ಏಕಪಕ್ಷೀಯ ಪರಮಾಣು ನಿರ್ಮೂಲನೆ’ಗೆ ಒತ್ತಡ ಹೇರಿದರೆ ಅಮೆರಿಕ ಜೊತೆಗೆ ಮಾತುಕತೆಯಿಲ್ಲ

Update: 2018-05-16 17:21 GMT

ವಾಶಿಂಗ್ಟನ್, ಮೇ 16: ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್-ಉನ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಜೂನ್‌ನಲ್ಲಿ ನಡೆಯಲು ನಿಗದಿಯಾಗಿರುವ ಶೃಂಗಸಭೆಯ ಬಗ್ಗೆ ಉತ್ತರ ಕೊರಿಯ ಗಂಭೀರ ಸಂಶಯ ವ್ಯಕ್ತಪಡಿಸಿದೆ.

‘ಏಕಪಕ್ಷೀಯ ಪರಮಾಣು ನಿರ್ಮೂಲನೆ’ಗೆ ಉತ್ತರ ಕೊರಿಯದ ಮೇಲೆ ಒತ್ತಡ ಹೇರಿದರೆ ಅದು ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಉತ್ತರ ಕೊರಿಯದ ಅಧಿಕೃತ ಸುದ್ದಿ ಸಂಸ್ಥೆ ಕೆಸಿಎನ್‌ಎ ವರದಿ ಮಾಡಿದೆ.

ಉತ್ತರ ಕೊರಿಯದ ಪ್ರಧಾನ ನಿಶ್ಶಸ್ತ್ರೀಕರಣ ಸಂಧಾನಕಾರನೂ ಆಗಿರುವ ಉಪ ವಿದೇಶ ಸಚಿವ ಕಿಮ್ ಕೈ ಗ್ವಾನ್ ಹೇಳಿಕೆಯೊಂದರಲ್ಲಿ ಈ ಎಚ್ಚರಿಕೆ ನೀಡಿದ್ದಾರೆ.

‘‘ಏಕಪಕ್ಷೀಯ ಪರಮಾಣು ನಿಶ್ಶಸ್ತ್ರೀಕರಣವನ್ನು ಒಪ್ಪಿಕೊಳ್ಳುವಂತೆ ಅಮೆರಿಕ ನಮ್ಮ ಮೇಲೆ ಒತ್ತಡ ಹೇರಿದರೆ, ಇಂಥ ಮಾತುಕತೆಯಲ್ಲಿ ಭಾಗವಹಿಸಲು ನಾವು ಬಯಸುವುದಿಲ್ಲ. ಇಂಥ ಸಂದರ್ಭದಲ್ಲಿ ಉತ್ತರ ಕೊರಿಯ-ಅಮೆರಿಕ ಶೃಂಗ ಸಮ್ಮೇಳನದಿಂದ ಹಿಂದೆ ಸರಿಯದೆ ನಮಗೆ ಬೇರೆ ಆಯ್ಕೆಯಿಲ್ಲ’’ ಎಂದು ಅವರು ಹೇಳಿದ್ದಾರೆ.

ಟ್ರಂಪ ಮತ್ತು ಕಿಮ್ ಜಾಂಗ್ ಉನ್ ನಡುವೆ ಜೂನ್ 12ರಂದು ಮಾತುಕತೆ ನಡೆಯಲು ನಿಗದಿಯಾಗಿದೆ. ಇದು ಉಭಯ ದೇಶಗಳ ನಾಯಕರ ನಡುವಿನ ಪ್ರಥಮ ಸಭೆಯಾಗಿದೆ.

ಅಮೆರಿಕ ಎಚ್ಚರಿಕೆಯ ಪ್ರತಿಕ್ರಿಯೆ

ಉತ್ತರ ಕೊರಿಯದ ಹೇಳಿಕೆಗೆ ಆಶ್ಚರ್ಯಗೊಂಡಂತೆ ಕಂಡುಬಂದಿರುವ ಅಮೆರಿಕ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದೆ. ‘‘ದಕ್ಷಿಣ ಕೊರಿಯದ ಮಾಧ್ಯಮ ವರದಿಗಳ ಬಗ್ಗೆ ನಮಗೆ ತಿಳಿದಿದೆ’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಹೇಳಿದರು.

‘‘ಉತ್ತರ ಕೊರಿಯ ಏನು ಹೇಳಿದೆ ಎನ್ನುವುದನ್ನು ಅಮೆರಿಕವು ಸ್ವತಂತ್ರವಾಗಿ ಪರಿಶೀಲನೆ ನಡೆಸುವುದು ಹಾಗೂ ನಮ್ಮ ಮಿತ್ರ ದೇಶಗಳೊಂದಿಗೆ ಸಹಕಾರದಿಂದ ಕೆಲಸ ಮಾಡುವುದನ್ನು ನಾವು ಮುಂದುವರಿಸುತ್ತೇವೆ’’ ಎಂದು ಅವರು ಹೇಳಿದರು.

ಅಮೆರಿಕ -ದ. ಕೊರಿಯ ಸೇನಾಭ್ಯಾಸಕ್ಕೂ ಉತ್ತರ ಕೊರಿಯ ಆಕ್ಷೇಪ

ಅಮೆರಿಕ ಮತ್ತು ದಕ್ಷಿಣ ಕೊರಿಯಗಳ ನಡುವಿನ ಸೇನಾಭ್ಯಾಸ ‘ಮ್ಯಾಕ್ಸ್ ತಂಡರ್’ಗೂ ಉತ್ತರ ಕೊರಿಯ ಆಕ್ಷೇಪ ವ್ಯಕ್ತಪಡಿಸಿದೆ.

‘‘ನಮ್ಮನ್ನು ಗುರಿಯಾಗಿಸಿ ದಕ್ಷಿಣ ಕೊರಿಯದಾದ್ಯಂತ ನಡೆಯುತ್ತಿರುವ ಈ ಯುದ್ಧಾಭ್ಯಾಸವು ‘ಪನ್‌ಮುನ್‌ಜಾಮ್ ಘೋಷಣೆ’ಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕೆಸಿಎನ್ ಹೇಳಿದೆ.

‘‘ಕೊರಿಯ ಪರ್ಯಾಯ ದ್ವೀಪದಲ್ಲಿ ಏರ್ಪಟ್ಟಿರುವ ಧನಾತ್ಮಕ ರಾಜಕೀಯ ಬೆಳವಣಿಗೆಗೆ ಈ ಉದ್ದೇಶಪೂರ್ವಕ ಸೇನಾಭ್ಯಾಸವು ಮಾರಕವಾಗಿದೆ’’ ಎಂದು ಅದು ಅಭಿಪ್ರಾಯಪಟ್ಟಿದೆ.

‘‘ಉದ್ದೇಶಿತ ಉತ್ತರ ಕೊರಿಯ-ಅಮೆರಿಕ ಶೃಂಗಸಮ್ಮೇಳನದ ಭವಿಷ್ಯದ ಬಗ್ಗೆ ಅಮೆರಿಕ ಕೂಡ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು’’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News