×
Ad

ಉನ್ನಾವೊ: ಬಿಜೆಪಿ ಶಾಸಕನ ವಿರುದ್ಧದ ಅತ್ಯಾಚಾರ ಆರೋಪ ದೃಢಪಡಿಸಿದ ಸಿಬಿಐ

Update: 2018-05-11 09:08 IST

ಹೊಸದಿಲ್ಲಿ, ಮೇ 11: ರಾಜಕೀಯವಾಗಿ ಸೂಕ್ಷ್ಮ ಎನಿಸಿಕೊಂಡಿದ್ದ ಉನ್ನಾವೊ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ವಿರುದ್ಧ ಸಂತ್ರಸ್ತೆ ಮಾಡಿದ್ದ ಆರೋಪವನ್ನು ಸಿಬಿಐ ತನಿಖೆ ದೃಢಪಡಿಸಿದೆ.

ಕಳೆದ ವರ್ಷದ ಜೂನ್ 4ರಂದು ಶಾಸಕ ತನ್ನ ನಿವಾಸದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ಆತನ ಸಹಾಯಕಿ ಶಶಿ ಸಿಂಗ್ ಕೊಠಡಿಯ ಹೊರಗೆ ಕಾವಲು ನಿಂತಿದ್ದರು ಎಂದು ಮಹಿಳೆ ಮಾಡಿರುವ ಆರೋಪ ತನಿಖೆ ವೇಳೆ ದೃಢಪಟ್ಟಿದೆ.

ಉತ್ತರ ಪ್ರದೇಶದ ಬಂಗರ್‌ಮಾವ್ ಕ್ಷೇತ್ರದ ಶಾಸಕನ ವಿರುದ್ಧ ಸಂತ್ರಸ್ತ ಮಹಿಳೆ ಪದೇ ಪದೇ ಆರೋಪ ಮಾಡಿದ್ದರೂ, ಸ್ಥಳೀಯ ಪೊಲೀಸರು, ಶಾಸಕ ಹಾಗೂ ಇತರ ಕೆಲ ಸ್ಥಳೀಯರ ಹೆಸರನ್ನು ಜೂನ್ 20ರಂದು ಮಾಡಿದ ಎಫ್‌ಐಆರ್‌ನಲ್ಲಿ ಅಥವಾ ಬಳಿಕ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಸೇರಿಸಲಿಲ್ಲ ಎಂದು ಸಿಬಿಐ ಮೂಲಗಳು ಖಚಿತಪಡಿಸಿವೆ.

ಸಿಬಿಐ ಈ ಸಂಬಂಧ ಸಂತ್ರಸ್ತೆಯ ಹೇಳಿಕೆಯನ್ನು ಅಪರಾಧ ದಂಡಸಂಹಿತೆಯ ಸೆಕ್ಷನ್ 164ರ ಅನ್ವಯ ಮ್ಯಾಜಿಸ್ಟ್ರೇಟರ ಮುಂದೆ ದಾಖಲಿಸಿಕೊಂಡಿದೆ. ಇದನ್ನು ಪ್ರಕರಣದ ವಿಚಾರಣೆಯಲ್ಲಿ ಪುರಾವೆಯಾಗಿ ಬಳಸಲು ಅವಕಾಶವಿದೆ.

ಯುವತಿಯ ವೈದ್ಯಕೀಯ ತಪಾಸಣೆಯ ವಿಚಾರದಲ್ಲೂ ಪೊಲೀಸರು ವಿಳಂಬ ಮಾಡಿದ್ದು, ಯುವತಿಯ ಯೋನಿಸ್ರಾವ ಮತ್ತು ಬಟ್ಟೆಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲ್ಲ. ಇವೆಲ್ಲವೂ ಉದ್ದೇಶಪೂರ್ವಕ ಹಾಗೂ ಆರೋಪಿಗಳ ಜತೆ ಷಾಮೀಲಾಗಿ ಎಸಗಿದ ಕೃತ್ಯ ಎಂದು ಉನ್ನತ ಮೂಲಗಳು ಹೇಳಿವೆ.

ಸೆಂಗರ್, ಶಶಿ ಸಿಂಗ್ ಹಾಗೂ ಇತರ ಆರೋಪಿಗಳನ್ನು ಸಿಬಿಐ ಏಪ್ರಿಲ್ 13-14ರಂದು ಬಂಧಿಸಿತ್ತು. ಶಾಸಕನನ್ನು ರಕ್ಷಿಸುವ ಸಲುವಾಗಿ ಪೊಲೀಸರು ನಡೆಸಿದ ಹಸ್ತಕ್ಷೇಪದ ಬಗ್ಗೆಯೂ ಸಿಬಿಐ ತನಿಖೆ ನಡೆಸುತ್ತಿದೆ. ಉನ್ನಾವೊ ಅತ್ಯಾಚಾರ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News