ಫೆಲೆಸ್ತೀನ್ ಪ್ರತಿಭಟನಾಕಾರರ ಮೇಲೆ ಇಸ್ರೇಲ್ ಗುಂಡು

Update: 2018-05-14 18:06 GMT

ಜೆರುಸಲೇಂ (ಇಸ್ರೇಲ್), ಮೇ 14: ಗಾಝಾ ಗಡಿಯಲ್ಲಿ ಸೋಮವಾರ ಫೆಲೆಸ್ತೀನಿಯರು ನಡೆಸಿದ ಪ್ರತಿಭಟನೆಯ ವೇಳೆ ಇಸ್ರೇಲ್ ಸೈನಿಕರು ನಡೆಸಿದ ಗೋಲಿಬಾರಿನಲ್ಲಿ ಕನಿಷ್ಠ 37 ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಇಸ್ರೇಲ್ ಸೈನಿಕರ ದಾಳಿಯಲ್ಲಿ ಸುಮಾರು 500 ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯ ಹೇಳಿದೆ.

ಇಸ್ರೇಲ್‌ನೊಂದಿಗಿನ ಗಡಿ ಬೇಲಿಯನ್ನು ಮುರಿಯುವಂತೆ ಗಾಝಾದಲ್ಲಿ ಆಡಳಿತ ನಡೆಸುವ ಹಮಾಸ್ ಫೆಲೆಸ್ತೀನೀಯರನ್ನು ಪ್ರಚೋದಿಸುತ್ತಿದೆ ಎಂದು ಇಸ್ರೇಲ್ ಸೇನೆ ಆರೋಪಿಸಿದೆ. ಗಡಿ ಉಲ್ಲಂಘಿಸುವ ಫೆಲೆಸ್ತೀನಿಯರನ್ನು ತಡೆಯಲು ಇಸ್ರೇಲ್ ಸೈನಿಕರು ನೈಜ ಗುಂಡುಗಳನ್ನು ಬಳಸುತ್ತಿದ್ದಾರೆ ಎಂದು ಅದು ಹೇಳಿದೆ.

ಗಾಝಾ ಮೇಲೆ ವಿಧಿಸಲಾಗಿರುವ ದಶಕದ ಹಿಂದಿನ ದಿಗ್ಬಂಧನವನ್ನು ಮುರಿಯುವುದಕ್ಕಾಗಿ ಮಾರ್ಚ್ ಕೊನೆಯಿಂದ ಫೆಲೆಸ್ತೀನಿಯರು ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಸೋಮವಾರ ನಡೆದ ಸಾವುಗಳೊಂದಿಗೆ, ಹಾಲಿ ಸರಣಿ ಪ್ರತಿಭಟನೆಗಳಲ್ಲಿ ಮೃತಪಟ್ಟವರ ಫೆಲೆಸ್ತೀನೀಯರ ಸಂಖ್ಯೆ 79ಕ್ಕೇರಿದೆ.

ಗಾಝಾ ಗಡಿಯನ್ನು ಮುರಿಯುವ ಯಾವುದೇ ಪ್ರಯತ್ನವನ್ನು ತಾನು ಯಾವುದೇ ಬೆಲೆ ತೆತ್ತಾದರೂ ತಡೆಯುವುದಾಗಿ ಇಸ್ರೇಲ್ ಹೇಳಿದೆ.

ಮುಕ್ತವಾಗಿ ಗುಂಡು ಹಾರಿಸುವ ತನ್ನ ಕಾನೂನುಬಾಹಿರ ನಿಯಮಗಳಿಗಾಗಿ ಇಸ್ರೇಲ್ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಒಳಗಾಗಿದೆ. ಆದರೆ, ತನ್ನ ಗಡಿಯನ್ನು ರಕ್ಷಿಸುವ ಹಕ್ಕು ತನಗಿದೆ ಎಂದು ಇಸ್ರೇಲ್ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News