ಭಾರತೀಯ ಸಾಕ್ಷಿಗಳ ಲಭ್ಯತೆ ಬಗ್ಗೆ ತಿಳಿಸಿ: ಮುಂಬೈ ದಾಳಿ ವಿಚಾರಣೆ ನಡೆಸುತ್ತಿರುವ ಪಾಕ್ ನ್ಯಾಯಾಲಯ
ಇಸ್ಲಾಮಾಬಾದ್, ಮೇ 16: ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು ಬುಧವಾರ ಪಾಕಿಸ್ತಾನಿ ಪ್ರಾಸಿಕ್ಯೂಶನ್‌ನ ಕೊನೆಯ ಇಬ್ಬರು ಸಾಕ್ಷಿಗಳಿಗೆ ಸಮನ್ಸ್ ಕಳುಹಿಸಿದೆ.
ಅದೇ ವೇಳೆ, ವಿಚಾರಣೆಯನ್ನು ತ್ವರಿತವಾಗಿ ಮುಗಿಸಲು ಸಾಧ್ಯವಾಗುವಂತೆ, 27 ಭಾರತೀಯ ಸಾಕ್ಷಿಗಳ ಲಭ್ಯತೆ ಬಗ್ಗೆ ಸ್ಪಷ್ಟಪಡಿಸುವಂತೆ ಸರಕಾರಕ್ಕೆ ಸೂಚಿಸಿದೆ.
ವಿಚಾರಣೆಯನ್ನು ಯಾಕೆ ಪೂರ್ಣಗೊಳಿಸಲಾಗುತ್ತಿಲ್ಲ ಎಂಬುದಾಗಿ ಕಳೆದ ವಾರ ಪದಚ್ಯುತ ಪ್ರಧಾನಿ ನವಾಝ್ ಶರೀಫ್ ಪ್ರಶ್ನಿಸಿರುವ ಹಿನ್ನೆಲೆಯಲ್ಲಿ, ಪ್ರಕರಣ ಈಗ ಮಹತ್ವ ಪಡೆದುಕೊಂಡಿದೆ.
2009ರಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಪಿತೂರಿ, ಹಣಕಾಸು ಪೂರೈಕೆ ಮತ್ತು ದಾಳಿ ಕಾರ್ಯಗತಗೊಳ್ಳಲು ನೆರವು ನೀಡಿದ ಆರೋಪಗಳಲ್ಲಿ ಲಷ್ಕರೆ ತಯ್ಯಿಬ ಕಮಾಂಡರ್ ಝಕೀವುರ್ ರಹಮಾನ್ ಲಾಖ್ವಿ ಸೇರಿದಂತೆ ಪಾಕಿಸ್ತಾನಿ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. 2008 ನವೆಂಬರ್ 26ರಂದು ಆರಂಭಗೊಂಡ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದಾರೆ.