ಕೆಲವು ವಲಸಿಗರು ‘ಪ್ರಾಣಿಗಳು’: ಟ್ರಂಪ್

Update: 2018-05-17 17:32 GMT

ವಾಶಿಂಗ್ಟನ್, ಮೇ 17: ಕೆಲವು ವಲಸಿಗರು ‘ಪ್ರಾಣಿಗಳು’ ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.

‘‘ನಮ್ಮ ದೇಶಕ್ಕೆ ಜನರು ಬರುತ್ತಾರೆ ಅಥವಾ ಬರಲು ಪ್ರಯತ್ನಿಸುತ್ತಾರೆ’’ ಎಂದು ಬುಧವಾರ ಶ್ವೇತಭವನಕ್ಕೆ ಭೇಟಿ ನೀಡಿದ ಕ್ಯಾಲಿಫೋರ್ನಿಯ ರಿಪಬ್ಲಿಕನ್ನರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ಹೇಳಿದರು.

‘‘ನಾವು ಈ ಜನರನ್ನು ಹೊರಗೆ ಕಳುಹಿಸುತ್ತೇವೆ. ಈ ಜನರು ಎಷ್ಟು ಕೆಟ್ಟದಾಗಿದ್ದಾರೆ ಎಂದು ಹೇಳಿದರೆ ನೀವು ನಂಬುವುದಿಲ್ಲ. ಅವರು ಜನರಲ್ಲ, ಅವುಗಳು ಪ್ರಾಣಿಗಳು. ಹಾಗಾಗಿ, ನಾವು ಅವರನ್ನು ದೇಶದಿಂದ ಹೊರದಬ್ಬುತ್ತೇವೆ’’ ಎಂದರು.

ವಲಸೆ ಮತ್ತು ಕಾನೂನು ಅನುಷ್ಠಾನ, ವಲಸಿಗರ ‘ಅಭಯ ನಗರಗಳು’ ಮತ್ತು ಎಂಎಸ್-13 ಗುಂಪಿನ ಬಗ್ಗೆ ಅವರು ಮಾತನಾಡುತ್ತಿದ್ದರು. ಎಂಎಸ್-13 ಗುಂಪಿನ ಸದಸ್ಯರನ್ನು ಟ್ರಂಪ್ ಪದೇ ಪದೇ ‘ದುಷ್ಟರು’ ಮತ್ತು ‘ಹಂತಕರು’ ಎಂಬುದಾಗಿ ಕರೆಯುತ್ತಾರೆ. ಎಲ್ ಸಾಲ್ವಡೋರ್‌ನಲ್ಲಿ ಮೂಲ ಹೊಂದಿರುವ ಹಾಗೂ ಅಮೆರಿಕದಲ್ಲಿ ಹುಟ್ಟಿರುವವರನ್ನು ಎಂಎಸ್-13 ಎಂಬುದಾಗಿ ಕರೆಯಲಾಗಿದೆ.

ಸುಳ್ಳು ಹೇಳುತ್ತಿರುವ ಟ್ರಂಪ್

ಕ್ಯಾಲಿಫೋರ್ನಿಯ ಗವರ್ನರ್ ಜೆರಿ ಬ್ರೌನ್

ಡೊನಾಲ್ಡ್ ಟ್ರಂಪ್ ವಲಸೆ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ, ಅಪರಾಧಗಳ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಹಾಗೂ ಕ್ಯಾಲಿಫೋರ್ನಿಯದ ಕಾನೂನುಗಳ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಕ್ಯಾಲಿಫೋರ್ನಿಯ ಗವರ್ನರ್ ಜೆರಿ ಬ್ರೌನ್ ಹೇಳಿದ್ದಾರೆ.

 ‘‘ಅವರ ಮುಖಸ್ತುತಿ ಮಾಡುವುದಕ್ಕಾಗಿ ಡಝನ್ ರಿಪಬ್ಲಿಕನ್ ರಾಜಕಾರಣಿಗಳನ್ನು ಕಳುಹಿಸುವುದು ಹಾಗೂ ಅವರ ಗೊತ್ತುಗುರಿಯಿಲ್ಲದ ನೀತಿಗಳನ್ನು ಅನುಮೋದಿಸುವುದರಿಂದ ಏನೂ ಬದಲಾವಣೆಯಾಗುವುದಿಲ್ಲ. ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆಯ ನಾಗರಿಕರಿಗೆ ಇದರಿಂದ ಸಂತೋಷವಾಗುವುದಿಲ್ಲ’’ ಎಂದು ಬ್ರೌನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News