ದಿಲ್ಲಿ ದರ್ಬಾರ್

Update: 2018-05-12 18:34 GMT

ಬಿಪ್ಲವ್ ತಲೆನೋವು
ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್‌ದೇವ್ ಸುತ್ತ ವಿವಾದ ಸುತ್ತಿಕೊಂಡಿದೆ. ಅವರ ಇತ್ತೀಚಿನ ಅವಾಂತರ, ಸಾಹಿತ್ಯ ಕ್ಷೇತ್ರದಲ್ಲಿ ತಮಗೆ ನೀಡಿದ್ದ ನೊಬೆಲ್ ಪ್ರಶಸ್ತಿಯನ್ನು ರವೀಂದ್ರನಾಥ್ ಠಾಗೋರ್ ನಿರಾಕರಿಸಿದ್ದರು ಎನ್ನುವುದು. ಇದು ಸರಿಯಲ್ಲ. ಜಲಿಯನ್‌ವಾಲಾಬಾಗ್ ಹತ್ಯಾಕಾಂಡ ಬಳಿಕ ಠಾಗೋರ್ ನೈಟ್‌ಹುಡ್ ನಿರಾಕರಿಸಿದ್ದರು. ಇಂಥ ಹಲವು ವಿವಾದಗಳಲ್ಲಿ ವಿಪ್ಲವ್ ಸಿಕ್ಕಿಹಾಕಿಕೊಂಡಿದ್ದಾರೆ. ಇದಕ್ಕೂ ಮುನ್ನ ಮಹಾಭಾರತ ಕಾಲದಲ್ಲಿ ಇಂಟರ್‌ನೆಟ್ ಇತ್ತು ಎಂದು ಹೇಳಿಕೆ ನೀಡಿದ್ದರು. ಆ ಬಳಿಕ ಡಯಾನಾ ಹೇಡನ್‌ಗೆ ಮಿಸ್ ವರ್ಲ್ಡ್ ನೀಡಿದ್ದನ್ನು ಪ್ರಶ್ನಿಸಿ, ಬಳಿಕ ಕ್ಷಮೆ ಯಾಚಿಸಿದ್ದರು. ಸಿವಿಲ್ ಎಂಜಿನಿಯರ್‌ಗಳು ಮಾತ್ರ ಸಿವಿಲ್ ಸರ್ವೀಸ್ ಸೇರಬೇಕೇ ವಿನಃ ಮೆಕ್ಯಾನಿಕಲ್ ಎಂಜಿನಿಯರ್‌ಗಳಲ್ಲ ಎಂದು ಹೇಳುವ ಮೂಲಕ ಮತ್ತೆ ಅಪಹಾಸ್ಯಕ್ಕೀಡಾಗಿದ್ದರು. ‘‘ಅವರ ಹೇಳಿಕೆಯನ್ನು ಒಪ್ಪುತ್ತೇನೆ. ಬೆಕ್ಕುಗಳು (ಕ್ಯಾಟ್) ಮಾತ್ರ ಸಿಎಟಿ ಪರೀಕ್ಷೆ ಬರೆಯಬೇಕು. ಗೇಟ್ ಪರೀಕ್ಷೆ ಬರೆಯಲು ಗೇಟ್‌ಕೀಪರ್‌ಗಳಷ್ಟೇ ಅರ್ಹರು’’ ಎಂಬಂಥ ಅಣಕಗಳು ಟ್ವಿಟರ್‌ನಲ್ಲಿ ಹರಿದಾಡುತ್ತಿದ್ದವು. ಹಲವು ಬಿಜೆಪಿ ಮುಖಂಡರು, ಈ ಅನನುಭವಿ ನಾಯಕನಿಂದಾಗಿ ಪಕ್ಷಕ್ಕೆ ಮುಜುಗರವಾಗಿದೆ ಎಂದು ಹೇಳಿದ್ದಾರೆ. ಪಕ್ಷಕ್ಕೆ ರಾಜ್ಯದಲ್ಲಿ ಸೈದ್ಧಾಂತಿಕ ವಿಜಯ ದೊರಕಿದ ಎರಡು ತಿಂಗಳ ಒಳಗಾಗಿ ಇದಕ್ಕೆ ಗ್ರಹಣ ಹಿಡಿದಿದೆ ಎಂದು ಹಲವರು ಹೇಳುತ್ತಾರೆ. ಇಂಥ ಸರಣಿ ಅವಾಂತರಗಳಿಂದಾಗಿ ರಾಷ್ಟ್ರೀಯ ಚಾನೆಲ್‌ಗಳು ಮಾತ್ರ ಅಗರ್ತಲಾದಲ್ಲಿ ಬಾತ್ಮೀದಾರರನ್ನು ನಿಯೋಜಿಸುವ ಅನಿವಾರ್ಯತೆಗೆ ಸಿಲುಕಿವೆ. ಪ್ರಸ್ತುತ ಬಹುತೇಕ ಚಾನಲ್‌ಗಳಿಗೆ ಗುವಾಹಟಿಯಲ್ಲಿ ಒಬ್ಬ ಬಾತ್ಮೀದಾರ ಮಾತ್ರ ಇದ್ದಾರೆ. ಅವರೇ ಇಡೀ ಈಶಾನ್ಯ ರಾಜ್ಯಗಳ ಸುದ್ದಿ ಸಂಗ್ರಹಿಸುತ್ತಾರೆ. ಹೀಗೆ ವಿಚಿತ್ರ ಸೆಲೆಬ್ರಿಟಿಯಾಗಿ ದೇವ್ ಬೆಳೆದಿರುವುದರಿಂದ, ಸುದ್ದಿ ವಾಹಿನಿಗಳ ಮುಖ್ಯಸ್ಥರು ಅಗರ್ತಲಾದಲ್ಲೂ ಬಾತ್ಮೀದಾರರನ್ನು ನಿಯೋಜಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.


ಸಿಬಲ್ ಗೆದ್ದರೇ? ಸೋತರೇ?
ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರಿಗೆ ಸದಾ ಸುದ್ದಿಯಲ್ಲಿರುವುದು ಹೇಗೆ ಎನ್ನುವುದು ಚೆನ್ನಾಗಿ ಗೊತ್ತು. ಪ್ರಮುಖ ಪ್ರಕರಣಗಳಲ್ಲಿ ಅವರು ಗುರುತಿಸಿಕೊಂಡಿರುತ್ತಾರೆ. ಇಂತಹ ಇತ್ತೀಚಿನ ಪ್ರಕರಣವೆಂದರೆ, ಭಾರತದ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧದ ವಾಗ್ದಂಡನೆ ನಿರ್ಣಯ ಪ್ರಯತ್ನ ಮತ್ತು ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು. ಬಳಿಕ ನ್ಯಾಯಾಲಯದಲ್ಲೇ ಆಡಳಿತಾತ್ಮಕ ವಿವಾದಕ್ಕೆ ಇದು ಕಾರಣವಾಗುತ್ತಿದೆ ಎಂದು ಬಣ್ಣಿಸಿ, ಅದನ್ನು ವಾಪಾಸು ಪಡೆದಿದ್ದರು. ಆದರೆ ಇಡೀ ಪ್ರಯತ್ನ ಅನಗತ್ಯ ಹಾಗೂ ಸುಪ್ರೀಂಕೋರ್ಟ್‌ನಲ್ಲಿ ವಿವಾದ ಹುಟ್ಟುಹಾಕಿದ್ದು ಅನಗತ್ಯ ಎಂದು ಜನ ಆಡಿಕೊಳ್ಳುತ್ತಿರುವ ಬಗ್ಗೆ ಅವರು ತಲೆ ಕೆಡಿಸಿಕೊಂಡಂತಿಲ್ಲ. ಸಿಬಲ್ ಇತ್ತೀಚಿನ ದಿನಗಳಲ್ಲಿ ರಾಜ್‌ಕಪೂರ್ ಅವರ ಸಿನೆಮಾದ ಒಂದು ಸಂಭಾಷಣೆಯನ್ನು ಪದೇ ಪದೇ ಹೇಳುವ ಚಾಳಿ ಬೆಳೆಸಿಕೊಂಡಿದ್ದಾರೆ. ಸಮಜ್ನೆವಾಲೆ ಸಮಜ್ ಗಯೇ ಹೈ/ ನಾ ಸಮಜೆ ವಹ್ ಅನಾರಿ ಹೈ (ಯಾರಿಗೆ ಅರ್ಥವಾಗಬೇಕೋ ಅವರಿಗೆ ಅರ್ಥವಾಗಿದೆ ಮತ್ತು ಯಾರಿಗೆ ಅರ್ಥವಾಗಿಲ್ಲವೋ ಅವರು ಮೂಗರು). ಅವರ ಈ ಹೇಳಿಕೆಯ ಅರ್ಥವೇನು ಎನ್ನುವುದು ಪ್ರಶ್ನೆ. ಆದರೆ ಸಿಬಲ್ ಬಹುಶಃ ಎಲ್ಲರಿಗೂ ಅರ್ಥವಾಗಬೇಕು ಎಂದು ಬಯಸಿದ್ದಾರೆ.


ದಿಲ್ಲಿಯಲ್ಲಿ ಹೆಜ್ಜೆ ಗುರುತು ಮೂಡಿಸಿದ ರಾಹುಲ್
ಕರ್ನಾಟಕದಲ್ಲಿ ರಾಹುಲ್ ಪರಿಣಾಮಕಾರಿ ಪ್ರಚಾರ ಮಾಡಿದ್ದಾರೆ ಎನ್ನುವುದು ನಿಸ್ಸಂದೇಹ. ಫಲಿತಾಂಶ ಏನೇ ಬರಲಿ; ಪಕ್ಷದಲ್ಲಿ, ಕನಿಷ್ಠ ದಿಲ್ಲಿಯಲ್ಲಾದರೂ ಎಲ್ಲ ಹಿರಿಯರು ಮತ್ತು ಯುವಮುಖಂಡರು ಅವರ ನಾಯಕತ್ವದ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ಹಳೆ ಬೇರು ಮತ್ತು ಹೊಸ ಚಿಗುರಿನ ನಡುವೆ ಸದಾ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಕೆಲವರು ಹೇಳುತ್ತಾರೆ. ಇದು ಮಿಶ್ರ ಸಂಕೇತವನ್ನೂ ರವಾನಿಸಿದಂತಾಗಿದೆ. ಉದಾಹರಣೆಗೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಪಕ್ಷವನ್ನು ಮುನ್ನಡೆಸುವ ಹೊಣೆಯನ್ನು ಹಿರಿಯ ಮುಖಂಡ ಕಮಲ್‌ನಾಥ್‌ಗೆ ವಹಿಸಿದ್ದು, ಇದು ಹಳೆ ಹುಲಿಗಳಿಗೆ ಸಂತೋಷದ ವಿಷಯ. ಆದರೆ ಉತ್ತರ ಪ್ರದೇಶದಲ್ಲಿ ಯುವ ಮುಖಂಡ ಜಿತಿನ್ ಪ್ರಸಾದ್ ರಾಜ್ಯ ಘಟಕದ ಮುಖ್ಯಸ್ಥರಾಗುತ್ತಾರೆ ಎನ್ನಲಾಗಿದ್ದು, ಇಲ್ಲೂ ಹುಡುಕಾಟ ಮುಂದುವರಿದಿದೆ. ಹರ್ಯಾಣದಲ್ಲಿ ದುರ್ಬಲ ವರ್ಗಕ್ಕೆ ಸೇರಿದ ಕುಮಾರಿ ಶೆಲ್ಜಾ, ರಾಜ್ಯಾಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ದಿಲ್ಲಿಯಲ್ಲಿ ರಾಹುಲ್ ಹಳೆ ಯುದ್ಧಕುದುರೆ ಶೀಲಾ ದೀಕ್ಷಿತ್ ಅವರ ಮೇಲೆಯೇ ವಿಶ್ವಾಸವಿರಿಸುವ ಸಾಧ್ಯತೆ ಹೆಚ್ಚು. ಹೀಗೆ ಹಿರಿಯರು ಮತ್ತು ಕಿರಿಯರ ನಡುವೆ ಸಮತೋಲನ ತರುವ ಮಂತ್ರವನ್ನು ರಾಹುಲ್ ಪಠಿಸುತ್ತಿದ್ದಾರೆ.


ಬಿಜೆಪಿಗೆ ಜಿನ್ನಾ ಇನ್ನೂ ಜೀವಂತ!
ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಮುಹಮ್ಮದ್ ಅಲಿ ಜಿನ್ನಾ ಅವರ ಭಾವಚಿತ್ರ ತೂಗುಹಾಕಿರುವ ಸಂಬಂಧ ಉದ್ಭವಿಸಿರುವ ವಿವಾದ, ಹಲವು ಶೈಕ್ಷಣಿಕ ಚಟುವಟಿಕೆಗಳನ್ನು ಭಗ್ನಗೊಳಿಸಿದೆ. ಜಿನ್ನಾ ಅವರ ಫಲಕಗಳು ಮುಂಬೈ ಹೈಕೋರ್ಟ್ ಹಾಗೂ ಮುಂಬೈ ಕಾಂಗ್ರೆಸ್ ಭವನದಲ್ಲೂ ಇವೆ ಎಂದು ಹಲವು ಪ್ರಾಜ್ಞರು ಬೆಟ್ಟು ಮಾಡುತ್ತಾರೆ. 1886ರಲ್ಲಿ ಜಿನ್ನಾಗೆ ನೀಡಲಾದ ಬ್ರಾರಿಸ್ಟರ್ ಪ್ರಮಾಣಪತ್ರ, ಮುಂಬೈ ಹೈಕೋರ್ಟ್ ನ ಮ್ಯೂಸಿಯಂನಲ್ಲಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಕೋರ್ಟ್‌ಗೆ ಕೊಡುಗೆ ನೀಡಿದ ಮಹಾತ್ಮಾಗಾಂಧಿಯವರ ದಾಖಲೆಯ ಪಕ್ಕದಲ್ಲೇ ಇದನ್ನೂ ಇಡಲಾಗಿದೆ. ಕಾಕತಾಳೀಯವೆಂದರೆ, ಮುಹಮ್ಮದ್ ಅಲಿ ಜಿನ್ನಾ 1916ರಲ್ಲಿ ಬಾಲಗಂಗಾಧರ ತಿಲಕ್ ಪರವಾಗಿ ವಾದಿಸಿ, ತಿಲಕರ ಪರವಾಗಿ ನ್ಯಾಯಾಧೀಶರು ತೀರ್ಪು ನೀಡುವಂತೆ ಮನವೊಲಿಸಿದ್ದರು. ಮುಂಬೈ ಲ್ಯಾಮಿಂಗ್ಟನ್ ರಸ್ತೆಯ ಹಳೆ ಕಾಂಗ್ರೆಸ್ ಕಚೇರಿಯಲ್ಲಿ ಒಂದು ಹಜಾರಕ್ಕೆ ಜಿನ್ನಾ ಅವರ ಹೆಸರು ಇಡಲಾಗಿದೆ. ಅಂದಿನ ಸಾಮ್ರಾಜ್ಯಶಾಹಿ ಗವರ್ನರ್ ಲಾರ್ಡ್ ವೆಲ್ಲಿಂಗ್ಟನ್ ವಿರುದ್ಧ ಜಿನ್ನಾ ಹಾಗೂ ಅವರ ಪತ್ನಿಯ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯ ನೆನಪಿಗಾಗಿ ಈ ಹೆಸರು ಇಡಲಾಗಿದೆ. ಅಷ್ಟಕ್ಕೇ ಮುಗಿದಿಲ್ಲ. 1948ರ ಡಿಸೆಂಬರ್‌ನಲ್ಲಿ, ಕೋಮುಜ್ವಾಲೆಯ ಕಾವು ಇನ್ನೂ ದೇಶವನ್ನು ಆವರಿಸಿರುವ ಸಂದರ್ಭದಲ್ಲಿ ಕೂಡಾ, ಅಗಲಿದ ಕೈದೆ ಅಝಮ್ ಅವರಿಗೆ ಸಂವಿಧಾನ ರಚನಾಸಭೆ ಶ್ರದ್ಧಾಂಜಲಿ ಸಮರ್ಪಿಸಿದಾಗ ಕೂಡಾ ಪ್ರತಿಭಟನೆಯ ಸೊಲ್ಲು ಎದ್ದಿರಲಿಲ್ಲ. ಬಹುಶಃ ದಿಲ್ಲಿ ಮತ್ತು ಇತರೆಡೆಗಳ ಪ್ರಾಜ್ಞರು ಅಭಿಪ್ರಾಯಪಡುವಂತೆ, ಆಧುನಿಕ ಭಾರತದಲ್ಲಿ ಜಿನ್ನಾ ಹಾಗೂ ಇತರ ಸಮಸ್ಯೆಗಳನ್ನು ಹೆಚ್ಚು ಮಹತ್ವದ್ದು ಎಂದು ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ.


ಅಮಿತ್ ಶಾ ಸದಾ ಚುನಾವಣಾ ಸನ್ನದ್ಧ
ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಏನೇ ಬರಲಿ; ಅಮಿತ್ ಶಾ ದೃಷ್ಟಿ ಬಹುಶಃ ಮುಂದೆ ನೆಟ್ಟಿದೆ. ಬಿಜೆಪಿ ಕೇಂದ್ರ ಕಚೇರಿಯ ವಿದ್ಯಮಾನಗಳ ಬಗ್ಗೆ ಕೇಳುವವರಲ್ಲಿ ಇಂಥ ಮುದ್ರೆಯೊತ್ತಿರುವುದು ಸ್ಪಷ್ಟ. ಮುಂಬರುವ ಚುನಾವಣೆಗಳ ಸಿದ್ಧತೆಗಳ ಬಗ್ಗೆ ಚರ್ಚಿಸಲು ಬಿಜೆಪಿ ಅಧ್ಯಕ್ಷರು ಎಲ್ಲ ಪದಾಧಿಕಾರಿಗಳ ಸಭೆ ಕರೆದಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಈ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ಸಭೆ ಈ ತಿಂಗಳ 17ರಂದು ನಡೆಯಲಿದೆ. ಮುಂದೆ ಚುನಾವಣೆ ನಡೆಯುವ ರಾಜ್ಯಗಳ ಜನರನ್ನು ತಲುಪುವ ಮಾರ್ಗೋಪಾಯಗಳ ಬಗ್ಗೆ ಈ ಸಭೆ ಚರ್ಚಿಸಲಿದೆ ಎಂದು ತಿಳಿದುಬಂದಿದೆ. ರಾಹುಲ್‌ಗಾಂಧಿ ಕರ್ನಾಟಕ ಚುನಾವಣೆ ಮುಗಿದ ತಕ್ಷಣ ಕೈಲಾಸ ಮಾನಸ ಸರೋವರಕ್ಕೆ ಯಾತ್ರೆ ಹೊರಡಲು ನಿರ್ಧರಿಸಿದ್ದಾರೆ. ಆದರೆ ಶಾ ಅವರಿಗೆ ರಾಜಕೀಯ ಮತ್ತು ಚುನಾವಣೆಯ ಸಾಗರದಲ್ಲಿ ಈಜಲೇಬೇಕಾದ ಅನಿವಾರ್ಯತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News