ಚೀನಾ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕನಿಗೆ ಜೀವಾವಧಿ : ಭ್ರಷ್ಟಾಚಾರ ಪ್ರಕರಣ
Update: 2018-05-08 23:44 IST
ಬೀಜಿಂಗ್, ಮೇ 8: ಕಳೆದ ವರ್ಷದವರೆಗೂ ಉನ್ನತ ನಾಯಕತ್ವ ಹುದ್ದೆಗೆ ಪರಿಗಣಿಸಲಾಗಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ)ದ ಪದಾಧಿಕಾರಿಯೊಬ್ಬರಿಗೆ ಭ್ರಷ್ಟಾಚಾರ ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಸರಕಾರಿ ಮಾಧ್ಯಮ ಮಂಗಳವಾರ ವರದಿ ಮಾಡಿದೆ.
170 ಮಿಲಿಯ ಯುವಾನ್ (ಸುಮಾರು 179 ಕೋಟಿ ರೂಪಾಯಿ) ಲಂಚ ಸ್ವೀಕರಿಸಿದ ಆರೋಪದಲ್ಲಿ ಸಿಪಿಸಿಯ ಚಾಂಗ್‌ಕಿಂಗ್ ಮುನಿಸಿಪಲ್ ಸಮಿತಿಯ ಮಾಜಿ ಕಾರ್ಯದರ್ಶಿ ಹಾಗೂ ಪಕ್ಷದ ಸದಸ್ಯ ಸುನ್ ಝೆಂಗ್‌ಕೈ ಈ ಶಿಕ್ಷೆಗೆ ಒಳಗಾಗಿದ್ದಾರೆ.
54 ವರ್ಷದ ಸುನ್, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆರಂಭಿಸಿರುವ ಭ್ರಷ್ಟಾಚಾರ ನಿಗ್ರಹ ಅಭಿಯಾನದಲ್ಲಿ ದೋಷಾರೋಪಣೆಗೆ ಒಳಗಾಗಿರುವ ಪಕ್ಷದ ಇನ್ನೋರ್ವ ಹಿರಿಯ ನಾಯಕರಾಗಿದ್ದಾರೆ.
ತಿಯಾನ್‌ಜಿನ್ ಮುನಿಸಿಪಾಲಿಟಿಯ ಫಸ್ಟ್ ಇಂಟರ್‌ಮೀಡಿಯಟ್ ಪೀಪಲ್ಸ್ ನ್ಯಾಯಾಲಯವು ಮಂಗಳವಾರ ಈ ಶಿಕ್ಷೆ ವಿಧಿಸಿದೆ.
ಎಪ್ರಿಲ್‌ನಲ್ಲಿ ನಡೆದ ವಿಚಾರಣೆಯಲ್ಲಿ ಸುನ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದರು.