ಇದ್ಲಿಬ್‌ನಲ್ಲಿ ಕ್ಲೋರಿನ್ ದಾಳಿ ನಡೆದಿರುವ ಸಾಧ್ಯತೆ: ಒಪಿಸಿಡಬ್ಲ್ಯೂ

Update: 2018-05-16 17:26 GMT

ಆ್ಯಮ್‌ಸ್ಟರ್‌ಡ್ಯಾಮ್, ಮೇ 16: ಸಿರಿಯದ ಪಟ್ಟಣವೊಂದರ ಮೇಲೆ ಫೆಬ್ರವರಿಯಲ್ಲಿ ನಿಷೇಧಿತ ಕ್ಲೋರಿನ್ ಅಸ್ತ್ರಗಳನ್ನು ಹಾಕಿರುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ರಾಸಾಯನಿಕ ಅಸ್ತ್ರಗಳ ಮೇಲಿನ ನಿಗಾ ಸಂಸ್ಥೆ ಆರ್ಗನೈಸೇಶನ್ ಫಾರ್ ದ ಪ್ರೊಹಿಬಿಶನ್ ಆಫ್ ಕೆಮಿಕಲ್ ವೆಪನ್ಸ್ (ಒಪಿಸಿಡಬ್ಲ್ಯೂ) ಬುಧವಾರ ಹೇಳಿದೆ.

ಪ್ರಯೋಗಾಲಯಗಳ ಪರೀಕ್ಷೆಗಳಲ್ಲಿ ವಿಷಯುಕ್ತ ರಾಸಾಯನಿಕಗಳು ಪತ್ತೆಯಾಗಿವೆ ಎಂದು ಅದು ಹೇಳಿದೆ. ಸಿರಿಯ ಆಂತರಿಕ ಯುದ್ಧದಲ್ಲಿ ನಿಷೇಧಿತ ರಾಸಾಯನಿಕ ಅಸ್ತ್ರಗಳ ವ್ಯವಸ್ಥಿತ ಬಳಕೆ ಕುರಿತ ತನ್ನ ಇನ್ನೊಂದು ವರದಿಯನ್ನು ಒಪಿಸಿಡಬ್ಲ್ಯೂ ಬಿಡುಗಡೆಗೊಳಿಸಿದೆ.

ಆದರೆ, ಇದ್ಲಿಬ್ ಪ್ರಾಂತದಲ್ಲಿ ಬಂಡುಕೋರರ ನಿಯಂತ್ರಣದಲ್ಲಿರುವ ಸರಕಿಬ್ ಪಟ್ಟಣದ ಮೇಲೆ ನಡೆದ ರಾಸಾಯನಿಕ ದಾಳಿಗೆ ಕಾರಣರು ಯಾರು ಎನ್ನುವುದನ್ನು ವರದಿ ಬಹಿರಂಗಪಡಿಸಿಲ್ಲ. ಸರಕಿಬ್ ಪಟ್ಟಣದ ಅಲ್ ತಲೀಲ್ ಎಂಬ ಊರಿನಲ್ಲಿ ಸಿಲಿಂಡರ್‌ಗಳಿಂದ ಕ್ಲೋರಿನ್ ಅನಿಲವನ್ನು ಬಿಡಲಾಗಿತ್ತು ಎಂದು ಅದು ಹೇಳಿದೆ. ಫೆಬ್ರವರಿ 4ರಂದು ದಾಳಿ ನಡೆದ ಬಳಿಕ, ಉಸಿರಾಟದ ತೊಂದರೆಗಾಗಿ ಹಲವು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಸ್ಥಳದಲ್ಲಿ ದೊರೆತ 2 ಸಿಲಿಂಡರ್‌ಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆ ಮತ್ತು ಅಸಾಮಾನ್ಯ ಮಟ್ಟದಲ್ಲಿ ಪರಿಸರದಲ್ಲಿ ಕ್ಲೋರಿನ್ ಉಪಸ್ಥಿತಿಯ ಆಧಾರದಲ್ಲಿ ಒಪಿಸಿಡಬ್ಲ್ಯೂ ಈ ನಿರ್ಧಾರಕ್ಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News