ಫ್ಲಿಪ್‌ಕಾರ್ಟ್‌ನ ಶೇ.77 ಶೇರುಗಳನ್ನು ಖರೀದಿಸಿದ ವಾಲ್ಮಾರ್ಟ್
ಹೊಸದಿಲ್ಲಿ, ಮೇ.9: ಅಮೆರಿಕ ಮೂಲದ ಹೈಪರ್ ಮಾರ್ಕೆಟ್ ದೈತ್ಯ ವಾಲ್ಮಾರ್ಟ್ ಭಾರತೀಯ ಮೂಲದ ಇಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್‌ನ ಶೇ. 77 ಶೇರುಗಳನ್ನು 16 ಬಿಲಿಯನ್ ಡಾಲರ್‌ಗಳಿಗೆ ಖರೀದಿಸಿದೆ.
ಫ್ಲಿಪ್‌ಕಾರ್ಟ್‌ನ ಸಹಸಂಸ್ಥಾಪಕ ಮತ್ತು ಕಾರ್ಯಕಾರಿ ಮುಖ್ಯಸ್ಥ ಸಚಿನ್ ಬನ್ಸಲ್ ತಮ್ಮ ಪಾಲಿನ 5.5% ಶೇರುಗಳನ್ನು ಮಾರಾಟ ಮಾಡುವ ಮೂಲಕ ಸಂಸ್ಥೆಯಿಂದ ಸಂಪೂರ್ಣವಾಗಿ ಹೊರಬಂದಿದ್ದಾರೆ. ಇನ್ನೋರ್ವ ಸಹಸಂಸ್ಥಾಪಕ ಬಿನ್ನಿ ಬನ್ಸಲ್ ತಮ್ಮ ಬಳಿಯಿದ್ದ 5.5% ಶೇರುಗಳ ಪೈಕಿ ಶೇ.10ನ್ನು ಮಾರಾಟ ಮಾಡಿದ್ದಾರೆ. ಫ್ಲಿಪ್‌ಕಾರ್ಟ್‌ನ ನೂತನ ಕಾರ್ಯಕಾರಿ ಮುಖ್ಯಸ್ಥ ಹಾಗೂ ಸಂಸ್ಥೆಯ ಸಿಇಒ ಆಗಿ ಬಿನ್ನಿ ಬನ್ಸಲ್ ಅಧಿಕಾರ ಸ್ವೀಕರಿಸಲಿದ್ದಾರೆ. ಜೊತೆಗೆ ಫ್ಲಿಪ್‌ಕಾರ್ಟ್‌ನ ಸಹಸಂಸ್ಥೆಗಳಾದ ಮಿಂಟ್ರ, ಜಬೋಂಗ್ ಮತ್ತು ಫೋನ್‌ಪೆಯ ನೇತೃತ್ವವನ್ನೂ ಅವರು ಮಾಡಲಿದ್ದಾರೆ. ಈ ಒಪ್ಪಂದದೊಂದಿಗೆ ವಾಲ್ಮಾರ್ಟ್ ಭಾರತದ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುವ ಸೂಚನೆಗಳನ್ನು ನೀಡಿದೆ. ಆದರೆ ಭಾರತೀಯ ಇಕಾಮರ್ಸ್ ಗ್ರಾಹಕರನ್ನು ಅದು ಹೇಗೆ ನಿಭಾಯಿಸಲಿದೆ ಎಂಬ ಬಗ್ಗೆ ಕುತೂಹಲ ಏರ್ಪಟ್ಟಿದೆ.
ಅಮೆರಿಕದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ವ್ಯವಹಾರದಲ್ಲಿ ತೊಡಗಿಕೊಂಡಿರುವ ವಾಲ್ಮಾರ್ಟ್‌ನ ಅನುಭವವು ಭಾರತದಲ್ಲಿ ಅಮೆಝಾನ್ ಇಂಡಿಯಾಗೆ ಪೈಪೋಟಿ ನೀಡಲು ನೆರವಾಗಬಹುದು ಎಂಬ ಮಾತುಗಳು ರಿಟೇಲ್ ವಲಯದಲ್ಲಿ ಕೇಳಿಬರುತ್ತಿವೆ.