ಗೋರಖ್‌ಪುರ ಆಸ್ಪತ್ರೆ ದುರಂತದ ದುರಂತ ನಾಯಕ

Update: 2018-05-14 07:07 GMT

ಭಾಗ - 1

2017ರ ಸೆಪ್ಟಂಬರ್ 2ರಿಂದ ಗೋರಖ್‌ಪುರ ಜೈಲಿನಲ್ಲಿ ಇರುವ ಡಾ.ಕಫೀಲ್ ಖಾನ್, ಉನ್ನತ ಮಟ್ಟದಲ್ಲಿ ನಡೆದ ‘ಆಡಳಿತಾತ್ಮಕ ವೈಫಲ್ಯ‘ವನ್ನು ಮುಚ್ಚಿ ಹಾಕುವುದಕ್ಕಾಗಿ ತನ್ನನ್ನು ಹಾಗೂ ಇತರರನ್ನು ‘ಬಲಿಪಶು‘ಗಳನ್ನಾಗಿ ಮಾಡಲಾಗುತ್ತಿದೆ ಎಂದು ತನ್ನ ಪತ್ರದಲ್ಲಿ ಹೇಳಿದ್ದಾರೆ.

ಕಳೆದ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಗೋರಖ್‌ಪುರ ಆಸ್ಪತ್ರೆ ದುರಂತದಲ್ಲಿ ಹಲವಾರು ಮಕ್ಕಳ ಪ್ರಾಣ ಉಳಿಸಿದವರು ಡಾ.ಕಫೀಲ್‌ಖಾನ್. ಆಮ್ಲಜನಕ ಸಿಲಿಂಡರ್ ಕೊರತೆಯಿಂದಾಗಿ ಆ ದುರಂತದಲ್ಲಿ ಐದು ದಿನಗಳ ಅವಧಿಯಲ್ಲಿ 63 ಮಕ್ಕಳು ಮೃತಪಟ್ಟಿದ್ದವು. ಡಾ.ಖಾನ್ ಕಳೆದ ಏಳು ತಿಂಗಳುಗಳಿಂದ, ಜಾಮೀನು ಪಡೆಯಲಾಗದೆ, ಜೈಲಿನಲ್ಲಿದ್ದಾರೆ. ಜೈಲು ಕೋಣೆಯಿಂದ ಅವರು ಮನಕರಗುವಂತಹ ಒಂದು ಪತ್ರ ಬರೆದಿದ್ದಾರೆ. ಗೋರಖ್‌ಪುರ ದುರಂತದ ವೇಳೆ ಬಾಬಾ ರಾಘವ್‌ದಾಸ್ (ಬಿಆರ್‌ಡಿ) ವೈದ್ಯಕೀಯ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಖಾನ್ ಅವರನ್ನು ಸಾಧ್ಯವಾದಷ್ಟು ಮಕ್ಕಳ ಪ್ರಾಣ ಉಳಿಸಿದ ಓರ್ವ ನಾಯಕನೆಂದು ಜನ ಹೊಗಳಿದ್ದರು.

ಡಾ.ಕಫೀಲ್‌ಖಾನ್ ಮೆದುಳಿನ ಉರಿಯೂತ ವಾರ್ಡ್‌ನ ಮುಖ್ಯಸ್ಥ ಹಾಗೂ ಮಕ್ಕಳತಜ್ಞ. ಅವರು, ದುರಂತದ ಮಧ್ಯೆಯೂ ಹಲವಾರು ಮಕ್ಕಳ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ಪರಿಶ್ರಮ ಇಲ್ಲವಾಗಿದ್ದಲ್ಲಿ, ಸಾವುಗಳ ಸಂಖ್ಯೆ ಇನ್ನೂ ಹೆಚ್ಚುತ್ತಿತ್ತು ಎಂದು ಆಸ್ಪತ್ರೆಯಲ್ಲಿದ್ದ ಮಕ್ಕಳ ಪೋಷಕರು ಹೇಳಿದ್ದರು. ಆಗಸ್ಟ್ 10ರ ರಾತ್ರಿ ಕಾಲೇಜಿನ ಆವರಣದಲ್ಲಿದ್ದ ಮುಖ್ಯ ಆಮ್ಲಜನಕದ ಪೈಪ್‌ಲೈನ್ ‘ಬೀಪ್’ ಸದ್ದು ಮಾಡತೊಡಗಿತು. ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತಿರುವುದರ ಸಂಕೇತವಾಗಿತ್ತು ಅದು. ಎಮರ್ಜೆನ್ಸಿ ಸಿಲಿಂಡರ್‌ಗಳ ಮೂಲಕ ಆಮ್ಲಜನಕದ ಪೂರೈಕೆಯನ್ನು ಉಳಿಸಿಕೊಳ್ಳಬಹುದು ಎಂದು ವೈದ್ಯರಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ತಿಳಿದಿತ್ತು; ಆದರೆ ಇದು ಕೇವಲ ಎರಡು ಗಂಟೆಗಳವರೆಗೆ ಮಾತ್ರ. ಆ ಬಳಿಕ ಏನು ಮಾಡಬೇಕೆಂದು ಅವರಿಗೆ ಗೊತ್ತಿರಲಿಲ್ಲ. ಮಿದುಳುಜ್ವರದಿಂದ ಬದುಕುತ್ತಿದ್ದವರನ್ನು ಉಳಿಸಲು ಏಕೈಕ ಮಾರ್ಗವೆಂದರೆ, ಗಂಭೀರ ಸ್ಥಿತಿಯಲ್ಲಿರುವ ಮಕ್ಕಳಿಗೆ ತಡೆರಹಿತ ಆಮ್ಲಜನಕದ ಪೂರೈಕೆ ಎಂದು ಡಾ.ಖಾನ್ ಅವರಿಗೆ ತಿಳಿದಿತ್ತು. ಕೆಲವು ಆಮ್ಲಜನಕ ಪೂರೈಕೆದಾರರಿಗೆ ಫೋನ್ ಮಾಡಿದಾಗ ತಮಗೆ ಬಾಕಿಯಿರುವ ಮೊತ್ತಗಳನ್ನು ಪಾವತಿಸಿದ ಮೇಲಷ್ಟೇ ತಾವು ಫ್ರೆಶ್ ಸಿಲಿಂಡರ್‌ಗಳನ್ನು ಕಳುಹಿಸುತ್ತೇವೆಂದು ಪೂರೈಕೆದಾರರು ಕೂಡ ಸಿಲಿಂಡರ್ ಕಳುಹಿಸಲು ನಿರಾಕರಿಸಿದಾಗ ಆಸ್ಪತ್ರೆಯಲ್ಲಿ ದಿಗಿಲು ಇನ್ನಷ್ಟು ಹೆಚ್ಚಿತು. ಆದರೂ ಡಾ.ಖಾನ್ ಭರವಸೆ ಕಳೆದುಕೊಳ್ಳಲಿಲ್ಲ. ಅವರು ತನ್ನ ಕಾರಿನಲ್ಲಿ ಆಸ್ಪತ್ರೆಯ ಇಬ್ಬರು ನೌಕರರ ಜತೆ ತನ್ನ ಗೆಳೆಯನ ಖಾಸಗಿ ನರ್ಸಿಂಗ್ ಹೋಮ್‌ಗೆ ತೆರಳಿ ಮೂರು ಆಕ್ಸಿಜನ್ ಸಿಲಿಂಡರ್‌ಗಳನ್ನು ಎರವಲು ತಂದರು.

ಆಸ್ಪತ್ರೆಯಿಂದ ಹೊರಡುವ ಮೊದಲು, ಪ್ರಮುಖ ಪೈಪ್‌ಲೈನ್‌ನಲ್ಲಿ ಆಕ್ಸಿಜನ್ ಪೂರೈಕೆ ಇನ್ನಷ್ಟು ಕಡಿಮೆಯಾದಲ್ಲಿ, ಆ್ಯಂಬುಬ್ಯಾಗ್‌ಗಳನ್ನು ಪಂಪ್ ಮಾಡುತ್ತಿರಬೇಕೆಂದು ಕರ್ತವ್ಯನಿರತ ಕಿರಿಯ ವೈದ್ಯರಿಗೆ ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಗೆ ಡಾ.ಖಾನ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ತನ್ನ ಕಾರಿನಲ್ಲಿ ಮೂರು ಸಿಲಿಂಡರ್‌ಗಳನ್ನು ಲೋಡ್ ಮಾಡಿ ಅವರು ಆಸ್ಪತ್ರೆಗೆ ಧಾವಿಸಿದರು. ಆದರೆ ಆ ಸಿಲಿಂಡರ್‌ಗಳಿಂದ ಮುಖ್ಯಪೈಪ್‌ಲೈನ್‌ಮೂಲಕ ಕೇವಲ ಅರ್ಧಗಂಟೆಗಳಿಗಷ್ಟೇ ಆಕ್ಸಿಜನ್ ಸರಬರಾಜು ಮಾಡಲು ಸಾಧ್ಯವಾಯಿತು. ಡಾ.ಖಾನ್ ಪುನಃ ಆಸ್ಪತ್ರೆಯಿಂದ ಹೊರಟು ಕೊನೆಗೆ, ಪರಿಚಯವಿದ್ದ ಇತರ ನರ್ಸಿಂಗ್ ಹೋಮ್‌ಗಳಿಗೆ ಧಾವಿಸಿ 12 ಸಿಲಿಂಡರ್‌ಗಳನ್ನು ಸಂಗ್ರಹಿಸಿದರು. ಇವುಗಳನ್ನು ತನ್ನ ವಾರ್ಡ್‌ನಲ್ಲಿ ಇರುವ ಮಕ್ಕಳಿಗೆ ತಲುಪಿಸಲು ಡಾ.ಖಾನ್ ನಾಲ್ಕು ಬಾರಿ ಆಸ್ಪತ್ರೆಗೆ ಮರಳಿದಾಗ ಸ್ಥಳೀಯ ಪೂರೈಕೆದಾರನೊಬ್ಬ ನಗದು ಪಾವತಿಸಿದರೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಪೂರೈಸಲು ಸಿದ್ಧನಿದ್ದಾನೆಂದು ತಿಳಿದುಬಂತು. ಡಾ.ಖಾನ್ ತನ್ನ ಎಟಿಎಂ ಕಾರ್ಡ್‌ನ್ನುಆಸ್ಪತ್ರೆಯ ನೌಕರನೊಬ್ಬನಿಗೆ ಕೊಟ್ಟು 10,000 ರೂ. ವಿದ್‌ಡ್ರಾ ಮಾಡಿಸಿ ಸಿಲಿಂಡರ್‌ಗಳನ್ನು ತರಿಸಿದರು.

ಫೈಜಾಬಾದ್‌ನಿಂದ ಆ ಸಿಲಿಂಡರ್‌ಗಳನ್ನು ತಂದ ಟ್ರಕ್ ಚಾಲಕನಿಗೆ, ಇತರ ಖರ್ಚುಗಳ ಬಾಬ್ತು ಮತ್ತು ಡೀಸೆಲ್ ಬಾಬ್ತು ಕೂಡ ಅವರೇ ಹಣ ಪಾವತಿ ಮಾಡಿದರು. ಹೀಗೆ ‘ತನ್ನ ಪ್ರಯತ್ನಗಳ ಹಾಗೂ ಪ್ರಸಂಗಾವಧಾನತೆಯ ಮೂಲಕ ಡಾ.ಖಾನ್ ಹಲವು ಜೀವಗಳನ್ನು ಉಳಿಸಿದರು’ ಎಂದಿದ್ದಾರೆ, ಓರ್ವ ಪ್ರತ್ಯಕ್ಷದರ್ಶಿ ಗೌರವ್ ತ್ರಿಪಾಠಿ. ಆದರೂ, ಆಡಳಿತದ (ಸರಕಾರದ) ದೃಷ್ಟಿಯಲ್ಲಿ ಇದ್ಯಾವುದೂ ಡಾ.ಖಾನ್ ಅವರನ್ನು ಒಬ್ಬ ಹೀರೋ ಆಗಿ ಮಾಡಲಿಲ್ಲ. ಕ್ರಿಮಿನಲ್ ಒಳಸಂಚು, ಮಾನವ ಹತ್ಯೆಗೆ ಪ್ರಯತ್ನ ಮತ್ತು ಸರಕಾರಿ ನೌಕರನೊಬ್ಬನಿಂದ ವಿಶ್ವಾಸದ್ರೋಹ ಎಂಬ ಆಪಾದನೆಗಳನ್ನು ಡಾ.ಖಾನ್ ಮೇಲೆ ಹೊರಿಸಿ, 2017ರ ನವೆಂಬರ್‌ನಲ್ಲಿ ಪೊಲೀಸರು ಅವರ ವಿರುದ್ಧ ಆಪಾದನಾಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದರು.

2017ರ ಸೆಪ್ಟಂಬರ್ 2ರಿಂದ ಗೋರಖ್‌ಪುರ ಜೈಲಿನಲ್ಲಿ ಇರುವ ಡಾ.ಕಫೀಲ್ ಖಾನ್, ಉನ್ನತ ಮಟ್ಟದಲ್ಲಿ ನಡೆದ ‘ಆಡಳಿತಾತ್ಮಕ ವೈಫಲ್ಯ‘ವನ್ನು ಮುಚ್ಚಿ ಹಾಕುವುದಕ್ಕಾಗಿ ತನ್ನನ್ನು ಹಾಗೂ ಇತರರನ್ನು ‘ಬಲಿಪಶು‘ಗಳನ್ನಾಗಿ ಮಾಡಲಾಗುತ್ತಿದೆ ಎಂದು ತನ್ನ ಪತ್ರದಲ್ಲಿ ಹೇಳಿದ್ದಾರೆ.
ಎಪ್ರಿಲ್ 18ನೇ ತಾರೀಕಿನಂದು ಡಾ.ಖಾನ್ ಜೈಲಿನಿಂದ ಬರೆದ ಮತ್ತು ಇತ್ತೀಚೆಗೆ ಅವರ ಪತ್ನಿ ಭಾರತದ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆ ಮಾಡಿದ ಪತ್ರದಲ್ಲಿ ಡಾ.ಖಾನ್ ಆಗಸ್ಟ್ 10ರಂದು ತಾನು ತನಗೆ ಮಂಜೂರಾದ ರಜೆಯ ಮೇಲೆ ತೆರಳಿದ್ದೆನೆಂದೂ ದುರಂತದ ಸುದ್ದು ತನಗೆ ತಿಳಿದ ಕೂಡಲೇ ಆಸ್ಪತ್ರೆಗೆ ‘ಧಾವಿಸಿದೆ’ನೆಂದೂ ಬರೆದಿದ್ದಾರೆ.

‘ತಪ್ಪಿತಸ್ಥರು ಗೋರಖ್‌ಪುರದ ಡಿಎಂ, ಡಿಜಿಎಂಇ (ಡೈರೆಕ್ಟರ್ ಜನರಲ್ ಆಫ್ ಮೆಡಿಕಲ್ ಎಜುಕೇಶನ್) ಮತ್ತು ಮುಖ್ಯ ಕಾರ್ಯದರ್ಶಿ (ಆರೋಗ್ಯ ಶಿಕ್ಷಣ) ಪುಷ್ಪಾ ಸೇಲ್ಸ್ ತನಗೆ ಬರಲು ಬಾಕಿ ಇದ್ದ 68 ಲಕ್ಷ ರೂ.ನ್ನು ಪಾವತಿಸುವಂತೆ 14 ಜ್ಞಾಪನಾಪತ್ರಗಳನ್ನು ಬರೆದಿದ್ದರೂ ಇವರು ಆ ಯಾವ ಪತ್ರಕ್ಕೂ ಪ್ರತಿಕ್ರಿಯಿಸಿರಲಿಲ್ಲ. ಅದು ಉನ್ನತ ಮಟ್ಟದಲ್ಲಿ ಆದ ಒಂದು ಸಂಪೂರ್ಣವಾದ ಆಡಳಿತಾತ್ಮಕ ವೈಫಲ್ಯ. ಅವರು ಪರಿಸ್ಥಿತಿಯ ಗಂಭೀರತೆಯನ್ನು ಮನಗಾಣಲಿಲ್ಲ ಮತ್ತು ಕೇವಲ ತಮ್ಮನ್ನು ಉಳಿಸಿಕೊಳ್ಳಲಿಕ್ಕಾಗಿ ನಮ್ಮನ್ನು ಬಲಿಪಶುಗಳನ್ನಾಗಿ ಮಾಡಿದರು. ಮತ್ತು ನಮ್ಮನ್ನು ಜೈಲಿಗೆ ತಳ್ಳಿದರು ಎಂದು ಡಾ.ಖಾನ್ ಬರೆದಿದ್ದಾರೆ.

ದುರಂತ ನಡೆದ ಮರುದಿನ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದಾಗ ತನ್ನ ಬದುಕು ‘ತಲೆಕೆಳಗಾಯಿತು’ ಎನ್ನುತ್ತಾರೆ ಡಾ.ಖಾನ್. ‘ಅವರು (ಮುಖ್ಯಮಂತ್ರಿ) ಕೇಳಿದರು. ‘ಡಾ.ಕಫೀಕ್‌ಖಾನ್ ಅಂದರೆ ನೀವೆಯಾ? ಸಿಲಿಂಡರ್‌ಗಳನ್ನು ತರುವ ವ್ಯವಸ್ಥೆಯನ್ನು ಮಾಡಿದ್ದು ನೀವೇ ಅಲ್ಲವಾ?’ ‘ಹೌದು, ನಾನೇ ಸರ್’. ಅವರು ಸಿಟ್ಟಾದರು. ‘‘ಸಿಲಿಂಡರ್‌ಗಳನ್ನು ತರಿಸಿ ನೀವು ಹೀರೋ ಆದಿರಿ ಎಂದು ತಿಳಿಸಿದಿರಿ. ನಾನು ನೋಡಿಕೊಳ್ಳುತ್ತೇನೆ’’. ಯೋಗಿಜೀ ಈ ಘಟನೆ ಮಾಧ್ಯಮಕ್ಕೆ ಹೇಗೆ ತಿಳಿಯಿತು ಎಂಬ ಬಗ್ಗೆ ಸಿಟ್ಟಾಗಿದ್ದರು. ತಾನು ‘ರಾತ್ರಿ ಯಾರಿಗೂ ತಿಳಿಸಿರಲಿಲ್ಲ’. ಆದರೆ ಅವರು ಆಸ್ಪತ್ರೆಗೆ ಬರುವಷ್ಟರಲ್ಲಿ ‘ಮಾಧ್ಯಮದ ಮಂದಿ ಅದಾಗಲೇ ಇದ್ದರು’ ಎಂದು ಅವರು ಕುಪಿತರಾದರು. ಆ ಬಳಿಕ ಡಾ.ಖಾನ್ ಅವರ ಕುಟುಂಬದ ‘ಬೆನ್ನಟ್ಟಿ’ ಅವರಿಗೆ ‘ಚಿತ್ರಹಿಂಸೆ ನೀಡಲಾಯಿತು’. ತಾನು ಪೊಲೀಸರಿಗೆ ಶರಣಾಗುವಂತೆ ಬಲ ಪ್ರಯೋಗಿಸಲಾಯಿತು ಎಂದಿದ್ದಾರೆ ಖಾನ್.

(ಮುಂದುವರಿಯುವುದು..)

ಕೃಪೆ: Countercurrents.org

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News