×
Ad

ಸ್ಥಿರ ಆಡಳಿತದತ್ತ ಯಾರ ಚಿತ್ತ?

Update: 2018-05-14 00:23 IST

ಸಿದ್ದರಾಮಯ್ಯ ನೇತೃತ್ವದ ಸರಕಾರ ಸುಮಾರು ನಾಲ್ಕು ದಶಕಗಳ ನಂತರ ಸಂಪೂರ್ಣ ಅವಧಿ ಮುಗಿಸಿರುವ ಏಕೈಕ ಸರಕಾರ ಹಾಗೂ ಏಕೈಕ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಸಿದ್ದರಾಮಯ್ಯರಿಗೆ ಇದೆ. ಅನ್ನಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್ ಹೀಗೆ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿ ಇದು ಬಡವರ ಪರವಾದ ಸರಕಾರ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.

ಕರ್ನಾಟಕ ಹೊರತಾಗಿಯೂ ಬೇರೆ ಬೇರೆ ರಾಜ್ಯಗಳ, ವಿವಿಧ ಪಕ್ಷಗಳ ಒಟ್ಟಾರೆ ಇಡೀ ದೇಶದ ಚಿತ್ತ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದತ್ತ ನೆಟ್ಟಿದೆ. ಕಾರಣ, ಕರ್ನಾಟಕ ಚುನಾವಣೆಯ ಪ್ರಕ್ರಿಯೆ ಪೂರ್ಣಗೊಂಡ ಸರಿ ಸುಮಾರು ಒಂದು ವರ್ಷಗಳ ನಂತರ ದೇಶದ ಲೋಕಸಭಾ ಚುನಾವಣೆ ಎದುರಾಗಲಿದೆ. ಅದಕ್ಕಾಗಿ ಎಲ್ಲಾ ಪಕ್ಷಗಳಲ್ಲಿಯೂ ತಯಾರಿ ಈಗಿನಿಂದಲೇ ಶುರುವಾಗಲಿದೆ. ಆಗ ನಡೆಯುವ ಲೋಕಸಭಾ ಚುನಾವಣೆಯ ದಿಕ್ಕನ್ನು ಕರ್ನಾಟಕದ ಚುನಾವಣೆ ತೋರಿಸಬಲ್ಲದು ಎಂಬ ನಂಬಿಕೆಯಿದೆ. ಇನ್ನು ಕರ್ನಾಟಕದ ವಿಷಯಕ್ಕೆ ಬರುವುದಾದರೆ ತಾನೂ ಯಾರಿಗೇನೂ ಕಮ್ಮಿಯಿಲ್ಲವೆನ್ನುವಂತೆ ಮೂರು ಪ್ರಮುಖ ಪಕ್ಷಗಳಾದ ಬಿ.ಜೆ.ಪಿ, ಜೆ.ಡಿ.ಎಸ್, ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣಾ ಪೈಪೋಟಿ ನಡೆಸಿದ್ದವು. ಮೊದಲನೆಯದಾಗಿ ಬಿಜೆಪಿಯ ಬಗ್ಗೆ ಹೇಳುವುದಾದರೆ ಸರಿ ಸುಮಾರು ಎರಡು ವರ್ಷಗಳ ಹಿಂದೆ ಏಪ್ರಿಲ್ ತಿಂಗಳಿನಲ್ಲಿ ಸಂಸದರಾಗಿದ್ದ ಬಿ.ಎಸ್. ಯಡಿಯೂರಪ್ಪ ಪಕ್ಷದ ರಾಜ್ಯಾಧ್ಯಕ್ಷ ಪಟ್ಟವನ್ನು ಅಲಂಕರಿಸಿದರು. ಇವರು ರಾಜ್ಯಾಧ್ಯಕ್ಷರಾದ ಬಳಿಕ ಕರ್ನಾಟಕದ ಬಿಜೆಪಿಯಲ್ಲಿ ಮಿಂಚಿನ ಸಂಚಲನವುಂಟಾಗಿದ್ದು ನಿಜ. ಹಾಗೆಯೇ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಭರವಸೆಯನ್ನೂ ಬಹುಶಃ ಯಡಿಯೂರಪ್ಪ್ಪ ಮೂಡಿಸಿದರು. ಆಗ ಬಿಜೆಪಿ. ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಂಡಿತು.

ಆದರೆ ಬಿಜೆಪಿ-ಕೆಜೆಪಿ ಪಕ್ಷಗಳು ಮೇಲ್ನೋಟಕ್ಕೆ ವಿಲೀನವಾದರೂ ಪಕ್ಷದ ನಾಯಕರುಗಳ ಮನಸ್ಸುಗಳು ವಿಲೀನವಾಗಲಿಲ್ಲ. ಕಳೆದ ಚುನಾವಣೆಯಲ್ಲಿ ಈಶ್ವರಪ್ಪರಸೋಲಿಗೆ ಪ್ರಮುಖ ಕಾರಣವಾಗಿದ್ದ ರುದ್ರೇಶ್‌ಗೌಡರನ್ನು ಶಿವಮೊಗ್ಗ ನಗರದ ಬಿಜೆಪಿಯ ಜಿಲ್ಲಾಧ್ಯಕ್ಷರನ್ನಾಗಿ ಮಾಡಿ ಯಡಿಯೂರಪ್ಪ್ಪ ಈಶ್ವರಪ್ಪರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬೆಳವಣಿಗೆಯಿಂದಾಗಿ ಸ್ವತಃ ಈಶ್ವರಪ್ಪರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಇದ್ದ ಅಸ್ತಿತ್ವವೇ ಅಲುಗಾಡುವಂತಾಯಿತು ಇದರಿಂದ ಆಕ್ರೋಶಗೊಂಡ ಈಶ್ವರಪ್ಪ ತನ್ನ ರಾಜಕೀಯ ಉಳಿವಿಗಾಗಿ ಸಂಗೊಳ್ಳಿ ರಾಯಣ್ಣ ಬ್ರೀಗೇಡ್ ಹುಟ್ಟು ಹಾಕಿಸಿದರು. ಈ ಎಲ್ಲಾ ಬೆಳವಣಿಗೆಯಿಂದಾಗಿ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿ ಪಕ್ಷದೊಳಗಿನ ಬಿರುಕು ಹೆಚ್ಚುವಂತಾಯಿತು.

ಈ ನಡುವೆ ಸಿದ್ದರಾಮಯ್ಯನವರ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್‌ರವರು ಸಚಿವ ಸ್ಥಾನ ಕಳೆದುಕೊಂಡ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ. ಉಪಚುನಾವಣೆಯನ್ನು ಎದುರಿಸುವಂತಾಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ್ಪರಾಜ್ಯಾಧ್ಯಕ್ಷರಾದ ಸುಮಾರು ಒಂದು ವರ್ಷಗಳ ನಂತರ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯು ಎದುರಾಯಿತು. ಈ ಉಪಚುನಾವಣೆಯು ಕರ್ನಾಟಕ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಹಾಗೂ ಮುಂದಿನ ಚುನಾವಣೆಯ ಸೆಮಿಫೈನಲ್ ಎಂದೇ ಕರೆಯಲ್ಪಟ್ಟಿತು. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ಜಯಗಳಿಸಿ ಬಿಜೆಪಿಯು ಮುಖಭಂಗ ಅನುಭವಿಸುವಂತಾಯಿತು. ಈ ಎಲ್ಲಾ ಬೆಳವಣಿಗೆಗಳಿಂದ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಕನಸಿನ ಮಾತಾಗಿ ಕನಿಷ್ಠ 60 ರಿಂದ 70 ಸೀಟುಗಳನ್ನಾದರೂ ಗೆದ್ದು ಜನತಾದಳದೊಂದಿಗಿನ ಸಹಾಯದಿಂದ ಸಮ್ಮಿಶ್ರ ಸರಕಾರದಲ್ಲಿ ಪಾಲುದಾರನಾಗಲು ಶ್ರಮಿಸುತ್ತಿದೆ. ಒಂದು ವೇಳೆ ಬಿಜೆಪಿಯು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ್ಪಮುಖ್ಯಮಂತ್ರಿ ಆಗುತ್ತಾರೆ. ಬಿಜೆಪಿಯ ಕೇಂದ್ರ ನಾಯಕರುಗಳು ಹೇಳುವಂತೆ ಎಪ್ಪತ್ತೈದು ವರ್ಷ ದಾಟಿದ ನಾಯಕರುಗಳು ಪಕ್ಷಕ್ಕೆ ಮಾರ್ಗದರ್ಶಿಗಳಾಗಿ ಇರಬೇಕೆಂದು ಹೇಳುತ್ತಿದ್ದಾರೆ.

ಈಗಾಗಲೇ ನಮಗೆ ತಿಳಿದಿರುವ ಹಾಗೆ ಬಿ.ಎಸ್.ಯಡಿಯೂರಪ್ಪ್ಪ ಇದೇ ವರ್ಷ 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈಗ ಚುನಾವಣಾ ಸಮಯದಲ್ಲಿ ಒಂದು ಸಮುದಾಯದ ಮತಗಳ ಓಲೈಕೆಗಾಗಿ ಯಡಿಯೂರಪ್ಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿಎಂದು ಹೇಳಿ ಮುಖ್ಯಮಂತ್ರಿಗಳಾಗಿ ಮಾಡಿ ಅದು ಕೇವಲ ಒಂದು ಅಥವಾ ಎರಡು ವರ್ಷಗಳಿಗಷ್ಟೆ ಮಾತ್ರ ಸೀಮಿತವಾಗಬಹುದು. ಆನಂತರ ಮತ್ತೋರ್ವ ಅಭ್ಯರ್ಥಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದರಲ್ಲಿ ಆರೆಸ್ಸೆಸ್‌ನ ಅಜೆಂಡಾ ಕೆಲಸ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆ ಮುಖ್ಯಮಂತ್ರಿ ಆಭ್ಯರ್ಥಿಯು ಯಡಿಯೂರಪ್ಪ್ಪನವರು ಸೂಚಿಸಿದ ಅಭ್ಯರ್ಥಿಯಾಗಿದ್ದಲ್ಲಿ ಮಾತ್ರ ಸರಕಾರ ಪೂರ್ಣಾವಧಿ ಮುಗಿಸಬಹುದು. ಒಂದು ವೇಳೆ ಯಡಿಯೂರಪ್ಪ್ಪನವರು ಸೂಚಿಸಿದ ಅಭ್ಯರ್ಥಿಯಾಗದಿದ್ದಲ್ಲಿ ಯಡಿಯೂರಪ್ಪ್ಪನವರು ಅವರ ಬೆಂಬಲಿಗ ಶಾಸಕರೊಂದಿಗೆ ಬಂಡಾಯವೇಳುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಭಾರತೀಯ ಜನತಾ ಪಕ್ಷವು ಸ್ಥಿರ ಆಡಳಿತ ನೀಡುವಲ್ಲಿ ವಿಫಲವಾಗಬಹುದು.

ಇನ್ನು ಜಾತ್ಯತೀತ ಜನತಾದಳದ ವಿಷಯಕ್ಕೆ ಬರುವುದಾದರೆ ಒಕ್ಕಲಿಗ ಮತಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಈ ಪಕ್ಷವು ಹಳೇ ಮೈಸೂರು ಭಾಗದಲ್ಲಿ ಮಾತ್ರ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಪಕ್ಷವು ಎಷ್ಟೇ ಹರಸಾಹಸಪಟ್ಟರೂ ಯಾವುದೇ ಪಕ್ಷಕ್ಕೂ ಬಹುಮತ ಬರದೇ ಇದ್ದ ಸಂದರ್ಭದಲ್ಲಿ ಒಂದಷ್ಟು ಸೀಟುಗಳನ್ನು ಗೆದ್ದು ನಿರ್ಣಾಯಕ ಸ್ಥಾನದಲ್ಲಿ ಕೂರುವಂತಾಗುತ್ತದೆ. ಹಾಗೆಯೇ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್ ಸಿಗದೇ ಬಂಡಾಯವೇಳುವ ಅಭ್ಯರ್ಥಿಗಳನ್ನು ಕೊನೆಗಳಿಗೆಯಲ್ಲಿ ಪಕ್ಷಕ್ಕೆ ಸೇರಿಸಿಕೊಂಡು ಅವರುಗಳ ಹೆಸರಿನ ಬಲದಿಂದ ಕೆಲವು ಸ್ಥಾನ ಪಡೆಯಲೂಬಹುದು. ಜೊತೆಗೆ ಬಿಎಸ್ಪಿಯೊಂದಿಗಿನ ಚುನಾವಣಾ ಪೂರ್ವ ಮೈತ್ರಿಯಿಂದಾಗಿ ಪಕ್ಷದ ಶೇಕಡಾವಾರು ಮತ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು. ಈಗಾಗಲೇ ಜನತಾದಳವು ಎರಡು ರಾಷ್ಟ್ರೀಯ ಪಕ್ಷಗಳ ಜೊತೆಗೂ ಸರಕಾರವನ್ನು ನಡೆಸಿರುವುದರಿಂದ ಈಗಲೇ ಯಾವ ಪಕ್ಷದ ಜೊತೆಗೆ ಕೈ ಜೋಡಿಸುತ್ತದೆ ಎಂದು ಹೇಳುವುದು ಅಷ್ಟು ಸುಲಭವಲ್ಲ.

ಕೇಂದ್ರದಲ್ಲಿ ಬಿಜೆಪಿ ಮೈತ್ರಿಕೂಟ ಪಕ್ಷವಾದ ಎನ್‌ಡಿಎ ಅಧಿಕಾರದಲ್ಲಿರುವುದರಿಂದ ಜನತಾದಳವು ಭಾರತೀಯ ಜನತಾ ಪಕ್ಷದೊಂದಿಗೆ ಕೈ ಜೋಡಿಸಬಹುದು. ಆದರೆ ಈ ಸರಕಾರದ ಆಯುಷ್ಯ ಎಷ್ಟು ವರ್ಷಗಳ ಕಾಲ ಎಂದು ಹೇಳುವುದು ಬಹಳ ಕಷ್ಟ. ಕಾರಣ 2019 ರ ಲೋಕಸಭಾ ಚುನಾವಣೆಗೆ ಒಂದು ವರ್ಷಗಳ ಅವಧಿ ಮಾತ್ರವಿದ್ದು, ಈಗಾಗಲೇ ದೇಶದಾದ್ಯಂತ ಬಿಜೆಪಿ ವಿರೋಧಿ ಅಲೆಯು ಬಲಿಷ್ಠಗೊಳ್ಳುತ್ತಿದೆ. ಇದೇ ಸ್ಥಿತಿಯು ಮುಂದುವರಿದಲ್ಲಿ ಮುಂದಿನ ಅವಧಿಗೂ ತನ್ನದೇ ಸರಕಾರವೆಂದು ಬಿಂಬಿಸಿಕೊಳ್ಳುತ್ತಿರುವ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೇರುವುದು ಕನಸಿನ ಮಾತು ಎಂದೇ ಹೇಳಬಹುದು. ಇಂತಹ ಸಂದರ್ಭ ಎದುರಾದಲ್ಲಿ ಜನತಾದಳವು ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡು ಬೇರೆ ಆಯ್ಕೆಯೇ ಇಲ್ಲದೇ ಕಾಂಗ್ರೆಸ್ ಜೊತೆಗೆ ಹೋಗುವ ಸಂಭವವೇ ಹೆಚ್ಚು. ಇಂಥ ಸಂದಭರ್ದಲ್ಲಿ ಎರಡು ಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಬರದೇ ಹೋದಲ್ಲಿ ಸರಕಾರವು ಪೂರ್ಣ ಅವಧಿಗೆ ತನ್ನ ಅಧಿಕಾರವನ್ನು ಯಶಸ್ವಿಯಾಗಿ ಪೂರೈಸಬಹುದು. ಒಂದು ವೇಳೆ ಎರಡು ಪಕ್ಷಗಳ ಮಧ್ಯೆ ಹೊಂದಾಣಿಕೆ ಕೊರತೆ ಉಂಟಾಗಿ ಮೈತ್ರಿಯನ್ನು ಕಡಿತಗೊಳ್ಳುವ ಸಂದರ್ಭ ಪುನಃ ಬಂದಲ್ಲಿ ಅವಧಿಗೂ ಮುನ್ನ ವಿಧಾನಸಭಾ ಚುನಾವಣಾ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆದ್ದರಿಂದ ಜನತಾದಳವು ಯಾವುದೇ ಪಕ್ಷದೊಂದಿಗೆ ಮೈತ್ರಿ ರಚಿಸಿದರೂ ಸ್ಥಿರ ಆಡಳಿತ ನೀಡುವಲ್ಲಿ ಅದೂ ಕೂಡ ವಿಫಲವಾಗಬಹುದು. ಇನ್ನು ಕಾಂಗ್ರೆಸ್ ಪಕ್ಷದ ವಿಷಯಕ್ಕೆ ಬಂದರೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಸುಮಾರು ನಾಲ್ಕು ದಶಕಗಳ ನಂತರ ಸಂಪೂರ್ಣ ಅವಧಿ ಮುಗಿಸಿರುವ ಏಕೈಕ ಸರಕಾರ ಹಾಗೂ ಏಕೈಕ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಸಿದ್ದರಾಮಯ್ಯರಿಗೆ ಇದೆ. ಅನ್ನಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್ ಹೀಗೆ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿ ಇದು ಬಡವರ ಪರವಾದ ಸರಕಾರ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಎಲ್ಲರನ್ನು ಸಮರ್ಥವಾಗಿ ಎದುರಿಸುವ ದಿಟ್ಟತನ ಭ್ರಷ್ಟಾಚಾರದ ಕಳಂಕ ಅಂಟಿಸಿಕೊಳ್ಳದಿರುವುದು. ಜಾತಿಯನ್ನೇ ಮೀರಿ ಬೆಳೆದ ನಾಯಕನಾಗಿ ಹೊರಹೊಮ್ಮಿರುವುದು ಇದು ಸಿದ್ದರಾಮಯ್ಯನವರ ಈಗಿನ ಜನಪ್ರಿಯತೆಗೆ ಕಾರಣ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಕ್ಷಣದಿಂದ ಇದುವರೆಗೂ ಕೆಲವು ಸ್ವಪಕ್ಷೀಯರ ನಡವಳಿಕೆ ಹಾಗೂ ವಿರೋಧ ಪಕ್ಷದ ತಂತ್ರಗಾರಿಕೆಗಳ ನಡುವೆ ಸಣ್ಣ ಪುಟ್ಟ ಗೊಂದಲ ಉಂಟಾದರೂ ಯಶಸ್ವಿಯಾಗಿ ಐದು ವರ್ಷ ಪೂರ್ಣಗೊಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಚುನಾವಣಾ ಅವಧಿಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಪದ್ಧತಿ ಜಾರಿಯಲ್ಲಿಲ್ಲ. ಆದರೆ ಸಾಂಧರ್ಭಿಕ ಸನ್ನಿವೇಶಗಳನ್ನು ಗಮನಿಸಿಕೊಂಡು ಮುಂದಿನ ಅವಧಿಗೂ ತಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಪಕ್ಷವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆದು ಶಾಸಕರ ಅಭಿಪ್ರಾಯದಂತೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ರೂಢಿ. ಇಂಥಾ ಸಂದರ್ಭದಲ್ಲಿ ಮುಖ್ಯಮಂತ್ರಿ ಆಭ್ಯರ್ಥಿ ಆಕಾಂಕ್ಷಿಗಳು ಬಂಡಾಯವೇಳುವ ಸಾಧ್ಯತೆ ಬಹಳ ಕಡಿಮೆ. ಕಾರಣ ಕಾಂಗ್ರೆಸ್ ಹೈಕಮಾಂಡ್‌ನ್ನು ಎದುರು ಹಾಕಿಕೊಳ್ಳಲು ಯಾವ ನಾಯಕರೂಗಳು ತಯಾರಿಲ್ಲ. ಒಂದು ವೇಳೆ ಕಾಂಗ್ರೆಸ್ ಪಕ್ಷವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಯಾರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದರೂ ಅದು ಮಾತ್ರ ಐದು ವರ್ಷಗಳ ಅವಧಿಗೆ ಆಡಳಿತ ನಡೆಸುವಲ್ಲಿ ಶಕ್ತವಾಗಿರುತ್ತದೆ. ಒಂದು ರಾಜ್ಯದ ಆರ್ಥಿಕ ವ್ಯವಸ್ಥೆ ಸದೃಢವಾಗಿರಬೇಕಾದರೆ, ಕೈಗಾರಿಕಾ ಕ್ಷೇತ್ರದಲ್ಲಿ ಒಂದು ರಾಜ್ಯದಲ್ಲಿ ಹೂಡಿಕೆ ಮಾಡಬೇಕಾದರೆ ಮೊದಲು ಸ್ಥಿರ ಸರಕಾರ ಇರಬೇಕಾಗುತ್ತದೆ.

ಈಗಾಗಲೇ ಒಂದು ಅವಧಿಗೆ ಸರಕಾರ ನಡೆಸಿರುವ ಬಿಜೆಪಿಯು ಮೂವರು ಮುಖ್ಯಮಂತ್ರಿಗಳನ್ನು ನೀಡಿದೆ. ಇನ್ನು ಜನತಾದಳ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವುದೇ ಕನಸಿನ ಮಾತು. ಇನ್ನು ಸ್ಥಿರ ಸರಕಾರದ ಮಾತೆಲ್ಲಿ ಬಂತು? ಒಟ್ಟಾರೆಯಾಗಿ ಈ ಹಿಂದಿನ ವಿದ್ಯಮಾನಗಳನ್ನು ಗಮನಿಸಿ ಯೋಚಿಸುವುದಾದರೆ ಕಾಂಗ್ರೆಸ್ ಸರಕಾರ ಐದು ವರ್ಷಗಳ ಅವಧಿಗೆ ಗಟ್ಟಿಯಾಗಿ ನಿಂತು ಸ್ಥಿರ ಸರಕಾರವನ್ನು ನೀಡಬಹುದೇನೋ ಎಂಬ ನಂಬಿಕೆಯನ್ನು ಹುಟ್ಟುಹಾಕಿದೆ.

Writer - ಅಭಿಲಾಷ್ ದೇವನೂರ್

contributor

Editor - ಅಭಿಲಾಷ್ ದೇವನೂರ್

contributor

Similar News