ಫೆಲೆಸ್ತೀನ್ ಪ್ರತಿಭಟನಕಾರರ ಮೇಲೆ ಇಸ್ರೇಲ್ ಸೈನಿಕರ ಗುಂಡಿನ ದಾಳಿ

Update: 2018-05-15 17:48 GMT
ಸಾಂದರ್ಭಿಕ ಚಿತ್ರ

ಜೊಹಾನ್ಸ್‌ಬರ್ಗ್, ಮೇ 15: ಜೆರುಸಲೇಂನಲ್ಲಿ ಅಮೆರಿಕ ತನ್ನ ರಾಯಭಾರ ಕಚೇರಿ ತೆರೆಯುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಫೆಲೆಸ್ತೀನೀಯರ ಮೇಲೆ ಇಸ್ರೇಲ್ ಸೈನಿಕರು ಗುಂಡು ಹಾರಿಸಿದ ಘಟನೆಗೆ ಸಂಬಂಧಿಸಿ ದಕ್ಷಿಣ ಆಫ್ರಿಕ ತನ್ನ ಇಸ್ರೇಲ್ ರಾಯಭಾರಿಯನ್ನು ಸೋಮವಾರ ವಾಪಸ್ ಕರೆಸಿಕೊಂಡಿದೆ.

ಇಸ್ರೇಲ್ ಸೈನಿಕರ ಗೋಲಿಬಾರಿನಲ್ಲಿ ಕನಿಷ್ಠ 55 ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ.

‘‘ಇಸ್ರೇಲ್ ಪಡೆಗಳ ಇತ್ತೀಚಿನ ವಿವೇಚನಾರಹಿತ ಮತ್ತು ಭಯಾನಕ ದಾಳಿಯ ಹಿನ್ನೆಲೆಯಲ್ಲಿ, ಇಸ್ರೇಲ್‌ನಲ್ಲಿರುವ ತನ್ನ ರಾಯಭಾರಿ ಸಿಸ ನಗೊಂಬನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್ ಕರೆಸಿಕೊಳ್ಳಲು ದಕ್ಷಿಣ ಆಫ್ರಿಕ ನಿರ್ಧರಿಸಿದೆ’’ ಎಂದು ದಕ್ಷಿಣ ಆಫ್ರಿಕದ ವಿದೇಶ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಜೆರುಸಲೇಂನಲ್ಲಿ ಅಮೆರಿಕದ ರಾಯಭಾರ ಕಚೇರಿಯ ಪ್ರಚೋದನಕಾರಿ ಉದ್ಘಾಟನೆಯ ವಿರುದ್ಧ ಫೆಲೆಸ್ತೀನೀಯರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು’’ ಎಂದು ಹೇಳಿಕೆ ಹೇಳಿದೆ.

‘‘ಇಸ್ರೇಲ್ ಸಶಸ್ತ್ರ ಪಡೆಗಳು ನಡೆಸಿದ ಹಿಂಸಾತ್ಮಕ ಆಕ್ರಮಣ’’ವನ್ನು ಅದು ಖಂಡಿಸಿದೆ.

‘‘ಇಸ್ರೇಲ್‌ನ ಈ ಹೊಸ ದಾಳಿಯಲ್ಲಿ ಭಾರೀ ಸಂಖ್ಯೆಯಲ್ಲಿ ಫೆಲೆಸ್ತೀನೀ ನಾಗರಿಕರು ಮೃತಪಟ್ಟಿರುವುದು ಮಾತ್ರವಲ್ಲ, ಅಗಾಧ ಸಂಖ್ಯೆಯಲ್ಲಿ ಜನರು ಗಾಯಗೊಂಡಿದ್ದಾರೆ. ಅದೂ ಅಲ್ಲದೆ, ಆಸ್ತಿಪಾಸ್ತಿಗಳಿಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ’’ ಎಂದು ದಕ್ಷಿಣ ಆಫ್ರಿಕ ವಿದೇಶ ಸಚಿವಾಲಯದ ಹೇಳಿಕೆ ತಿಳಿಸಿದೆ.

2,400ಕ್ಕೂ ಅಧಿಕ ಮಂದಿ ಇಸ್ರೇಲ್ ಸೈನಿಕರ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಮೃತರ ಪೈಕಿ 16 ವರ್ಷಕ್ಕಿಂತ ಕೆಳಗಿನ 8 ಮಕ್ಕಳಿದ್ದಾರೆ ಎಂದು ವಿಶ್ವಸಂಸ್ಥೆಗೆ ಫೆಲೆಸ್ತೀನ್ ರಾಯಭಾರಿ ಹೇಳಿದ್ದಾರೆ.

2014ರ ಗಾಝಾ ಯುದ್ಧದ ಬಳಿಕ, ಇದು ಇಸ್ರೇಲ್-ಫೆಲೆಸ್ತೀನ್ ನಡುವಿನ ಸಂಘರ್ಷದ ಅತ್ಯಂತ ಭೀಭತ್ಸ ದಿನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News