ್ಚು ನಿಜವಾಗುತ್ತಾ ಬರುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಹಲವಾರು ಬಾರಿ ಆಧಾರ್ ಮಾಹಿತಿಗಳು ಸೋರಿಕೆಯಾಗಿರುವುದು ಕಂಡುಬಂದಿದೆೆ. ಇದರ ಜೊತೆಗೆ ಆಧಾರ್ ದತ್ತಾಂಶಗಳನ್ನು ಖರೀದಿಸುವುದು ಕೂಡಾ ತುಂಬಾ ಸುಲಭವೆಂಬುದನ್ನು ವರದಿಗಳು ತೋರಿಸಿಕೊಟ್ಟಿವೆ. ವಾಸ್ತವಿಕವಾಗಿ ಕೇವಲ ಕಳೆದ ಒಂದು ವಾರದಲ್ಲಿ ಆಧಾರ್ ದತ್ತಾಂಶಗಳು ಸೋರಿಕೆಯಾಗಿರುವ ಮೂರು ನಿದರ್ಶನಗಳು ವರದಿಯಾಗಿವೆ ಹಾಗೂ ಮೊಬೈಲ್ ಫೋನ್ ಸಂಖ್ಯೆಗಳಿಗೆ ಆಧಾರ್ ಸಂಖ್ಯೆಗಳನ್ನು ಜೋಡಿಸುವ ಕುರಿತು ಭಾರತದ ಜನತೆಗೆ ತಾನು ತಪ್ಪು ಮಾಹಿತಿಯನ್ನು ನೀಡಿದ್ದಾಗಿ ಕೇಂದ್ರ ಸರಕಾರ ಒಪ್ಪಿಕೊಂಡಿದೆ.

ಸ್ವತಂತ್ರ ಸಂಶೋಧಕರಾದ ಕೊಡಳ್ಳಿ ಶ್ರೀನಿವಾಸ್ ಎಪ್ರಿಲ್ 30ರಂದು ನೀಡಿದ ವರದಿಯೊಂದರಲ್ಲಿ ಆಂಧ್ರಪ್ರದೇಶ ಸರಕಾರವು 2015-2018ರ ಅವಧಿಯಲ್ಲಿ ತನ್ನ ರಾಜ್ಯದ 20,71,913 ಗರ್ಭಿಣಿಯರು ಹಾಗೂ ಅದೇ ಅವಧಿಯಲ್ಲಿ ಮೊದಲ ಬಾರಿಗೆ ಮಕ್ಕಳನ್ನು ಹೆತ್ತ ತಾಯಂದಿರ ಅಧಾರ್ ಸಂಖ್ಯೆಗಳನ್ನು ಪ್ರಕಟಿಸಿರುವುದನ್ನು ಬಹಿರಂಗಪಡಿಸಿದ್ದರು. ಇದಕ್ಕೆ ಉತ್ತರವಾಗಿ, ಆಂಧ್ರಪ್ರದೇಶ ಸರಕಾರವು ವಿವಿಧ ಸರಕಾರಿ ವೆಬ್‌ಸೈಟ್‌ಗಳ ಪರಿಶೀಲನೆ ನಡೆಸುವ ಹೊಣೆಗಾರಿಕೆ ಹೊಂದಿರುವ ಆಂಧ್ರಪ್ರದೇಶ ಸೈಬರ್ ಭದ್ರತೆ ಕಾರ್ಯಾಚರಣೆಗಳ ಕೇಂದ್ರದ ಜೊತೆಗೂಡಿ ತನಿಖೆಯನ್ನು ಆರಂಭಿಸಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯ ವೆಬ್‌ಸೈಟ್ ಪೋರ್ಟಲ್‌ಗೆ ಕನ್ನ ಹಾಕಲಾಗಿದೆಯೆಂದು ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆಯು ಬುಧವಾರ ವರದಿ ಮಾಡಿತ್ತು. ಇದರ ಪರಿಣಾಮವಾಗಿ, ತಮ್ಮ ಆಧಾರ್ ಸಂಖ್ಯೆಗಳನ್ನು ತಮ್ಮ ಭವಿಷ್ಯನಿಧಿ ಖಾತೆ(ಇಪಿಎಫ್)ಗಳ ಜೊತೆ ಜೋಡಿಸಲು ಚಂದಾದಾರರಿಗೆ ನೆರವಾಗುವ ಈ ಪೋರ್ಟಲ್ ಅನ್ನು ಸುಮಾರು ಒಂದೂವರೆ ತಿಂಗಳಿನಿಂದ ಮುಚ್ಚುಗಡೆಗೊಳಿಸಲಾಗಿದೆ.ತೆಲಂಗಾಣದಲ್ಲಿ ರಾಜ್ಯ ಸರಕಾರದ ಖಜಾನೆಗಳ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗಿದ್ದ 2.5 ಲಕ್ಷಕ್ಕೂ ಅಧಿಕ ಪಿಂಚಣಿದಾರರ ಬ್ಯಾಂಕ್‌ಖಾತೆಗಳ ವಿವರಗಳು ಹಾಗೂ ಆಧಾರ್ ಸಂಖ್ಯೆಗಳ ವಿವರಗಳನ್ನು ಕಳವು ಮಾಡಲಾಗಿತ್ತು. ಈ ದತ್ತಾಂಶಗಳು ಸಾರ್ವಜನಿಕರಿಗೆ ಅತ್ಯಂತ ಸುಲಭವಾಗಿ ದೊರೆಯುವಂತಹ ರೀತಿಯಲ್ಲಿ ಅದನ್ನು ಪ್ರದರ್ಶಿಸಲಾಗಿತ್ತು. ಹಿರಿಯ ಪಿಂಚಣಿದಾರರ ಆಧಾರ್ ಸಂಖ್ಯೆಗಳ ಕಳವಿನಿಂದಾಗಿ ಈ ಹಿಂದೆಯೂ ಗಂಭೀರ ಪರಿಣಾಮಗಳುಂಟಾಗಿದ್ದವು. ಅಕ್ಟೋಬರ್‌ನಲ್ಲಿ, ಸುಮಾರು 300 ಮಂದಿ ಹೈದರಾಬಾದ್ ನಿವಾಸಿಗಳ ಆಧಾರ್ ಪಿಂಚಣಿದಾರರ ವಿವರಗಳನ್ನು ಕಳವು ಮಾಡಲಾಗಿತ್ತು.

ವಾಸ್ತವವಾಗಿ ಕೇಂದ್ರ ಸರಕಾರವು ಇತ್ತೀಚೆಗೆ ಆಂಗ್ಲ ದಿನಪತ್ರಿಕೆಯೊಂದಕ್ಕೆ ಸ್ಪಷ್ಟೀಕರಣ ವೊಂದನ್ನು ನೀಡಿ, ಮೊಬೈಲ್ ಫೋನ್ ಸಿಮ್‌ಗಳನ್ನು ಆಧಾರ್ ಜೊತೆ ಜೋಡಿಸುವ ಅಗತ್ಯವಿಲ್ಲವೆಂದು ತಿಳಿಸಿತ್ತು ಹಾಗೂ ಆಧಾರ್ ಸಂಖ್ಯೆ ಹೊಂದಿರದ ವ್ಯಕ್ತಿಗಳಿಗೂ ಮೊಬೈಲ್ ಸಿಮ್‌ಗಳನ್ನು ನೀಡಬಹುದಾಗಿದೆಯೆಂದು ತಿಳಿಸಿತ್ತು. ಡ್ರೈವಿಂಗ್ ಲೈಸೆನ್ಸ್ ಗಳು, ಪಾಸ್‌ಪೋರ್ಟ್‌ಗಳು ಹಾಗೂ ಮತದಾರರ ಗುರುತುಚೀಟಿಗಳು, ವ್ಯಕ್ತಿಯ ಗುರುತನ್ನು ದೃಢಪಡಿಸಲು ಧಾರಾಳವಾಗಿ ಸಾಕಾಗುತ್ತದೆಯೆಂದು ತಿಳಿಸಿತ್ತು.

ಎಪ್ರಿಲ್ 25ರಂದು ಸುಪ್ರೀಂಕೋರ್ಟ್ ಮೊಬೈಲ್ ಸಿಮ್ ಅನ್ನು ಆಧಾರ್ ಸಂಖ್ಯೆ ಜೊತೆ ಜೋಡಿಸುವುದನ್ನು ಕಡ್ಡಾಯಗೊಳಿಸುವಂತೆ ತನಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆಯೆಂದು ಸುಳ್ಳಾಗಿ ವಾದಿಸಿದ್ದಕ್ಕಾಗಿ ಕೇಂದ್ರ ಸರಕಾರವನ್ನು ಟೀಕಿಸಿತ್ತು. ‘‘ವಾಸ್ತವಿಕವಾಗಿ ಸುಪ್ರೀಂಕೋರ್ಟ್ ಅಂತಹ ಯಾವುದೇ ನಿರ್ದೇಶನವನ್ನು ನೀಡಿಲ್ಲ. ಆದರೆ ನೀವು ಮೊಬೈಲ್ ಬಳಕೆದಾರರಿಗೆ ಆಧಾರ್‌ನ್ನು ಕಡ್ಡಾಯಗೊಳಿಸುವುದಕ್ಕಾಗಿ ನೀವು ಸುಪ್ರೀಂಕೋರ್ಟ್‌ನ್ನು ಒಂದು ಸಾಧನವಾಗಿ ಬಳಸಿಕೊಂಡಿದ್ದೀರಿ’’ ಎಂದು ಆಧಾರ್‌ನ ಸಾಂವಿಧಾನಿಕತೆ ಕುರಿತಾದ ಪ್ರಕರಣದ ಆಲಿಕೆ ನಡೆಸುತ್ತಿರುವ ನ್ಯಾಯಪೀಠದ ನ್ಯಾಯಮೂರ್ತಿಗಳಲ್ಲೊಬ್ಬರಾದ ಡಿ.ವೈ.ಚಂದ್ರಚೂಡ್ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಿರುವಾಗ ಆಧಾರ್ ಮೂಲಕ ದೇಶ ತಂತ್ರಜ್ಞಾನದಲ್ಲಿ ಬಲಿಷ್ಠವಾಗುತ್ತಿದೆ ಎಂದು ಪ್ರಧಾನಿ ಹೇಗೆ ಹೇಳುತ್ತಾರೆ? ಪ್ರಧಾನಿಯವರು ಮೊದಲು ಆಧಾರ್ ಸೋರಿಕೆಗೆ ಜನರಿಗೆ ಸ್ಪಷ್ಟೀಕರಣ ನೀಡಬೇಕಾಗಿದೆ. ಅದರ ವೈಫಲ್ಯದ ಹೊಣೆ ಹೊತ್ತುಕೊಂಡು ನಡೆದ ತಪ್ಪುಗಳನ್ನು ಹೇಗೆ ಸರಿಪಡಿಸಬಹುದು ಎನ್ನುವುದನ್ನು ಆಲೋಚಿಸಬೇಕು. ಜನರ ಖಾಸಗಿ ವಿಷಯಗಳನ್ನು ವಿದೇಶಿಯರಿಗೆ ಸೋರಿಕೆ ಮಾಡುವುದು ತಂತ್ರಜ್ಞಾನವಲ್ಲ, ತಂತ್ರಜ್ಞಾನದ ದುರುಪಯೋಗ ಎನ್ನುವುದನ್ನು ಅವರು ಇನ್ನಾದರೂ ಅರ್ಥಮಾಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News