ಅಲೀಗಢ ವಿವಿ: ಸರ್ ಸೈಯದ್ ಅಹ್ಮದ್ ಖಾನ್ ಫೋಟೊ ಬದಲು ಮೋದಿ ಚಿತ್ರ !

Update: 2018-05-09 03:23 GMT

ಆಗ್ರಾ, ಮೇ 9: ಪಾಕಿಸ್ತಾನದ ಜನಕ ಮುಹ್ಮದ್ ಅಲಿ ಜಿನ್ಹಾ ಭಾವಚಿತ್ರವನ್ನು ಅಲೀಗಢ ಮುಸ್ಲಿಂ ವಿವಿಯಲ್ಲಿ ಹಾಕಿರುವ ಬಗ್ಗೆ ಎದ್ದಿರುವ ವಿವಾದದ ಬೆನ್ನಲ್ಲೇ ಮತ್ತೊಂದು ಭಾವಚಿತ್ರ ವಿವಾದ ಕ್ಯಾಂಪಸ್‌ನಲ್ಲಿ ತಲೆ ಎತ್ತಿದೆ.

ಲೋಕೋಪಯೋಗಿ ಇಲಾಖೆಯ ಖೈರ್ ಅತಿಥಿಗೃಹದಲ್ಲಿ ವಿಶ್ವವಿದ್ಯಾನಿಲಯ ಸಂಸ್ಥಾಪಕ ಸರ್ ಸೈಯದ್ ಅಹ್ಮದ್ ಖಾನ್ ಭಾವಚಿತ್ರವನ್ನು ಕಿತ್ತುಹಾಕಿ ಪ್ರಧಾನಿ ನರೇಂದ್ರ ಮೋದಿ ಫೋಟೊ ಹಾಕಿರುವುದು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.

ಸರ್ ಸೈಯದ್ ಭಾವಚಿತ್ರವನ್ನು ಕಿತ್ತುಹಾಕಿರುವ ಬಗ್ಗೆ ಜಿಲ್ಲಾಧಿಕಾರಿ ಚಂದ್ರಭೂಷಣ್ ಸಿಂಗ್ ತನಿಖೆಗೆ ಆದೇಶಿಸಿದ್ದಾರೆ. "ಲೋಕೋಪಯೋಗಿ ಇಲಾಖೆ ಅತಿಥಿಗೃಹ ಸರ್ಕಾರಿ ಸೊತ್ತು ಆಗಿರುವುದರಿಂದ ಪ್ರಧಾನಿ ಭಾವಚಿತ್ರ ಅಳವಡಿಸಿರುವುದು ವಿಶೇಷವೇನಲ್ಲ. ಆದರೆ ಎಎಂಯು ಸಂಸ್ಥಾಪಕರ ಭಾವಚಿತ್ರ ಕಿತ್ತು ಹಾಕಿರುವ ಬಗ್ಗೆ ತನಿಖೆ ನಡೆಸಲಾಗುತ್ತದೆ" ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ. "ಈಗಾಗಲೇ ಎದ್ದಿರುವ ವಿವಾದಕ್ಕೆ ಇನ್ನಷ್ಟು ಕುಮ್ಮಕ್ಕು ನೀಡುವ ಕುಚೋದ್ಯದ ಕೃತ್ಯ ಇದು. ಸತ್ಯವನ್ನು ಪತ್ತೆ ಮಾಡಲು ತನಿಖೆಗೆ ಆದೇಶಿಸಲಾಗಿದೆ. ತನಿಖೆ ವರದಿ ಇನ್ನಷ್ಟೇ ಕೈಸೇರಬೇಕಿದೆ ಎಂದು ಅವರು ಹೇಳಿದ್ದಾರೆ.

ಕಳೆದ ವಾರ ಸೈಯದ್ ಭಾವಚಿತ್ರ ಕಿತ್ತುಹಾಕಲಾಗಿದೆ ಎನ್ನಲಾಗಿದ್ದು, ಸ್ಥಳೀಯ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾದ ಬಳಿಕ ಜಿಲ್ಲಾಧಿಕಾರಿ, ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿ ಸಂಸದ ಸತೀಶ್ ಗೌತಮ್ ಅವರು ಕಳೆದ ವಾರ ಎಎಂಯು ವಿವಿ ಕುಲಪತಿಗೆ ಪತ್ರ ಬರೆದು, ಪಾಕಿಸ್ತಾನ ಜನಕ ಜಿನ್ಹಾ ಅವರ ಭಾವಚಿತ್ರವನ್ನು ಏಕೆ ತೂಗು ಹಾಕಲಾಗಿದೆ ಎಂದು ಸ್ಪಷ್ಟನೆ ನೀಡುವಂತೆ ಕೋರಿದ್ದು ವಿವಾದಕ್ಕೆ ಕಾರಣವಾಗಿತ್ತು.

ವಿದ್ಯಾರ್ಥಿ ಸಂಘಟನೆಗಳು ಕ್ಯಾಂಪಸ್‌ನಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಕ್ಯಾಂಪಸ್‌ಗೆ ಆರೆಸ್ಸೆಸ್ ಮತ್ತು ವಿಎಚ್‌ಪಿ ಪ್ರವೇಶದ ವಿರುದ್ಧ ಹಾಗೂ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸರ ವಿರುದ್ಧ ನಮ್ಮ ಪ್ರತಿಭಟನೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News