ಡಾ.ಕಫೀಲ್‌ಖಾನ್‌ರ ಪತ್ರದ ಪೂರ್ಣಪಠ್ಯ
ಭಾಗ-2
‘‘ಸಿಲಿಂಡರ್‌ಗಳನ್ನು ತರಿಸಿದವರು ನೀವೆಯೋ?’’ ಎಂದು ಮುಖ್ಯಮಂತ್ರಿ ಕೇಳಿದರು. ನಾನು ‘‘ಹೌದು ಸರ್’’ ಎಂದೆ. ‘‘ಸಿಲಿಂಡರ್ ತರಿಸಿ ನೀವು ದೊಡ್ಡ ಹೀರೋ ಆದಿರೆಂದು ತಿಳಿದಿದ್ದೀರಾ?... ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ’’ ಎಂದು ಹೇಳಿದ ಅವರು ಸಿಟ್ಟಾದರು. ಈ ಘಟನೆ ಮಾಧ್ಯಮದವರಿಗೆ ತಿಳಿದುದರಿಂದ ಅವರು ಸಿಟ್ಟಾಗಿದ್ದರು. ನಾನು ನನ್ನ ಅಲ್ಲಾಹುವಿನ ಪ್ರಮಾಣವಾಗಿ ಹೇಳುತ್ತೇನೆ, ಆ ರಾತ್ರಿ ಯಾವ ಮಾಧ್ಯಮದ ಮಂದಿಗೂ ನಾನು ಯಾವ ಮಾಹಿತಿಯನ್ನೂ ನೀಡಿರಲಿಲ್ಲ.
ಕೃಪೆ: Countercurrents.org
ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕೆಗಳಿಗೆ ಡಾ. ಖಾನ್‌ರ ಪತ್ರವನ್ನು ಬಿಡುಗಡೆಗೊಳಿಸಿದ ಅವರ ಪತ್ನಿ ಶಬಿಷ್ಟಾ ಹೇಳಿದರು:
‘‘ನನ್ನ ಪತಿ ಯಾವುದೇ ಅಪರಾಧ ಮಾಡಿಲ್ಲ. ಅವರು ಬಯಸಿದ್ದಲ್ಲಿ, ಅವರು (ಕಳೆದ ಆಗಸ್ಟ್‌ನಲ್ಲಿ ತುರ್ತು ಸ್ಥಿತಿಯ ವೇಳೆ) ಮನೆಯಲ್ಲಿ ಇರಬಹುದಾಗಿತ್ತು, ಹಲವು ಸಂದರ್ಭಗಳಲ್ಲಿ ಮಾಸ್ಕ್, ಕೈಚೀಲ ಮತ್ತು ಸ್ಯಾನಿಟೈಸರ್‌ನಂತಹ ಹಲವು ವಸ್ತುಗಳ ಪೂರೈಕೆಗೆ ಆದರೂ ತನ್ನ ಕೈಯಿಂದ ಸ್ವಂತ ಹಣವನ್ನು ಪಾವತಿಸಿದ್ದಾರೆ. ಆಸ್ಪತ್ರೆಯಲ್ಲಿ ಸಂಭವಿಸಿದ ಸಾವುಗಳು ಆಡಳಿತಾತ್ಮಕ ವೈಫಲ್ಯದ ಪರಿಣಾಮ.’’
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಎಶ್ಯದ ಮಾನವ ಹಕ್ಕುಗಳ ದಾಖಲೀಕರಣ ಕೇಂದ್ರದ ಕಾರ್ಯವಾಹಕ ನಿರ್ದೇಶಕ ರವಿ ನಾಯಕ್ ಪ್ರಕಾರ, ಡಾ.ಖಾನ್ ಮತ್ತು ಇತರರ ಮೇಲೆ ಆಪಾದಿಸಲಾಗಿರುವ ಎಲ್ಲ ಅಪರಾಧಗಳು ಜಾಮಿನು ಪಡೆಯಬಹುದಾದ ಅಪರಾಧಗಳು.
ಡಾ. ಖಾನ್‌ರವರ ಪತ್ರದ ಪೂರ್ಣ ಪಠ್ಯ ಇಲ್ಲಿದೆ.
8ಎಮ್ ಎಸ್, ಜಾಮೀನು ಇಲ್ಲದೆ ಜೈಲಿನಲ್ಲಿ!
ನಾನು ನಿಜವಾಗಿಯೂ ತಪ್ಪಿತಸ್ಥನೇ?
ನಾನು ಪ್ರತಿಯೊಂದು ಕ್ಷಣವನ್ನೂ ಜ್ಞಾಪಕಕ್ಕಿಟ್ಟುಕೊಂಡಿದ್ದೇನೆ. ಜೈಲಿನ ಕಂಬಿಗಳ ಹಿಂದೆ ಮೂರುತಿಂಗಳ ಅಸಹನೀಯ ಚಿತ್ರಹಿಂಸೆ, ಅವಮಾನದ ಬಳಿಕ ಕೂಡ ನನ್ನ ಕಣ್ಮುಂದೆ ಅಂದು ಸಂಭವಿಸಿದ ಪ್ರತಿಯೊಂದು ಘಟನೆ, ಅಂದಿನ ಪ್ರತಿಯೊಂದು ಕ್ಷಣಗಳು ಹಾದುಹೋಗುತ್ತಿವೆ. ಅಂತಹ ಕ್ಷಣಗಳಲ್ಲಿ ಒಮ್ಮೆ ನಾನು ನನ್ನನ್ನೇ ಕೇಳಿಕೊಳ್ಳ್ಳುತ್ತೇನೆ:
ನಾನು ನಿಜವಾಗಿಯೂ ಅಪರಾಧಿಯೇ? ನಿಜವಾಗಿಯೂ ನಾನು ತಪ್ಪಿತಸ್ಥನೇ? ಈ ಪ್ರಶ್ನೆಗೆ ನನ್ನ ಹೃದಯದಿಂದ ದೂಡ್ಡಧ್ವನಿಯಲ್ಲಿ ಉತ್ತರ ಕೇಳಿಬರುತ್ತದೆ: ಅಲ್ಲ, ಅಲ್ಲ, ಖಂಡಿತವಾಗಿಯೂ ಅಲ್ಲ.
2017ರ ಆಗಸ್ಟ್ 10ರಂದು ನನಗೆ ಆ ವಾಟ್ಸ್‌ಆ್ಯಪ್ ಸಂದೇಶ ಬಂದ ಕ್ಷಣದಿಂದ ಓರ್ವ ವೈದ್ಯ, ಒಬ್ಬ ತಂದೆ, ಭಾರತದ ಒಬ್ಬ ಜವಾಬ್ದಾರಿಯುತ ನಾಗರಿಕ ಏನೇನು ಮಾಡಲು ಸಾಧ್ಯವಿತ್ತೋ ಏನೇನು ಮಾಡಬೇಕಾಗಿತ್ತೋ ಆವೆಲ್ಲವನ್ನೂ ನಾನು ಮಾಡಿದೆ. ದಿಢೀರನೆ ಆಮ್ಲಜನಕ ಪೂರೈಕೆ ನಿಂತದ್ದರಿಂದಾಗಿ ಅಪಾಯದಲ್ಲಿ ಸಿಲುಕಿದ ಪ್ರತಿಯೊಂದು ಪ್ರಾಣವನ್ನೂ ಉಳಿಸಲು ನಾನು ಪ್ರಯತ್ನಿಸಿದೆ. ಆಮ್ಲಜನಕ ಕೊರತೆಯಿಂದಾಗಿ ಸಾಯುತ್ತಿದ್ದ ಆ ಮುಗ್ಧ ಮಕ್ಕಳ ಜೀವ ಉಳಿಸಲು ನಾನು ನನ್ನಿಂದ ಸಾಧ್ಯವಾದ ಎಲ್ಲವನ್ನೂ ಮಾಡಿದೆ.
ನಾನು ಎಲ್ಲರನ್ನೂ ಕಿರುಚಿ ಕಿರುಚಿ ಕೂಗಿ ಕರೆದೆ. ನಾನು ಕಾಡಿದೆ. ಬೇಡಿದೆ, ನಾನು ಕಾರು ಚಲಾಯಿಸಿದೆ, ಸಿಲಿಂಡರ್‌ಗಳನ್ನು ತಂದೆ, ನಾನು ಆಜ್ಞೆಗಳನ್ನು ನೀಡಿದೆ. ಬೊಬ್ಬೆ ಹೊಡೆದು ಹೇಳಿದೆ. ಸಮಾಧಾನ ಪಡಿಸಿದೆ. ನಾನು ಸಮಾಲೋಚಿಸಿದೆ. ನಾನು ನನ್ನ ಕೈಯಿಂದ ಹಣ ಖರ್ಚು ಮಾಡಿದೆ. ನಾನು ಹಣವನ್ನು ಸಾಲ ಪಡೆದೆ ಮತ್ತು ಮನುಷ್ಯನೊಬ್ಬನಿಗೆ ಏನೇನು ಮಾಡಲು ಸಾಧ್ಯವೋ ಅವನ್ನೆಲ್ಲ ನಾನು ಮಾಡಿದೆ.
ನಾನು ನನ್ನ ವಿಭಾಗದ ಮುಖ್ಯಸ್ಥರು, ಬಿಆರ್‌ಡಿಯ ಪ್ರಾಂಶುಪಾಲರು, ಡಿಎಂ, ಇತ್ಯಾದಿಯಾಗಿ ಎಲ್ಲರಿಗೂ ದೂರವಾಣಿ ಕೆರೆ ಮಾಡಿ, ದ್ರವ ಆಮ್ಲಜನಕದ ಏಕಾಏಕಿ ನಿಲುಗಡೆಯಿಂದಾಗಿ ಉದ್ಭವಿಸಿರುವ ಗಂಭೀರ ಪರಿಸ್ಥಿತಿಯ ಬಗ್ಗೆ ತಿಳಿಸಿದೆ. (ನನ್ನ ಬಳಿ ಇವರಿಗೆಲ್ಲಾ ಕರೆಮಾಡಿದ ದೂರವಾಣಿ ಕರೆಗಳ ದಾಖಲೆಗಳಿವೆ.) ಬಿಆರ್‌ಡಿ ವೈದ್ಯಕೀಯ ಕಾಲೇಜಿನ ಆಸುಪಾಸಿನಲ್ಲಿರುವ ಮೋದಿ ಗ್ಯಾಸ್, ಬಾಲಾಜಿ, ಇಂಪೀರಿಯಲ್ ಗ್ಯಾಸ್ ಪೂರೈಕೆದಾರರೂಡನೆ ಅಂಗಲಾಚಿ ಬೇಡಿಕೊಂಡು ಗ್ಯಾಸ್ ಪೂರೈಸಲು ಹೇಳಿ, ನೂರಾರು ಮುಗ್ಧ ಮಕ್ಕಳ ಪ್ರಾಣ ಉಳಿಸಲು ಪ್ರಯತ್ನಿಸಿದೆ.
ನಾನು ಅವರಿಗೆ ನಗದು ಪಾವತಿಸಿದೆ. ಬಾಕಿ ಮೊತ್ತವನ್ನು ಗ್ಯಾಸ್ ಪೂರೈಸಿದ ಮೇಲೆ ಕೊಡುವುದಾಗಿ ಆಶ್ವಾಸನೆ ನೀಡಿದೆ. (ದ್ರವ ಗ್ಯಾಸ್ ಟ್ಯಾಂಕ್ ಬರುವವರೆಗೆ ನಾವು ಪ್ರತಿದಿನ 250 ಗ್ಯಾಸ್ ಸಿಲಿಂಡರ್‌ನ ಪೂರೈಕೆಗೆ ವ್ಯವಸ್ಥೆ ಮಾಡಿದ್ದೆವು. ಒಂದು ಜಂಬೋ ಸಿಲಿಂಡರಿನ ಬೆಲೆ ರೂಪಾಯಿ 216.)
ತಡೆರಹಿತ ಗ್ಯಾಸ್ ಪೂರೈಕೆಯಾಗುವಂತೆ ನೋಡಿಕೊಳ್ಳಲು ನಾನು ಒಂದು ಕ್ಯೂಬಿಕಲ್‌ನಿಂದ ಇನ್ನೊಂದು ಕ್ಯೂಬಿಕಲ್‌ಗೆ, ವಾರ್ಡ್ 100 ರಿಂದ ವಾರ್ಡ್ 12ಕ್ಕೆ, ಎಮರ್ಜನ್ಸಿ ವಾರ್ಡಿಗೆ, ಆಕ್ಸಿಜನ್ ಪೂರೈಕೆಯ ಒಂದು ಪಾಯಿಂಟ್‌ನಿಂದ ಇನ್ನೊಂದು ಪಾಯಿಂಟ್‌ಗೆ ಓಡಿದೆ. ಸಮೀಪದ ಆಸ್ಪತ್ರೆ ಗಳಿಂದ ಸಿಲಿಂಡರ್‌ಗಳನ್ನು ತರಲು ನಾನೇ ನನ್ನ ಕಾರು ಚಲಾಯಿಸಿದೆ. ಅದು ಸಾಕಾಗುವುದಿಲ್ಲವೆಂದು ತಿಳಿದಾಗ, ನಾನು ಎಸ್‌ಎಸ್‌ಬಿಗೆ ಹೋದೆ, ಅದರ ಡಿಐಜಿಯನ್ನು ಭೇಟಿಯಾಗಿ ಹಿಂದೆಂದೂ ಸಂಭವಿಸದಿದ್ದಂತಹ ಘಟನೆ ಸಂಭವಿಸಿರುವುದಾಗಿ ಅವರಿಗೆ ವಿವರಿಸಿ ಹೇಳಿದೆ. ಅವರು ತಕ್ಷಣ ಪ್ರತಿಕ್ರಿಯಿಸಿದರು. ಬಿಆರ್‌ಡಿಯಿಂದ ಗ್ಯಾಸ್ ಎಜನ್ಸಿಗೆ ಖಾಲಿ ಸಿಲಿಂಡರ್‌ಗಳನ್ನು ಸಾಗಿಸಲು ಟ್ರಕ್ ಹಾಗೂ ಸೈನಿಕರ ಒಂದು ತಂಡವನ್ನೇ ಕಳುಹಿಸಿದರು. ಆ ಸಿಲಿಂಡರ್‌ಗಳನ್ನು ತುಂಬಿ, ಬಿಆರ್‌ಡಿಗೆ ತಂದು, ಪುನಃ ತುಂಬಲು ಓಡಿದರು. ಅವರು ಸತತ 48 ಗಂಟೆಗಳ ಕಾಲ ದುಡಿದರು. ಅವರ ಕೆಲಸ ನಮಗೆ ಸ್ಫೂರ್ತಿನೀಡಿತು. ನಾನು ಅವರಿಗೆ ಸೆಲ್ಯೂಟ್ ಹೊಡೆದು ಥ್ಯಾಂಕ್ಸ್ ಹೇಳುತ್ತೇನೆ, ಜೈ ಹಿಂದ್......
ತಮ್ಮ ಮಕ್ಕಳನ್ನು ಕಳೆದುಕೊಂಡು ರೋದಿಸುತ್ತಿದ್ದ ಪೋಷಕರಿಗೆ ನಾನು ಸಮಾಧಾನ ಹೇಳಿದೆ; ಅವರನ್ನು ಸಂತೈಸಿದೆ. ಮಕ್ಕಳ ಪ್ರಾಣ ಉಳಿಸಲು ತಮ್ಮ ಎಲ್ಲ ಶಕ್ತಿಯನ್ನು, ಗಮನವನ್ನು ಕೇಂದ್ರೀಕರಿಸುವಂತೆ ನಾನು ಎಲ್ಲರಿಗೂ ಕೂಗಿ ಹೇಳಿದೆ. ನಿಜವಾಗಿ, ಆಕ್ಸಿಜನ್ ಪೂರೈಕೆದಾರರಿಗೆ ನೀಡಲು ಬಾಕಿ ಇದ್ದ ಹಣವನ್ನು ಪಾವತಿಸದ್ದರಿಂದಾಗಿ, ಆಡಳಿತಾತ್ಮಕ ವೈಫಲ್ಯದಿಂದಾಗಿ ನಡೆದಿದ್ದ ಗಂಡಾಂತರವನ್ನು, ದುರಂತವನ್ನು ಕಂಡು ನಮ್ಮ ತಂಡದಲ್ಲಿದ್ದ ಪ್ರತಿಯೊಬ್ಬರೂ ಅತ್ತುಬಿಟ್ಟರು.
13-8-2017ರಂದು ರಾತ್ರಿ ಸುಮಾರು 1:30 ಗಂಟೆಯವರೆಗೆ, ದ್ರವ ಆಕ್ಸಿಜನ್ ಟ್ಯಾಂಕ್ ಬರುವವರೆಗೆ, ನಾವು ಮಕ್ಕಳ ಜೀವ ಉಳಿಸುವ ನಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಆದರೆ ಮರುದಿನ ಬೆಳಗ್ಗೆ ಮುಖ್ಯಮಂತ್ರಿ ಆಸ್ಪತ್ರೆಗೆ ಆಗಮಿಸಿದಾಗ ನನ್ನ ಜೀವನ ತಲೆಕೆಳಗಾಯಿತು. ‘‘ಸಿಲಿಂಡರ್‌ಗಳನ್ನು ತರಿಸಿದವರು ನೀವೆಯೋ?’’ ಎಂದು ಅವರು ಕೇಳಿದರು. ನಾನು ‘‘ಹೌದು ಸರ್,’’ ಎಂದೆ. ‘‘ಸಿಲಿಂಡರ್ ತರಿಸಿ ನೀವು ದೊಡ್ಡ ಹೀರೋ ಆದಿರೆಂದು ತಿಳಿದಿದ್ದೀರಾ?... ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ’’ ಎಂದು ಹೇಳಿದ ಅವರು ಸಿಟ್ಟಾದರು. ಈ ಘಟನೆ ಮಾಧ್ಯಮದವರಿಗೆ ತಿಳಿದುದರಿಂದ ಅವರು ಸಿಟ್ಟಾಗಿದ್ದರು. ನಾನು ನನ್ನ ಅಲ್ಲಾಹುವಿನ ಪ್ರಮಾಣವಾಗಿ ಹೇಳುತ್ತೇನೆ, ಆ ರಾತ್ರಿ ಯಾವ ಮಾಧ್ಯಮದ ಮಂದಿಗೂ ನಾನು ಯಾವ ಮಾಹಿತಿಯನ್ನೂ ನೀಡಿರಲಿಲ್ಲ. ಪೊಲೀಸರು ನಮ್ಮ ಮನೆಗೆ ಬರತೊಡಗಿದರು. ನಮ್ಮನ್ನು ಗದರಿಸಿದರು, ಬೆದರಿಸಿದರು, ನನ್ನ ಕುಟುಂಬಕ್ಕೆ ಚಿತ್ರಹಿಂಸೆ ನೀಡಿದರು. ಅವರು ಎನ್‌ಕೌಂಟರ್‌ನಲ್ಲಿ ನನ್ನನ್ನು ಕೊಲ್ಲಬಹುದೆಂದು ಹಲವರು ನನಗೆ ಎಚ್ಚರಿಕೆ ನೀಡಿದರು.
ಅವಮಾನದಿಂದ, ದಯನೀಯ ಸ್ಥಿತಿಯಿಂದ ನನ್ನ ಬದುಕನ್ನು ಉಳಿಸಿಕೊಳ್ಳಲಿಕ್ಕಾಗಿ ನಾನು ಪೊಲೀಸರಿಗೆ ಶರಣಾದೆ. ನಾನೇನೂ ತಪ್ಪು ಮಾಡದಿರುವಾಗ ನನಗೆ ನ್ಯಾಯ ಸಿಗಲೇಬೇಕು ಎಂದು ಅಂದುಕೊಂಡೆ. ಆದರೆ ದಿನಗಳು, ವಾರಗಳು, ತಿಂಗಳುಗಳು ಕಳೆದವು. ಹೋಳಿ ಹಬ್ಬ ಬಂತು. ದಸರಾ, ಕ್ರಿಸ್ಮಸ್, ದೀಪಾವಳಿ, ಹೊಸ ವರ್ಷ ಬಂತು, ಜಾಮೀನು ಸಿಗಬಹುದೆಂದು ಕಾದೆ ಕಾದೆ.
ರಾತ್ರಿ ವೇಳೆ ಮಿಲಿಯಗಟ್ಟಲೆ ಸೊಳ್ಳೆಗಳು, ಹಗಲಿನ ವೇಳೆ ಸಾವಿರಾರು ನೂಣಗಳು ಗುಂಯ್‌ಗುಡುವ ಬ್ಯಾರಕ್‌ವೊಂದರಲ್ಲಿ 150 ಕೈದಿಗಳ ಜತೆ ಮಲಗುತ್ತ ಕಾಲ ಕಳೆಯುತ್ತಿದ್ದೇನೆ, ಬದುಕಲಿಕ್ಕಾಗಿ ಆಹಾರ ನುಂಗಲು ಪ್ರಯತ್ನಿಸುತ್ತ, ತೆರೆದ ಬಯಲಲ್ಲಿ ಅರೆಬೆತ್ತಲಾಗಿ ಸ್ನಾನ ಮಾಡುತ್ತ, ಮುರಿದ ಬಾಗಿಲಿನ ಒಂದು ಟಾಯ್ಲೆಟ್ ಬಳಸುತ್ತ, ಪ್ರತೀ ರವಿವಾರ, ಮಂಗಳವಾರ ಮತ್ತು ಗುರುವಾರ ನನ್ನ ಕುಟುಂಬದವರನ್ನು ಭೇಟಿಯಾಗಲು ಕಾಯುತ್ತ.........
ಬದುಕು ನನಗಷ್ಟೆ ಅಲ್ಲ, ನನ್ನ ಇಡೀ ಕುಟುಂಬಕ್ಕೆ ನರಕವಾಗಿದೆ. ನ್ಯಾಯಕ್ಕಾಗಿ ನಾವು ನಡೆಸಿದ ಪ್ರಯತ್ನ ವ್ಯರ್ಥವಾಗಿದೆ. ಹಾಗಾಗಿ ಆ ಪ್ರಶ್ನೆ ಆಗಾಗ ಪುನಃ ಪುನಃ ನನ್ನನ್ನು ಕಾಡುತ್ತಿದೆ: ನಾನು ನಿಜವಾಗಿಯೂ ಅಪರಾಧಿಯೇ? ತಪ್ಪಿತಸ್ಥನೇ? ಅಲ್ಲ. ಅಲ್ಲ...
-ಡಾ. ಕಫೀಲ್ ಖಾನ್