ಕೆಪಿಸಿಸಿ ಎನ್ನಾರೈ ವಿಭಾಗದ ಪ್ರಥಮ ಮುಖ್ಯಸ್ಥೆಯಾಗಿ ಡಾ. ಆರತಿ ಕೃಷ್ಣ ಆಯ್ಕೆ
ಹೊಸದಿಲ್ಲಿ, ಮೇ 9: ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆಯ ಸಹಾಯಕ ಮುಖ್ಯಸ್ಥೆಯಾಗಿರುವ ಡಾ. ಆರತಿ ಕೃಷ್ಣ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಎನ್ನಾರೈ ವಿಭಾಗದ ಮುಖ್ಯಸ್ಥೆಯಾಗಿ ನೇಮಕ ಮಾಡಲಾಗಿದೆ.
ಬುಧವಾರ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್‌ರಿಂದ ನೇಮಕ ಪತ್ರವನ್ನು ಪಡೆದುಕೊಂಡ ಆರತಿ ಕೃಷ್ಣ ಅವರು, ಕಾಂಗ್ರೆಸ್ ಪಕ್ಷವನ್ನು ಜಗತ್ತಿನಾದ್ಯಂತ ಇರುವ ಅನಿವಾಸಿ ಭಾರತೀಯರ ಮಧ್ಯೆ ಜನಪ್ರಿಯಗೊಳಿಸುವ ಸಲುವಾಗಿ ಈ ವಿಭಾಗವನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದ ಎನ್ನಾರೈಗಳ ಕಲ್ಯಾಣಕ್ಕಾಗಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾತನಾಡಿದ ಅವರು, ಮೇ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ರಾಜ್ಯದಲ್ಲಿರುವ ತಮ್ಮ ಕುಟುಂಬಿಕರ ಮನವೊಲಿಸುವಂತೆ ಎನ್ನಾರೈಗಳಿಗೆ ಕರೆ ನೀಡಿದ್ದಾರೆ. ಕರ್ನಾಟಕದ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಬೆಗನೆ ರಾಮಯ್ಯ ಅವರ ಪುತ್ರಿಯಾದ ಆರತಿ ಕೃಷ್ಣ ಸುದೀರ್ಘ ಸಮಯದಿಂದ ಕಾಂಗ್ರೆಸ್ ಪಕ್ಷ ಮತ್ತು ಎನ್ನಾರೈಗಳ ಜೊತೆ ಸಂಪರ್ಕವನ್ನು ಹೊಂದಿದ್ದಾರೆ.
ಈ ಹಿಂದೆ ಅವರು ವಾಶಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ ಮತ್ತು ಸಾಗರೋತ್ತರ ಭಾರತೀಯ ವ್ಯವಹಾರ ಸಚಿವಾಲಯದ ಭಾರತ ಅಭಿವೃದ್ಧಿ ಪ್ರತಿಷ್ಠಾನದ ಸಲಹೆಗಾರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಶಿಕ್ಷಣ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಅವರು ಕೃಷ್ಣ ಪ್ರತಿಷ್ಠಾನ ಎಂಬ ಎನ್‌ಜಿಒವನ್ನು ನಡೆಸುತ್ತಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಡಾ. ಆರತಿ ಕೃಷ್ಣ ಜಾರ್ಜ್ ಮೇಸನ್ ವಿಶ್ವವಿದ್ಯಾಲಯದಿಂದ ಅಂತರ್‌ರಾಷ್ಟ್ರೀಯ ವಾಣಿಜ್ಯ ಮತ್ತು ಸಾರ್ವಜನಿಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.