2ನೇ ಶತಮಾನದ ರೋಮನ್ ಸಾಮ್ರಾಜ್ಯದ ದೇವಸ್ಥಾನ ಪತ್ತೆ
Update: 2018-05-10 23:22 IST
ಕೈರೋ (ಈಜಿಪ್ಟ್), ಮೇ 10: ಎರಡನೇ ಶತಮಾನದ ದೇವಸ್ಥಾನವೊಂದರ ಪಳೆಯುಳಿಕೆಗಳನ್ನು ಪುರಾತನಶಾಸ್ತ್ರಜ್ಞರು ಪತ್ತೆಹಚ್ಚಿರುವುದಾಗಿ ಈಜಿಪ್ಟ್ ತಿಳಿಸಿದೆ.
ರೋಮನ್ ಚಕ್ರವರ್ತಿ ಆಂಟೋನಿಯಸ್ ಪಿಯಸ್ ಆಳ್ವಿಕೆಯ ಕಾಲದ ದೇವಸ್ಥಾನವು ಪಶ್ಚಿಮ ಮರುಭೂಮಿಯ ಸಿವಾ ಓಯಸಿಸ್ ಸಮೀಪ ಪತ್ತೆಯಾಗಿದೆ ಎಂದು ಪುರಾತತ್ವ ಸಚಿವಾಲಯ ಗುರುವಾರ ತಿಳಿಸಿದೆ. ಅವಶೇಷಗಳಲ್ಲಿ ಬೃಹತ್ ಕಲ್ಲಿನ ಕಟ್ಟಡದ ಅಡಿಪಾಯಗಳು ಸೇರಿವೆ.
ಐದು ಮೀಟರ್ ಉದ್ದದ ಕಲ್ಲಿನ ಗೋಡೆಯೊಂದರಲ್ಲಿ ಗ್ರೀಕ್ ಶಾಸನಗಳು ಹಾಗೂ ನಾಗರಹಾವುಗಳಿಂದ ಸುತ್ತುವರಿದ ಸೂರ್ಯನ ಚಿತ್ರಗಳಿವೆ ಎಂದು ಪುರಾತತ್ವ ಇಲಾಖೆಯ ಮುಖ್ಯಸ್ಥ ಅಬ್ದುಲ್ ಅಝೀಝ್ ಅಲ್ ಡಿಮೇರಿ ಹೇಳಿದರು.
ದೇವಸ್ಥಾನದ ಪ್ರವೇಶ ದ್ವಾರ ಎಂಬುದಾಗಿ ಪರಿಗಣಿಸಲಾಗಿರುವ ಚಿತ್ರಗಳು ಉತ್ತಮ ಸ್ಥಿತಿಯಲ್ಲಿ ಪತ್ತೆಯಾಗಿವೆ.