ನಿಷೇಧಿತ ನೋಟು ವಾಪಸಾತಿ: ಭಾರತ, ನೇಪಾಳ ಕೇಂದ್ರೀಯ ಬ್ಯಾಂಕ್‌ಗಳ ಮಾತುಕತೆ

Update: 2018-05-12 17:57 GMT

ಕಠ್ಮಂಡು, ಮೇ 12: ನೇಪಾಳಿಗಳ ಬಳಿಯಿರುವ ಭಾರತದ ನಿಷೇಧಿತ ನೋಟುಗಳನ್ನು ವಾಪಸ್ ಮಾಡುವುದಕ್ಕೆ ಸಂಬಂಧಿಸಿದ ತಾಂತ್ರಿಕ ವಿಷಯಗಳ ಬಗ್ಗೆ ಭಾರತ ಮತ್ತು ನೇಪಾಳಗಳ ಕೇಂದ್ರೀಯ ಬ್ಯಾಂಕ್‌ಗಳು ಚರ್ಚೆ ನಡೆಸುತ್ತಿವೆ ಎಂದು ಭಾರತದ ವಿದೇಶ ಕಾರ್ಯದರ್ಶಿ ವಿಜಯ ಗೋಖಲೆ ಇಂದು ಹೇಳಿದ್ದಾರೆ.

ಈ ವಿಷಯವನ್ನು ಪರಿಹರಿಸಲು ಉಭಯ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಯಶಸ್ವಿಯಾಗುತ್ತವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ನೇಪಾಳದ ಬ್ಯಾಂಕ್‌ಗಳು ಮತ್ತು ಜನ ಸಾಮಾನ್ಯರಲ್ಲಿ ಇರುವ ನಿಷೇಧಿತ ಭಾರತೀಯ ನೋಟ್‌ಗಳ ವಿನಿಮಯಕ್ಕೆ ಅವಕಾಶ ನೀಡುವಂತೆ ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಒಲಿ ಭಾರತೀಯ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ ಒಂದು ದಿನದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಗೋಖಲೆ ಈ ವಿಷಯ ತಿಳಿಸಿದರು.

‘‘ನಮ್ಮ ರಿಸರ್ವ್ ಬ್ಯಾಂಕ್ ಮತ್ತು ಅವರ ನೇಪಾಳ ರಾಷ್ಟ್ರ ಬ್ಯಾಂಕ್ ಈ ವಿಷಯದಲ್ಲಿ ಮಾತುಕತೆ ನಡೆಸುತ್ತಿದೆ. ಇದು ತುಂಬಾ ಸಂಕೀರ್ಣ ವಿಷಯ ಹಾಗೂ ನೋಟು ನಿಷೇಧವಾಗಿ ತುಂಬಾ ಸಮಯವಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು’’ ಎಂದು ಅವರು ಹೇಳಿದರು.

2016 ನವೆಂಬರ್ 8ರಂದು 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News