76ರ ವೃದ್ಧನಿಗೆ ಪುನರ್ಜನ್ಮ ನೀಡಿದ ಆ್ಯಪಲ್ ವಾಚ್!

Update: 2018-05-14 12:04 GMT

ಡಿಜಿಟಲ್ ತಂತ್ರಜ್ಞಾನವು ಮೊಬೈಲ್ ಇತ್ಯಾದಿ ಸಾಧನಗಳು ಹೊರಸೂಸುವ ವಿಕಿರಣದಿಂದಾಗಿ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂಬ ತಕರಾರು ಇದೆಯಾದರೂ ಹಾಂಗ್‌ಕಾಂಗ್‌ನ 76ರ ವೃದ್ಧನೋರ್ವ ಧರಿಸಿದ್ದ ಆ್ಯಪಲ್ ವಾಚ್ ಆತನ ಹೃದಯ ಬಡಿತ ಅಸಾಧಾರಣವಾಗಿ ಹೆಚ್ಚುತ್ತಿರುವ ಬಗ್ಗೆ ಎಚ್ಚರಿಕೆ ನೀಡಿ ಆತನಿಗೆ ಪುನರ್ಜನ್ಮವನ್ನು ದಯಪಾಲಿಸಿದೆ. ಹೃದಯ ಸಮಸ್ಯೆಯಿರುವವರು ಆ್ಯಪಲ್ ವಾಚ್‌ನ್ನು ಧರಿಸಲೇಬೇಕು ಎನ್ನುವುದು ಈಗ ಆತನ ಅನುಭವದ ಮಾತಾಗಿದೆ. ವಜ್ರದ ವ್ಯಾಪಾರಿ ವೃತ್ತಿಯಿಂದ ಅರೆನಿವೃತ್ತನಾಗಿರುವ ಗ್ಯಾಸ್ಟನ್ ಡಿ ಅಕ್ವಿನೋ ಕಳೆದ ತಿಂಗಳು ಪಾರ್ಕ್‌ವೊಂದರಲ್ಲಿ ಕುಳಿತುಕೊಂಡಿದ್ದಾಗ ತನ್ನ ಹೃದಯ ಬಡಿತ ತೀವ್ರವಾಗಿ ಹೆಚ್ಚುತ್ತಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ತಾನು ಕೈಗೆ ಕಟ್ಟಿಕೊಂಡಿದ್ದ ಆ್ಯಪಲ್ ವಾಚ್‌ನಲ್ಲಿ ಗಮನಿಸಿದ್ದ. ತನ್ನ ಆರೋಗ್ಯದಲ್ಲಿ ಅಂತಹ ಗಮನಾರ್ಹ ಬದಲಾವಣೆ ಕಂಡು ಬಂದಿರದಿದ್ದರೂ ಆತ ತನ್ನ ಕುಟುಂಬದೊಂದಿಗೆ ಈಸ್ಟರ್ ಭೋಜನವನ್ನು ಮಾಡುವ ಕಾರ್ಯಕ್ರಮವನ್ನು ಕೈಬಿಟ್ಟು ಆಸ್ಪತ್ರೆಗೆ ತೆರಳಿದ್ದ.

  ಅಕ್ವಿನೋ ಕೈಗೊಂಡಿದ್ದ ಈ ನಿರ್ಧಾರ ಆತನ ಜೀವವನ್ನು ಉಳಿಸಿತ್ತು. ಏಕೆಂದರೆ ವೈದ್ಯರು ಆತನನ್ನು ಸರಣಿ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಹೃದಯದ ಮೂರು ಮುಖ್ಯ ಕೊರೊನರಿ ರಕ್ತನಾಳಗಳ ಪೈಕಿ ಎರಡು ಸಂಪೂರ್ಣವಾಗಿ ಮತ್ತು ಇನ್ನೊಂದು ಶೇ.90ರಷ್ಟು ಮುಚ್ಚಿಕೊಂಡಿದ್ದು ಬೆಳಕಿಗೆ ಬಂದಿತ್ತು.

 ವೈದ್ಯರ ಸಲಹೆಯ ಮೇರೆಗೆ ಅಕ್ವಿನೋ ಆ್ಯಂಜಿಯೋಪ್ಲಾಸ್ಟಿ ಮಾಡಿಸಿಕೊಂಡಿದ್ದು,ಪುಟ್ಟ ಬಲೂನುಗಳನ್ನು ಮುಚ್ಚಿಕೊಂಡಿದ್ದ ರಕ್ತನಾಳಗಳಲ್ಲಿ ತಾತ್ಕಾಲಿಕವಾಗಿ ತೂರಿಸಿ ಬಳಿಕ ಅವುಗಳನ್ನು ಉಬ್ಬಿಸುವ ಮೂಲಕ ರಕ್ತನಾಳಗಳು ಪುನಃ ತೆರೆದುಕೊಳ್ಳುವಂತೆ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದರು.

ಮರುದಿನ ಅಕ್ವಿನೋನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಈಗ ಆತ ಅತ್ಯಂತ ಆರಾಮವಾಗಿದ್ದಾನೆ.

ಆ್ಯಪಲ್‌ನ ಕಟ್ಟಾ ಅಭಿಮಾನಿಯಾಗಿರುವ ಅಕ್ವಿನೋ ಕಂಪನಿಯ ಸಿಇಒ ಟಿಮ್ ಕುಕ್ ಅವರಿಗೆ ಪತ್ರ ಬರೆದು ಆ್ಯಪಲ್ ವಾಚ್ ತನಗೆ ಪುನರ್ಜನ್ಮ ನೀಡುವಲ್ಲಿ ನೆರವಾಗಿದ್ದನ್ನು ತಿಳಿಸಿದ್ದಾನೆ.

‘‘ಇದೇ ಮೊದಲ ಬಾರಿಗೆ ನನ್ನ ಆ್ಯಪಲ್ ವಾಚ್ ಇಂತಹ ಎಚ್ಚರಿಕೆಯನ್ನು ನೀಡಿತ್ತು. ಆದರೆ ನನಗೆ ಯಾವುದೇ ಅಸ್ವಸ್ಥತೆ ಬಾಧಿಸಿರಲಿಲ್ಲ. ತಲೆ ಸುತ್ತುವುದು ಅಥವಾ ಎದೆಯಲ್ಲಿ ನೋವು ನನ್ನ ಅನುಭವಕ್ಕೆ ಬಂದಿರಲಿಲ್ಲ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ನಾನೊಂದು ನಡೆದಾಡುವ ಟೈಂ ಬಾಂಬ್‌ನಂತಿದ್ದೆ’’ಎಂದಾತ ಕುಕ್‌ಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ತಿಳಿಸಿದ್ದಾನೆ.

ಶಸ್ತ್ರಚಿಕಿತ್ಸೆಯ ಬಳಿಕ ತಾನು ಪುನರ್ಜನ್ಮವನ್ನು ಪಡೆದಿದ್ದೇನೆ ಮತ್ತು ಆ್ಯಪಲ್ ವಾಚ್‌ನಿಂದಲೇ ಇದು ಸಾಧ್ಯವಾಗಿದೆ. ದಯವಿಟ್ಟು ಹೃದಯ ಸಮಸ್ಯೆಯಿರುವವರು ಆ್ಯಪಲ್ ವಾಚ್ ಧರಿಸಲು ಹೆಚ್ಚಿನ ಪ್ರಚಾರ ನೀಡಿ ಎಂದೂ ಆತ ಕೇಳಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News