ರೊಹಿಂಗ್ಯಾ ಪೀಡಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ

Update: 2018-05-10 17:59 GMT

ವಿಶ್ವಸಂಸ್ಥೆ, ಮೇ 10: ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಸಿದವರನ್ನು ಉತ್ತರದಾಯಿಗಳನ್ನಾಗಿಸುವ ಹಾಗೂ ಸುಮಾರು 7 ಲಕ್ಷ ಮಂದಿ ಬಾಂಗ್ಲಾದೇಶಕ್ಕೆ ಪಲಾಯನಗೈಯಲು ಕಾರಣವಾದ ಅಂಶಗಳಿಗೆ ಪರಿಹಾರ ಕಂಡುಹಿಡಿಯುವ ಬದ್ಧತೆಯನ್ನು ಈಡೇರಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬುಧವಾರ ಮ್ಯಾನ್ಮಾರ್ ಸರಕಾರವನ್ನು ಒತ್ತಾಯಿಸಿದೆ.

ಅದೇ ವೇಳೆ, ಮ್ಯಾನ್ಮಾರ್‌ನಲ್ಲಿ ನಡೆಯಿತೆನ್ನಲಾದ ಮಾನವತೆ ವಿರುದ್ಧದ ಅಪರಾಧದ ಹಿನ್ನೆಲೆಯಲ್ಲಿ ಆ ದೇಶವನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ ಒಯ್ಯುವಂತೆ ನಾಲ್ಕು ಮಾನವಹಕ್ಕು ಗುಂಪುಗಳು ಮಂಗಳವಾರ ಭದ್ರತಾ ಮಂಡಳಿಗೆ ಮನವಿ ಮಾಡಿವೆ.

ಆದರೆ, ತನ್ನ ಪತ್ರಿಕಾ ಹೇಳಿಕೆಯಲ್ಲಿ ಮಂಡಳಿಯು ಈ ಬಗ್ಗೆ ಏನನ್ನೂ ಪ್ರಸ್ತಾಪಿಸಿಲ್ಲ.

ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮ್ಯಾನ್ಮಾರ್ ಸರಕಾರ ಅಸಮರ್ಥವಾಗಿದೆ ಎಂಬುದಾಗಿ ಮಾನವಹಕ್ಕು ಸಂಘಟನೆಗಳಾದ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್, ಹ್ಯೂಮನ್‌ರೈಟ್ಸ್ ವಾಚ್, ಗ್ಲೋಬಲ್ ಸೆಂಟರ್ ಫಾರ್ ದ ರೆಸ್ಪಾನ್ಸಿಬಿಲಿಟಿ ಟು ಪ್ರೊಟೆಕ್ಟ್ ಮತ್ತು ಫೋರ್ಟಿಫೈ ರೈಟ್ಸ್ ಹೇಳಿವೆ.

 ಮಾನವಹಕ್ಕು ಉಲ್ಲಂಘನೆಗಳ ಬಗ್ಗೆ ಪಾರದರ್ಶಕ ತನಿಖೆ ಹಾಗೂ ಸಂತ್ರಸ್ತರಿಗೆ ನ್ಯಾಯ ದೊರಕಿಸುವುದಕ್ಕಾಗಿ ಆ ಕೃತ್ಯಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಅತ್ಯಂತ ಅಗತ್ಯವಾಗಿದೆ ಎಂದು ಭದ್ರತಾ ಮಂಡಳಿಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News