ಮತದಾನಕ್ಕೆ ಇನ್ನೆರಡು ದಿನ ಬಾಕಿ

Update: 2018-05-10 03:54 GMT

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಎರಡು ದಿನ ಬಾಕಿ ಉಳಿದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಈಗಾಗಲೇ ರಾಜ್ಯದಲ್ಲಿ ಹಲವು ಸುತ್ತಿನ ಪ್ರಚಾರ ನಡೆಸಿದ್ದಾರೆ. ಉಳಿದಂತೆ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಗುರುವಾರ ಅಂತಿಮ ಪ್ರಚಾರ ಕೈಗೊಳ್ಳಲಿದ್ದಾರೆ. ಗುರುವಾರ ಸಂಜೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಹೊರಗಿನಿಂದ ಬಂದವರು ಕ್ಷೇತ್ರದಿಂದ ಹೊರಗೆ ಹೋಗಬೇಕಾಗುತ್ತದೆ. ಇದಾದ ಬಳಿಕ ಸ್ಥಳೀಯ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಮತದಾರರ ಮನ ಒಲಿಸಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆ ಘೋಷಣೆಯಾಗುವ ಮುನ್ನವೇ ಇಡೀ ರಾಜ್ಯವನ್ನು ಒಂದು ಬಾರಿ ಸುತ್ತಾಡಿ ಬಂದಿದ್ದಾರೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಈಗಿನ ಚುನಾವಣೆ ಅತ್ಯಂತ ತುರುಸಿನದ್ದಾಗಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾತ್ರವಲ್ಲ ಅಳಿವು ಉಳಿವಿನ ಪ್ರಶ್ನೆಯನ್ನಾಗಿ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ಒಂದು ವಾರ ಕಾಲ ಕರ್ನಾಟಕದ ಸಣ್ಣ ಪುಟ್ಟ ಊರುಗಳನ್ನೂ ಸುತ್ತಾಡಿದರು. ಮೊದಲು ಪ್ರಧಾನ ಮಂತ್ರಿಯ 15 ಸಭೆಗಳನ್ನು ಮಾತ್ರ ನಿಗದಿಪಡಿಸಲಾಗಿತ್ತು. ಆದರೆ ಕೊನೆಯ ಘಳಿಗೆಯಲ್ಲಿ 21 ಸಭೆಗಳನ್ನು ಉದ್ದೇಶಿಸಿ ಅವರು ಮಾತನಾಡಬೇಕಾಯಿತು.

ಪ್ರಧಾನ ಮಂತ್ರಿ ತನ್ನ ಪ್ರವಾಸದಲ್ಲಿ ಒಂದೊಂದು ಕಡೆ ಒಂದೊಂದು ರೀತಿ ಮಾತನಾಡಿದರು. ಅವರ ಮಾತಿನಲ್ಲಿ ತಾಳ ಮೇಳ ಇರಲಿಲ್ಲ. ಜಮಖಂಡಿಗೆ ಹೋದಾಗ ಮುಧೋಳ ನಾಯಿಯ ಕತೆಯನ್ನು ಹೇಳಿದರು. ಆನಂತರ ಧಾರವಾಡಕ್ಕೆ ಬಂದಾಗ ವರಕವಿ ಬೇಂದ್ರೆಯವರ ಹೆಸರನ್ನು ತಪ್ಪು ತಪ್ಪಾಗಿ ಉಚ್ಚರಿಸಿದರು. ಅವರು ‘ಕುರುಡು ಕಾಂಚಾಣ ಕುಣಿಯುತಲಿತ್ತು’ ಪದ್ಯವನ್ನು ತಪ್ಪಾಗಿ ಓದಿದರು. ತಮ್ಮ ಭಾಷಣದಲ್ಲಿ ಅನೇಕ ಕಡೆ ಸುಳ್ಳುಗಳನ್ನು ಹೇಳಿದರು. ಡಾ.ಬಿ.ಆರ್. ಅಂಬೇಡ್ಕರ್‌ರಿಗೆ ಭಾರತ ರತ್ನ ಪ್ರಶಸ್ತಿಯನ್ನು ವಾಜಪೇಯಿ ಸರಕಾರ ಕೊಟ್ಟಿತ್ತು ಎಂದು ಹೇಳಿದರು. ಆದರೆ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು 1990ರಲ್ಲಿ ಕೇಂದ್ರದಲ್ಲಿ ಅಸ್ತಿತ್ವದಲ್ಲಿದ್ದ ವಿ.ಪಿ. ಸಿಂಗ್ ಸರಕಾರ ಕೊಟ್ಟಿತ್ತು. ವಾಜಪೇಯಿ ಸರಕಾರ ಅಸ್ತಿತ್ವಕ್ಕೆ ಬಂದಿದ್ದು 1996ರಲ್ಲಿ. ಇದು ಪ್ರಧಾನಿ ಹೇಳಿದ ಮೊದಲನೇ ಸುಳ್ಳು. ಎರಡನೆಯದಾಗಿ ಪ್ರಥಮ ದಲಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರನ್ನು ತಮ್ಮ ಸರಕಾರ ಆಯ್ಕೆ ಮಾಡಿತು ಎಂದು ಹೇಳಿದರು.

ಆದರೆ ಇದು ಕೂಡಾ ಸುಳ್ಳು. ಭಾರತದ ಮೊದಲ ದಲಿತ ರಾಷ್ಟ್ರಪತಿ ಕೆ.ಆರ್. ನಾರಾಯಣನ್, ರಾಮನಾಥ್ ಕೋವಿಂದ್ ಅಲ್ಲ. ಈ ರೀತಿ ಸುಳ್ಳುಗಳನ್ನು ಹೇಳುತ್ತಾ ಹೋದ ಮೋದಿ, ಉಡುಪಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಹೊಗಳಿದರು. ಆ ನಂತರ ಬೆಂಗಳೂರಿಗೆ ಬಂದಾಗ ದೇವೇಗೌಡರ ಜಾತ್ಯತೀತ ಜನತಾದಳವನ್ನು ಟೀಕಿಸಿದರು. ಹಿಂದೆಲ್ಲಾ ಪ್ರಧಾನಿ ಚುನಾವಣಾ ಪ್ರಚಾರಕ್ಕೆ ಬಂದರೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಇಂತಹ ಮಹಾನಗರಗಳಲ್ಲಿ ಭಾಷಣ ಮಾಡಿ ಹೋಗುತ್ತಿದ್ದರು. ಆದರೆ ಈ ಬಾರಿ ನರೇಂದ್ರ ಮೋದಿ ಕರ್ನಾಟಕದಲ್ಲೇ ತಳವೂರಿದರು. ಸೋಲಿನ ಭೀತಿಯಿಂದ ಹೆದರಿದ ಅವರು, ಸಣ್ಣ ಪುಟ್ಟ ಊರುಗಳಲ್ಲಿ ಭಾಷಣ ಮಾಡಿ ಕನ್ನಡವನ್ನು ತಪ್ಪು ತಪ್ಪಾಗಿ ಉಚ್ಚರಿಸಿ ಅಪಹಾಸ್ಯಕ್ಕೀಡಾದರು.

ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ವೈಯಕ್ತಿಕವಾಗಿ ಟೀಕೆ ಮಾಡಿದರು. ರಾಜ್ಯ ಸರಕಾರವನ್ನು ಟೀಕಿಸಲು ಯಾವ ವಿಷಯಗಳೂ ಅವರಿಗೆ ಸಿಗಲಿಲ್ಲ. ಯಾವುದೇ ಗಂಭೀರ ಸ್ವರೂಪದ ಆರೋಪಗಳೂ ರಾಜ್ಯ ಸರಕಾರದ ಮೇಲಿಲ್ಲ. ಯಾವ ಮಂತ್ರಿಯೂ ಜೈಲಿಗೆ ಹೋಗಿ ಬಂದಿಲ್ಲ. ಅದರ ಬದಲಾಗಿ ಅನ್ನ ಭಾಗ್ಯದಂತಹ ಯೋಜನೆಗಳು ಸರಕಾರಕ್ಕೆ ಒಳ್ಳ್ಳೆಯ ಹೆಸರನ್ನು ತಂದುಕೊಟ್ಟಿವೆ. ರಾಜ್ಯದಲ್ಲಿ ಬರಗಾಲ ಆವರಿಸಿದಾಗಲೂ ಈ ಯೋಜನೆಯಿಂದಾಗಿ ಯಾರೂ ಹಸಿವಿನಿಂದ ಕಂಗಾಲಾಗಲಿಲ್ಲ. ಬೇರೆ ರಾಜ್ಯಕ್ಕೆ ಮೊರೆ ಹೋಗಲಿಲ್ಲ. ಹೀಗಾಗಿ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇರಲಿಲ್ಲ. ಆದರೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದ ಸುಮಾರು 50,000 ಆರೆಸ್ಸೆಸ್ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಕೃತಕ ಆಡಳಿತ ವಿರೋಧಿ ಅಲೆಯನ್ನು ನಿರ್ಮಿಸಲು ಯತ್ನಿಸಿದರು. ಬೂತ್ ಮಟ್ಟದಲ್ಲಿ ಮನೆಮನೆಗೆ ಹೋಗಿ ರಾಜ್ಯ ಸರಕಾರದ ಬಗ್ಗೆ ತಪ್ಪು ಮಾಹಿತಿ ನೀಡಿದರು. ಆದರೂ ಕೂಡ ಅಂತಹ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಲಿಲ್ಲ.

ರಾಜ್ಯದಲ್ಲಿ ಆಡಳಿತ ವಿರೋಧಿ ಕೃತಕ ಅಲೆಯನ್ನು ಸೃಷ್ಟಿ ಮಾಡಲು ಬಿಜೆಪಿ ಸಾಕಷ್ಟು ಹೆಣಗಾಡಿತು. ನೂರಾರು ಕೋಟಿ ರೂ. ವೆಚ್ಚದಲ್ಲಿ ನಿತ್ಯವೂ ಜಾಹೀರಾತುಗಳ ಮೂಲಕ ಸಿದ್ದರಾಮಯ್ಯ ಸರಕಾರದ ವಿರುದ್ಧ ಪ್ರಚಾರ ನಡೆಸಿತು. ಪ್ರಧಾನ ಮಂತ್ರಿ ಕೂಡ ತನ್ನ ಪ್ರಚಾರದಲ್ಲಿ ಸರಕಾರ ಬದಲಿಸಿ ಎಂದು ಘೋಷಣೆ ಹಾಕುತ್ತಲೇ ಇದ್ದರು. ಇದರ ಜೊತೆಗೆ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡು ಕೆಲವು ಕಡೆ ರಾಜಕೀಯ ಎದುರಾಳಿಗಳ ಮೇಲೆ ದಾಳಿ ನಡೆಸಲಾಯಿತು. ಈ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಎಷ್ಟು ಕೆಳಮಟ್ಟಕ್ಕೆ ಹೋದರೆಂದರೆ, ಚಿತ್ರದುರ್ಗದಲ್ಲಿ ಅವರು ಭಾಷಣ ಮಾಡುವಾಗ ಟಿಪ್ಪು ಜಯಂತಿ ಆಚರಿಸಿದ ರಾಜ್ಯ ಸರಕಾರವನ್ನು ಟೀಕಿಸಿದರು. ಟಿಪ್ಪು ಜಯಂತಿ ಬದಲಾಗಿ ಚಿತ್ರದುರ್ಗದ ದೊರೆ ಮದಕರಿ ನಾಯಕ ಮತ್ತು ಒನಕೆ ಓಬವ್ವ ಜಯಂತಿಯನ್ನು ಆಚರಿಸಬೇಕೆಂದು ಹೇಳಿ ಕೋಮು ಭಾವನೆ ಕೆರಳಿಸಲು ಯತ್ನಿಸಿದರು. ಈ ಚುನಾವಣಾ ಪ್ರಚಾರದಲ್ಲಿ ಹಿರಿಯ ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವರು ಅತ್ಯಂತ ಪ್ರಚೋದನಾಕಾರಿಯಾಗಿ ಮಾತನಾಡಿ ಕೋಮು ಹಿಂಸೆಗೆ ಪ್ರಚೋದಿಸಿದರು.

ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆಯವರ ನಾಲಿಗೆ ಲಂಗು ಲಗಾಮಿಲ್ಲದೆ ಎಲ್ಲೆಲ್ಲೂ ಹರಿದಾಡಿತು. ರಾಜ್ಯದ ಮುಖ್ಯಮಂತ್ರಿಗಳನ್ನೇ ಅತ್ಯಂತ ಕೆಟ್ಟ ಭಾಷೆಯಲ್ಲಿ ಅವರು ಟೀಕಿಸಿದರು. ಹೆಗಡೆ ಮಾತ್ರವಲ್ಲದೆ ಇನ್ನೂ ಕೆಲವು ಬಿಜೆಪಿ ನಾಯಕರು ಕೋಮು ಭಾವನೆ ಕೆರಳಿಸುವಂತಹ ಭಾಷಣ ಮಾಡಿದರು. ಆದರೂ ಚುನಾವಣಾ ಆಯೋಗ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣೆಯ ಒಂದು ಹಂತ ಈಗ ಮುಗಿದಂತಾಗಿದೆ. ಇನ್ನು ಮತದಾನ ಮಾತ್ರ ಬಾಕಿ ಉಳಿದಿದೆ. ಇವಿಎಂ ಯಂತ್ರಗಳ ಬಗ್ಗೆ ಜನರಲ್ಲಿ ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲಿ ಇನ್ನೂ ಕೆಲ ಗೊಂದಲಗಳಿವೆ. ಈ ಗೊಂದಲ ನಿವಾರಿಸಲು ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕಾಗಿದೆ. ಈ ಸಂದರ್ಭದಲ್ಲಿ ಯಾವುದೇ ಅನುಮಾನ ಉಂಟಾಗದಂತೆ ಚುನಾವಣಾ ಆಯೋಗ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮತ ಖಾತರಿ ಯಂತ್ರವನ್ನು ಈ ಬಾರಿ ಅಳವಡಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿರುವುದು ಸ್ವಾಗತಾರ್ಹವಾಗಿದೆ. ಈ ಮತ ಖಾತರಿ ಯಂತ್ರಗಳಿಂದಾಗಿ ಮತದಾರರಿಗೆ ತಾವು ಯಾರಿಗೆ ಮತ ಹಾಕುತ್ತೇವೆ ಎಂದು ಸ್ಟಷ್ಟವಾಗಿ ಗೋಚರವಾಗುತ್ತದೆ. ಈ ಹಿನ್ನೆಲೆಯಲ್ಲಿ ಇವಿಎಂ ಯಂತ್ರಗಳ ಬಗ್ಗೆ ಉಂಟಾಗಿರುವ ಗೊಂದಲ ಬಹುತೇಕ ನಿವಾರಣೆಯಾದಂತಿದೆ.

ಚುನಾವಣಾ ಆಯೋಗದ ಇತ್ತೀಚಿನ ವರ್ತನೆ ಕೂಡ ಅನೇಕರ ಟೀಕೆಗೆ ಗುರಿಯಾಗಿದೆ. ದೇಶದ ಎಲ್ಲ ಸ್ವಾಯತ್ತ ಸಂಸ್ಥೆಗಳ ಮೇಲೆ ನರೇಂದ್ರ ಮೋದಿ ಸರಕಾರ ನಿಯಂತ್ರಣ ಸಾಧಿಸುತ್ತಿದೆ ಎಂಬ ದೂರುಗಳೂ ಇವೆ. ಗುಜರಾತ್ ವಿಧಾನಸಭೆ ಚುನಾವಣೆಯ ದಿನಾಂಕ ಪ್ರಕಟನೆಯಲ್ಲಿ ಉಂಟಾದ ವಿಳಂಬ ಕುರಿತಂತೆ ಚುನಾವಣೆ ಆಯೋಗದ ವರ್ತನೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಆಮ್‌ಆದ್ಮಿ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸಿದ ಬಗ್ಗೆ ಚುನಾವಣಾ ಆಯೋಗದ ಕ್ರಮವನ್ನು ದಿಲ್ಲಿ ಹೈಕೋರ್ಟ್ ಇತ್ತೀಚೆಗೆ ರದ್ದು ಮಾಡಿತ್ತು. ಚುನಾವಣಾ ಆಯೋಗ ಈ ಪ್ರಕರಣದಲ್ಲಿ ನ್ಯಾಯ ಸಮ್ಮತವಾಗಿ ವರ್ತಿಸಿಲ್ಲ ಎಂದು, ಸಹಜ ನ್ಯಾಯ ತತ್ವವನ್ನು ಪಾಲಿಸಿಲ್ಲವೆಂದು ತೀವ್ರ ಟೀಕೆಗೆ ಗುರಿಯಾಗಿತ್ತು.

ಕೇಂದ್ರದಲ್ಲಿ ಯಾವುದೇ ಪಕ್ಷದ ಸರಕಾರವಿರಲಿ ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು. ಎಷ್ಟೇ ವಿರೋಧ ಮತ್ತು ಆಕ್ಷೇಪಗಳು ಬಂದರೂ ನಿಯಮಾವಳಿಗಳನ್ನು ಸಡಿಲಗೊಳಿಸಬಾರದು. ಪ್ರಜಾಪ್ರಭುತ್ವದ ಆಶಯಗಳನ್ನು ಕಾಪಾಡಲು ಶ್ರಮಿಸಬೇಕು. ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗ ತನ್ನ ಹಿರಿಮೆ ಮತ್ತು ಗರಿಮೆಯನ್ನು ಉಳಿಸಿಕೊಳ್ಳಬೇಕು. ಕರ್ನಾಟಕ ವಿಧಾನಸಭಾ ಚುನಾವಣೆ ಅದರ ಪಾಲಿಗೆ ಅಗ್ನಿಪರೀಕ್ಷೆಯಾಗಿದೆ. ಇಲ್ಲಿನ ಚುನಾವಣೆಯಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಬೇಕು. ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯ ಭರವಸೆಯನ್ನು ಮೂಡಿಸಬೇಕು. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಿಟ್ಟತನದಿಂದ ನಿರ್ವಹಿಸಬೇಕು.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಎಂಬುದು ಚುನಾವಣಾ ಆಯೋಗದ ಹೊಣೆಗಾರಿಕೆ ಮಾತ್ರವಲ್ಲ. ಎಲ್ಲ ಸಾರ್ವಜನಿಕ ಸಂಘ ಸಂಸ್ಥೆಗಳ ಹೊಣೆಗಾರಿಕೆ ಕೂಡ ಆಗಿದೆ. ಇದರಲ್ಲಿ ಮುಖ್ಯವಾಗಿ ಅನೇಕ ಕಡೆ ತೋಳ್ಬಲಗಳು ಮೇಲುಗೈ ಸಾಧಿಸುತ್ತವೆ. ಅಪರಾಧಿಗಳು, ಗಣಿ ಮಾಫಿಯಾದ ಖಳ ನಾಯಕರು ತಮ್ಮ ಉದ್ಯೋಗ, ದಂಧೆಗಳನ್ನು ಕಾಪಾಡಿಕೊಳ್ಳಲು ರಾಜಕೀಯ ಪ್ರವೇಶಿಸಿ, ಶಾಸಕರಾಗುತ್ತಿರುವ ಈ ದಿನಗಳಲ್ಲಿ ಅನೇಕ ಬಾರಿ ಚುನಾವಣೆಗಳು ನ್ಯಾಯ ಸಮ್ಮತವಾಗಿ ನಡೆಯುವುದಿಲ್ಲ.

ಮಂಗಳವಾರ ಬೆಂಗಳೂರಿನ ಒಂದು ಮನೆಯಲ್ಲಿ 9,000ಕ್ಕೂ ಅಧಿಕ ವೋಟರ್ ಐಡಿಗಳು ದೊರೆತದ್ದು ಈ ನಿಟ್ಟಿನಲ್ಲಿ ಗಮನಾರ್ಹವಾಗಿದೆ. ರಾಜ್ಯದ ಕಾಂಗ್ರೆಸ್ ಆಡಳಿತದ ಮೇಲೆ ಗೂಬೆ ಕೂರಿಸಿ, ಚುನಾವಣೆಯನ್ನು ಮುಂದೂಡಲು ಬಿಜೆಪಿ ಯತ್ನಿಸುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇದರೊಂದಿಗೆ ಜಾತಿ ಧರ್ಮದ ದ್ವೇಷದ ದಳ್ಳುರಿಗೆ ಸಿಕ್ಕಿ ಅಶಾಂತಿಯ ವಾತಾವರಣ ಉಂಟುಮಾಡಲು ಹುನ್ನಾರಗಳು ನಡೆಯುತ್ತಿವೆ. ಇದೆಲ್ಲವನ್ನ್ನೂ ಚುನಾವಣಾ ಆಯೋಗ ದೃಢವಾಗಿ ಎದುರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ಸಾರ್ವಜನಿಕರು ಚುನಾವಣಾ ಆಯೋಗಕ್ಕೆ ಸಹಕಾರ ನೀಡಬೇಕಾಗಿದೆ. ಜಾತಿ ಧರ್ಮದ ಹೆಸರಿನಲ್ಲಿ ಪ್ರಚೋದನೆ ಮಾಡುವವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು. ಮತದಾನ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News