ತೊಗಾಡಿಯಾ ಬೆಂಬಲಿಗರ ಅಧಿಕಾರ ಕಿತ್ತುಕೊಂಡ ವಿಎಚ್‌ಪಿ

Update: 2018-05-08 18:55 GMT

ಗಾಂಧಿನಗರ, ಮೇ 8: ಪ್ರವೀಣ್ ತೊಗಾಡಿಯಾ ವಿಎಚ್‌ಪಿಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಹುದ್ದೆಯಿಂದ ನಿರ್ಗಮಿಸಿದ ಕೆಲ ದಿನಗಳಲ್ಲೇ ತೊಗಾಡಿಯಾರನ್ನು ಬೆಂಬಲಿಸಿ ಹೇಳಿಕೆ ನೀಡಿರುವವರ ವಿರುದ್ಧ ಗದಾಪ್ರಹಾರ ನಡೆಸಿರುವ ಸಂಘಟನೆ, ವಿಎಚ್‌ಪಿ ಗುಜರಾತ್ ಘಟಕದ ಅಧ್ಯಕ್ಷ ಕೌಶಿಕ್ ಮೆಹ್ತಾ ಸೇರಿದಂತೆ ಆರು ಬೆಂಬಲಿಗರ ಹುದ್ದೆಯನ್ನು ಕಿತ್ತುಕೊಂಡಿದೆ. ವಿಎಚ್‌ಪಿ ಅಹ್ಮದಾಬಾದ್ ಘಟಕದ ಪ್ರಧಾನ ಕಾರ್ಯದರ್ಶಿ ರಣ್‌ಛೋದ್ ಭರ್‌ವಾಡ್, ‘ದುರ್ಗಾ ವಾಹಿನಿ’ಯ ರಾಷ್ಟ್ರೀಯ ಸಂಯೋಜಕಿ ಮಾಲಾ ರಾವಲ್, ‘ಮಾತೃಶಕ್ತಿ’ ಸಹ ಸಂಯೋಜಕಿ ಮುಕ್ತಾ ಮಕಾನಿ, ವಿಎಚ್‌ಪಿಯ ಅಹ್ಮದಾಬಾದ್ ಮತ್ತು ಮೀರತ್ ಘಟಕದ ಹಿರಿಯ ಸದಸ್ಯರಾದ ರೋಹಿತ್ ದರ್ಜಿ ಹಾಗೂ ದೇವೇಶ್ ಉಪಾಧ್ಯಾಯರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ವಿಎಚ್‌ಪಿ ಮೇ 6ರ ದಿನಾಂಕ ಹೊಂದಿರುವ ಪತ್ರದಲ್ಲಿ ತಿಳಿಸಿದೆ. 

ಸಂಘಟನೆಯ ಪ್ರಮುಖ ಹುದ್ದೆಗಳಿಗೆ ಎಪ್ರಿಲ್ 14ರಂದು ಚುನಾವಣೆ ನಡೆದ ಬಳಿಕ ತೊಗಾಡಿಯಾ ಸ್ವಯಂಪ್ರೇರಿತರಾಗಿ ಸಂಘಟನೆಯನ್ನು ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದರು. ಚುನಾವಣೆ ಬಳಿಕ ಪರಿಸ್ಥಿತಿ ಸುಧಾರಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೆಲವು ಸದಸ್ಯರು ಪ್ರತ್ಯೇಕ ರಸ್ತೆಯಲ್ಲಿ ಮುಂದುವರಿಯಲು ಬಯಸುತ್ತಿದ್ದಾರೆ ಎಂಬುದು ಇದೀಗ ಸ್ಪಷ್ಟವಾಗಿದೆ. ಆದ್ದರಿಂದ ಈ ಆರು ಸದಸ್ಯರನ್ನು ಅವರು ಹೊಂದಿದ್ದ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ ಎಂದು ವಿಎಚ್‌ಪಿಯ ಪತ್ರದಲ್ಲಿ ತಿಳಿಸಲಾಗಿದೆ.

ಈ ಆರು ಮಂದಿ ತೊಗಾಡಿಯಾರಿಗೆ ಬೆಂಬಲ ಸೂಚಿಸಿರುವ ಕಾರಣ ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ಸುರೇಂದ್ರ ಜೈನ್ ತಿಳಿಸಿದ್ದಾರೆ. ವಿಎಚ್‌ಪಿ ಗುಜರಾತ್ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಶೀಘ್ರ ನೇಮಿಸಲಾಗುವುದು ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News